ಗಾಂಧರ್ವ ವೇದ ಸಂಗೀತ

Share Button

 

Savithri Doddamani

ಸಾವಿತ್ರಿ ದೊಡ್ಡಮಾಣಿ, ಕುಂಬಳೆ

 

ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ.

ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ ನಾದಯೋಗಿ ತ್ಯಾಗರಾಜರು. ಅವರ ಕೃತಿಗಳು ಹಾಡುವಾಗ ಹೇಗೆ ಮನಸ್ಸಿಗೆ ಆನಂದವನ್ನುಂಟು ಮಾಡುತ್ತವೋ ಹಾಗೆ ಕೇಳುವವನ ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತದೆ. ಈ ಸಂಗೀತವನ್ನು ಗಾಂಧರ್ವ ವೇದವೆನ್ನುತ್ತಾರೆ.

“ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿಗಾನ ರಸಂ ಪಣಿಃ”  ಶಿಶುವನ್ನು ತೊಟ್ಟಿಲಲ್ಲಿ ಹಾಡು ಹೇಳಿ ಮಲಗಿಸುತ್ತೇವೆ.ಎತ್ತು ದನಗಳನ್ನು ಹಾಡು ಹೇಳಿ ಮೇಯಿಸಿ, ಉಳುವ ಪದ್ಧತಿ ಇದೆ.ಪುಂಗಿಯ ನಾದದಿಂದ ಸರ್ಪವೂ ತಲೆದೂಗುತ್ತದೆ.ಯಾರಿಗೆ ಸಂಗೀತ ಶಾಸ್ತ್ರದಲ್ಲಿ ಅಸಾಧಾರಣ ಪರಿಶ್ರಮವಿದೆಯೋ [ಶ್ರುತಿ,ಜ್ಞಾನ,ಲಯ]ಅಂತವರು ಮೋಕ್ಷವನ್ನು ಪಡೆಯುವುದರಲ್ಲಿ ಸಂಶಯವಿಲ್ಲ.ಸಂಗೀತವನ್ನು ಶಾಸ್ತ್ರೋಕ್ತವಾಗಿ ಗುರುಮುಖೇನ ಕಲಿತು,ಸಾಧನೆಗೆ ತೊಡಗುವುದು ಭಾರತೀಯ ಸಂಸ್ಕೃತಿಯಾಗಿದೆ.

music-gurus

ಸಾಮವೇದದಿಂದ ಸಂಗೀತವು ಹುಟ್ಟಿತೆಂದು ಶಾಸ್ತ್ರವು ಹೇಳುತ್ತದೆ.ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.ಪ್ರಾಚೀನ ಕಾಲದಿಂದ ಮಾತಂಗ ಮುನಿಯವರೇಗೆ, ಮಧ್ಯಕಾಲ ಎಂದರೆ ಮಾತಂಗ ಮುನಿಯಿದ್ದ ಕಾಲದಿಂದ ವೆಂಕಟಮುಖಿಯ ಕಾಲದವರೆಗೆ ಪ್ರಸ್ತುತ ಕಾಲವನ್ನು ತ್ಯಾಗರಾಜರಿಗೆ ಮುಂಚೆ ಮತ್ತು ನಂತರದ ಕಾಲವೆಂದು ಹೇಳಬಹುದು.ಋಗ್ವೇದದ ಕಾಲದಲ್ಲಿ ವೇದವನ್ನು ಒಂದು ಸ್ವರದಲ್ಲಿ ಹಾಡುತ್ತಿದ್ದರು.ಈ ಗಾಯನಕ್ಕೆ ಏಕಸ್ವರ ಗಾಯನವೆಂದು ಹೆಸರು.ಇದಕ್ಕೆ ಅರ್ಚಕ ಗಾಯನವೆಂದು ಹೇಳಬಹುದು.ತರುವಾಯ ಎರಡು ಸ್ವರಗಳಲ್ಲಿ ಗಾಯನ ಮಾಡುವುದನ್ನು  ’ಗಾತಿಕ’ಗಾಯನವೆಂದೂ ಮೂರುಸ್ವರಗಳಲ್ಲಿ ಗಾಯನ ಮಾಡುವುದನ್ನು ