‘ಗಾಯದ ಹೂವುಗಳು’ ಕುರಿತು…

Share Button
Smith Amritaraj

ಸ್ಮಿತಾ ಅಮೃತರಾಜ್

ಎಲ್ಲ ಅಮವಾಸ್ಯೆಗಳಲ್ಲಿ ‘ಪದ್ಯವೊಂದಿರಲಿ ಬೆಳಕಿಗೆ’ ಅಂತ ಹೇಳುತ್ತಾ ತನ್ನ ಎಲ್ಲ ನೋವಿನ, ಸಂಕಟ, ಬೇಗುದಿಯ ಗಳಿಗೆಗಳಲ್ಲಿ ಕವಿತೆಯನ್ನು ಉಸಿರಾಡಿಕೊಂಡು, ಕವಿತೆಯನ್ನು ಬಗಲಲ್ಲಿಟ್ಟುಕೊಂಡು ಬದುಕುತ್ತಿರುವ ಹಾಗೂ ಜೀವಪರ ಕಾಳಜಿಗೆ ಮಿಡಿಯುವ, ವ್ಯವಸ್ಥೆಯ ಬಗೆಗಿನ ಕೋಪಕ್ಕೆ ತಣ್ಣಗಿನ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಜೊತೆಗೆ ಕವಿತೆಯನ್ನು ದೀಪದಂತೆ ಕಾಯ್ದಿಟ್ಟುಕೊಂಡು ಆರ್ಧ್ರಭಾವವನ್ನು ಸೂಸುವಂತೆ ಏಕಕಾಲದಲ್ಲಿ ಬರೆಯುವ ನಮ್ಮ ನಡುವೆ ಇರುವ ಕಾಜೂರು ಸತೀಶ್.

ಈ ಹೊತ್ತಿನಲ್ಲಿ ನಮ್ಮ ಕಾಲಮಾನದಲ್ಲಿ ಬರೆಯುತ್ತಿರುವ ಒಬ್ಬ ಅಪ್ಪಟ ಪ್ರತಿಭಾನ್ವಿತ, ಸೃಜನಶೀಲ ಕವಿ ಕಾಜೂರು ಸತೀಶ್ ಅಂತ ಹೇಳೋದಕ್ಕೆ ಅತೀವ ಸಂತಸ ಮತ್ತು ಹೆಮ್ಮೆಯೆನ್ನಿಸುತ್ತದೆ. ಮೇಲುನೋಟಕ್ಕೆ ಇಲ್ಲಿನ ಎಲ್ಲ ಕವಿತೆಗಳು ಹತಾಶೆ, ಆಕ್ರೋಶವನ್ನಷ್ಟೆ ಉಸಿರಾಡುತ್ತಿದೆ ಅಂತೆನಿಸಿದರೂ, ಸೂಕ್ಷ್ಮವಾಗಿ ಗಮನಿಸಿದರೆ ಬದುಕಿನ ಎಲ್ಲ ಸೂಕ್ಷ್ಮ ಒಳತೋಟಿಗಳ ಒಳಹೊಕ್ಕು ಅವುಗಳನ್ನು ಅಷ್ಟೇ ಧ್ಯಾನದಿಂದ ಆಲಿಸುವ ವ್ಯವಧಾನದ ಕಿವಿ ಸತೀಶ್ ಅವರಿಗೆ ದಕ್ಕಿದೆ. ಹಾಗೆಯೇ ಅವುಗಳಿಗೆ ದನಿಯಾಗುವ ಕಲೆ ಕೂಡ ಕಾಜೂರರ ಲೇಖನಿಗೆ ಸಿದ್ಧಿಸಿರುವ್ಯದರಿಂದಲೇ ಇಲ್ಲಿ ಗಾಯದ ಹೂವುಗಳು ಇತರೇ ಕವನ ಸಂಕಲನಗಳಿಗಂತ ತುಸು ಭಿನ್ನವಾಗಿ ನಿಂತಿದೆಯೆನ್ನಿಸುತ್ತದೆ.

ಕಾಲಬುಡದಲ್ಲಿ ಸತ್ತುಬಿದ್ದ ಒಂದು ಸಣ್ಣ ಇರುವೆಯನ್ನು ಸತ್ತಿದೆ ಅಂತ ದೊಡ್ಡದಾಗಿ ಬೊಬ್ಬಿರಿಯುತ್ತಾ ಕಾಲ ಕಳೆಯುವ ಅದೇ ಕ್ಷಣದಲ್ಲಿ, ಸಾಚಿiಲು ಹೊರಟಿರುವ ಮತ್ತೊಂದು ಸಣ್ಣ ಇರುವೆಯು ಬದುಕಿಗಾಗಿ ಅಂಗಲಾಚುವ ಪರಿ, ಎತ್ತರದ ದನಿಯ ಮುಂದೆ ಕ್ಷೀಣವಾಗಿ ಕಳೆದುಹೋಗುತ್ತದೆ?! ಈ ಮೂಲಕ ಬಲವಿಲ್ಲದವರ ಬದುಕು ಹೇಗೆ ಸದ್ದಡಗಿ ಹೋಗುತ್ತದೆ ಎನ್ನುವುದನ್ನು ಸಂಕಲನದ ಮೊದಲ ಕವಿತೆ ಪುಟ್ಟದಾದರೂ ಗಟ್ಟಿಯಾಗಿ ವಿಸ್ತಾರದ ನೆಲೆಯಲ್ಲಿ ತೆರೆದಿಡುತ್ತದೆ.

‘ಒಂಟಿ’ ಕವಿತೆಯಲ್ಲಿ ಕವಿ ಒಬ್ಬಂಟಿಗ ಅಥವಾ ಏಕಾಂಗಿಯೆಂಬುದನ್ನ ಪರೋಕ್ಷವಾಗಿ ಸೂಚಿಸುತ್ತದೆ. ಇದೊಂದು ಪ್ರತ್ಯಕ್ಷ ರೂಪದ ಹೇಳಿಕೆಯಷ್ಟೆ. ಒಂಟಿ ಎನ್ನುವುದು ಮೇಲ್ನೋಟದ ಒಂದು ಬಾಹ್ಯ ರೂಪವಲ್ಲವಷ್ಟೆ. ಪ್ರಶ್ನಿಸುವವರಿಗೆ ಅದು ಸುಲಭದಲ್ಲಿ ಗೋಚರಿಸುವಂತಹದ್ದಲ್ಲ ಅನ್ನುವುದನ್ನ

ಎದೆ ಸೀಳಿ
ತಲೆ ಸೀಳಿ
ಚರಿತ್ರೆ ಸೀಳಿ
ತೋರಿಸುವುದೆಲ್ಲಾ ಕಷ್ಟದ ಕೆಲಸ

ಅಂತ ಕವಿ, ಆ ಮೂರು ಸಾಲುಗಳಲ್ಲಿ ತಾನು ಒಂಟಿಯಲ್ಲ. ಇವನ್ನೆಲ್ಲ ಬಗೆದು ತೋರಿಸುವುದು ಕಷ್ಟದ ಕೆಲಸವಾದುದರಿಂದ ನನ್ನಂತವರನ್ನಿನ್ನೂ ಒಂಟಿಯಾಗಿಸಿದ್ದಾರೆ ಎನ್ನುವಲ್ಲಿ ಒಂದು ರೀತಿಯ ತಿಳಿ ಹಾಸ್ಯವಿದೆ. ತನ್ನೊಂದಿಗೆ ತನ್ನ ಸುತ್ತಮುತ್ತಲಿನ ಅದೆಷ್ಟೋ ಅದೃಶ್ಯವಾದ ಸಂಗತಿಗಳನ್ನು ಕಟ್ಟಿಕೊಂಡು ಗಾಢವಾಗಿ ಬದುಕುತ್ತಿರುವುದು ಸಮಾಜದ ಹೊರಗಣ್ಣಿಗೆ ಹೇಗೆ ಕಾಣಲು ಸಾಧ್ಯ ಅಂತ ಸಣ್ಣಗೆ ತಿವಿಯುವಾಗಿನ ಕವಿಯ ಚಿಂತನೆಗೆ ಮನಸು ಬೆರಗಾಗುವಷ್ಟು ಅಹುದಹುದು ಅನ್ನುತ್ತದೆ.

ಕಾಜೂರುರವರ ‘ಗಾಯದ ಹೂವುಗಳು’ ಶೀರ್ಷಿಕೆಯೇ ಮೊದಲು ಸ್ವಲ್ಪ ವಿಚಿತ್ರ ಅಂತನ್ನಿಸಿತ್ತು. ಯಾಕೆಂದರೆ ಗಾಯಗೊಂಡ ಹೂಗಳ ಕಲ್ಪನೆಯೇ ತೀರಾ ಭಯ ಹುಟ್ಟಿಸುತ್ತದೆ. ಹೂಗಳು ಗಾಯಗೊಳ್ಳುವುದನ್ನ ಯಾರೂ ಬಯಸುವುದಿಲ್ಲ. ಈ ಆತಂಕದಲ್ಲೇ ಗಾಯಗೊಂಡ ಹೂಗಳನ್ನು ಸ್ವಲ್ಪ ಗಲಿಬಿಲಿಗೊಂಡು ಓದುತ್ತಾ ಹೋದರೆ ಕವಿಯ ಆಶಯ ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ.

ಗಾಯಗಳು ಹಾಡಬೇಕು ಕೆಂಪು ಹೂಗಳಾಗಿ
ಜಗದ ಅವ್ವಂದಿರು ಸುಡುವ ರೊಟ್ಟಿಯ ಎಸಳುಗಳಾಗಿ ಹಾರಿ ಹೂವಾಗಬೇಕು
ಎಲ್ಲ ಗಾಯಗಳೂ ಹೂಗಳಾಗಬೇಕು
ನಿರ್ವಾತ ಕತ್ತಲುಗಳಲ್ಲಿ- ನನ್ನ ನಿಮ್ಮ ಹೃದಯಗಳಲ್ಲಿ

ಎನ್ನುವಾಗ ಕವಿಯ ಮನೋಧರ್ಮ, ಇಂಗಿತ ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಆ ಕ್ಷಣ ನಮ್ಮ ಮನಸು ಕೂಡ ಹೂವಂತೆ ತೊನೆದಾಡುತ್ತದೆ.

Gayada huvugalu

ಕವಿಗೆ ವ್ಯವಸ್ಥೆಯ ಅವ್ಯವಸ್ಥೆಯ ಬಗೆಗೆ ಸಿಟ್ಟಿದೆ. ಆ ಅಸಮಾಧಾನವನ್ನ ಅವರೊಳಗಿನ ಕವಿತೆಗಳ ಮೂಲಕ ಹೊರಗೆಡಹುವ ಪ್ರಯತ್ನವನ್ನ ಅವರದೇ ನೆಲೆಯಲ್ಲಿ ತುಂಬಾ ವಿಭಿನ್ನವಾಗಿ ಮಾಡುತ್ತಾರೆ. ‘ನೆಲವಿಲ್ಲದವನ ಉಯಿಲು’ ಕವಿತೆಯಲ್ಲಿ ಅವರು ಹೀಗೆ ಬರೆಯುತ್ತಾರೆ:

ಮರುಭೂಮಿ ಹಿಮಶಿಖರಗಳನ್ನು ಯಾಕೆ ಅನಾಥವಾಗಲು ಬಿಡುತ್ತೀರಿ?ನಿಮ್ಮ ಪರವಾಗಿ ಸ್ಶೆಟಿಗೆ ಅರ್ಜಿ ಸಲ್ಲಿಸಿದ್ದೇನೆ ಅನ್ನುವಲ್ಲಿನ ವ್ಯಂಗ್ಯದ ಮೊನಚು, ಸಾತ್ವಿಕ ಆಕ್ರೋಶ ತುಂಬಾ ಪರಿಣಾಮಕಾರಿಯಾಗಿದೆ ಮತ್ತು ಧ್ವನಿಪೂರ್ಣವಾಗಿದೆ. ಅಂತೆಯೇ ಯಾರದಿದು ಬೇಲಿ ಹಾಕದ ನೆಲ? ಎಂಬಂತಹ ಸಾಲುಗಳು ಸೀದಾ ನಮ್ಮನ್ನು ತಾಕಿ, ನಮ್ಮೊಳಗೊಂದು ಸಂಚಲನವನ್ನುಂಟುಮಾಡಿ, ಈ ಒಂದೇ ಒಂದು ಸಾಲು ನಮ್ಮನ್ನು ನಿಂತಲ್ಲೇ ಅಲುಗಾಡಿಸಿಬಿಡಬಲ್ಲದು.

ಉತ್ತಮ ಕವಿತೆಗಳ ಲಕ್ಷಣವೇ ಅಂತಹದ್ದು. ಓದಿ ಮುಗಿದಾದ ಮೇಲೂ ನಮ್ಮೊಳಗೆ ಒಂದು ಹುಯಿಲೆಬ್ಬಿಸಿ ನಮ್ಮನ್ನು ಕಾಡುವಂತೆ ಮಾಡುವಂತದ್ದು. ಹೇಳಿಯೂ ಹೇಳದಂತೆ ನಮಗೇ ಒಂದಿಷ್ಟು ಬಾಕಿ ಬಿಡುವಂತದ್ದು. ಇಂತಹ ಎಲ್ಲ ಲPಣಗಳು ಕಾಜೂರರ ಕವಿತೆಗಳಲ್ಲಿ ಢಾಳಾಗಿ ಕಾಣಸಿಗುತ್ತವೆ. ಈ ನಾಜೂಕಿನ ಕಲೆಗಾರಿಕೆಗಳನ್ನ ಅವರ ಕವಿತೆಗಳು ಸುಲಭದಲ್ಲಿ ಕರಗತ ಮಾಡಿಕೊಂಡಿವೆ ಎನ್ನುವುದಕ್ಕೆ ಈ ಕೆಳಗಿನ ಕವಿತೆಗಳೇ ಸಾಕ್ಷಿ.

‘ಶಬ್ದ ಸಮರ’ ಕವಿತೆಯಲ್ಲಿ ಉಳ್ಳವರ, ಸ್ಥಾಪಿತ ಹಿತಾಸಕ್ತಿಗಳ ದಬ್ಬಾಳಿಕೆಯನ್ನ ಎದುರಿಸಿದಷ್ಟೂ ಎದುರಿಗೆ ದಿಟ್ಟವಾಗಿ ನಿಲ್ಲಲಾರದೆ ತಾನು ಸೋತೇ ಹೋದೆ ನೆನೆದುಕೊಂಡ ಕವಿ, ಯಾರಿಗೂ ತಲುಪಲಾಗದ, ಮುಟ್ಟಲಾಗದ ಜಾಗದಲ್ಲಿ ಅಡಗಿ ಕುಳಿತು ತಾನು ಸೋತೆ ಅಂತ ಆ ಕ್ಷಣ ಒಪ್ಪಿಕೊಂಡರೂ ‘ಶಬ್ದ’ ಅಲ್ಲಿಗೆ ತಲುಪುವುದೇ ಇಲ್ಲವೆಚಿದ ಮೇಲೆ ಇದು ಸೋಲು ಹೇಗಾದೀತು? ಇದು ಪರೋಕ್ಷವಾಗಿ ಕವಿಯ ಗೆಲುವು ಅಲ್ಲವೇ? ಇಚಿತಹ ಹೊಸ ಹೊಳಹುಗಳನ್ನು , ಹೊಸ ತಿರುವುಗಳನ್ನು ಅಚಾನಕ್ಕಾಗಿ ನಮ್ಮ ಮುಂದೆ ತೆರೆದಿಡುವುದರಲ್ಲಿ ಕವಿ ಸಫಲರಾಗುತ್ತಾರೆ.

‘ಮೈಲಿಗೆ‘ ಪದ್ಯದಲ್ಲೂ ಅಷ್ಟೆ. ಮೈಲಿಗೆ ಮೈಲಿಗೆ ಅಂತ ದೂರೀಕರಿಸುತ್ತಾ ದೂರವಿಟ್ಟಷ್ಟೂ ಅದು ಮತ್ಯಾವುದೋ ರೀತಿಯಲ್ಲಿ ನಮ್ಮೊಳಗೆ ಹಾಸುಹೊಕ್ಕಾಗುವ ಪರಿಯನ್ನು ಕವಿತೆಯೊಳಗೆ ಇಳಿಸಿದ ಪರಿಗೆ ಸೋಜಿಗವಾಗುತ್ತದೆ. ಆ ಮೂಲಕ ಬದುಕಿನ ಅಪ್ಪಟ ಸತ್ಯದ ಅರಿವು ಅನಾವರಣಗೊಳ್ಳುತ್ತದೆ.

