ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 1

Share Button

 

Shruti

ಶ್ರುತಿ ಶರ್ಮಾ, ಕಾಸರಗೋಡು.

‘ಮಧುಮೇಹ/ಡಯಾಬಿಟೀಸ್’ ಕೆಲಕಾಲ ಹಿಂದೆವರೆಗೂ ಶ್ರೀಮಂತ ಖಾಯಿಲೆಯೆಂದು ತಿಳಿಯಲ್ಪಡುತಿದ್ದ ಇದನ್ನು ಈಗ ಆ ವಿಶೇಷಣದಿಂದ ನಾವೇ ಹೊರತುಪಡಿಸಿದ್ದೇವೆ ಎನಿಸುವುದು ನಿಜ. ವಿರಳವಾಗಿದ್ದ ಸಕ್ಕರೆ ಖಾಯಿಲೆ ಈಗ ವಯಸ್ಸಿನ ಅಂತರವಿಲ್ಲದೆ ಆಗಷ್ಟೇ ಕಣ್ಣು ಬಿಡುತ್ತಿರುವ ಶಿಶುಗಳಲ್ಲೂ ಕಾಣಸಿಗುತ್ತಿರುವುದು ವಿಶೇಷವಲ್ಲ. ಇದಕ್ಕೆ ಕಾರಣಗಳು ಹಲವಾರಿರಬಹುದು. ಹುಟ್ಟುವಾಗಲೇ ಇರುವ ಶಾರೀರಿಕ ತೊಂದರೆ, ವಂಶವಾಹಿ ಅಥವಾ ಮುಂದೆ ಅಸಮರ್ಪಕ ಆಹಾರ ಕ್ರಮ ಮತ್ತು ವ್ಯಾಯಾಮದ ಕೊರತೆ, ಹೀಗೆ ಹಲವಾರು. ಇನ್ನೂ ರುಚಿಯ ಅರಿವೇ ಇಲ್ಲದ, ಎರಡು ವರ್ಷವೂ ತುಂಬದ ಹಸುಳೆಗಳು ಪಥ್ಯದ ಆಹಾರದತ್ತ ವಾಲಬೇಕಾಗುವಾಗ ನೋಡಿದವರ ಮನಸ್ಸು ಮುದುಡುತ್ತದೆ.

ದೇಹಕ್ಕೆ ಒಂದಷ್ಟು ವ್ಯಾಯಾಮವೂ ಕೊಡದಿರುವುದರಿಂದ, ಶರೀರದ ಆಂತರ್ಯದಲ್ಲಿ ಕೆಲಸ ಮಾಡುವ ಅಂಗಗಳು ಜಡಗೊಂಡು ಶಾರೀರಿಕ ಅನಾರೋಗ್ಯ, ಅದರಿಂದಾಗಿ ಮುಂದೆ ಮಾನಸಿಕ ಖಿನ್ನತೆಯನ್ನೂ ಉಂಟು ಮಾಡುತ್ತದೆ. ನಮ್ಮ ಕಾಲಿನ ಕಿರುಬೆರಳನ್ನೇ ಒಮ್ಮೆ ಚಿವುಟಿ ನೋಡಿಕೊಳ್ಳೋಣ. ಆಗ ನೋವಿನ ಅನುಭವ ಆಗುವವರು ಅತಿ ವಿರಳ. ಹುಟ್ಟಿದಾರಭ್ಯ ಕಾಲಿನ ಕಿರುಬೆರಳಿಗೆ ಯಾವುದೇ ಕೆಲಸವಿಲ್ಲದೆ ಚಿವುಟಿದಾಗ ನೋವಿನ ಅನುಭವವನ್ನೂ ಕೂಡಾ ತಿಳಿಯದಷ್ಟು ಜಡಗೊಂಡಿರುತ್ತದೆ ಅದು. ಹೀಗೆಯೇ, ಶರೀರದ ಆಂತರಿಕ ಅವಯವಗಳೆಲ್ಲಾ ಸಮರ್ಪಕವಾಗಿ ಆಯಾ ಕಾರ್ಯ ನಿರ್ವಹಿಸಬೇಕಾದರೆ, ಆರೋಗ್ಯಕರ ಆಹಾರ ಕ್ರಮದ ಜೊತೆಗೆ, ಸೂಕ್ತ ವ್ಯಾಯಾಮದ ಮೂಲಕ ಅವುಗಳನ್ನೆಲ್ಲಾ ಜಾಗ್ರತ ಸ್ಥಿತಿಯಲ್ಲಿ ಯಾವತ್ತೂ ಇಟ್ಟಿರಬೇಕಾಗುತ್ತದೆ. ಇಲ್ಲವೆಂದಲ್ಲಿ  ಕೆಲ ಆಂತರಿಕ ಅವಯವಗಳು ಕಾಲೇನ ನಿಷ್ಕ್ರಿಯಗೊಳ್ಳಲೂ ಸಾಧ್ಯತೆಯಿದೆ.

