ಬುದ್ಧನನ್ನು ಧ್ಯಾನಿಸುವ ಬಾದಾಮಿಯ ಶರಣಗೌಡ..
ಬುದ್ಧನ ಸಂದೇಶಗಳು, ನಿಲುವುಗಳು, ತತ್ವಗಳು ಹಲವರಿಗೆ ಹಲವು ಬಗೆಯಲಿ ಕಾಡಿವೆ, ಕಚ್ಚಿವೆ, ಚುಚ್ಚಿ ಎಚ್ಚರಿಸಿವೆ. ಕಿರಾತಕ ಅಂಗುಲಿಮಾಲನಂತವರೆ ಬುದ್ಧನಿಗೆ ಶರಣಾಗಿ ಹೊಸ ಮನುಷ್ಯನಾದ ಕತೆ ನಮಗೆಲ್ಲ ಗೊತ್ತಿದೆ. ದಲಿತ ಸಮುದಾಯದಲ್ಲೊಂದು ಅರಿವಿನ ಹಣತೆ ಹಚ್ಚಿಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡಾ ಬೌದ್ಧಧರ್ಮಕ್ಕೆ ಮತಾಂತರಗೊಂಡ ಇತಿಹಾಸವು ನಮ್ಮ ಮುಂದಿದೆ.
ಬದಲಾವಣೆಯತ್ತ ಮುಖಮಾಡುವವರಿಗೆಲ್ಲ ಈ ಭೂಮಿಯೊಂದು ಬೋದಿಮರವಾದರೆ, ಬುದ್ಧ ಸದಾ ತಂಗಾಳಿಯಾಗಿ ಬೀಸುತ್ತಾನೆ. ಕಲಾವಿದರ ಪಾಲಿಗಂತೂ ಮುಗುಳ್ನಗೆಯ ಬುದ್ಧ ನಿರಂತರವಾಗಿ ಹರಿಯುವ ನೀರಿನ ಝರಿಯಾಗಿ, ಜೀವಸೆಲೆಯಾಗಿ, ನಿಸರ್ಗದ ಸಂಕೇತವಾಗಿ, ಪ್ರೀತಿಯ ಹನಿಯಾಗಿ, ಶಾಂತಿ ಸಹನೆಯ ಸಾಕಾರ ಮೂರ್ತಿಯಾಗಿ, ಮನುಕುಲದ ಬೆಳಕಾಗಿ ಹಲವು ರೂಪ ತಳೆಯುತ್ತಾ ಅಂತರಂಗವ ತೊಳೆಯುತ್ತಾನೆ.
ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಬಾಗಲಕೋಟ ಜಿಲ್ಲೆ, ಬಾದಾಮಿಯ ಶರಣಗೌಡ ಬಾಳನಗೌಡರು ಪ್ರಸ್ತುತ ಬುದ್ಧನ ಕುರಿತು ಬಲು ಧ್ಯಾನಿಸುತ್ತಿದ್ದಾರೆ, ಅಂತರಂಗದ ಆನಂದಕ್ಕಾಗಿ ತಮ್ಮ ಕ್ರೀಯಾಶೀಲ ರೇಖೆಗಳ ಮೂಲಕ ಬುದ್ಧನನ್ನು ಭಿನ್ನ ಬಗೆಯಲಿ ಕಟ್ಟಿಕೊಡಲು ನಿತ್ಯ ಕನವರಿಸುತ್ತಿದ್ದಾರೆ. ಸೃಜನಶೀಲ ಕಲಾವಿದ ಶರಣಗೌಡ ಬುದ್ಧನಿಗೆ ಶರಣಾಗಿ ಸೃಜಿಸುವ ರೇಖೆಗಳು ನಿಜಕ್ಕೂ ಅದ್ಭುತವಾಗಿವೆ, ಇವರ ಧ್ಯಾನಸ್ಥ ರೇಖೆಗಳಿಗೆ ಯಾವುದೇ ಗಡಿರೇಖೆ ಬೀಳದೆ ನಿರಂತರವಾಗಿ ಹರಿದು ಕಲಾಸಕ್ತರ ಕಣ್ಮನವ ತಣಿಸಲಿ, ಕಲಾರಸಿಕರ ಪಾಲಿಗೆ ಕಲಾವಿದರೆ ಬುದ್ಧರಾಗಿ ನಿಲ್ಲಲಿ.
– ವೀರಲಿಂಗನಗೌಡ್ರ , ಸಿದ್ದಾಪುರ