ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 11

Share Button

 

Rukminimala

ಬೆಳಗ್ಗೆ (23-09-2016) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು ಕೋಣೆಗೆ ಬಂದು ಕುಳಿತು ಹರಟಿ ಕಾಲ ಕಳೆದೆವು.

ಬೆಳಗ್ಗೆ 11 ಗಂಟೆಗೆ ಎರಡು ಆಟೋ ರಿಕ್ಷಾದಲ್ಲಿ ನಗರದಲ್ಲಿರುವ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೊರಟೆವು. ಒಂದು ಆಟೋಗೆ ರೂ. 1000 .ಆರೇಳು ಜನ ಕೂರುವಂಥ ಆಟೋರಿಕ್ಷಾವದು. ಬೆಳಗ್ಗೆ ೧೧ಗಂಟೆಯಿಂದ ಸಂಜೆವರೆಗೂ ಎಷ್ಟಾಗುತ್ತೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಬೇಕೆಂಬ ಒಪ್ಪಂದ ಆಗಿತ್ತು.

ಪಾವನಧಾಮ
ಮೊದಲಿಗೆ ನಾವು ಪಾವನಧಾಮಕ್ಕೆ ಹೋದೆವು. ಈ ದೇವಾಲಯವು ನಗರದಿಂದ 2 ಕಿ. ಮೀ ದೂರದಲ್ಲಿ ನೆಲೆಗೊಂಡಿದ್ದು, ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಿಸಲಾಗಿದೆ. ಪಾವನಧಾಮ ಒಂದು ಆಧುನಿಕ ದೇವಾಲಯವಾಗಿದ್ದು ಎಲ್ಲಾ ದೇವರ ಅಲಂಕಾರಿಕ ಆಕರ್ಷಕವಾಗಿರುವ ದೊಡ್ಡ ದೊಡ್ಡ ಪ್ರತಿಮೆಗಳು ಗಮನ ಸೆಳೆಯುತ್ತವೆ. ವಿಗ್ರಹಗಳು ಗಾಜಿನಲ್ಲಿ ಎರಡೆರಡಾಗಿ ಕಂಡು ಬಲು ಸುಂದರವಾಗಿ ಕಂಗೊಳಿಸುತ್ತವೆ. ನಾವು ಆ ವಿಗ್ರಹಗಳ ಎದುರು ನಿಂತು ಫೋಟೋ ಕ್ಲಿಕ್ಕಿಸಿಕೊಂಡಾಗ ಗಾಜಿನ ಕಣ್ಣಲ್ಲಿ ನಮ್ಮದೇ ಪ್ರತಿಬಿಂಬವೂ ಬಂದದ್ದು ನೋಡಿ ಖುಷಿಪಟ್ಟೆವು.

ಭಾರತಮಂದಿರ, ರಾಮಮಂದಿರ
ಅದೇ ರಸ್ತೆಯಲ್ಲಿ ಮುಂದೆ ಸಾಗಿ ಭಾರತಮಂದಿರಕ್ಕೆ ಬಂದೆವು. ಅಲ್ಲಿ ಕೂಡಾ ನಾನಾ ನಮೂನೆಯ ಪ್ರತಿಮೆಗಳು ಮನಸೂರೆಗೊಳ್ಳುತ್ತವೆ. ಮುಂದೆ ರಾಮಮಂದಿರ ನೋಡಿದೆವು.

ವೈಷ್ಣೋದೇವಿಮಂದಿರ
ಹರಿದ್ವಾರದಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯ ವೈಷ್ಣೋದೇವಿ ದೇವಾಲಯ. ಜಮ್ಮುವಿನ ಪ್ರಖ್ಯಾತ ವೈಷ್ಣೋದೇವಿ ದೇವಸ್ಥಾನದ ತದ್ರೂಪವಾಗಿ ಇದನ್ನು ನಿರ್ಮಿಸಿದ್ದಾರೆ. ಜಮ್ಮುವಿನಲ್ಲಿರುವ ವೈಷ್ಣೋದೇವಿ ದೇವಾಲಯಕ್ಕೆ ಹೋಗಲು ಇರುವಂಥ ಸುರಂಗಗಳು ಮತ್ತು ಗುಹೆಗಳು ಇರುವಂತೆ ಇಲ್ಲೂ ಕೂಡ ಸಿಮೆಂಟಿನಿಂದ ಅದನ್ನು ಹೋಲುವಂತೆಯೇ ನಿರ್ಮಿಸಿದ್ದಾರೆ. ನಾವು ದೇವಾಲಯ ನೋಡಿ ನಿರ್ಮಿಸಿದವರ ಕೌಶಲವನ್ನು ಮೆಚ್ಚಿಕೊಂಡೆವು. ಅಲ್ಲಿ ಪ್ರಸಾದರೂಪವಾಗಿ ಸಿಹಿಸಜ್ಜಿಗೆ ಕೊಟ್ಟದ್ದು ಹಸಿದ ಹೊಟ್ಟೆಗೆ ಮೃಷ್ಟಾನ್ನದಂತಾಯಿತು.

ಭಾರತಮಾತಾ ಮಂದಿರ
ಭಾರತ ಮಾತಾ ಮಂದಿರ ಎಂಟು ಮಹಡಿಗಳನ್ನು ಹೊಂದಿವೆ. ಈ ದೇವಾಲಯವನ್ನು ಮಹಾನ್ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ್ ಗಿರಿಯವರು ನಿರ್ಮಿಸಿದ್ದಂತೆ. ಬಹುಮಹಡಿಗಳುಳ್ಳ ಈ ಸಂಕೀರ್ಣವನ್ನು ಭಾರತಮಾತೆಯ ಗೌರವಾರ್ಥವಾಗಿ ನಿರ್ಮಿಸಿದ್ದಾರೆ. ಇಲ್ಲಿಯ ಪ್ರತಿ ಮಹಡಿಯು ಭಾರತದ ಇತಿಹಾಸದ ಒಂದೊಂದು ಕಾಲದ ಘಟನಾವಳಿಗಳನ್ನು ಚಿತ್ರಿಸುತ್ತದೆ. ರಾಮಾಯಣದ ಕಾಲದಿಂದ ಹಿಡಿದು ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದವರೆಗಿನ ಮುಖ್ಯ ಘಟ್ಟಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಹರಿದ್ವಾರದ ಮುಖ್ಯ ಆಕರ್ಷಣೆಗಳಲ್ಲಿ ಭಾರತ್ ಮಾತಾ ಮಂದಿರವು ಸಹ ಒಂದೆಂದು ಪರಿಗಣಿಸಲಾಗಿದೆ.

ಒಂದೊಂದು ಮಹಡಿಗಳೂ ವಿವಿಧ ಹಿಂದೂ ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿಗಳಿಗೆ ಮೀಸಲಾಗಿದೆ. ಮೊದಲಿಗೆ ಎತ್ತುಯಂತ್ರದ ಮೂಲಕ ಆರನೇ ಮಹಡಿಗೆ ಹೋಗಬೇಕು. ಏಳನೇ ಮಹಡಿಗೆ ಅಲ್ಲಿಂದ ಮೆಟ್ಟಲು ಹತ್ತಿದಾಗ ಶಿವಮಂದಿರ, ಆರನೇ ಮಹಡಿಯಲ್ಲಿ ವಿಷ್ಣುಮಂದಿರ, ಐದನೆಯದರಲ್ಲಿ ಶಕ್ತಿಮಂದಿರ, ನಾಲ್ಕನೆಯದರಲ್ಲಿ ಪ್ರಾದೇಶಿಕ ಚಿತ್ರಾವಳಿ, ಮೂರನೆಯದರಲ್ಲಿ ಸಂತಮಂದಿರ, ಎರಡನೆಯದರಲ್ಲಿ ಮಾತೃಮಂದಿರ, ಒಂದನೆಯದರಲ್ಲಿ ಶೂರಮಂದಿರ ಇಲ್ಲಿ ಮಹಾತ್ಮ ಗಾಂಧಿ ಸೇರಿದಂತೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಮೊದಲಾದವರ ವಿಗ್ರಹಗಳನ್ನು ನೋಡಬಹದು. ನೆಲ ಅಂತಸ್ತಿನಲ್ಲಿ ವಂದೇಭಾರತ ಮಾತರಂ ಭಾರತಮಾತೆಯ ಬೃಹತ್ ವಿಗ್ರಹ ಕಾಣುತ್ತೇವೆ. ಒಂದೊಂದೇ ಮಹಡಿ ನೋಡಿ ಹೊರಬಂದಾಗ ಗಂಟೆ ಒಂದು ಆಗಿತ್ತು. ಭಾರತಮಾತಾ ಮಂದಿರಕ್ಕೆ ರೂ. 2 ಪ್ರವೇಶ ಶುಲ್ಕವಿದೆ.

bharathmata-mandir

ಚಂಡೀದೇವಿ ಮಂದಿರ
ಅಲ್ಲಿಂದ ಹೊರಟು ಚಂಡೀದೇವಿಮಂದಿರಕ್ಕೆ ಹೋಗಲು ಕೇಬಲ್ ಕಾರ್ ವ್ಯವಸ್ಥೆ ಇದ್ದ ಕಡೆಗೆ ಬಂದೆವು. ದೇವಸ್ಥಾನಕ್ಕೆ ಮೇಲೆ ಹೋಗಿ ಬರಲು ಕೇಬಲ್ ಕಾರಿಗೆ ತಲಾ ಒಬ್ಬರಿಗೆ ಶುಲ್ಕ ರೂ 163/-. ಕೇಬಲ್ ಕಾರಿನಲ್ಲಿ ಮೇಲೆ ಹೋದೆವು. ಕೇಬಲ್ ಕಾರಿನಲ್ಲಿ ಕೂತಿದ್ದಾಗ ನಮ್ಮ ಮೈಸೂರಿನ ಚಾಮುಂಡಿಬೆಟ್ಟ ನೆನಪಾಯಿತು. ಚಾಮುಂಡಿಬೆಟ್ಟಕ್ಕೆ ಕೇಬಲ್ ಕಾರ್ ವ್ಯವಸ್ಥೆ ಮಾಡಬೇಕೆಂಬ ಸರ್ಕಾರದ ಹಂಬಲವನ್ನು ನಾಗರಿಕರು ತಡೆಯುವಲ್ಲಿ ಯಶಸ್ವಿಯಾದದ್ದು ನೆನಪಿಗೆ ಬಂತು. ಕೇಬಲ್ ಕಾರಿನಲ್ಲಿ ಸುಮಾರು 682 ಅಡಿಗಳಷ್ಟು ಮೇಲೆ ಹಾಗೂ 2430 ಅಡಿಗಳಷ್ಟು ಉದ್ದ ಸಾಗುವಾಗ ಹರಿದ್ವಾರದ ಗಂಗೆಯ ಹರಿವನ್ನು ನೋಡುವುದು ಬಹಳ ಸೊಗಸಾಗಿರುತ್ತದೆ.

 

cable-car-1
ಉತ್ತರಾಖಂಡದ ಪ್ರಖ್ಯಾತ ತೀರ್ಥ ಕ್ಷೇತ್ರವಾದ ಹರಿದ್ವಾರದಲ್ಲಿರುವ ಹರ್ ಕಿ ಪೌರಿಯಿಂದ ನಾಲ್ಕು ಕಿ.ಮೀ ಗಳಷ್ಟು ದೂರದಲ್ಲಿ ನೀಲ್ ಪರ್ವತದ ಮೇಲೆ ಚಂಡಿದೇವಿ ದೇವಾಲಯವಿದೆ. ಈ ದೇವಾಲಯವನ್ನು ತಲುಪಲು ಚಂಡಿಘಾಟ್‌ನಿಂದ ಮೂರು ಕಿ.ಮೀ ನಡೆದು, ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು ಇಲ್ಲವೆ ಇತ್ತೀಚಿಗಷ್ಟೆ ಭಕ್ತರ ಅನುಕೂಲಕ್ಕೆಂದು ಪ್ರಾರಂಭಿಸಲಾದ ಕೇಬಲ್ ಕಾರುಗಳ ಮೂಲಕವೂ ತಲುಪಬಹುದು. ಈ ದೇವಾಲಯವನ್ನು ಕಾಶ್ಮೀರದ ಮಹಾರಾಜರು ಕಟ್ಟಿಸಿದ್ದಂತೆ. ಚಂಡಿದೇವಿಯು ಶುಂಭ ನಿಶುಂಭರೆಂಬ ರಕ್ಕಸರನ್ನು ಇಲ್ಲಿ ಸಂಹರಿಸಿದಳು ಎಂಬುದಾಗಿ ಸ್ಕಂದ ಪುರಾಣದಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಈ ದೇವಾಲಯದ ಮೂಲ ವಿಗ್ರಹವನ್ನು ೮ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ.

ಮಧ್ಯಾಹ್ನದ ಭೋಜನ
ಚಂಡಿ ದೇವಾಲಯ ನೋಡಿ ಕೇಬಲ್ ಕಾರಿನಲ್ಲಿ ಕೆಳಗೆ ಬಂದಾಗ ಗಂಟೆ 2 ಆಗಿತ್ತು. ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಬೆಳಗ್ಗೆಯೇ ಅನ್ನ ಸಾಂಬಾರು ಮಾಡಿಟ್ಟಿದ್ದರು ಅನ್ನಪೂರ್ಣೆಯರು. ಹಸಿದ ಹೊಟ್ಟೆಗೆ ಅದರ ರುಚಿ ಇಮ್ಮಡಿಯಾಗಿ ಊಟದ ಆಟ ಮುಗಿಸಿದೆವು.

ರಾಮಮಂದಿರ, ಹರಿಹರಮಂದಿರ
ಸ್ವಲ್ಪ ವಿಶ್ರಾಂತಿ ಪಡೆದು ಪುನಃ ಅವೇ ಎರಡು ರಿಕ್ಷಾಗಳಲ್ಲಿ ಸಂಜೆ ೩.೪೫ಕ್ಕೆ ಹೊರಟು ರಾಮಮಂದಿರಕ್ಕೆ ಬಂದೆವು. ಅಲ್ಲಿ ರಾಮನ ದೇವಾಲಯ ನೋಡಿದೆವು. ದೇವಾಲಯದ ಆವರಣದಲ್ಲಿ ಸಣ್ಣ ರುದ್ರಾಕ್ಷಿ ಮರವಿದೆ. ಸದ್ಯ ಅದನ್ನು ರಾಮನ ಕಾಲದ್ದೆಂದು ಹೇಳಲಿಲ್ಲ. ಏಕೆಂದರೆ ಮರ ಸಣ್ಣದಾಗಿತ್ತು! ಪಕ್ಕದಲ್ಲೇ ಇದ್ದ ಸರ್ಕಾರಿ ಪೋಷಿತ ರುದ್ರಾಕ್ಷಿ ಅಂಗಡಿಗೆ ಹೋದೆವು. ಅಂಗಡಿಯಾತ ಅದ್ಭುತ ಭಾಷಣಗಾರ. ರುದ್ರಾಕ್ಷಿ ಧರಿಸುವುದರಿಂದ ಆಗುವ ಆರೋಗ್ಯ ಲಾಭಗಳ ಬಗ್ಗೆ ಹೇಳಿದ್ದರಲ್ಲಿ ಒಂದಿಬ್ಬರು ಪ್ರಭಾವಿತಗೊಂಡು ನಾಲ್ಕೈದು ಸಾವಿರ ರೂ. ವ್ಯಾಪಾರ ಮಾಡಿಯೇಬಿಟ್ಟರು. ಸುಮಾರು ಒಂದು ಗಂಟೆ ಕಾಲ ಅವರ ಭಾಷಣ ಕೇಳಿದೆವು. ಅದರಿಂದ ತೊಂದರೆಯೇನೂ ಆಗಲಿಲ್ಲ. ಆ ಸೆಖೆಗೆ ತಂಪಾಗಿ ಅಂಗಡಿಯೊಳಗೆ (ಹವಾನಿಯಂತ್ರಿತ ವಾತಾನುಕೂಲವಿತ್ತು) ನಿಂತು ಭಾಷಣ ಕೇಳಿದೆವು. ಕೂರಲು ಕುರ್ಚಿಗಳಿದ್ದಿದ್ದರೆ ಇನ್ನೂ ಸುಖವಾಗಿ ಅವರ ಮಾತು ಕೇಳಬಹುದಿತ್ತು ಎನಿಸಿದ್ದು ಸುಳ್ಳಲ್ಲ! ಅಲ್ಲಿಂದ ಅನತಿ ದೂರದಲ್ಲೆ ಇದ್ದ ಹರಿಹರಮಂದಿರಕ್ಕೆ ಹೋದೆವು. ಅಲ್ಲಿ ದೊಡ್ಡದಾದ ರುದ್ರಾಕ್ಷಿ ಮರ ಇದೆ. ಅದರಲ್ಲಿ ರುದ್ರಾಕ್ಷಿ ಕಾಯಿಗಳನ್ನು ನೋಡಿದೆವು.

ದಕ್ಷೇಶ್ವರ ಮಹಾದೇವ ದೇವಾಲಯ
ಹರಿದ್ವಾರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಕಂಖಾಲ್ ಎಂಬಲ್ಲಿರುವ ದಕ್ಷೇಶ್ವರ ದೇವಾಯವು ಶಿವನಿಗೆ ಮುಡಿಪಾದ ದೇವಾಲಯವಾಗಿದೆ. ಹಿಂದೂ ಧರ್ಮವನ್ನು ಸಾರುವ ಹಾಗೂ ಲೋಕ ಪರಿಪಾಲಕರಾಗಿದ್ದ ೧೪ ಜನ ಪ್ರಜಾಪತಿಗಳಲ್ಲಿ ದಕ್ಷ ಮಹಾರಾಜನು ಒಬ್ಬನು. ಇವನ ಪುತ್ರಿಯಾದ ಸತಿಯು ಮಹಾಶಿವನ ಮಡದಿ. ಕಥೆಯ ಪ್ರಕಾರ, ದಕ್ಷ ಪ್ರಜಾಪತಿ ನಡೆಸಿದ ಯಜ್ಞದ ಸಂದರ್ಭದಲ್ಲಿ ಶಿವನಿಗೆ ಆಮಂತ್ರಣವಿರುವುದಿಲ್ಲ.  ಆದರೂ ಶಿವನ ಮಡದಿಯಾದ ಸತಿ ಶಿವನ ವಿರೋಧವಿದ್ದರೂ, ತಂದೆ ಕೈಗೊಂಡ ಯಜ್ಞಕ್ಕೆ ಬರುತ್ತಾಳೆ. ಅಲ್ಲಿ ತನ್ನ ಪತಿಗೆ ಮಾಡಿದ ಅವಮಾನವನ್ನು ಸಹಿಸಲಾರದೆ ಸತಿಯು ಕುಂಡಕ್ಕೆ ಹಾರಿ ತನ್ನ ಪ್ರಾಣ ತ್ಯಜಿಸುತ್ತಾಳೆ. ಇದರ ವಿಷಯ ತಿಳಿದ ಶಿವನು ವೀರಭದ್ರನನ್ನು ಸೃಷ್ಟಿಸಿ ಆ ಯಜ್ಞ ಧ್ವಂಸಗೊಳಿಸುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ದಕ್ಷನ ರುಂಡ ತೆಗೆಯುತ್ತಾನೆ. ಪ್ರಸ್ತುತ ದಕ್ಷನ ರುಂಡ ಬಿದ್ದ ಸ್ಥಳದಲ್ಲಿಯೆ ಇಂದು ಶಿವಲಿಂಗವಿರುವುದನ್ನು ಇಲ್ಲಿ ಕಾಣಬಹುದು. ಅಲ್ಲಿ ಸತಿಕುಂಡ, ದಕ್ಷ ಯಜ್ಞ ಮಾಡಿದ ಕುಂಡಗಳೆಂದು ಎರಡು ಕುಂಡಗಳನ್ನು ಕಾಣುತ್ತೇವೆ. ಅದನ್ನು ನೋಡಿದಾಗ ಪುರಾಣ ಕಥಾನಕ ಎಲ್ಲ ಮನಪಟಲದಲ್ಲಿ ಹಾದು ಹೋಯಿತು. ಆ ಸ್ಥಳಗಳನ್ನೆಲ್ಲ ನೋಡಿದಾಗ ಒಂದೊಂದು ಘಟನೆಗಳೂ ನಿಜವಿದ್ದಿರಬಹುದೇನೋ ಅನಿಸುತ್ತದೆ.

ಹರಿದ್ವಾರದಲ್ಲಿ ಮಾಂಸಾಹಾರ ಮತ್ತು ಮದ್ಯಪಾನಗಳ ಮೇಲೆ ಸಂಪೂರ್ಣ ನಿಷೇಧವಿದೆಯಂತೆ.

ದಶ ಮಹಾವಿದ್ಯಾ ದೇವಾಲಯ
ದಕ್ಷೇಶ್ವರ ದೇವಾಲಯದ ಆವರಣದಲ್ಲಿಯೆ ಈ ದೇವಾಲಯವೂ ಇದೆ. ಶಕ್ತಿ ಸ್ವರೂಪಿಣಿ ಪಾರ್ವತಿಯ ಹತ್ತು ವಿದ್ಯಾಗುಣಗಳಿಗೆ ಮುಡಿಪಾದ ದೇವಾಲಯ ಇದಾಗಿದೆ. ಹಿಂದೂ ಸ್ತ್ರೀಯರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುವ ಈ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತದೆಯಂತೆ. ಆ ಹತ್ತು ಗುಣಗಳ ಅವತಾರಗಳಾಗಿ ಪಾರ್ವತಿ ದೇವಿಯನ್ನು ಕಾಳಿ, ತಾರಾ, ಷೋಡಶಿ, ಭುವನೇಶ್ವರಿ, ಭೈರವಿ, ಚಿನ್ನಮಸ್ತಾ, ಧೂಮವತಿ, ಬಾಗಲಮುಖಿ, ಮಾತಂಗಿ ಹಾಗೂ ಕಮಲಗಳೆಂದು ಪೂಜಿಸಲಾಗುತ್ತದೆ.
ಅಲ್ಲಿಗೆ ನಮ್ಮ ಹರಿದ್ವಾರ ಪ್ರದಕ್ಷಿಣೆ ಹಾಕಿಸುವ ರಿಕ್ಷಾದವನ ಜವಾಬ್ದಾರಿ ಮುಗಿಯಿತು. ಅಲ್ಲಿಂದ ಸಂಜೆ ಆರಕ್ಕೆ ಹೊರಟು ಗಂಗಾರತಿ ನೋಡಲು ಹರ್ ಕಿ ಪೌರಿ ಕಡೆ ನಮ್ಮನ್ನು ಇಳಿಸಿದರು.

ಗಂಗಾರತಿ
ಹರಿದ್ವಾರದಲ್ಲಿರುವ ಹರ್ ಕಿ ಪೌರಿ ಘಾಟ್ (ಸ್ನಾನ ಮಾಡುವ ಸ್ಥಳ) ಪ್ರದೇಶವಾಗಿದ್ದು ಒಂದನೆಯ ಶತಮಾನದಲ್ಲಿ ವಿಕ್ರಮಾದಿತ್ಯ ರಾಜನಿಂದ ನಿರ್ಮಿಸಲ್ಪಟ್ಟಿದೆಯಂತೆ. ಈ ಸ್ಥಳದಲ್ಲಿರುವ ಬ್ರಹ್ಮಕುಂಡವು ಹೆಚ್ಚಿನ ಪಾವಿತ್ರ್ಯತೆ ಪಡೆದಿದ್ದು ಶಿವನ ಹೆಜ್ಜೆ ಗುರುತಿನ ಸ್ಥಳವೆಂದು ಪ್ರತೀತಿಯಲ್ಲಿದೆ. ಇಲ್ಲಿ ಸಂಜೆಯ ಸಮಯದಲ್ಲಿ ಗಂಗೆಗೆ ಆರತಿ ಮಾಡಲಾಗುತ್ತದೆ. ಅದನ್ನು ನೋಡಲು ಸಾವಿರಾರು ಭಕ್ತರು ಸೇರುತ್ತಾರೆ. ಹಾಗೂ ತಮ್ಮ ಪೂರ್ವಜರ ನೆನಪಿನಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರುತ್ತ ದೀಪಗಳನ್ನು ತೇಲಿ ಬಿಡುತ್ತಾರೆ. ಅದನ್ನು ನೋಡುವ ಸಲುವಾಗಿ ನಾವು ಅಲ್ಲಿಗೆ ಹೋದೆವು. ಅದಾಗಲೇ ಅಲ್ಲಿ ಸಾವಿರಾರು ಮಂದಿ ನದಿ ದಡದಲ್ಲಿ ಕೂತಿದ್ದರು. ಗಂಗಾರತಿ ಹತ್ತಿರದಿಂದ ನೋಡುವುದು ಬಲು ಸುಂದರ ದೃಶ್ಯವಂತೆ. ನಮಗೆ ಗಂಗಾರತಿ ನೋಡಲು ಹತ್ತಿರದಲ್ಲಿ ಸ್ಥಳ ಸಿಗಲಿಲ್ಲ. ದೂರದಲ್ಲಿ ಕುಳಿತು ನೋಡಿದೆವು. ಆದರೆ ನಮಗೆ ಅಂಥ ಸುಂದರ ದೃಶ್ಯ ನೋಡಲು ಸಿಗಲಿಲ್ಲ. ಗಂಗಾರತಿ ಸಮಯದಲ್ಲಿ ಹಾಡುವ ಹಾಡು ಕೇಳಲು ಬಹಳ ಚೆನ್ನಾಗಿರುತ್ತದೆ. ಸಂಜೆ ಹೊತ್ತಲ್ಲಿ ನದಿ ದಂಡೆಯಲ್ಲಿ ಕೂತು ಕೆಲವು ಆರತಿ ತೇಲುತ್ತ ಬರುವುದನ್ನು ನೋಡುವುದೇ ಸುಂದರ ಅನುಭವ. ಗಂಗಾರತಿ ನೋಡಿ ಸಂಜೆ ಏಳೂವರೆಗೆ ನಾವು ನಮ್ಮ ವಸತಿಗೃಹಕ್ಕೆ ಹಿಂದಿರುಗಿದೆವು.

haridwar_ganga_aarti

ganga-arati

ರಾತ್ರಿಯ ಭರ್ಜರಿ ಭೋಜನ
ಒಂದು ದಿನವೂ ಪಾಯಸ ಮಾಡಲಿಲ್ಲವೆಂದು ಸಿಹಿಪ್ರಿಯಳಾದ ಗೋಪಕ್ಕ ಆಕ್ಷೇಪಣೆ ಸಲ್ಲಿಸಿದ್ದರು. ಅವರಿಗೇಕೆ ಬೇಜಾರು ಮಾಡುವುದೆಂದು ಶಶಿಕಲಕ್ಕ ಹಾಗೂ ಸರಸ್ವತಕ್ಕನವರು ಆ ರಾತ್ರಿ ಹೆಸರುಬೇಳೆ ಪಾಯಸ ಮಾಡಿದ್ದರು. ಕರಿದತಿಂಡಿ ಪ್ರಿಯರಿಗಾಗಿ ಗಂಗಾರತಿ ನೋಡಿ ಬಂದವರೇ ಶಶಿಕಲಾಕ್ಕ ಈರುಳ್ಳಿ ಪಕೋಡ ಕರಿದೇಬಿಟ್ಟರು. ರಾತ್ರಿ ೮.೩೦ಗೆ ಸುರುಮಾಡಿ ಅರ್ಧ ಗಂಟೆಯೊಳಗೆ ಪಕೋಡ ಕರಿದು ತೆಗೆದು ಪೇರಿಸಿದರು. ಅಬ್ಬ ಅವರ ಪರಿಶ್ರಮವೇ ಎನಿಸಿತು. ಈರುಳ್ಳಿ ಪಕೋಡದ ಪರಿಮಳ ನಮ್ಮ ಕೋಣೆಯ ಸುತ್ತ ಆವರಿಸಿದಾಗ ಅದರಿಂದ ಪ್ರಭಾವಿತಗೊಂಡವರೆಲ್ಲ ಅಡುಗೆ ಕೋಣೆಗೆ ಧಾವಿಸಿ ಬಂದು ಹೇಗಿದೆ ಎಂದು ರುಚಿ ನೋಡಿ ಹೇಳಬೇಕಾ ಎಂದು ಕೇಳಿ ಅಲ್ಲೆ ಎಡತಾಕಿದೆವು! ‘ಎಲ್ಲ ಸರಿಯಾಗಿದೆ. ಯಾರೂ ರುಚಿ ನೋಡಿ ಹೇಳುವುದು ಬೇಡ. ಊಟ ತಯಾರಾದಾಗ ನಿಮ್ಮನ್ನು ಕರೆಯುತ್ತೇವೆ ಹೋಗಿ’ ಎಂದು ನಮ್ಮನ್ನು ಅಲ್ಲಿಂದ ಓಡಿಸಿದರು! ಎರಡೆರಡು ಪಕೋಡ, ಅರ್ಧ ಗ್ಲಾಸು ಪಾಯಸ, ಅನ್ನ ಸಾರು ಭರ್ಜರಿ ಭೋಜನವನ್ನೇ ಮಾಡಿ ಹಾಕಿದ್ದರು ಅನ್ನಪೂರ್ಣೆಯರು. ನನ್ನ ಪಾಲಿನ ಪಾಯಸ ಗೋಪಕ್ಕನಿಗೆ ಮೀಸಲಾಗಿಟ್ಟು, ಅದರ ಬದಲಾಗಿ ಅವರ ಪಾಲಿನ ಪಕೋಡ ಕೊಟ್ಟದ್ದನ್ನು ಪಡೆದು ತಿಂದು ತೃಪ್ತಿ ಹೊಂದಿದೆ!

ಗಂಗಾಸ್ನಾನಂ ತುಂಗಾಪಾನಂ
ಬೆಳಗ್ಗೆ (24-09-2016)ಆರು ಗಂಟೆಗೆ ಗಂಗಾಸ್ನಾನಕ್ಕೆ ಹೆಚ್ಚಿನವರೂ ಹೋದರು. ಅಲ್ಲಿ ಗಂಡಸರು ಅವರ ಹಿರಿಯರಿಗೆ ತರ್ಪಣ ಕೊಟ್ಟರಂತೆ. ನಾವು ಕೆಲವೇ ಮಂದಿ ಹೋಗಲಿಲ್ಲ. ನಾನು, ಹೇಮಮಾಲಾ, ಸವಿತಾ 7ಗಂಟೆಗೆ ಹೊರಗೆ ಹೋಗಿ ಕಾಫಿ ಕುಡಿದು, ಮುಂದಿನ ರಸ್ತೆಯಲ್ಲಿ ಅಡ್ಡಾಡಿ ಒಂದು ಹೊಟೇಲಿಗೆ ಹೋಗಿ ಪರೋಟ ತಿಂದು ಬಂದೆವು. ಗಂಗಾಸ್ನಾನಕ್ಕೆ ಹೋದವರು ೯ ಗಂಟೆಗೆ ಹಿಂತಿರುಗಿ ಬಂದು ಸರಸರನೆ ಉಪ್ಪಿಟ್ಟು ತಯಾರಿಸಿ ನಮ್ಮನ್ನು ತಿಂಡಿಗೆ ಕರೆದಾಗ ನಾವು ಬಡಿಸುತ್ತೇವೆ ಎಂದರೂ ಬಿಡದೆ ತಟ್ಟೆಗೆ ಉಪ್ಪಿಟ್ಟು ಹಾಕಿ ಕೊಟ್ಟಾಗ ನಮಗೆ ನಿಜಕ್ಕೂ ನಾಚಿಕೆ, ಸಂಕೋಚ ಆಗಿತ್ತು. ಅವರ ಈ ಪ್ರೀತಿಗೆ ಮನಸೋತು ಉಪ್ಪಿಟ್ಟು ತಿಂದೆವು. ಬಲು ರುಚಿಯಾಗಿತ್ತು.

ಮಾನಸದೇವಿಮಂದಿರ
ಮಾನಸದೇವಿ ಮಂದಿರಕ್ಕೆ ಹೋಗಲು ನಾವು ಎಂಟು ಮಂದಿ ರಿಕ್ಷಾದಲ್ಲಿ ಹೋದೆವು. ಕೆಲವರೆಲ್ಲ ಹಿಂದೆಯೇ ಅದನ್ನು ನೋಡಿದ್ದರೆಂದು ಬರದೆ ಕೋಣೆಯಲ್ಲೇ ಕೂತಿದ್ದರು. ಹೋಗುವ ದಾರಿಯಲ್ಲಿ ಹಣ್ಣುಕಾಯಿ ತೆಗೆದುಕೊಳ್ಳಿ ಎಂದು ಅದನ್ನು ಮಾರುವ ಮಂದಿ ಪೀಡಿಸುತ್ತಾರೆ. ಪುಟಾಣಿ ಬಾಲಕಿ ನನ್ನ ಹಿಂದೆಯೇ ಬಂದು ಕೇಳಿಕೋಂಡಾಗ ತೆಗೆದುಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಕೇವಲ ರೂ. ಹತ್ತು ಕೊಡಿ ಸಾಕು ಎಂದು ಒಂದು ತೆಂಗಿನಕಾಯಿ, 2 ಬಳೆ ಇರುವ ತೊಟ್ಟೆಯನ್ನು ಕೊಟ್ಟಳು. ಕೈಬೀಸಣಿಗೆ ನನ್ನನ್ನು ಆಕರ್ಷಿಸಿತು. ಅದನ್ನು ಮಡಚಿದರೆ ಸಣ್ಣದಾಗುತ್ತದೆ. ಅದಕ್ಕೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ತೆಗೆದುಕೊಂಡೆ.
manasadevi-mandir-haridwar

ಮಾನಸದೇವಿ ಮಂದಿರಕ್ಕೆ ನಾವು ಕೇಬಲ್ ಕಾರಿನಲ್ಲಿ ಹೋದೆವು. ಹೋಗಿ ಬರಲು ಟಿಕೆಟ್ ದರ ರೂ.95. ತುಂಬ ಮಂದಿ ಕೇಬಲ್ ಕಾರಿಗೆ ಕಾದಿದ್ದರು. ನಾವು ನಮ್ಮ ಸರದಿ ಬರಲು ಒಂದು ಗಂಟೆ ಕಾಯಬೇಕಾಯಿತು.