ಮಧುಮೇಹದ ವಿಷಯಕ್ಕೇ ಬರೋಣ. ಶರೀರದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಹಾರ್ಮೋನ್ ಇನ್ಸುಲಿನ್, ಅದನ್ನು ಬಿಡುಗಡೆ ಮಾಡುವ ಕೆಲಸ ಪೇಂಕ್ರಿಯಾಸ್(ಮೇದೋಜೀರಕ) ಗ್ರಂಥಿಯದು. ನಾವು ಸಕ್ಕರೆಯ ಅಂಶವನ್ನು ಹೇರಳವಾಗಿ ದೇಹದೊಳಕ್ಕೆ ತುಂಬಿಸುವುದರಲ್ಲಿ ಯಾವುದೇ ಕೊರತೆಯನ್ನು ಮಾಡದೆ, ಜೊತೆಗೆ ವ್ಯಾಯಾಮ, ಆರೋಗ್ಯಕರ ಆಹಾರ ಕ್ರಮಗಳತ್ತ ತಿರುಗಿಯೂ ನೋಡದೆ ಕೊನೆಗೆ ಖಾಯಿಲೆ ನಿಯಂತ್ರಣಕ್ಕಾಗಿ ಇನ್ಸುಲಿನ್ ಚುಚ್ಚುಮದ್ದು, ಮಾತ್ರೆಗಳ ಮೊರೆಹೋಗಬೇಕಾದಾಗ ಪರಿತಪಿಸುವುದು ಮನುಷ್ಯ ಸಹಜ ಗುಣ. ದೇಹದ ಆಂತರ್ಯದಲ್ಲಿ ಇನ್ಸುಲಿನ್ ಉತ್ಪಾದನೆ ಸ್ಥಗಿತವಾದಾಗೆ ಹೊರಗಿನಿಂದ ಚುಚ್ಚುಮದ್ದಿನ ಮೂಲಕ ಇನ್ಸುಲಿನ್ ಅನ್ನು ಶರೀರಕ್ಕೆ ಸೇರಿಸಬೇಕಾಗುವುದು ಅನಿವಾರ್ಯ. ಜೊತೆಗೆ, ಈ ನೋವು ಅನುಭವಿಸುವವರ ಸಂಖ್ಯೆ ಭಾರತದಲ್ಲಿ ಅತೀ ಹೆಚ್ಚು ಎಂಬುದು ದುರದೃಷ್ಟ.

ಹಾಗಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರವಿಲ್ಲವೇ? ಇದ್ದೇ ಇದೆ. ಭಾರತದ ಆರೋಗ್ಯ ಸಮಸ್ಯೆಗಳಿಗೆಲ್ಲಾ ಇಲ್ಲೇ ಉತ್ತರವಿದೆ. ಅಷ್ಟಾಂಗ ಯೋಗ, ಆಯುರ್ವೇದ ಇವೆಲ್ಲ ಇಂತಹ ಸಮಸ್ಯೆಗಳಿಗೆ ಮೂಲದಲ್ಲೇ ಚಿವುಟಿ ಎಸೆಯುವ ಉತ್ತರಗಳನ್ನು ಸಾವಿರಾರು ವರ್ಷಗಳಿಂದಲೇ ಕೊಟ್ಟಿವೆ. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ, ಇಲ್ಲಿಯ ಸಂಪತ್ತನ್ನು(ಎಲ್ಲಾ ಅರ್ಥದಲ್ಲಿ) ಪರರು ಉಪಯೋಗಿಸಿ ಬದುಕಿದ ನಿದರ್ಶನಗಳೇ ಜಾಸ್ತಿ. ಈಗಲೂ ಅಷ್ಟೆ. ಆರೋಗ್ಯ ಭಾಗ್ಯಕ್ಕಾಗಿ ಭಾರತದ ಯೋಗ, ಆಯುರ್ವೇದ ಸಂಪತ್ತುಗಳನ್ನು ಪ್ರಪಂಚವಿಡೀ ಕೊಂಡಾಡಿ ನಮಗಿಂತಲೂ ಚೆನ್ನಾಗಿ ಬಳಕೆ ಮಾಡುತ್ತಿದ್ದರೆ ನಮ್ಮಲ್ಲಿ ಇನ್ನೂ ಹಲವೆಡೆ ಇದರ ಬಗೆಗಿನ ಜಾಗ್ರುತಿ ಇನ್ನೂ ಮೂಡಿಲ್ಲ.

2007 ರಲ್ಲಿ 40 ಮಿಲಿಯನ್, 2010 ರಲ್ಲಿ 50.8  ಮಿಲಿಯನ್, 2013 ರಲ್ಲಿ 65 ಮಿಲಿಯನ್.. ಹೀಗೆ ಮಧುಮೇಹಿಗಳ ಸಂಖ್ಯೆ ಭಾರತದಲ್ಲಿ ಅಡೆತಡೆಯಿಲ್ಲದೆ ಏರುತ್ತಲೇ ಬಂದಿದ್ದು, ಭಾರತೀಯ ಮಧುಮೇಹ ಸಂಸ್ಥೆಯ ಅಧ್ಯಯನಗಳ ಪ್ರಕಾರ ಈ ಗತಿಯಲ್ಲಿ ಮಧುಮೇಹಿಗಳ ಸಂಖ್ಯೆ ಏರುತ್ತಾ ಬಂದರೆ 2015 ರ ಹೊತ್ತಿಗೆ ಪ್ರಪಂಚದ ಪ್ರತಿ 5 ಮಂದಿ ಸಕ್ಕರೆ ಖಾಯಿಲೆ ಪೀಡಿತರಲ್ಲಿ ಒಬ್ಬರು ಭಾರತೀಯರಾಗಿರುತ್ತಾರೆ! ಸರಿ, ಇದನ್ನು ಹೀಗೆಯೇ ಬಿಟ್ಟರೆ ಆ ಭಾವೀ ಮಧುಮೇಹಿಗಳಲ್ಲಿ ನಾವು-ನೀವೂ ಇರಬಹುದೆನ್ನುವುದು ಪರಮ ಸತ್ಯ.

ಇದನ್ನು ತಡೆಯಲು ಸಾಧ್ಯವೇ?

ಮಧುಮೇಹವನ್ನು ಬಾರದಂತೆ ತಡೆಯಲು, ಹಾಗೂ ಈಗಾಗಲೇ ಖಾಯಿಲೆ ಇರುವವರಲ್ಲಿ ಔಷಧಿ, ಚುಚ್ಚುಮದ್ದುಗಳ ಬಳಕೆಯನ್ನು ದೂರ ಮಾಡುವಂತೆ ಮಾಡಲು ಖಂಡಿತಾ ಸಾಧ್ಯ- ಎಂದು ಸಾಧಿಸಿ ತೋರಿಸಿ ಸಾಧನೆಯ ಮೂಲಕ ಮಾತಾಡುತ್ತಾರೆ ಭಾರತದ ಒಂದು ಗುಂಪು ಉತ್ಸಾಹೀ ಯುವಕರು. ಇದಕ್ಕಾಗಿ, “ಮಧುಮೇಹ ಮುಕ್ತ ಭಾರತ” ಎಂಬ ಶೀರ್ಷಿಕೆಯಿಟ್ಟುಕೊಂಡು ಭಾರತದ ಮೂಲೆ ಮೂಲೆಗಳಲ್ಲಿ, ಹಳ್ಳಿಗಳಲ್ಲಿ ಮಧುಮೇಹದ ತಡೆ ಹಾಗೂ ಮಧುಮೇಹಿಗಳಲ್ಲಿ ಸಕ್ಕರೆ ಅಂಶದ ನಿಯಂತ್ರಣಕ್ಕೆ ಯೋಗಾಸನದ ತರಬೇತಿಯನ್ನು ನೀಡಿ ಕೇವಲ ಹತ್ತು ದಿನಗಳಲ್ಲಿ ಗಣನೀಯವಾಗಿ ಮಧುಮೇಹದ ಅಂಶವನ್ನು ಇಳಿಸಿ ನೂರಾರು ಮುಖಗಳಲ್ಲಿ ನಗು ಅರಳಿಸಿದ್ದಾರೆ. ಶರೀರಕ್ಕೆ ಹೊರಗಿನಿಂದ ಚುಚ್ಚುಮದ್ದು, ಔಷಧಿಗಳ ಮೂಲಕ ಇನ್ಸುಲಿನ್ ಪೂರೈಸುವ ಅಗತ್ಯ ಇಲ್ಲದಂತೆ ಮಾಡಲು ಖಂಡಿತಾ ಸಾಧ್ಯ.  ಜೊತೆಗೆ ಮಧುಮೇಹ ಇಲ್ಲದವರಲ್ಲಿ ರೋಗವು ಬಾರದಂತೆ ಹಿಮ್ಮೆಟ್ಟಿಸಲೂ ಸಾಧ್ಯ.  ಕ್ರಮಬದ್ಧ ಆಸನಾಭ್ಯಾಸಗಳಿಂದ ಮೇದೋಜೀರಕ(ಪೇಂಕ್ರಿಯಾಸ್) ಗ್ರಂಥಿಯನ್ನು ಚುರುಕುಗೊಳಿಸುವ ಕ್ರಿಯೆಯು ಇದಕ್ಕೆ ಸಹಕಾರಿ.

ಪೇಂಕ್ರಿಯಸ್/ಮೆದೋಜೀರಕ ಗ್ರಂಥಿ ದೇಹದಲ್ಲಿ ಎಲ್ಲಿರುತ್ತದೆ?

Pencreas

ಮೇದೋಜೀರಕವು 6 ಅಂಗುಲ ಉದ್ದಕ್ಕೆ ಕಿಬ್ಬೊಟ್ಟೆಯ ಹಿಂದೆ , ಬಲಭಾಗದಲ್ಲಿ ಮತ್ತು ಪ್ಯಾಂಕ್ರಿಯಾಟಿಕ್ ನಾಳ ಎಂಬ ಸಣ್ಣ ಟ್ಯೂಬ್ ಮೂಲಕ ಡಿಯೋಡಿನಂ ( ಸಣ್ಣ ಕರುಳಿನ ಮೊದಲ ಭಾಗಕ್ಕೆ) ಸಂಪರ್ಕ ಹೊಂದಿರುತ್ತದೆ (ಚಿತ್ರದಲ್ಲಿರುವಂತೆ). ಈ ಭಾಗದಲ್ಲಿ ತಿರುಚುವ ಆಸನಗಳ ಅಭ್ಯಾಸವು ಮಧುಮೇಹ ನಿಯಂತ್ರಣಕ್ಕೆ ಅಗತ್ಯವಾಗಿರುತ್ತದೆ.