ಇಲ್ಲಿನ ಹೆಚ್ಚಿನ ಕವಿತೆಗಳು ಮುಖಾಮುಖಿಯಾಗುವ ಜೀವನದ ವೈರುದ್ಧ್ಯಗಳು ಹೇಗೆ ನಮ್ಮನ್ನು ಸತಾಯಿಸಿ ಕಂಗೆಡಿಸುತ್ತವೆ. ಆಗೆಲ್ಲಾ ಕವಿ ಹೇಗೆ ಕವಿತೆಗಳಿಗೆ ಮೊರೆ ಹೋಗುತ್ತಾರೆ ಎಂಬುವುದನ್ನು ಇಲ್ಲಿನ ಕವಿತೆಗಳು ಸಾಕ್ಷೀಕರಿಸುತ್ತವೆ. ಹಾಗೆಯೇ ಬದುಕಿನ ಈ ಎಲ್ಲ ಅಸಂಗತಗಳಿಗೆ ಹೇಗೆ ತಾನು ಮೂಕ ಸಾಕ್ಷಿಯಾಗುತ್ತಾ ಕವಿತೆಗಳ ಬಲದಿಂದ ಬದುಕುತ್ತಿದ್ದೇನೆ ಎನ್ನುವಲ್ಲಿ, ಹಾಗೂ ಎಲ್ಲ ಅಸಹಾಯಕತೆಗಳ ನಡುವೆ ಕವಿತೆ ನನ್ನನ್ನು ಬದುಕಿಸಬಲ್ಲದು ಎನ್ನುವಲ್ಲಿ ಕವಿತೆಯ ಬಗೆಗೆ ಕವಿಗೆ ಅಪಾರ ನಂಬುಗೆ ಮತ್ತು ಆತ್ಮವಿಶ್ವಾಸ ಇದೆ. ಅದಕ್ಕೇ ಇರಬೇಕು ಯಾರಿಗೂ ದಕ್ಕದ ಸುಟ್ಟ ಹಸಿಮೀನಿನಂತಹ ಕವಿತೆ ಅವರಿಗೆ ದಕ್ಕಿರುವುದು.

ಸಂಕಲನದಲ್ಲಿ ಬಹುವಾಗಿ ಕಾಡುವ ಕವಿತೆಗಳಲ್ಲಿ ‘ಎಡ ಮತು ಬಲ‘ವೂ ಒಂದು. ಈ ಕವಿತೆಯನ್ನು ಪದೇ ಪದೇ ಓದಿದಾಗಲೂ ಅನೇಕ ಅರ್ಥಸಾಧ್ಯತೆಗಳು ನನ್ನ ವ್ಯಾಪ್ತಿಯನ್ನು ಮೀರುತ್ತಾಹೋದುದನ್ನು ನೋಡಿ ಬೆರಗುಗೊಂಡಿದ್ದೇನೆ. ಅಂತಹ ಕವಿತೆಗಳು ಇಲ್ಲಿ ಸಾಕಷ್ಟಿವೆ. ಅದರ ಜೊತೆಗೆ ವಿಷಾದ, ನೋವು, ಹತಾಶೆಯ ಎಳೆ ಎಳೆಯನ್ನೇ ಜೋಡಿಸುತ್ತಾ ಕವಿ, ಕವಿತೆ ನೂಲುತ್ತಿದ್ದಾರೇನೋ ಅಂತ ಅನ್ನಿಸಿದರೂ, ‘ಕಡಲಾಚೆಯ ಹುಡುಗಿಗೆ‘ ಅನ್ನೋ ಕವಿತೆಯಂತಹ ಆರ್ಧ್ರ ಕವಿತೆಗಳನ್ನು ಬರೆಯುತ್ತಾ ‘ಅಂಗ ಮೀರಿದ ನಮ್ಮ ಪ್ರೀತಿ’ ಎನ್ನುವಂತಹ ಪ್ರೀತಿಯ ಔನ್ನತ್ಯವನ್ನು ಎತ್ತಿ ಹಿಡಿಯಬಲ್ಲಂತಹ ಸಾಲುಗಳನ್ನು ಬರೆಯಬಲ್ಲರು. ಅದರ ಜೊತೆಗೆ ‘ಏನಾದರಾಗಲಿ ಊದುತ್ತಲೇ ಇರುವೆ ನೀನು ಬೆಚ್ಚಗಿದ್ದರಷ್ಟೇ ಸಾಕು’ ಎಂಬ ಬೆಚ್ಚಗಿನ ಸಾಲುಗಳನ್ನು ಆಪ್ತವಾಗಿ ಕಟ್ಟಿಕೊಡಬಲ್ಲರು. ‘ನಾವಿಬ್ಬರೂ ತೀರಿಕೊಂಡ ಮೇಲೆ’ ಕವಿತೆಯಲ್ಲಿ ಸತ್ತರೂ ಒಂದಾಗಲು ಬಿಡದ ಅಂತರಗಳನ್ನು ಮೀರಿ ಹೇಗಾದರೊಮ್ಮೆ ಒಂದಾಗಿಯೇ ತೀರಬೇಕೆನ್ನುವ ಹಪಾಹಪಿಯು

ಭೂಕಂಪವಾಗಲಿ
ಸುನಾಮಿಯಾಗಲಿ
ನಮ್ಮಿಬ್ಬರ ಗೋಡೆಗಳ ಮೇಲೆ
ನಮ್ಮಿಬ್ಬರ ಮಿಲನಕ್ಕಾಗಿ

ಎನ್ನುವ ಸಾಲುಗಳನ್ನು ಅವರಿಂದ ಬರೆಯಿಸುತ್ತದೆ. ಅವರ ಆಂತರ್ಯದೊಳಗೆ ತುಡಿಯುವ ಪ್ರೀತಿಯ ಇರುವಿಕೆಯನ್ನು ಇದು ಸಾದರಪಡಿಸುತ್ತದೆ.

ಹೀಗೆ ಬದುಕಿನ ಎಲ್ಲ ಮಜಲುಗಳಲ್ಲಿ ನಿಂತುಕೊಂಡು ಕವಿತೆ ಕಣ್ಣಿನಿಂದ ನೋಡುವ, ಕವಿತೆಯ ಮೂಲಕ ಅದನ್ನು ಸಶಕ್ತವಾಗಿ ಕಟ್ಟಿಕೊಡುವ ಪ್ರಯತ್ನವನ್ನ ಇಲ್ಲಿನ ಕವಿತೆಗಳು ಮಾಡಿವೆ. ಆದರೆ ಇವೆಲ್ಲದರ ನಡುವೆಯೂ ಇಲ್ಲಿನ ಕವಿತೆಗಳು ಹೆಚ್ಚು ಸಂಕೀರ್ಣತೆಯಿಂದ ಮೊದಲ ಓದಿಗೆ ನಮ್ಮನ್ನು ತಲುಪುವುದಿಲ್ಲವೇನೋ ಎಂಬ ಭಾವನೆ ಕೂಡ ಬರುತ್ತದೆ. ಅದರ ಜೊತೆಗೆ ಆರಂಭವೂ ಅಂತ್ಯವೂ ಒಂದಕ್ಕೊಂದು ತಾಳೆಯಾಗದೆ ಎಲ್ಲೋ ಒಂದು ಕಡೆ ಮೂಲ ಧಾತು ದಿಕ್ಕು ತಪ್ಪಿದಂತೆ ಅನ್ನಿಸುವುದು ಕೂಡ ಸುಳ್ಳಲ್ಲ.

ಇದೆಲ್ಲವನ್ನೂ ಮೀರಿ ‘ಗಾಯದ ಹೂವುಗಳು’ ಒಂದು ಉತ್ತಮ ಕವಿತೆಗಳ ಸಂಕಲನ. ಪ್ರಸಕ್ತ ವರ್ಷದ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನ ಈ ಸಂಕಲನ ತನ್ನ ಮುಡಿಗೇರಿಸಿಕೊಂಡಿದೆ. ಗಾಯದ ಹೂವುಗಳನ್ನು ಕೈಗೆತ್ತಿಕೊಂಡು ಅದನ್ನು ಮೃದುವಾಗಿ ಸವರುತ್ತಾ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಖುಷಿಯ ಕ್ಷಣ ನಮ್ಮದಾಗಲಿ. ಅಂತೆಯೇ ಜಗದ ಎಲ್ಲ ನೋವುಗಳೂ, ಗಾಯಗಳೂ ಹೂವುಗಳಾಗಿ ಅರಳಿಕೊಳ್ಳಲೆಂಬ ಕವಿಯ ಆಶಯ ನಮ್ಮದೂ ಕೂಡ ಆಗಲಿ.,

 

-ಸ್ಮಿತಾ ಅಮೃತರಾಜ್,ಸಂಪಾಜೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: