ಅರ್ಥೈಸುವುದೆಂತು ಧರಣಿಯ?
ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು
ಕಷ್ಟ ಎಂದವರೇ ಎಲ್ಲ..
ಯಾಕೋ ಯಾರು ನೋಡುವುದಿಲ್ಲ
ಸೂರ್ಯನ ಸುತ್ತುವ ಭೂಮಿಯ.
ಪೃಥ್ವಿಯೆ ಹೆಣ್ಣೆನ್ನುತ್ತಾರೆ ನಿಜ
ಅಂತೆಯೆ ಸಹನೆಗೆ ನಿರೀಕ್ಷೆ ;
ಯಾಕ್ಯಾರು ನೋಡುವುದಿಲ್ಲ –
ಭ್ರಮಿಸುವ ದಿಕ್ಕು ದಿಸೆ ದೂರ ?
ನಿಂತ ನಿಲುವಿನ ದಿನಕರ
ಸುತ್ತುವಳು ಸುತ್ತ ಆವರಿಸುತ್ತಾ
ಚಕ್ರವಲ್ಲ ಅಂಡಾಕಾರ
ಕೆಲವೊಮ್ಮೆ ಹತ್ತಿರ, ಮತ್ತೆ ದೂರ.
ಬೆಚ್ಚಗಿನ ಸಾಮೀಪ್ಯ ಹುರುಪು
ಬಿಸಿಲ ಬೇಗೆಯ ಕಾರುವ ಸಖ್ಯ
ದೂರಾದಂತೆ ನಡುಗಿಸೊ ಚಳಿ
ಬೆಂಕಿಗೆ ನೀರು ಸುರಿವ ಮಳೆ !
ಮತ್ತೆಲ್ಲೋ ಬಿರುಸುಂಟರಗಾಳಿ
ಚಂಡಮಾರುತ ತೂಫಾನು ಇತರೆ
ನಿಂತಲ್ಲಿ ನಿಲದ ಓಟ
ಸಹಿಸುತ್ತಲೆ ನಡೆವ ಸಾಗಾಟ..
ಭಾಸ್ಕರನ ಸುತ್ತುವುದೆ ತ್ರಾಸ
ಸಂಭ್ರಮಿಸಬೇಕು ತನ್ನನ್ನೂ ಸುತ್ತುತ್ತ !
ಸಮತೋಲಿಸಿಕೊಳ್ಳಲು ಹೆಣಗುತ್ತಾ
ಓರೆಯಾಗಿಸಬೇಕು ತನು ಕೋನದಲ್ಲಿ..
ನೆಟ್ಟಗೆ ನಿಲಬಿಡದ ಆವರ್ತನ
ಪರಿಭ್ರಮಣದ ಧಾಳಿ ರುಜ ರೋಧನ
ಅನುಭವಿಸುತ್ತಲೆ ವಿಧೇಯತೆ ನಕ್ಷೆ
ಬಿಡುವಂತಿಲ್ಲ ಸೌರವ್ಯೂಹದ ಕಕ್ಷೆ !
ಹೇಗಿದ್ದೀತು ಸ್ಥಿರ ಸುಸ್ಥಿರ ಸ್ಥಿತಿ ?
ಗಳಿಗೆಗೊಂದು ಗಂಟೆಗೊಂದು ರೀತಿ.
ಮಹಾಶಯ ಇದೇ ಹೆಣ್ಣಿನ ಕಥೆ ವ್ಯಥೆ
ಒಂದೇ ತರ ಇರಲಾಗದ ಬದುಕಿನ ಗಾಲಿ
ನೀ ದಿನಕರನಾಗು, ಭುವಿಯಾಗಲು ಬಿಡು
ಅವಳೆಲ್ಲ ತಲ್ಲಣ ಗೊಂದಲ ಕಾರಣ ನೋಡು
ಮುನಿವಳು ನಗುವಳು ಹುಚ್ಚಾಡುವಳು
ಪೊರೆವಳು ಕರೆವಳು ಕಚ್ಚಾಡುವಳು
ಪ್ರೀತಿಸಿ ದ್ವೇಷಿಸಿ ದೂರೀಕರಿಸಿ ರಮಿಸುವಳು
ಕಾರಣವಿಲ್ಲದೆ ಅತ್ತು ನಕ್ಕು ಕಂಗೆಡಿಸುವಳು
ಆಪ್ತವಾಗುವಷ್ಟೆ ಅರ್ಥವಾಗದ ಒಗಟು
ತಟ್ಟನೆ ಮಳೆ ಸುರಿದ ಸ್ವಾತಿಮುತ್ತಿನ ಜಿಗುಟು
ಹೀಗೇನೇನೆಲ್ಲ ಪರಿ ಸಂಕೀರ್ಣ ಮನಸ್ಸತ್ವ
ಸರಳವಾಗಿ ಗೊತ್ತಾಗಬೇಕಿದ್ದರೆ…
ಅರ್ಥ ಮಾಡಿಕೊ ಸಾಕು ಇಳೆಯ ಸಂಕಟ
ಬರಿ ಇಳೆಯಾಗಲ್ಲ ಉರಿಮೊಗದವನ ಜೋಡಿ
ಆಗವಳು ಪ್ರಶ್ನೆಯಾಗಿ ಕಾಡುವುದಿಲ್ಲ
ಬರಿ ಉತ್ತರವಾಗಿ ಕಾಣುತ್ತಾಳೆ !
.
– ನಾಗೇಶ ಮೈಸೂರು
”ಅರ್ಥ್ಯೆಸುವುದೆಂತು ಧರಣಿಯ’ ನಾಗೇಶ್ ಸರ್, ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ!.
ಸ್ತ್ರೀ ಸಂಕುಲಕ್ಕೊಂದು ಪುಟ್ಟ ನಮನ, ಈ ಕವನ – ಮೆಚ್ಚುಗೆಗೆ ತುಂಬಾ ಧನ್ಯವಾದಗಳು ವಿಜಯ ಸುಬ್ರಮಣ್ಯ ಅವರೆ
ಬಹಳ ಅರ್ಥಪೂರ್ಣವಾದ ಕವನ…
ಮೆಚ್ಚಿ ಪ್ರಕಟಿಸಿದ್ದಕ್ಕೆ ತುಂಬಾ ಧನ್ಯವಾದಗಳು ಹೇಮಾ ಅವರೆ
ಭಾವ ಪೂರ್ಣ ,ಅರ್ಥ ಪೂರ್ಣ ಕವನ ನಿಮ್ಮದು ಚೆನ್ನಾಗಿ ಬರೆದಿರುವಿರಿ
ಭುವಿಯ ಈ ಹೋಲಿಕೆ, ಸ್ತ್ರೀ ತುಮುಲಗಳ ಅಭಿವ್ಯಕ್ತಿಯ ಪರ್ಯಾಯ ರೂಪ ಅನಿಸಿದ ಗಳಿಗೆಯಲ್ಲಿ ಪದಗಳಾದ ಭಾವವಿದು. ನೀವು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು
ಮೂರನೆಯ ಪ್ಯಾರಾ ತುಂಬಾ ಚೆನ್ನಾಗಿ ಬಂದಿದೆ ಸರ್. ನವ್ಯ ಕವಿತೆಯ ಹಾಗೆ.
ಥ್ಯಾಂಕ್ಯೂ ಮೇಡಂ , . ನವ್ಯ ನವೋದಯ ಅಂತೆಲ್ಲ ಗುರುತಿಸಿ ಅನುಸರಿಸಿ ಬರಿಯೋ ಅಷ್ಟು ಜ್ಞಾನ, ಅನುಭವ, ತಿಳುವಳಿಕೆ ನನ್ನಲ್ಲಿಲ್ಲ. ಮನಸಿಗೆ ತೋಚಿದ್ದು ಗೀಚುತ್ತೇನೆ ಅಷ್ಟೇ. ಬಹುಶಃ ನನ್ನ ಕವನಗಳೆಲ್ಲ ಹಳೆಯ ಪ್ರಾಸಬದ್ಧ ಶೈಲಿಯವು – ಆಗೀಗೊಮ್ಮೆ ಸ್ವಲ್ಪ ವಿಭಿನ್ನದ್ದು ಹೊರಬೀಳುವುದುಂಟು
ನೀವು ಕಾಮೆಂಟಿಸಿದ ಮೇಲೆ ನವ್ಯ ಅಂದರೆ ಹೇಗಿರಬೇಕು ಅಂತ ಹೋಗಿ ನೋಡಿದೆ