ಯೋಗಾಸನ ಅಭ್ಯಾಸಕ್ಕೆ ಮುನ್ನ:

  1. ಆಸನಗಳ ಕಲಿಕೆ ಮತ್ತು ಅಭ್ಯಾಸ ಸೂಕ್ತ ಗುರುಗಳ ಮಾರ್ಗದರ್ಶನದಲ್ಲೇ ಆಗಬೇಕಾಗಿರುತ್ತದೆ. ಆದರೂ ಅದರ ಬಗ್ಗೆ ತಿಳಿದುಕೊಂಡು ಪರಿಣಿತರ ಸಹಾಯದೊಂದಿಗೆ ಮಾಡಬಹುದು.
  2. ಮಾಸಿಕ ಧರ್ಮದ ಸಂದರ್ಭದಲ್ಲಿ ಹಾಗೂ ಗರ್ಭಿಣಿ ಸ್ತ್ರೀಯರು ಯೋಗಾಸನಗಳನ್ನು ಮಾಡಬಾರದು.
  3. ಆಹಾರ ಸೇವನೆಯ ೪ ಘಂಟೆ ಬಳಿಕ ಆಸನಾಭ್ಯಾಸವನ್ನು ಮಾಡತಕ್ಕದ್ದು. ಬೆಳಗಿನ ಜಾವ ಅತ್ಯಂತ ಸೂಕ್ತ. ಅಭ್ಯಾಸದ ಅರ್ಧ ಘಂಟೆಯ ಬಳಿಕ ಆಹಾರ ಸೇವನೆ ಮಾಡಬಹುದು.
  4. ಅಭ್ಯಾಸಕ್ಕೆ ಮುಂಚೆ ಮಲ ಮೂತ್ರ ಕೋಶಗಳನ್ನು ಖಾಲಿ ಮಾಡಿಕೊಳ್ಳತಕ್ಕದ್ದು.
  5. ಕಡೇಪಕ್ಷ ಒಂದು ಲೋಟ ನೀರು ಕುಡಿದು ಅಭ್ಯಾಸ ಮಾಡುವುದರಿಂದ ಶರೀರದಲ್ಲಿ ಅಗತ್ಯದ ನೀರಿನಂಶ ಸಮತೋಲನವಾಗುತ್ತದೆ.
  6. ಜಮಖಾನೆ ಅಥವಾ ಬೆಡ್ ಶೀಟ್ ಹಾಸಿಕೊಂಡು ಅದರ ಮೇಲೆ ಅಭ್ಯಾಸ ಮಾಡುವುದು. ಪ್ಲಾಸ್ಟಿಕ್ ಚಾಪೆ ಅಥವಾ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭಿಸುವ ಮ್ಯಾಟ್ ಗಳು ಸರ್ವಥಾ ಬೇಡ.
  7. ರಕ್ತದೊತ್ತಡ/ಹೃದಯದ ಖಾಯಿಲೆ/ಹರ್ನಿಯಾ/ಅಸ್ತಮಾ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಯಾ ಸಂಬಂಧಿತ ಚಿಕಿತ್ಸೆಗೆ ಒಳಪಟ್ಟಿರುವಂಥವರು ನಿಧಾನ ಗತಿಯಲ್ಲಿ ಆಸನಗಳನ್ನು ಅಭ್ಯಸಿಸುವುದು. ಸಂಬಂಧಪಟ್ಟ ದೇಹ ಭಾಗದ ಮೇಲೆ ಜಾಸ್ತಿ ಒತ್ತಡ ಬೇಡ. ಯಾವ ಕಾರಣಕ್ಕೂ ಅವಸರಪಟ್ಟು ಮಾಡಬಾರದು.
  8. ಪ್ರತಿ ಆಸನದ ನಂತರವೂ ಕಣ್ಣು ಮುಚ್ಚಿ ದೇಹದ ಭಾಗಗಳಲ್ಲಿನ ಎಳೆತದ ಅನುಭವ, ಹ್ರುದಯ ಬಡಿತ, ಉಸಿರಾಟ ಇವನ್ನು ಗಮನಿಸುತ್ತಾ ಕೆಲವು ಸೆಕೆಂಡ್ಗಳ ಕಾಲ ನೇರವಾಗಿ ನಿಂತುಕೊಳ್ಳಬೇಕು/ಕುಳಿತಿರಬೇಕು. ಇದರಿಂದಾಗಿ ಶರೀರದಲ್ಲಾಗುವ ಬದಲಾವಣೆಗಳು ಅನುಭವಕ್ಕೆ ಬರುತ್ತದೆ.
  9. “ಸ್ಥಿರಂ ಸುಖಂ ಆಸನಂ” – ಇದು ಆಸನ(ಯೋಗಾಸನದ ಭಂಗಿ)ದ ನಿರ್ವಚನವಾಗಿದ್ದು, ಆರಾಮದಾಯಕವಾಗಿ ಎಷ್ಟು ಹೊತ್ತು ಬೇಕಾದರೂ ಒಂದೇ ಭಂಗಿಯಲ್ಲಿ ನೆಲೆಗೊಳ್ಳಲು ಸಾಧ್ಯವಾಗುವುದನ್ನು ಆಸನ ಎನ್ನುತ್ತಾರೆ. ಮುಖದ ಸ್ನಾಯುಗಳು, ಹುಬ್ಬು ಗಳು, ಶರೀರದ ಅಂಗಗಳನ್ನು ಸಡಿಲಗೊಳಿಸಿ ಮಂದಹಾಸದೊಂದಿಗೆ ಆಸನಾಭ್ಯಾಸವನ್ನು ಮಾಡುವುದು. ಆಸನದ ಸ್ಥಿತಿ ತಲುಪಿದ ಮೇಲೆ ಸಹಜ ಉಸಿರಾಟ ಮಾಡುತ್ತಾ 5-6 ಸಹಜ ಉಸಿರಾಟದಷ್ಟು ಸಮಯ ಸ್ಥಿತಿಯಲ್ಲಿರುವುದು. ಉಳಿದಂತೆ ಉಸಿರಾಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಆಸನದಲ್ಲಿ ಹೇಳಿದಂತೆ ಪಾಲಿಸುವುದು. ಆಸನಗಳ ಅಭ್ಯಾಸದಿಂದ ಸುಸ್ತಿನ ಅನುಭವ ಆಗುವುದಿಲ್ಲ. ಆಸನದ ಸ್ಥಿತಿಯಲ್ಲಿ ಬರುವ ಎಳೆತ, ಬಿಗಿತಗಳನ್ನು ಗಮನಿಸುತ್ತಾ ಅದರೆಡೆಗೆ ಪೂರ್ಣ ಗಮನವನ್ನು ಕೇಂದ್ರೀಕರಿಸುವುದು.
  10. ಆಸನಗಳ ಅಭ್ಯಾಸಕ್ಕೆ ಮೊದಲು ಸಣ್ಣ ಮಟ್ಟಿನ ಶಿಥಿಲೀಕರಣ ವ್ಯಾಯಾಮ(Loosening exercise) ಗಳನ್ನು ಮಾಡುವುದರಿಂದಾಗಿ ಆಸನಾಭ್ಯಾಸಕ್ಕೆ ಶರೀರದ ಸಂಧಿಗಳು ಸಡಿಲಗೊಂಡು ಸಹಕರಿಸುತ್ತವೆ.
  11. ಕಡೆಯಲ್ಲಿ ಶವಾಸನದೊಂದಿಗೆ ಅಭ್ಯಾಸವನ್ನು ಪೂರ್ಣಗೊಳಿಸಬೇಕು.

 

ಮುಂದುವರಿಯುವುದು...

 – ಶ್ರುತಿ ಶರ್ಮಾ, ಕಾಸರಗೋಡು.

1 Response

  1. savithri s bhat says:

    ಉಪಯುಕ್ತ ಮಾಹಿತಿ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: