ಕಿರು ಕತೆಗಳು
by
Madhugiri Naveen, nandana.naveena@gmail.com
·
March 17, 2016
ಸ್ಪರ್ಶ
ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡವನು ತುಂಬಾ ವರ್ಷಗಳ ನಂತರ ತನ್ನ ಹುಟ್ಟೂರಿಗೆ ಬಂದಿದ್ದ. ಅಜ್ಜನ ಕಾಲದ ಹಳೆಯ ಮನೆಯನ್ನು ಕಣ್ತುಂಬಿಕೊಳ್ಳುತ್ತ ಹಜಾರದ ಕಂಬದ ಮೇಲೆ ಕೈಯಿಟ್ಟ. ಬಾಲ್ಯದ ನೆನಪುಗಳು ಅವನ ಕೈಗಳನ್ನ ಸ್ಪರ್ಶಿಸಿದವು.
ಕರೆದದ್ದು ಅಮ್ಮನನ್ನು
ಆಡುತ್ತಿದ್ದ ಮಗು ಕಲ್ಲಿಗೆ ಕಾಲೆಡವಿ ಬಿದ್ದು ನೋವಿನಿಂದ ಅಮ್ಮ ಎಂದು ಕೂಗಿತು. ದೂರದಲ್ಲಿ ಕೆಲಸ ಮಾಡುತ್ತಿದ್ದ ತಾಯಿಗೆ ಮಗುವಿನ ಕೂಗು ಕೇಳಲಿಲ್ಲ.. ಮಗುವಿನ ನೋವಿಗೆ ಮರುಗಿ ಥಟ್ಟನೆ ಪ್ರತ್ಯಕ್ಷನಾದ ದೇವರು ಕೈಹಿಡಿದು ಮೇಲೆತ್ತಲು ಮುಂದಾದ. ಆಗ ಮಗು ದೇವರಿಗೆ ಹೇಳಿತು: ‘ನೀನೇಕೆ ಬಂದೆ? ಹೋಗು. ನಾನು ಕರೆದಿದ್ದು ಅಮ್ಮನನ್ನು. ‘
ಊರು
ಭಿಕ್ಷುಕನೊಬ್ಬ ಹಸಿವಿನ ಸಂಕಟದಿಂದ ಬೀದಿಗಳನ್ನು ತಿರುಗುತ್ತಿದ್ದಾನೆ. ಆದರೆ ಯಾರೊಬ್ಬರ ಮನೆಯ ಬಾಗಿಲು ಮುಚ್ಚಿಲ್ಲ. ಊರಮಂದಿ ಜಾತ್ರೆಯ ಸಿದ್ಧತೆಯಲ್ಲಿ ಮುಳುಗಿದ್ದಾರೆ.
ಗಾಯ
ದೇಗುಲದಲ್ಲಿ ಗರ್ಭಗುಡಿಯ ವಿಗ್ರಹದ ಮೇಲಿನ ಹಾಲು ತುಪ್ಪಕ್ಕೆ ನೊಣಗಳು ಮುತ್ತಿವೆ.
ಅದೇ ದೇಗುಲದ ಹೊರ ಜಗುಲಿಯ ಮೇಲೆ ಭಿಕ್ಷುಕನ ಕಾಲಿನ ಗಾಯಕ್ಕೂ ನೊಣಗಳು ಮುತ್ತಿವೆ.
ಮನಸ್ಸು
ಮೂಲೆ ತಿರುವಿನಲ್ಲಿ ಕಂಡವಳು ಕಣ್ಣು ಮಿಟುಕಿಸುವ ಮುನ್ನ ಮಾಯವದಳು..
ಅವನು ಮನೆಗೆ ಹಿಂದಿರುಗಿದ. ಮನಸು ಅವಳನ್ನೇ ಹಿಂಬಾಲಿಸಿತು!
ಮನುಷ್ಯ
ನಿಂಬೆಯ ತೋಟದಲ್ಲಿ ಹಾರಾಡುತ್ತಿದ್ದ ಹಕ್ಕಿಗಳು ಗಾಳಿಯನ್ನು ಸ್ವಾಗತಿಸುತ್ತಿದ್ದವು..
ನಾನು ತೋಟಕ್ಕೆ ಕಾಲಿಟ್ಟೆ. ಛೇ, ಹಕ್ಕಿಗಳೆಲ್ಲ ಪುರ್ರನೇ ಹಾರಿದವು!
ನನ್ನ ಬಗ್ಗೆ ನಾನೇ ಅಸಹ್ಯ ಪಡಬೇಕು ನಾನೊಬ್ಬ ಮನುಷ್ಯ.
ಚಿನ್ನದ ಮೊಟ್ಟೆ
ಅವನು ಸರ್ಕಾರಿ ಉದ್ಯೋಗದಲ್ಲಿರುವವಳನ್ನು ಯಾವ ವರದಕ್ಷಿಣೆಯೂ ಇಲ್ಲದೆ, ತನ್ನದೇ ಸ್ವಂತ ಖರ್ಚಿನಲ್ಲಿ ಮದುವೆಯಾದ. ಅವನಿಗೆ ಗೊತ್ತಿತ್ತು ಅವಳು ಚಿನ್ನದ ಮೊಟ್ಟೆಯಿಡುವ ಕೋಳಿ ಅಂತ.
ರಾಜಕುಮಾರಿ
ಒಂದು ರಾತ್ರಿ ಭಿಕ್ಷುಕನ ಕನಸಿನಲ್ಲಿ ರಾಜಕುಮಾರಿ ಬಂದಿದ್ದಳು!
ಅದೇ ರಾತ್ರಿ, ಅದೇ ಹೊತ್ತಲ್ಲಿ, ರಾಜಕುಮಾರಿಗೂ ಕನಸು ಬಿದ್ದಿತ್ತು. ಆಗ ಅವಳಿಗೆ ಕಂಡಿದ್ದು: ಬೀಗ ಜಡಿದಿದ್ದ ಕೋಟೆಯ ಬಾಗಿಲು.
– ನವೀನ್ ಮಧುಗಿರಿ
‘ಕಿರು ಕತೆಗಳು’ ಸೊಗಸಾಗಿವೆ. ” ಕರೆದದ್ದು ಅಮ್ಮನನ್ನು” ಕತೆ ಬಹಳ ಆಪ್ತ ಎನಿಸಿತು.
Nice . ಸಂಕ್ಷಿಪ್ತವಾಗಿ, ಅರ್ಥ ಹೊಳೆಯಿಸುವ ಕತೆಗಳು. ಹಾಯ್ಕುಗಳ ಹಾಗೆ.
Nice writing naveen…congrats
ಚೊಕ್ಕದಾದ ಚಿಕ್ಕ ಕಥೆಗಳು..ಇಷ್ಟವಾದವು…ಆಪ್ತವಾದವು..
ತುಂಬಾ ಚೆನ್ನಾಗಿದೆ…
ಪುಟ್ಟ ಪುಟ್ಟ ಕತೆಗಳು ದೊಡ್ಡ ದೊಡ್ಡ ಅರ್ಥ
ಹೂವಿನಂತೆ ಕತೆಗಳು ಪರಿಮಳದಂತೆ ಅರ್ಥ
ನಕ್ಷತ್ರದಂತ ಕತೆಗಳು ಆಕಾಶದಷ್ಟು ಅರ್ಥ