ಈ ಕುಂಟಾಲ ಹಣ್ಣು ಉಂಟಲ್ಲಾ…!!
ಇವತ್ತು ಸುಖಾಸುಮ್ಮನೆ ಗೂಗಲ್ ಜಾಲಾಡುತ್ತಿದ್ದಾಗ ಕಂಡ ಹಣ್ಣು ಗೊಂಚಲಿನ ಚಿತ್ರವೊಂದು ಹಾಗೇ ಯೋಚನೆಗಳನ್ನು ಹಿಂದಕ್ಕೋಡಿಸಿತು.
ಇಂದಿಗೆ ಹೆಚ್ಚೂಕಡಿಮೆ ಹತ್ತು ವರ್ಷಗಳ ಹಿಂದಿನವರೆಗೂ ಸಂಜೆ ಶಾಲೆಯಿಂದ ಬಂದಾಕ್ಷಣ ಅಜ್ಜಿ ಇರುವಲ್ಲಿಗೇ ಹುಡುಕಿಕೊಂಡು ಹೋಗಿ ಹಲ್ಲು ಗಿಂಜುತ್ತಿದ್ದೆ. ಕತ್ತಲು-ಬೆಳಕಿನ ಅಡುಗೆ ಮನೆಯಲ್ಲಿದ್ದರೂ, ಕಣ್ಣು ದೃಷ್ಟಿ ಮಂದವಿದ್ದರೂ ನಾನೇನನ್ನು ತೋರಿಸುತ್ತ್ತಿದ್ದೇನೆಂಬ ಸ್ಪಷ್ಟವಾದ ಅರಿವಿದ್ದ ಅಜ್ಜಿ “ಛೀ…!! ಬರೇ.. ಕೊಳಕ್ಕು!!” ಎಂದು ಮುಖ ಸಿಂಡರಿಸಿ ಅಣಕಿಸಿ ನಗುವುದನ್ನು ನೋಡಲೆಂದೇ ಮತ್ತೆ ಮಾರನೆ ದಿನ ಸಂಜೆವರೆಗೂ ಕಾಯುತ್ತಿದ್ದೆ.
ಶಾಲೆಯಿಂದ ಬರುವ ದಾರಿಯಲ್ಲಿ ಕುಂಟಾಲ ಹಣ್ಣು ಜಗಿದು ನಾಲಿಗೆ, ಹಲ್ಲು ಸಾಕಷ್ಟು ನೇರಳೆ ಬಣ್ಣಕ್ಕೆ ತಿರುಗಿದೆಯೆಂದು ಖಚಿತಪಡಿಸಿಕೊಂಡೇ ಗೇಟು ದಾಟುತ್ತಿದ್ದುದು. ಅಮ್ಮನ ಜೊತೆ ಸಂಜೆ ಮತ್ತೆ ವಾಕಿಂಗ್ ನೆವದಲ್ಲಿ ಬಂದು ಮತ್ತಷ್ಟು ಕೊಯ್ದುಕೊಡುವಂತೆ ಪೀಡಿಸಿ ಮುಷ್ಟಿ ತುಂಬಾ ಕಡುನೀಲಿ ಬಣ್ಣದ ಕುಂಟಾಲ ಹಣ್ಣುಗಳನ್ನು ತುಂಬಿಸಿ ಬಾಯಿ ನೀಲಿ ಬಣ್ಣಕ್ಕೆ ತಿರುಗಲು ಶ್ರಮಪಡುತ್ತಿದ್ದೆ. ದಾರಿಯಲ್ಲಿ ಯಾರಾದರೂ ಗುರುತಿನವರು ಸಿಕ್ಕಿ “ಬಾಯಿ ಎಲ್ಲಾ ನೀಲಿ ಮಾಡಿಗೊಂಡಿದೆಯಲ್ಲೇ ಕೂಸೇ..!!” ಎಂದರೆ ಅಷ್ಟು ಹೊತ್ತಿನ ಶ್ರಮ ಸಾರ್ಥಕವಾದ ಸಂಭ್ರಮ. ಮಾತಾಡದೇ ಇವರ ಬಳಿ ನನ್ನ ಪರಿಶ್ರಮವನ್ನು ಗುರುತಿಸಿದುದಕ್ಕೆಂಬಂತೆ ಮತ್ತೆ ಹಲ್ಲು ತೋರಿಸಿ ನಕ್ಕು ಮತ್ತಷ್ಟು ಹಣ್ಣುಗಳಿಗಾಗಿ ಅಮ್ಮನಿಗೆ ದುಂಬಾಲು ಬೀಳುತ್ತಿದ್ದೆ. “ಜಾಸ್ತಿ ಬೇಡ.. ಜ್ವರ ಬಕ್ಕು!” ಎನ್ನುತ್ತಲೇ ಪೂರ್ತಿ ಇಲ್ಲವೆನ್ನಲಾಗದೆ ಅಮ್ಮ ಮತ್ತೆ ಕಿತ್ತು ಕೊಡುತ್ತಿದ್ದರು.
ಹಣ್ಣಿನ ರುಚಿ ಒಗರಾಗಿದ್ದರೂ ನೀಲಿ ಬಣ್ಣದ ಸಂಭ್ರಮಕ್ಕಾಗಿ ಜಗಿದು, ಗಂಟಲು ಕಟ್ಟಿ ಎಷ್ಟೋ ಬಾರಿ ಸ್ವಯಂಕೃತ ಅಪರಾಧವಾದುದಿರಂದ ಬಾಯಿಮುಚ್ಚಿ ವಾಕಿಂಗ್ ಮುಂದರೆಸಿದ್ದಿದೆ. ಮನೆ ತಲುಪಿ ಒಂದಷ್ಟು ನೀರು ಕಂಡರೆ ಸಾಕಾಗಿದ್ದರೂ ಅಮ್ಮನ ಬಳಿ ಹೇಳಿದರೆ ನನ್ನ ಮರ್ಯಾದೆಗೆ ಎಲ್ಲಿ ಧಕ್ಕೆ ಬರುವುದೋ ಎಂದು ಬಾಯಿ ಬಿಗಿದು ನಡೆದಿದ್ದಿದೆ 😉
ಬೇಸಿಗೆಯಲ್ಲಿ ಸ್ವಲ್ಪವಾದರೂ ಸಿಹಿ ರುಚಿಯಿರುವ ಕುಂಟಾಲವು ಮಳೆಗಾಲ ಬಂದರೆ ಸಪ್ಪೆ! ಮಳೆನೀರು ತುಂಬಿ ಉಬ್ಬಿ ನೋಡಲಂತೂ ಗುಂಡು ಗುಂಡಗೆ ಹೊಳೆಯುತ್ತ ಸೆಳೆಯುತ್ತಿದ್ದುವು. ಜೂನ್ ನಲ್ಲಿ ಹೊಸ ತರಗತಿಗೆ ಹೋಗುವ ಆರಂಭ ಶೂರತ್ವ, ಉತ್ಸಾಹಗಳ ಎಡೆಯಲ್ಲಿ ಎಲ್ಲಾದರೂ ಉಬ್ಬಿದ ಕುಂಟಾಲದ ಗೊಂಚಲು ಕಂಡರೆ ಹಾರಿ ಕೊಯ್ಯುವ ಸಂಭ್ರಮ ಹೇಳತೀರದು.
ಪ್ರತಿಯೊಬ್ಬರ ಮನೆಯಿಂದಲೂ “ಮಳೆ ಸುರಿದ ಮೇಲೆ ದಾರಿ ಬದಿಯಲ್ಲಿಸಿಗುವ ಕುಂಟಾಲ ತಿನ್ನಬಾರದು.. ಜ್ವರ ಬಂದೀತು!” ಎಂಬ ಎಚ್ಚರಿಕೆ ಹೇಳಿ ಕಳುಹಿಸಿದ್ದರೂ ಹಣ್ಣು ಕಂಡಾಗ ಎಲ್ಲಾ ಮರೆತು ಸ್ಪರ್ಧೆಯಿಂದ ಹಾರಿ ಕೊಯ್ಯುತ್ತಿದ್ದೆವು. ಹಾಗೇನಾದರೂ ಜ್ವರ ಬಂದರೂ “ಮಳೆಗಾಲದ ಜ್ವರ!” ಎನ್ನುತ್ತಾರಷ್ಟೆ ಮನೆಯಲ್ಲಿ ಎಂಬ ಅಪಾರ ನಂಬಿಕೆ ಆ ಕ್ಷಣಕ್ಕೆ! ದುರದ್ರುಷ್ಟವಶಾತ್ ಈ ನಂಬಿಕೆ ಎಷ್ಟೋ ಬಾರಿ ಹುಸಿಯಾಗಿ ಬೈಸಿಕೊಂಡವರೂ ಇಲ್ಲದಿಲ್ಲ!
ಕುಂಟಾಲದ ಜೊತೆಯಲ್ಲಿ ನಫ಼ೀಸಾ, ಶರೀಫ಼ಾ ರ ಮನೆಯ ಬುಗುರಿ ಹಣ್ಣು ಸಿಕ್ಕಿದರೆ ಅಂದಿನ ದಿನ ಸಾರ್ಥಕ! “ಶ್ರುತಿ..!! ಇದು ನಿನಗೆ ಮಾತ್ರ.. ಯಾರಿಗೂ ಹೇಳ್ಬೇಡ!!” ಎಂದು ಪಿಸುಗುಟ್ಟಿ(ಅಕ್ಕ ಪಕ್ಕ ಯಾರೂ ಇಲ್ಲದೇ ಹೋದರೂ! ) ಯೂನಿಫ಼ಾರಂ ಕಿಸೆಯಿಂದ ಅಭಿಮಾನದಿಂದ ಬುಗುರಿ ಹಣ್ಣು ತೆಗೆದು ಮುಷ್ಟಿ ಮುಚ್ಚಿ ಕೈಗೆ ರವಾನಿಸುತ್ತಿದ್ದರೆ ಹಿಗ್ಗಿ ಹೀರೇಕಾಯಿಯಾಗುತ್ತಿದ್ದೆ. ಬದಲಾಗಿ ಇವರಿಗೆ ನಮ್ಮ ಮನೆಯಲ್ಲಿ ಬೆಳೆದ ಗುಲಾಬಿ ಹೂ ಕೊಟ್ಟರೆ ತಲೆಯ ಮೇಲಿನ ಪರ್ದಾ ಎಳೆದು ಉದ್ದ ಕೂದಲಿಗೆ ಹೂ ಸಿಕ್ಕಿಸಿ ಸಂಭ್ರಮಿಸುತ್ತಿದ್ದರು. ಪ್ರತಿ ದಿನ ನಾನು ಹೂ ತಂದು ಕೊಡುವೆನೆಂಬ ವಿಶ್ವಾಸದಿಂದ ತಲೆಗೊಂದು ಕ್ಲಿಪ್ ಸಿಕ್ಕ್ಕಿಸಿಯೇ ಮನೆಬಿಡುತ್ತಿದ್ದ ಇವರಿಗೆ ಗುಲಾಬಿ ತಂದು ಕೊಡದಿದ್ದರೆ ನನಗೊಂಥರಾ ಅಪರಾಧಿ ಪ್ರಜ್ನೆ! ದಿನಾ “ಹೂ ಉಂಟಾ?” ಎಂದು ಕೇಳುತ್ತ ಮತ್ತೆ ಬುಗುರಿ ತಂದು ಕೊಡುತ್ತಿದ್ದ್ದರು. ಅದೆಷ್ಟರ ಮಟ್ಟಿಗೆ, ಕಹಿ ಒಗರು ಬುಗುರಿ, ನೆಲ್ಲಿಕಾಯಿ, ಕುಂಟಾಲಗಳ ಅಭಿಮಾನಿಗಳಾಗಿದ್ದೆವೆಂದರೆ ಮೇಷ್ಟರ ಕೈಯಿಂದ ಯಾರಾದರೊಬ್ಬರು ಬೈಸಿಕೊಳ್ಳುವುದು ದಿನದ ಒಂದು ಭಾಗವಾಗಿ ಹೋಗಿತ್ತು.
ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಮಕ್ಕಳು ಕುಂಟಾಲ ತಿಂದು ಜ್ವರ ಬರಿಸಿಕೊಳ್ಳುತ್ತಾರೆಂದು ಹೆತ್ತವರ ದೂರುಗಳನ್ನು ಕೇಳಿ ತಾಳಲಾರದ ಕ್ಲಾಸು ಅಧ್ಯಾಪಕರು ಕ್ಲಾಸು ಲೀಡರ್ ಗೆ ಕುಂಟಾಲ ಹಣ್ಣು ತಿಂದವರ ಹೆಸರು ಬರೆದುಕೊಡುವ ಘನ ಜವಾಬುದಾರಿ ಕೆಲಸ ಒಪ್ಪಿಸಿದಾಗ “ಅತ್ತ ಪುಲಿ ಇತ್ತ ದರಿ” ಎಂಬ ಅವಸ್ಥೆ! ನಾಲ್ಕನೇ ತರಗತಿಯಿಂದಲೇ ಕ್ಲಾಸು ಲೀಡರ್ ಪಟ್ಟ ನನಗೆ ಸಿಕ್ಕಿತ್ತು. ನನ್ನ ಜೊತೆಗೆ ಕ್ಲಾಸಿನ ಅಷ್ಟೂ ಮಂದಿಯ ಪುಟ್ಟ ಸಂತೋಷಕ್ಕೆ ಧಕ್ಕೆ ತರುವ ಪಾಪದ ಕೆಲಸ ಮಾಡಬೇಕೇ ಬೇಡವೇ ಎಂಬ ಅತಿಭಯಂಕರ ಜಿಜ್ನಾಸೆಯಲ್ಲೇ ಕಳೆದಾಗ ಕುಂಟಾಲದ ಕಾಲ ಕಳೆದು ಹೋಗಿ ಮತ್ತೆ ಮಿಡಿ ಮಾವಿನ ಆಗಮನ! ಪ್ರತಿ ಮನೆಯಲ್ಲೂ ವಿಧ-ವಿಧ ಘಮಘಮಿಸುವ ಸೊನೆ ಮಾವಿನ ಮಿಡಿ. ಮನೆಯಿಂದ ಮಿಡಿ ತರುವುದರ ಜೊತೆ ಶಾಲೆ ಪಕ್ಕದ ಯಾರದೋ ತೋಟದಿಂದ ಮಾವಿನ ಮಿಡಿಗಳು ಹೊರ ಬೀಳುತ್ತವೆಯೆಂಬ ಸುದ್ದಿ(ಬ್ರೇಕಿಂಗ್ ನ್ಯೂಸ್!) ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಠಳಾಯಿಸುತ್ತಿದ್ದೆವು. ನಾ ಮುಂದು ತಾ ಮುಂದು ಎಂದು ಬೇಗ ತಲುಪಿದವರಿಗೆ ಒಳ್ಳೆಯ ಮಿಡಿ ಸಿಕ್ಕಿದಾಗ ಹಲುಬಿಕೊಳ್ಳುತ್ತಾ ಬಾಡಿದ ಮಾವಿನ ಮಿಡಿ ಕಚ್ಚುತ್ತ, ಸೊನೆ ಹತ್ತಿ ಕೆಮ್ಮಿಕೊಳ್ಳುತ್ತಾ ಮತ್ತೆ ಶಾಲೆಯ ಮುಂದಿನ ಪಾಠಕ್ಕೆ ವಾಪಸ್. ನಾಳೆ ನಾವೇ ಬೇಗ ತಲುಪಬೇಕೆಂಬ ಗುಟ್ಟು ಚರ್ಚೆಯ ಜೊತೆ ಶಾಲೆ ಮುಗಿಯುತ್ತಿತ್ತು!
ಪ್ರತಿ ಬೇಸಿಗೆಯಲ್ಲೂ ನೆನಪುಗಳ ಮಾಲೆಯನ್ನೇ ಬಿಚ್ಚಿಡುವ ಚೆಂದದ ಕುಂಟಾಲ ಹೂ ಹಣ್ಣುಗಳ ಗೊಂಚಲು ನೆನಪುಗಳಷ್ಟೇ ಸುಂದರ. ಇದರ ರುಚಿ ಹಿಡಿದವರಿಗೆ ನೆನಪುಗಳು ಹೆಚ್ಚೂ ಕಡಿಮೆ ಒಂದೇ! ಕುಂಟಾಲ ಹೂಗಳನ್ನು ನೋಡಿ ಅಮ್ಮನ ಬಳಿ ಇನ್ನೆಷ್ಟು ದಿನದಲ್ಲಿ ಹಣ್ಣು ಬಿಡುತ್ತದೆಯೆಂದು ದಿನಾ ಕೇಳುವುದರಿಂದ ಹಿಡಿದು ಕಾಯಿ ಬಿಟ್ಟ ಕುಂಟಾಲ ಗೊಂಚಲನ್ನು ನೋಡಿ ಇನ್ನೆಷ್ಟು ದಿನ ಕಾಯಬೇಕೆಂಬ ವ್ಯಥೆಯನ್ನು ಸಹಿಸುವವರೆಗೆ! ಮೊದಲ ಗೊಂಚಲು ಅರೆ ಹಣ್ಣಾಗಿರುವಾಗ ಒಂದು ಹಣ್ಣನ್ನು ಕಿತ್ತು ರುಚಿ ನೋಡಿ ಮುಖ ಹಿಂಡುವುದರಿಂದ ಹಿಡಿದು ಮಳೆಗಾಲ ಬಂದರೆ ಯಾಕಪ್ಪಾ ಈ ಹಣ್ಣು ಸಪ್ಪೆ ಆಗುತ್ತದೆಯೋ ಎನ್ನುವವರೆಗೆ! ಊರಿಡೀ ಕುಂಟಾಲವು ಮುಗಿದಿದ್ದರೂ ಎಲ್ಲಾದರೂ ಹಣ್ಣಿರಬಹುದೇ ಎಂದು ಭರವಸೆ ಬಿಡದೆ ಹುಡುಕುತ್ತಾ ಹೋಗುವುವರೆಗೆ! ಎಲ್ಲಾದರೂ ಗೊಂಚಲೊಂದು ಕಂಡರೆ ಹಾರಿ ಎಟುಕಿಸಿಕೊಳ್ಳುವ ಆ ಸಂಭ್ರಮ!
ಹಣ್ಣು ಮುಗಿದ ಬಳಿಕ ಕೇಪುಳದ ಹಣ್ಣಲ್ಲೇ ತೃಪ್ತಿ ಪಟ್ಟುಕೊಳ್ಳುತ್ತ ಕುಂಟಾಲದ ಎಲೆಯನ್ನು ಸುರುಟಿ ಪೀ..ಪಿ ಊದುತ್ತ ಮತ್ತೆ ಬೇಸಿಗೆಗೆ ಕಾಯುವವರೆಗೆ!!!
– ಶ್ರುತಿ ಶರ್ಮಾ, ಕಾಸರಗೋಡು.
🙂 ಸೂಪರ್. ಮುಂದಿನ ಸಾರಿ ‘ಆಪರೇಶನ್ ಕುಂಟಾಲ’ ಕ್ಕೆ ಹೊರಡುವಾಗ ನಾನು ಬರುತ್ತೇನೆ!
ಹ್ಹಾ ಹ್ಹ ಹ್ಹ!! 😀 ಖಂಡಿತಾ ಬರುವಿರಂತೆ! ಸುರಗಿ ಬಳಗವೆಲ್ಲಾ ಬಂದರೂ ಸರಿ! 😉
I like it , I like it 🙂
😉
Oh so nice Shruti! Down the memory lane..
Thanks! I know many must have such sweety n tangy memories.. 🙂
ಶ್ರುತಿ
ಈ ಬರಹ ನನಗೂ ಬಾಲ್ಯ ನೆನಪಾಗುವ೦ತೆ ಮಾಡಿತು.
ಬರೆಯುತ್ತಿರಿ.
-ಮಾಂಬಾಡಿ ಅಶೋಕ
ಧನ್ಯವಾದಗಳು ಅಶೋಕ ಅವರೇ!
ಬರಹ ಬಹಳ ಆಪ್ತವಾಯಿತು -ಸ್ಮಿತಾ
Thanks!! 🙂
ಬಾಲ್ಯ ಕಾಲ ಸಖೀ .ಈ ಸಾಲಿನಲ್ಲಿ ನೇರಳೆ ಹಣ್ಣು ಕಾಣಲಿಲ್ಲ ?.
ಒಹ್! ನೇರಳೆ ಹಣ್ಣು ಪಟ್ಟಿಯಲ್ಲಿ ಇದ್ದೇ ಇದೆ! 🙂
ವಾವ್ಹ್… ನಿಮ್ಮ ಲೇಖನ ಸೂಪರ್. ಮಳೆ ಬಿದ್ದ ಮೇಲೆ ನಾನು ಕೂಡ ಹಣ್ಣು ತಿಂದು ಜ್ವರ ಬಂದು ಮನೆಯಲ್ಲಿ ಬೈಯ್ಯಿಸಿಕೊಂಡಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಸಮಯೋಚಿತ ಬರಹ.
ಧನ್ಯವಾದಗಳು! ಬಾಲ್ಯದ ನೆನಪುಗಳು ಮಧುರ! 🙂
ಈ ಲೇಖನ ಓದಿದಾಗ ನನಗೂ ನನ್ನ ಬಾಲ್ಯದ ನೆನಪಾಯಿತು .ಈಗಲೂ ಕುಂಟಾಲ ಹಣ್ಣು ತಿ೦ದು ತೇಗುವುದಿದೆ.ಆಹಾ ಎಂತಾ ರುಚಿ.ಆ ನೆನಪುಗಳು. ಲೇಖನವೂ ಅಷ್ಟೆ ಚೆನ್ನಾಗಿದೆ .
ನಿಮ್ಮ ಪ್ರತಿಕ್ರಿಯೆ ಓದಿ ನನಗೆ ತುಂಬ ಖುಷಿಯಾಯಿತು. ಧನ್ಯವಾದಗಳು 🙂
ತುಂಬಾ ಚೆನ್ನಾಗಿದೆ . ಬಾಲ್ಯದ ನೆನಪು ಎಷ್ಟು ಸುಂದರ ಅಲ್ವಾ . ಕದ್ದು ಹಣ್ಣು ತಿಂದು ಬಣ್ಣ ತೆಗೆಯಲು ಮಾಡುತಿದ್ದ ಹರಸಾಹಸಗಳು ಎಲ್ಲಾ ನೆನಪಾದವು.
ಆ ದಿನಗಳು ಬಲು ಸುಂದರ.
ಥೇಟ್.ನಮ್ಮದೇ ಕಥೆ. ಒಂದು ಕೆಲ್ಸ ನಮ್ದು ಜಾಸ್ತಿ……….ಬುತ್ತಿಯಲ್ಲಿ ತುಂಬಿಸ್ಕೊಂಡು ….. ದಾರಿಯುದ್ದಕ್ಕೂ ತಿನ್ನೋರು ನಾವು………
ಒಂದು ಹಣ್ಣಿನ ಗೊಂಚಲನ್ನು ಗೂಗಲ್ ನಲ್ಲಿ ನೋಡುತ್ತಾ ಬಾಲ್ಯದ ಶಾಲಾ ದಿನಗಳನ್ನು ನೆನಪು ಮಾಡಿಕೊಂಡು,ಬರೆದಿರುವ ಲೇಖನ ಚನ್ನಾಗಿ ಮೂಡಿಬಂದಿದೆ.
‘ಕುಂಟಾಲ’ ಹೆಸರು ಈಗಲೇ ಕೇಳುತ್ತಿರುವುದು. ನಮ್ಮ ಬಯಲು ಸೀಮೆಯ ನೇರಳೆ ಹಣ್ಣು ಆಗಿರಬಹುದಾ?
ಚೆನ್ನಾಗಿದೆ, ಈ ಕುಂಟಾಲಕ್ಕೆ ನಾವು ” ಕುನ್ನೇರಲು ಹಣ್ಣು ಅಂತೇವೆ.
ನಾಯಿಗಳಿಗೆ, ಇವು ಮರ ಹತ್ತದೇ ಬುಡದಲ್ಲೇ ಸಿಕ್ಕುತ್ತವೆ.
It just remembered my childhood days. Its Super.
ತುಂಬಾ ಆಪ್ತವೆನಿಸುವ ಶೈಲಿ, ನಮ್ಮ ಬಾಲ್ಯವನ್ನು ನೆನಪಿಸಿದ ಲೇಖನ ಇಷ್ಟವಾಯ್ತು .. ಕುಂಟಾಲ ಹೆಸರನ್ನು ಇದೇ ಮೊದಲು ಕೇಳಿದ್ದು. ಜಯರಾಮ್ ಅವರ ಕಮೆಂಟ್ ಓದಿದ ಮೇಲೆ ಗೊತ್ತಾಯ್ತು ಇದೂ ಸಹ ನೇರಳೆಯ ಒಂದು ಜಾತಿ. ನಮ್ಮ ಕಡೆ ಇದನ್ನು ನಾಯಿ ನೇರಳೆ ಅಂತೀವಿ. ಸಿಹಿ ನೇರಳೆ, ಜಮ್ಮು ನೇರಳೆ – ಹೀಗೆ ಬೇರೆ ಬೇರೆ ಜಾತಿಯ ನೇರಳೆಯೂ ಇವೆ ..
Nice!
ಮತ್ತೆ ಬಾಲ್ಯ ಜೀವನಕ್ಕೆ ಜಾರಬೇಕೆನಿಸುತ್ತದೆ ಆ ಕಾಲ ಮತ್ತೆ ಬರುವುದಿಲ್ಲ ಎಂದೆನಿಸಿದಾಗ ತುಂಬಾ ದುಃಖವಾಗುತ್ತದೆ