ಹೊಸ ನೀರು ಹಳೆ ಬೇರಿನ ಕಥೆ….
ಹೊಸ ನೀರು ಹರಿದಾಗ ಸಹಜ
ಹಳೆಬೇರ ಗುಳೆ ಹೋಗೊ ಭಯ
ಕಟ್ಟಿ ಹಿಡಿದ ಮಣ್ಣಿನ ಹಿಂಟೆ
ಕರಗಿ ನೀರಾಗುವ ದಾಯ
ಆಳಕಿಳಿದಿಳಿದೂ ಕವಲು
ಭದ್ರವಾಗಿದ್ದರೂ ಸುಭದ್ರ
ಅಳುಕಿಗಳುಕು ಸಹಜ
ಹಳತೆ ಒಳಿತಾಗಿದ್ದರು ನಿಜ… ||
ಬಿರುಸು ಹೊಸತಿನ ಧರ್ಮ
ಬೀಸಿದಂತೆ ಬಿರುಗಾಳಿ
ಅಲ್ಲೋಲಕಲ್ಲೋಲವಾದರೂ
ಅಕಾಲಕಷ್ಟೆ ಅದರ ಪಾಳಿ
ತಗ್ಗುವ ತನಕ ನೀರಾವೇಶ
ತಲೆ ತಗ್ಗಿಸುವ ಹುಲ್ಲೆ ಬೆಳಕ
ಹರಿದಾಗ ಸಮ ಶಾಂತ ರಸ
ಬೇರು ಮಣ್ಣ ಹಿಡಿವ ಚಳಕ… ||
ಸೃಷ್ಟಿ ವೃಕ್ಷ ನಿರಂತರದೆಲೆ
ಚಿಗುರಾಗಲೆ ಬೇಕು ನೀರು
ಮೊಗೆಮೊಗೆದು ಕೊಡಲೆ
ಹಳೆ ಬೇರಲ್ಲದೆ ಇನ್ಯಾರು ?
ಕಾತುರ ತಳ್ಳಲೆ ಸಂಭ್ರಮ
ಎಳೆಯಾತುರವೂ ವಿಹಂಗಮ
ಕಟ್ಟಿಕೊಡದಿರದೆ ಹೊಸ ವೇಗ
ಹಳೆ ಬೇರಿಗೆ ಹೊಸ ಚಿಗುರು? ||
ಸಲ್ಲದ ಶಂಕೆಗೆ ತರ್ಪಣವಿತ್ತು
ಕಟ್ಟೊ ಹೂವಿನ್ಹಾರದ ಸೊಗಡು
ಬೇರು ನಾರಾಗಿ ಅಂತರ್ಯ ಗಟ್ಟಿ
ದಿಂಡಾಗಿ ಸೇರುವ ಎಲೆ ಹೂ ಜಟ್ಟಿ
ಹೊರ ಜಗಕೆ ಕಾಣುವುದು ಬಣ್ಣವೆ
ಮುಡಿ ಕೊರಳು ಮಡಿಲಿಗೆ ತಾವು
ನೆಲೆ ನಿಲಿಸಿದ ತೃಪ್ತಿ ಬೇರಾಗುತ
ನೆಲೆಯ ಸಂತೃಪ್ತಿ ಚಿಗುರ ವೃತ್ತಾಂತ! ||
– ಮೈನಂನಾಗೇಶ