ಹನಿಗಳಲ್ಲಿ ಗಾಂಧಿ…
ಮುತ್ಸದ್ದಿ ಗಾಂಧಿಗೆ
ಅವನ ಕನ್ನಡಕವೆ
ದುರ್ಬೀನಾಗಿತ್ತು
ಅದು ದೇಶದ ಭವಿಷ್ಯ ಕಾಣುವ
ಸಾಧನವೂ ಆಗಿತ್ತು
ತನ್ನ ಊರುಗೋಲನ್ನು
ಕೊಳಲ ಧ್ವನಿಯಾಗಿಸಿ
ಮೋಹನನಾಗಿದ್ದ
ಆಸೆಗೊಂಚಲ ಜನರು
ಸುತ್ತಲೂ ನೆರೆದರು
ಕೊಳಲ ಧ್ವನಿಯಲ್ಲು
ಕಹಳೆ ಮೊಳಗು
ಕೇಳಿಸಿಕೊಂಡರು
ಮೇಧಾವಿ ಮ್ಲೇಚ್ಛರು !
ಉದ್ಧ ಮೂಗು
ಅಗಲ ಕಿವಿಗಳು
ಗ್ರಹಿಕೆಯಲ್ಲಿ ಸ್ಪರ್ಧಿಗಳು
ಆದರೂ ತಮ್ಮ ಗುಟ್ಟು
ಬಿಟ್ಟುಕೊಡದವರು
ಅವನದೇ ನಿಕಟವರ್ತಿಗಳು !
ದೊಡ್ಡ ಗಡಿಯಾರ
ಕಟ್ಟಿಕೊಂಡು
ದೇಶದ ಸಮಯಕ್ಕೊದಗಿದನಲ್ಲ?
ಸರಿ ಸಮಯಕ್ಕೆ ಕಾದ
’ಸಾಧಕ ’ರೂ ಇದ್ದರಲ್ಲ!?
ಉದ್ದ ಕೈಗಳಿಂದ
ಅಹಿಂಸೆಯನ್ನು
ಚೆನ್ನಾಗಿ ನಾದಿ
ರುಚಿಗೊದಗಿಸಿದ …
ಚಪ್ಪರಿಸಿದ ಮಂದಿ
ಘರ್ಜಿಸಿದರು ಕೊಬ್ಬಿ!
ರಾಮರಹೀಮರ ಭಜಿಸಿ
ದೇಶ ಕಟ್ಟುವಾಗ
ಹಿಂಸೆಯ ಗೋಡೆ
ಉಚಾಯಿಸಿತ್ತು….
ನೊಂದ ಗಾಂಧಿ
ಉಪವಾಸ ಕೂತರೂ
ಸೇವಿಸಿದರು….
ಅಖಂಡ ನೋವು
’ರಾಮ’ ನಾಮಧೇಯ
ಬಂಡೆದ್ದು ಗುಂಡಿಟ್ಟ
ಕೊನೆಯುಸಿರಲ್ಲು
’ರಾಮ’ ಮಂತ್ರವೆ
ಅವನ ಬಾಯಲ್ಲಿ ದಟ್ಟ
ಅಹಿಂಸೆಯ ಪ್ರತಿಪಾದಕನ
ಹತ್ಯೆ ಮಾಡಿದವನ ಕೊನೆ
ನೇಣು ಬಿಗಿಸಿದ ಮೋಹನ
ದಾಸನ ’ಶಿಷ್ಯಗಣ’ ಸಾಧನೆ!
ಕಟು ’ಸತ್ಯ’ಗಳನ್ನು
ಅವನು ಹುಟ್ಟಿದ ದಿನ
ಮುಚ್ಚಿಡಬೇಕು…
ಮಾಂಸ ಮದಿರೆ ಒಂದಕ್ಕೆರಡು
ಮುನ್ನಾ ದಿನವೆ ಖರ್ಚಾಗಿವೆ
ಚಪ್ಪರಿಸಿದ ನಾಲಿಗೆಗಳು
ಭಾಷಣಗಳಿಗೆ ಸಜ್ಜಾಗಿವೆ!
– ಅನಂತ ರಮೇಶ್
ಸುಂದರ ಕವನ. ಚೆನ್ನಾಗಿದೆ. ಮನ ಮುಟ್ಟುವ ಮತಿ ಚುಚ್ಚುವ ಮಾತಿಗೆ ಮನ ತೆರೆವರೆ ?