ಹರಿದ್ವಾರದ ಮೂರು ಸಿದ್ಧಪೀಠಗಳ ಪೈಕಿ ಮಾನಸಾ ದೇವಿ ದೇವಾಲಯವೂ ಒಂದು. ಶಕ್ತಿಯ ಅವತಾರವೆನ್ನಲಾಗುವ ಮಾನಸಾ ದೇವಿಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಶಿವನ ಮನಸ್ಸಿನಿಂದ ರೂಪಗೊಂಡ ಶಕ್ತಿದೇವಿ ಇವಳಾಗಿರುವುದರಿಂದ ಇವಳಿಗೆ ಮಾನಸಾ ದೇವಿ ಎಂಬ ಹೆಸರು ಬಂದಿದೆಯಂತೆ. ಮಾನಸಾದೇವಿ ಮಂದಿರವು ಬಿಲ್ವ ಪರ್ವತದ ಮೇಲಿದೆ. ಪರ್ವತದ ಮೇಲಿನಿಂದ ಹರಿದ್ವಾರ ನಗರ ಸುಂದರವಾಗಿ ಕಾಣುತ್ತದೆ.
ಈ ದೇವಾಲಯಕ್ಕೆ ಹೋಗಲು ಕೇಬಲ್ ಕಾರ್ ಹಾಗೂ ನಡೆದುಕೊಂಡೂ ಹೋಗಲು ರಸ್ತೆ, ಮೆಟ್ಟಲುಗಳಿವೆ. ಮಾನಸಾದೇವಿ ಮಂದಿರದಲ್ಲಿ ದೇವಿಯ ಎರಡು ಮೂರ್ತಿಗಳಿದ್ದು ಒಂದರಲ್ಲಿ ಮೂರು ಮುಖಗಳು ಮತ್ತು ಐದು ಬಾಹುಗಳಿವೆ. ಇನ್ನೊಂದರಲ್ಲಿ ೮ ಬಾಹುಗಳಿವೆ. ಮಾನಸಾ ದೇವಿಯ ಆಲಯವಿರುವ ಬಿಲ್ವ ಪರ್ವತವು ಹರಿದ್ವಾರ ನಗರದ ಮಧ್ಯಭಾಗದಲ್ಲಿಯೇ ಇದ್ದು ಹರ್‌ಕಿಪೌಡಿಯಿಂದ ಎತ್ತರದ ಪರ್ವತದಲ್ಲಿ ಕಾಣುತ್ತದೆ.


ಮಧ್ಯಾಹ್ನದ ಭೂರೀಬೋಜನ

ದೇವಾಲಯ ಸುತ್ತಿ ಬಂದು ರಿಕ್ಷಾದಲ್ಲಿ ರಾಮಭವನಕ್ಕೆ ಬಂದೆವು. ಹೀರೆಕಾಯಿ ಬಜ್ಜಿ, ಆಲೂಗಡ್ಡೆ ಬಜ್ಜಿ, ರವೆ ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ ಊಟಕ್ಕೆ ಇಷ್ಟು ಬಗೆ ತಯಾರಾಗಿತ್ತು. ಮಧ್ಯಾಹ್ನದ ಭೂರಿ ಭೋಜನ ಎಂದೇ ಹೇಳಬಹುದು. ತರ್ಪಣ ಕೊಟ್ಟ ಕಾರಣ ಪಾಯಸ ಇಲ್ಲದಿದ್ದರೆ ಹೇಗೆ ಎಂದು ಪಾಯಸ ಮಾಡಿದರಂತೆ. ಹೀರೆಕಾಯಿ ಬಜ್ಜಿ ಬಹಳ ಚೆನ್ನಾಗಿರುತ್ತದೆ ಎಂದು ವಿಠಲರಾಜು ಹೇಳಿದ್ದಕ್ಕೆ ಅದನ್ನೂ ಮಾಡಿ ಬಡಿಸಿದರು. ಸರಸ್ವತಕ್ಕ, ಶಶಿಕಲಾಕ್ಕ ಮತ್ತು ಅವರಿಗೆ ಸಹಾಯ ಮಾಡಿದ ಎಲ್ಲರನ್ನೂ ನಾವು ಕೃತಜ್ಞತೆಯಿಂದ ಸ್ಮರಿಸಬೇಕು. ಅಡುಗೆ ಮಾಡಿ ಎಂದು ಅವರನ್ನು ಯಾರೂ ಒತ್ತಾಯಿಸಿರಲಿಲ್ಲ. ಅವರೇ ಬಲು ಪ್ರೀತಿಯಿಂದ ಮಾಡಿ ಬಡಿಸಿದ್ದರು. ಭರ್ಜರಿ ಊಟ ಮಾಡಿ ಕೋಣೆಯಲ್ಲಿ ಕಾಲುಚಾಚಿ ಮಲಗಿದೆವು.

ಈ ಸಮಯ ವ್ಯಾಪಾರಮಯ!

ನಮ್ಮ ವಾಸ್ತವ್ಯ ಹರಿದ್ವಾರದಲ್ಲಿ ಕೊನೆಯದಿನವಾದ ಆ ಸಂಜೆ ಆರು ಗಂಟೆಗೆ ಪೇಟೆ ಬೀದಿಯಲ್ಲಿ ಸುತ್ತು ಹೊಡೆದೆವು. ಬಟ್ಟೆಬರೆ, ಸ್ವೆಟರ್, ಬಳೆ, ಚೀಲ, ತಿಂಡಿತಿನಿಸುಗಳು, ದೊಡ್ಡ ಬಾಣಲೆಯಲ್ಲಿ ಕಾಯಿಸುತ್ತಿರುವ ಎಮ್ಮೆಯ ಹಾಲು ಎಲ್ಲವನ್ನೂ ನೋಡುತ್ತ ಸಾಗಿದೆವು. ಕೆಲವರು ಹಾಲು ಕುಡಿದರು. ನನ್ನ ತಂಗಿ ಸವಿತಾ ಹಾಲು ಕುಡಿದು ‘ತವರು ಮನೆಯಲ್ಲಿ ಕುಡಿದ ಹಾಲಿನಂತೆಯೇ ತುಂಬ ರುಚಿ ಇದೆ’ ಎಂದಳು. ಕಚೋರಿ, ಸಮೋಸಗಳಿಗೆ ಒಂದಕ್ಕೆ ರೂ. ಹತ್ತು ಮಾತ್ರ. ಅದನ್ನು ರುಚಿ ನೋಡಿದೆವು. ಒಂದೊಂದು ಅಂಗಡಿಯೊಳಗೂ ಕಾಲು ಗಂಟೆ ನಿಂತು ನೋಡಿ ಮುಂದೆ ಹೋಗುತ್ತಿದ್ದೆವು. ನಾನು ದೊಡ್ಡಮಟ್ಟದ ಯಾವ ವಸ್ತುಗಳನ್ನೂ ತೆಗೆದುಕೊಳ್ಳದೆ ಇರಲು ತೀರ್ಮಾನಿಸಿದೆ. ಸಣ್ಣಪುಟ್ಟದ್ದು ಬಳೆ, ಚಪ್ಪಲಿ, ಇತ್ಯಾದಿ ತೆಗೆದುಕೊಂಡೆ ಅಷ್ಟೆ. ನಮ್ಮಲ್ಲಿ ಅನೇಕರು ರಗ್ಗು, ಸ್ವೆಟರು, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಕೊಂಡುಕೊಂಡರು.

ಕಲಿತ ಪಾಟ!
ರಸ್ತೆ ಬದಿ ಚೂಡಿದಾರ ಮಾರಾಟ ಮಾಡುತ್ತಿದ್ದನೊಬ್ಬ. ಕೇವಲ ರೂ.100 ಎಂದು ಹೇಳಿದ್ದು ಕೇಳಿ ಕಿವಿ ನೆಟ್ಟಗಾಯಿತು. ಏನು ತೆಗೆದುಕೊಳ್ಳದೆ ಇರಲು ತೀರ್ಮಾನಿಸಿ ಹಾಕಿದ ಗಂಟು ಸ್ವಲ್ಪ ಸಡಿಲವಾಗಿ ಚೂಡಿದಾರದ ಮುಂದೆ ನಿಂತೆ. ಹತ್ತಿಬಟ್ಟೆಯ ಚೂಡಿದಾರವೊಂದು ಬಹಳ ಆಕರ್ಷಕವಾಗಿ ನನ್ನ ಕಣ್ಣಿಗೆ ಕಂಡಿತು. ಮುಟ್ಟಿ ನೋಡಿದೆ. ಆಹಾ ಶುದ್ಧ ಹತ್ತಿಯದೇ ಎಂದು ಕಾತರಿ ಆಯಿತು. ಕೇವಲ ರೂ. 100 ತಾನೆ ಎಂದು ತೆಗೆದುಕೊಂಡೇ ಬಿಟ್ಟೆ. ಟಾಪ್‌ನ ಮಡಿಕೆಬಿಚ್ಚಿ ತೋರಿಸಿದ. ಸರಿ ಇದೆ ಎಂದು ಖಾತ್ರಿ ಆಯಿತು. ಹಾಗೆಯೇ ನಮ್ಮವರು ಮೂರು ನಾಲ್ಕು ಜನ ವ್ಯಾಪಾರ ಮಾಡಿದರು. ವ್ಯಾಪಾರ ಮಾಡಿ ಬೀಗಿದೆವು.

ಅಂಗಡಿ ಅಂಗಡಿ ಸುತ್ತಿ ಕಂಡದ್ದನ್ನೆಲ್ಲ ಕಣ್ಣುತುಂಬ ನೋಡಿ ತೃಪ್ತಿಪಟ್ಟು ರಾತ್ರಿ ಏಳೂವರೆಗೆ ಕೋಣೆಗೆ ಬಂದೆವು. ಕೋಣೆಗೆ ಬಂದು ಚೂಡಿದಾರ ತೆಗೆದುಕೊಂಡವರು ಬಿಚ್ಚಿ ನೋಡಿದರು. ನೋಡಿದರೆ ಪ್ಯಾಂಟ್‌ನ ಉದ್ದ ಅರ್ಧವೇ ಇದ್ದು, ಅಗಲ ಆನೆಯನ್ನೂ ತೂರಿಸುವಷ್ಟು ಇತ್ತು! ಮೋಸ ಹೋದ ಅರಿವಾಗಿ ಅದನ್ನು ಆ ಅಂಗಡಿಯವನಿಗೆ ವಾಪಾಸು ಮಾಡಲು ಅವರೆಲ್ಲ ಓಡಿದರು. ಪರಿಪರಿಯ ಮಾತಿನ ಕೌಶಲದಲ್ಲಿ ಅವನಿಗೆ ವಾಪಾಸು ಕೊಟ್ಟು ರೂ 100 ಹಿಂದಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ನಾನು ವಾಪಾಸು ಮಾಡಲಿಲ್ಲ. ಕಸದಿಂದ ರಸ ಮಾಡೊಣವೆಂದು ಇಟ್ಟುಕೊಂಡೆ. ಮನೆಗೆ ಬಂದು ಅದರಿಂದ ನಾಲ್ಕು ದಿಂಬಿನ ಕವರು ಹೊಲಿದೆ! ಹಾಗಾಗಿ ರೂ. ನೂರು ದಂಡವಾಗಲಿಲ್ಲ ಎಂದು ಸಮಾಧಾನಪಟ್ಟುಕೊಂಡೆ! ಮಾರಾಟ ಮಾಡುವವನೂ ಬುದ್ಧಿವಂತನೇ ಅವನಿಗೆ ವ್ಯಾಪಾರ ಮಾಡುವ ಕಲೆ ಇದೆ! ಅವನು ಟಾಪ್‌ನ ಮಡಿಕೆ ಬಿಚ್ಚಿ ತೋರಿಸುತ್ತಾನೆ ಹೊರತು ಪ್ಯಾಂಟ್ ಮಡಿಕೆ ಬಿಚ್ಚುವುದೇ ಇಲ್ಲ!

ಒಂದು ವಸ್ತು ಕಡಿಮೆಬೆಲೆಗೆ ಸಿಗುತ್ತದೆ ಎಂದಾಗ ಮನುಜ ತನಗೆ ಅವಶ್ಯವಿಲ್ಲದಿದ್ದರೂ ಅದರತ್ತ ಆಕರ್ಷಣೆ ಹೊಂದಿ ಅದನ್ನು ಖರೀದಿಸುತ್ತಾನೆ. ನಿಜಕ್ಕೂ ನನಗೆ ಚೂಡಿದಾರದ ಅವಶ್ಯಕತೆ ಖಂಡಿತಾ ಇರಲಿಲ್ಲ. ಬೀರು ತುಂಬ ಅಂಗಿಗಳಿದ್ದುದು ತಿಳಿದಿತ್ತು. ಕಡಿಮೆ ಕ್ರಯದ ಬಟ್ಟೆ ಬಾಳಿಕೆ ಬರುವುದಿಲ್ಲ ಎಂಬುದೂ ತಿಳಿಯದವಳೇನೂ ಅಲ್ಲ. ಆಗ ಬುದ್ಧಿಗೆ ಮಂಕು ಕವಿದು ಅವಶ್ಯವಿಲ್ಲದಿದ್ದರೂ ಕೊಂಡುಕೊಂಡೆ. ಅದಕ್ಕೆ ನಾವು ಖರೀದಿಸುವ ಮೊದಲು ಆದಷ್ಟು ಬುದ್ಧಿ ಉಪಯೋಗಿಸಬೇಕು. ವ್ಯಾಪಾರ ಮಾಡುವ ಮುನ್ನ ಅದು ನಮಗೆ ಅವಶ್ಯವೇ ಎಂಬುದನ್ನು ನಾಲ್ಕಾರು ಬಾರಿ ಯೋಚಿಸಿಯೇ ಕೊಂಡುಕೊಳ್ಳಬೇಕು ಎಂದು ಆಗ ಪಾಟ ಕಲಿತೆ. ಬೇರೆಯವರಿಗೆ ಈ ಪಾಟ ಮಾಡುವುದರಲ್ಲಿ ನಾನು ನುರಿತವಳೇ!
ರಾತ್ರಿ ಅನ್ನ, ಸಾಂಬಾರು, ಹಪ್ಪಳ, ಪೊಂಗಲ್, ಗೊಜ್ಜು ಊಟ ಮಾಡಿದೆವು.

ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ರಾಮಸ್ವಾಮಿ ಅವರು ಬ್ರಹ್ಮಚಾರಿಗಳು. ಯೋಗಸಾಧಕರು. ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ನಾಡಿನಾದ್ಯಂತ ಯೋಗಪ್ರಚಾರಕರಾಗಿ ಸಂಚರಿಸುತ್ತಾರೆ. ಹರಿದ್ವಾರದಲ್ಲಿ ರಾತ್ರೆ ವಿಠಲರಾಜು ಅವರನ್ನು ನೋಡಲು ಬಂದರು. ನಾವೆಲ್ಲ ಅವರನ್ನು ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡೆವು. ಕೆಲವರು ಕಾಲುಮುಟ್ಟಿ ನಮಸ್ಕರಿಸಲು ಮುಂದಾದಾಗ ಬೇಡ, ಕಾಲುಮುಟ್ಟಬೇಡಿ. ಕಾಲುಮುಟ್ಟಿ ನಮಸ್ಕರಿಸಬೇಕಾದದ್ದು ತಂದೆತಾಯಿಗೆ ಮಾತ್ರ. ಬೇರೆ ಯಾರಿಗೂ ಕಾಲು ಮುಟ್ಟಿ ನಮಸ್ಕರಿಸಲು ಹೋಗಬೇಡಿ ಹಾಗೆಯೇ ನಮಸ್ಕಾರ ಮಾಡಿ ಎಂದರು.

ನಮ್ಮ ನಮ್ಮ ಲಗೇಜನ್ನು ಸರಿಯಾಗಿ ಬ್ಯಾಗಿಗೆ ತುಂಬಿಸಿ ನಾಳೆ ಬೆಳಗ್ಗೆಗೆ ಹೊರಡಲು ತಯಾರಾಗಿ ಮಲಗಿದೆವು.

ಹರಿದ್ವಾರಕ್ಕೆ ವಿದಾಯ
ಬೆಳಗ್ಗೆ (25-09-2016) ಬೇಗ ಎದ್ದು ತಯಾರಾದೆವು. ಹರಿದ್ವಾರದಿಂದ ದೆಹಲಿಗೆ ಜನ ಶತಾಬ್ಧಿ ರೈಲು 6-20ಕ್ಕೆ . ನಾವು ಆಟೊರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ 5.30 ಗೆ ಹೋದೆವು. ರೈಲು ನಿಲ್ದಾಣ ನಡೆದು ಹೋಗುವಷ್ಟೇ ದೂರ ಆದರೂ ನಮ್ಮ ದೊಡ್ಡ ಬ್ಯಾಗ್ ಹೊತ್ತು ನಡೆಯಲು ಮನಸ್ಸಾಗಲಿಲ್ಲ. ಸಣ್ಣ ಬ್ಯಾಗ್ ಹೊಂದಿದವರು ನಡೆದೇ ಬಂದರು. ರೈಲು ನಿಲ್ದಾಣದಲ್ಲಿ ಅರ್ಧ ಗಂಟೆ ಕಾದೆವು.

6.25 ಕ್ಕೆ ರೈಲು ಬಂತು. ಹತ್ತಲು ಕಿಕ್ಕಿರಿದು ಜನ ಸೇರಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ದೊಡ್ಡ ಬ್ಯಾಗ್. ರೈಲು ಹೊರಡಲು ಶೀಟಿ ಕೇಳಿದಾಗ ಅಂತೂ ಹರಸಾಹಸಪಟ್ಟು ಮುಂದಿದ್ದವರನ್ನೂ ನೂಕಿ ಒಳಹಾಕಿ ರೈಲು ಏರಿದ್ದಾಯಿತು. ರೈಲು ಕೇವಲ ಐದೇ ನಿಮಿಷ ಅಲ್ಲಿ ನಿಲ್ಲುವುದು. ಐದು ನಿಮಿಷ ಖಂಡಿತಾ ಸಾಲದು. ಪ್ರಯಾಣಿಕರೆಲ್ಲರೂ ಪ್ರವಾಸ ಬಂದವರೇ ಅಲ್ಲಿಂದ ಹತ್ತುವುದು. ಎಲ್ಲರ ಬಳಿಯೂ ಲಗೇಜು ಜಾಸ್ತಿಯೇ ಇರುತ್ತದೆ. ಆರು ತಿಂಗಳು ಪ್ರವಾಸೀ ಸಮಯದಲ್ಲಾದರೂ ಆ ನಿಲ್ದಾಣದಲ್ಲಿ ಹತ್ತು ನಿಮಿಷ ನಿಲ್ಲಿಸುವುದು ಒಳ್ಳೆಯದು. ಆಗ ಜನ ಆತಂಕಪಡದೆ ರೈಲು ಏರಬಹುದು.

ಬೀಳ್ಕೊಡುಗೆ
ಸರಿಯಾದ ಸಮಯಕ್ಕೆ 11.30 ಗೆ ದೆಹಲಿ ತಲಪಿದೆವು. ನಾವು (ಶೋಭಾ, ಸವಿತಾ, ರುಕ್ಮಿಣಿಮಾಲಾ, ಹೇಮಮಾಲಾ) ನಾಲ್ವರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಹೋಗುವವರಿದ್ದೆವು. ಬಾಕಿದ್ದವರೆಲ್ಲ ರೈಲಿನಲ್ಲಿ ಬೆಂಗಳೂರಿಗೆ. ಅವರ ರೈಲು ರಾತ್ರಿ 9 ಗಂಟೆಗೆ. ನಮ್ಮ ವಿಮಾನ ರಾತ್ರೆ 7.15 ಕ್ಕೆ. ನಾವು ಅಲ್ಲಿಂದ ಸೀದಾ ವಿಮಾನ ನಿಲ್ದಾಣಕ್ಕೆ ಹೋಗಿ ಸಮಯ ಕಳೆಯುವುದು ಎಂದು ತೀರ್ಮಾನಿಸಿಕೊಂಡೆವು. ನಾವು ಪರಸ್ಪರ ವಿದಾಯ ಹೇಳಿದೆವು. ವಿಮಾನ ನಿಲ್ದಾಣಕ್ಕೆ ಹೋಗಲು ನಾವು ಬಾಡಿಗೆ ಕಾರು ಏರಿದೆವು. (ರೂ.600) ಊಟ ಮಾಡಿಯೇ ಹೋಗುವುದಾ? ಅಲ್ಲ ಅಲ್ಲಿ ಹೋಗಿ ಮಾಡುವುದಾ ಎಂಬ ಜಿಜ್ಞಾಸೆ ಕಾಡಿ ಆಗ ಊಟ ಮಾಡಲು ಸರಿಯಾದ ವೇಳೆಯಲ್ಲ ಎಂದೆನಿಸಿ ಸೀದಾ ವಿಮಾನನಿಲ್ದಾಣಕ್ಕೆ ಹೋದೆವು. ದೆಹಲಿ ಸೈಟ್ ಸೀಯಿಂಗ್ ಬೇಕಾ? ಎಲ್ಲ ನೋಡಿ ಸಂಜೆ ಹೋಗಬಹುದು ಎಂದು ಕಾರು ಚಾಲಕ ಹೇಳಿದ. ಅವರು ಮೂರು ಮಂದಿಯೂ ದೆಹಲಿ ಸುತ್ತಿದವರೇ ಆದ್ದರಿಂದ ಮನಸ್ಸು ಮಾಡಲಿಲ್ಲ. ನೋಡದವಳು ನಾನೊಬ್ಬಳೇ ಇದ್ದುದು.

ದೆಹಲಿ ವಿಮಾನ ನಿಲ್ದಾಣ
ಅಂತಾರಾಷ್ಟ್ರೀಯ ನಂ.1. ವಿಮಾನ ನಿಲ್ದಾಣ ಎಂದು ಖ್ಯಾತಿಪಡೆದ ದೆಹಲಿಯ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕಾರು ಚಾಲಕ ನಮ್ಮ ಬ್ಯಾಗ್ ಪೇರಿಸಲು ಗಾಡಿಯನ್ನು ತಂದುಕೊಟ್ಟು ಅದರಲ್ಲಿ ಬ್ಯಾಗ್ ಹಾಕಿ ದುಡ್ಡುಪಡೆದು ಹೋದ. ನಾವು ಗಾಡಿ ತಳ್ಳುತ್ತ ಕೂರಲು ಸ್ಥಳವೆಲ್ಲಿದೆಯೆಂದು ನೋಡುತ್ತ ನಡೆದೆವು. ಎಲ್ಲೂ ಸರಿಯಾಗಿ ಬೆಂಚ್ ಹಾಕಿಲ್ಲ. ಕೆಲವೆಡೆ ಮಾತ್ರ ಒಂದೆರಡು ಬೆಂಚ್ ಕಾಣಿಸಿತು. ಅದರಲ್ಲೆಲ್ಲ ಜನ ಕೂತಿದ್ದರು. ಒಬ್ಬ ಹುಡುಗ ಕೂತಿದ್ದವ ಎದ್ದು ನಮಗೆ ಜಾಗ ಕೊಟ್ಟ. ಊಟಕ್ಕೆ ಏನಾದರೂ ಸಿಗುತ್ತದೋ ಎಂದು ನೋಡಲು ಹೋದೆವು. ಹೊರಗೆ ಹತ್ತಿರದಲ್ಲಿ ಒಂದೇ ಹೊಟೇಲು ಕಾಣಿಸಿತು. ಮಾಂಸಾಹಾರ ಸಸ್ಯಾಹಾರ ಒಟ್ಟಿಗೇ ಸಿದ್ಧಪಡಿಸುವ ಹೊಟೇಲು. ಅಲ್ಲಿ ತಿನ್ನಲು ಮನಸ್ಸಾಗಲಿಲ್ಲ. ಮತ್ತೆ ಸಣ್ಣ ಅಂಗಡಿಯಲ್ಲಿ ಎಂಟಿ‌ಆರ್ ಉಪಮಾ ಡಬ್ಬ ಕಾಣಿಸಿತು. ರೂ.೬೦ಕ್ಕೆ ಅದನ್ನು ತೆಗೆದುಕೊಂಡೆವು. ಬಿಸಿನೀರು ಹಾಕಿ ತಿನ್ನಲು ಅನುವುಮಾಡಿಕೊಟ್ಟರು. ಕೂರಲು ಸಾಕಷ್ಟು ಬೆಂಚ್ ಇರದ, ಸರಿಯಾದ ಹೊಟೇಲೂ ಇರದ ಇದು ಅಂತಾರಾಷ್ಟ್ರೀಯ ನಂ.1 ವಿಮಾನ ನಿಲ್ದಾಣವಾ ಎಂದು ಮನದಲ್ಲೇ ಹೇಳಿಕೊಂಡೆ. ಬೆಂಗಳೂರು ವಿಮಾನ ನಿಲ್ದಾಣ ಇದಕ್ಕಿಂತ ಸಾವಿರಪಟ್ಟು ಚೆನ್ನಾಗಿದೆ ಎಂದೆನಿಸಿತು.
ತಿಂಡಿ ತಿಂದು ಅಲ್ಲಿ ಕೂರುವ ಬದಲು ಒಳಗೆ ಹೋಗಿ ಚೆಕ್ ಇನ್ ಮಾಡಿಸಿಕೊಂಡು ನಾವು ವಿಮಾನ ಹತ್ತುವ ಗೇಟ್ ಬಳಿಯೇ ಹೋದೆವು. ಅಲ್ಲಿ ಕೂರಲು ಸಾಕಷ್ಟು ವ್ಯವಸ್ಥೆ ಇತ್ತು. ಸಂಜೆ ಆರರವರೆಗೂ ಅಲ್ಲಿ ಕಾಲ ನೂಕಿದೆವು.

ವಿಮಾನ ಪ್ರಯಾಣ
ಆರು ಗಂಟೆಗೆ ಇಂಡಿಗೋ ವಿಮಾನ ಹತ್ತಿ ಕೂತೆವು. 7.15 ಕ್ಕೆ ಹೊರಟಿತು. ವಿಮಾನದಲ್ಲಿ ಚಾಕಲೇಟ್, ಕಾಪಿ, ಊಟ ಕೊಟ್ಟರು. ರಾತ್ರೆ 10 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದೆವು.

ಮರಳಿ ಮೈಸೂರಿಗೆ ಪ್ರಯಾಣ
ನಮ್ಮ ಲಗೇಜು ಪಡೆದು ಹೊರಬಂದೆವು. ಹೇಮಮಾಲಾ ಅವರು ಅವರಿಗೆ ಪರಿಚಯ ಇರುವ ಬಾಡಿಗೆ ಕಾರನ್ನು ವಿಮಾನನಿಲ್ದಾಣಕ್ಕೆ ಬರಲು ಹೇಳಿದ್ದರು. ಮಹಾದೇವ ಸರಿಯಾದ ಸಮಯಕ್ಕೇ ಬಂದು ಕಾದಿದ್ದರು. 10.30 ಗೆ ಕಾರು ಹತ್ತಿದೆವು. ಸವಿತಾ ದಾರಿಮಧ್ಯೆ ಹೆಬ್ಬಾಳದಲ್ಲಿ ಇಳಿದು ಅವಳ ಗಂಡನ ಜೊತೆ ಮನೆಗೆ ಹೋದಳು. ನಾವು ಮೈಸೂರಿಗೆ ಮಧ್ಯರಾತ್ರಿ 1.30 ಗೆ ತಲಪಿದೆವು. ಅಲ್ಲಿಗೆ ನಮ್ಮ 17  ದಿನದ ಪ್ರವಾಸ ಕೊನೆಗೊಂಡಿತು.

ಕರ್ನಾಟಕ ಸರ್ಕಾರ ಚಾರ್ಧಾಮ ಯಾತ್ರೆ ಮಾಡಿದವರಿಗೆ ರೂ. 20000 ಸಹಾಯಧನ ನೀಡುತ್ತದೆ. ಆದರೆ ಅದು ಸರ್ಕಾರದಿಂದ ಅನುಮೋದಿಸಲ್ಪಟ್ಟ ಪ್ರವಾಸೀಸಂಸ್ಥೆಯ ವತಿಯಿಂದ ಹೋದರೆ ಮಾತ್ರ ಕೊಡುವುದಂತೆ. ಹಾಗಾಗಿ ಹೆಚ್ಚಿನ ಮಂದಿಗೂ ಈ ಸಹಾಯಧನ ಲಭಿಸುವುದಿಲ್ಲ. ಅದರಿಂದ ವಂಚಿತರಾಗಬೇಕಾಗುತ್ತದೆ. ಇದು ನ್ಯಾಯವಾದ ದಾರಿಯಲ್ಲ. ನಾವು ಯಾತ್ರೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಬಯೋಮೆಟ್ರಿಕ್ ಕಾರ್ಡ್ ಇರುತ್ತದೆ. ಅದನ್ನು ನೋಡಿ ಯಾತ್ರೆ ಮಾಡಿದವರಿಗೆ ಸಹಾಯಧನ ನೀಡುವುದು ಸರಿಯಾದ ನಡೆ.

ಕೃತಜ್ಞಾತಾ ಸಮರ್ಪಣೆ
ಈ ಯಶಸ್ವಿ ಪ್ರವಾಸದ ಹಿಂದೆ ಅನೇಕ ಮಂದಿಯ ತ್ಯಾಗವಿದೆ. ನಮ್ಮ ಅತ್ತೆ 87 ರ ವಯೋಮಾನದವರು. ಅವರು ಈ ಇಳಿವಯಸ್ಸಿನಲ್ಲಿ ಮನಸ್ಸಿಲ್ಲದಿದ್ದರೂ ನನಗಾಗಿ ಮಂಗಳೂರಿನ ಮಗನ ಮನೆಗೆ ಪ್ರಯಾಣ ಮಾಡಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಮಗ ಸೊಸೆ ಅವರನ್ನು ಪ್ರೀತಿಯಿಂದ ನೋಡಿಕೊಂಡಿದ್ದರು. ಇತ್ತ ಅನಂತನಿಗೆ ಕಛೇರಿಯಲ್ಲಿ ಸಾಕಷ್ಟು ಕೆಲಸದ ಒತ್ತಡ ಇದ್ದರೂ ನೀನು ಪ್ರವಾಸ ಹೋಗು ಎಂದು ನನ್ನನ್ನು ಖುಷಿಯಿಂದಲೇ ಕಳುಹಿಸಿಕೊಟ್ಟು, ಮನೆ, ಕಚೇರಿ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದ. ಇವರೆಲ್ಲರ ಸಹಾಯದಿಂದ ಈ ಯಾತ್ರೆಯನ್ನು ಸುಗಮವಾಗಿ ಕೈಗೊಳ್ಳಲು ನನಗೆ ಸಾಧ್ಯವಾಯಿತು. ನಮ್ಮ ಜೊತೆಯಿದ್ದವರೆಲ್ಲರೂ ಪ್ರವಾಸದುದ್ದಕ್ಕೂ ಬಹಳ ಅನ್ಯೋನ್ಯದಿಂದ ಒಂದೇ ಮನೆಯವರಂತೆ ಇದ್ದು ಪ್ರವಾಸದ ಯಶಸ್ಸಿಗೆ ಕಾರಣಕರ್ತರಾಗಿದ್ದರು. ಪ್ರವಾಸದಲ್ಲಿ ಮುಖ್ಯವಾಗಿ ನಮ್ಮ ಹೊಟ್ಟೆ ಸರಿಯಾಗಿರಬೇಕು. ನಮ್ಮ ಹೊಟ್ಟೆ ಕೆಟ್ಟರೆ ಎಲ್ಲವೂ ಕೆಟ್ಟಂತೆಯೇ. ಶಶಿಕಲಾಕ್ಕ, ಸರಸ್ವತಕ್ಕ ನಮ್ಮ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೆಯರೇ ಆಗಿ ನಮ್ಮೆಲ್ಲರ ಉದರದ ಯೋಗಕ್ಷೇಮದ ಹೊಣೆ ಹೊತ್ತು ಯಾರಿಗೂ ಹೊಟ್ಟೆ ಕೆಡದಂತೆ ನೋಡಿಕೊಳ್ಳುವಲ್ಲಿ ಅತ್ಯಂತ ಯಶಸ್ವಿಯಾಗಿದ್ದರು. ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ವಿಠಲರಾಜು ಅವರು ಈ ಪ್ರವಾಸವನ್ನು ಪ್ರಯಾಸವಾಗದಂತೆ ಎಲ್ಲ ವ್ಯವಸ್ಥೆ ಮಾಡಿ ಬಹಳ ಚೆನ್ನಾಗಿ ಕೈಗೊಂಡಿದ್ದರು. ಅವರಿಗೆ ನಮ್ಮೆಲ್ಲಯಾತ್ರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಧಾರಾವಾಹಿ ಮುಗಿಯಿತು!

ಹಿಮಾಲಯದ ಸನ್ನಿಧಿಯಲ್ಲಿ- ಚಾರ್ಧಾಮ ಪ್ರವಾಸ- ಭಾಗ 10 :   http://52.55.167.220/?p=13286

 

 – ರುಕ್ಮಿಣಿಮಾಲಾ, ಮೈಸೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: