ಅಂಗಳದಂಚಿನ ಕನವರಿಕೆಗಳು

Share Button

Sunitha.jpg

‘ವರ್ತಮಾನ ಬಿಕ್ಕಟ್ಟುಗಳನ್ನು ಮರೆಯುವುದಕ್ಕೆ ಬಾಲ್ಯಕ್ಕೆ ಹೆರಳಿಕೊಳ್ಳುವುದೂ ಒಂದು ತಂತ್ರ’. ಸ್ಮಿತಾ ಅಮೃತರಾಜರ ಅಂಗಳದಂಚಿನ ಕನವರಿಕೆಗಳು ಕೃತಿಯ ಮುನ್ನುಡಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ಅರ್ಥಗರ್ಭಿತ ಸಾಲುಗಳಿವು.

ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಚೆಂಬು ಎಂಬ ಪ್ರಕೃತಿಯ ಮಡಿಲಲ್ಲಿ ಅವಿತುಕೊಳ್ಳದೆ ಸಾಹಿತ್ಯ ಕಳಸವನ್ನು ಇರಿಸುವುದರ ಮೂಲಕ ತನ್ನ ಇರುವಿಕೆಯನ್ನು ಸಾಕ್ಷೀಕರಿಸಿದ್ದಾರೆ ಸ್ಮಿತಾ. ಪಕ್ವ ಬರಹಗಾರ್ತಿಯರ ಸಾಲಿನಲ್ಲಿ ಮಿರಿ ಮಿರಿ ಮಿಂಚುವ ತಾರೆಯಂತೆ.
ಇವರ ಮೊದಲನೆಯ ಕವನ ಸಂಕಲನ—-
ಎರಡನೇಯ ಸಂಕಲನ—
ಕಾವ್ಯಾಸಕ್ತರ ಮನಗೆದ್ದಿದ್ದು, ಮೂರನೆಯ ಕೃತಿ ‘ಅಂಗಳದಂಚಿನ ಕನವರಿಕೆಗಳು’ ಲಲಿತ ಪ್ರಬಂಧ ಸಂಕಲನವಾಗಿದ್ದು, ಈ ಕೃತಿಯನ್ನು ತಮ್ಮ ಇಷ್ಟ ಗುರುಗಳಾದ ಪ್ರಭಾಕರ ಶಿಶಿಲರಿಗೆ ಅರ್ಪಿಸಿದ್ದ, ಇವರ ಗುರುಭಕ್ತಿಯ ಸಂಕೇತವಾಗಿದೆ. ಇದರಲ್ಲಿ ಸುಮಾರು 38 ಲಲಿತ ಪ್ರಬಂಧಗಳು ಅಡಕವಾಗಿದ್ದ, ಒಂದೊಂದು ಪ್ರಬಂಧಗಳು ವಿಭಿನ್ನ ಅನುಭವಗಳ ನೆಲೆಯಲ್ಲಿ ಸಾಗಿದೆ.

Angalasanchina kanavarikegalu

ಸ್ಮಿತಾ ಅಮೃತರಾಜ್‌ರವರು ‘ಅಂಗಳದಂಚಿನ ಕನವರಿಕೆಗಳು’ ಹೆಸರೇ ಸೂಚಿಸುವಂತೆ ಬಾಲ್ಯದಿಂದಲೇ ತಮ್ಮ ಅನುಭವಕ್ಕೆ ಬಂದ ಘಟನೆಗಳನ್ನು ಹೃದ್ಯವಾಗಿ ಲೇಖಿಸಿದ್ದಾರೆ. ಇವರು ಬಾಲ್ಯ ದಿನಗಳ ಮೆಲುಕಿನಲ್ಲಿ ಸಾಹಿತ್ಯ ಸವಾರಿ ಮಾಡುವಾಗ ವಿವೇಚನೆಯಿಂದ ಸಕಾರಾತ್ಮಕ ದೋರಣೆಯನ್ನು ರೂಢಿಸಿಕೊಂಡಿದ್ದಾರೆ.
ಲೇಖಕಿಯು ತಮ್ಮ ಜೋಳಿಗೆಯಿಂದ ಕೆದಕಿ ಕೆದಕಿ ನೆನಪುಗಳನ್ನು ಹೆಕ್ಕಿ ತೆಗೆದು ಹರವುತ್ತಾ… ಪಟ ಪಟನೆ ಸೂರಿನಡಿಯಲ್ಲಿ ಬೀಳುವ ಮಳೆ ಹನಿಗಳು ಎಷ್ಟು ಬೇಗ ಮನಸ್ಸನ್ನು ಹಿಂದಕ್ಕೆ ದಾಟಿಸಿ ಬಿಟ್ಟಿತು. ಬಿಡಿಸಿಕೊಂಡ ಕೊಡೆ ಬರೇ ನೆಪಕ್ಕಷ್ಟೇ, ಅದರೊಳಗೆ ಅದೆಷ್ಟು ಆಕಾರ ಕಾಣುವಷ್ಟು ತೂತುಗಳು ? ಆ ತೂತಿನೊಳಗೆ ಕಾಣುವ ಆಕಾಶದ ಚೂರುಗಳೊಳಗೆ ಬ್ರಹ್ಮಾಂಡವನ್ನೇ ಕಲ್ಪಿಸಿಕೊಂಡು ಸುಖಿಸುವ ದಿನಗಳು ಮತ್ತೆಂದೂ ಬಾರದ ಲೋಕಕ್ಕೆ ಹೋಗಿ ಬಿಟ್ಟಿವೆ ಎಂಬ ಸಾಲುಗಳು ಅವರ ಚಿತ್ತಭಿತ್ತಿಯಲ್ಲಿ ಕ್ರೋಢಿಕರಿಸಿದ್ದೂ… ಬರಹಕ್ಕೆ ನೀಲಿನಕಾಶೆಯ ಬುಡ ಭದ್ರವಾಗಿರುವುದು ಗೋಚರ ಹಾಗೂ ಯುವ ಬರಹಗಾರರಿಗೆ ಮಾದರಿ.

ವಯಸ್ಸಿನಲ್ಲಿ ಇನ್ನು ಮಾಗದ ಸಾಹಿತ್ಯದಲ್ಲಿ ಪರಿಪಕ್ವವಾದ ಸ್ಮಿತಾಳ ಲೇಖನಗಳು ಅನುಭವಗಳನ್ನು ನೈತಿಕ ಚೌಕಟ್ಟಿನಲ್ಲಿ ಮಂಡಿಸುತ್ತಾ ಸಾಗಿದೆ. ಇಲ್ಲಿ ಮೂಡುವ ಹೃದ್ಯ ಘಟನೆಗಳು , ಸರಳ ತಿರ್ಮಾನಗಳು, ತಾಯ್ತನದ ನುಡಿಗಳು ಕಟುಸತ್ಯದ ಸಾಲುಗಳು ಎಲ್ಲರ ಅನುಭವಕ್ಕೆ ಬರುವ ಸನ್ನಿವೇಶಗಳೆಂಬುದಕ್ಕೆ ಸಂಶಯವೇ ಇಲ್ಲ. ಅದರೆ ಸ್ಮಿತಾ ಅನುಭವಿಸಿದ ಸನ್ನಿವೇಶಗಳನ್ನು ತಮ್ಮ ಭಾವಕೋಶ ಪ್ರಸವದಲ್ಲಿ ಸಾಹಿತ್ಯ ಸಂಸಾರವನ್ನು ತಾರಕಕ್ಕೇರಿಸಿದ್ದಾರೆ. ಆ ಮೂಲಕ ನಮಗೆ ಕಚಗುಳಿಯಿಟ್ಟಿದ್ದಾರೆ.ಮನಸ್ಸನ್ನು ತಟ್ಟವ ಪ್ರಬುದ್ಧ ಪದಪುಂಜಗಳಿಂದ ಪುಳಕಿತಗೊಳಿಸುವ ಲೇಖನಾವಳಿಗಳು ‘ಅಂಗಳದಂಚಿನ ಕನವರಿಕೆಗಳು’ ಪುರುಷೋತ್ತಮ ಬಿಳಿಮಲೆಯವರು ಈ ಪುಸ್ತಕಕ್ಕೆ ಮುನ್ನುಡಿಸುತ್ತಾ ವಿಸ್ತೃತವಾಗಿ ನೈಜತೆಯಿಂದ ತೂಕ ಹೆಚ್ಚಿಸಿದ್ದಾರೆ.

ಈ ಮನಸ್ಸಿಗೂ ಅದೆಷ್ಟೊಂದು ಬಣ್ಣಗಳು ? ಹೂವಿನಂತೆ ಅರಳುವ ಮುದುಡುವ ಪ್ರಕ್ರಿಯೆಗೆ ಒಳಗಾದಷ್ಟೂ ಮನಸ್ಸು ಹದಗೊಳ್ಳುತ್ತದೆ, ಮಾಗಿಕೊಳ್ಳುತ್ತದೆ. ಮನಸ್ಸಿನೊಳಗೊಂದು ನದಿ ಹರಿಯುತ್ತಲೇ ಇದೆ.. ಗುಡ್ಡ ಇಳಿಜಾರು ಹತ್ತಿ ಇಳಿಯುತ್ತಾ ಸುತ್ತಿ ಬಳಸುತ್ತಾ ಕಡಲಿನ ಕಡೆಗೆ ಧ್ಯಾನಿಸುತ್ತಾ… ಯಾವುದೋ ಕಾಣದ ಗಮ್ಯದೆಡೆಗೆ ಮನಸ್ಸು ಧೇನಿಸುತ್ತಿರುವಾಗ ಬದುಕು ನೀರಸವೆಂದೆನಿಸುವುದಿಲ್ಲ. ಕರಗಿದ ಕ್ಷಣಗಳಿಗಾಗಿ ಪರಿತಪಿಸುತ್ತಾ ಬರುವ ಕ್ಷಣಗಳನ್ನು ಕೊಂಡುಕೊಳ್ಳುವುದರಲ್ಲೇನಿದೆ ಪ್ರಯೋಜನ ? ಅನುಭವಿಸುತ್ತಾ ಸಾಗಿದರೆ ಪ್ರತಿ ಕ್ಷಣವೂ ಸುಂದರತೆಯ ಪ್ರತೀಕವೇ’
ಸ್ಮಿತಾರ ಭಾವಕೋಶದಿಂದ ಆಯ್ದ ವಾಕ್ಯ ಪುಟಗಳಿವು. ಸ್ಮಿತಾ ಅಮೃತ್‌ರಾಜ್‌ರ ಕನವರಿಕೆಗಳು ಅಂಗಳದಂಚನ್ನು ಮೀರಿ ವಿಶ್ವಮುಖಿಯಾಗಿ ಹಿರಿಯಲೀ ಎಂಬುದು ನಮ್ಮೆಲ್ಲರ ನಿರೀಕ್ಷೆ.

 

 – ಸುನೀತಾ, ಕುಶಾಲನಗರ

 

1 Response

  1. Shruthi Sharma says:

    “ಅಂಗಳದಂಚಿನ ಕನವರಿಕೆಗಳು” – ಭಾವನಾತ್ಮಕವಾದ ಶೀರ್ಷಿಕೆ ಓದಿದಾಗಲೇ ಶ್ರೀಮತಿ ಸ್ಮಿತಾ ಅಮೃತರಾಜ್ ಅವರ ಬರಹವೇ ಇರಬೇಕೆಂದು ತೆರೆದೆ. ನನ್ನ ಊಹೆ ಒಂದರ್ಥದಲ್ಲಿ ತಪ್ಪಲ್ಲ!
    ಈ ಪ್ರಬಂಧ ಸಂಕಲನವನ್ನು ಓದಲೇಬೇಕೆನ್ನಿಸುವಷ್ಟು ಚೆಂದದ ನಿರೂಪಣೆ ಸುನೀತಾ ಅವರೇ! ಹೀಗೇ ಬರೆಯುತ್ತಿರಿ. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: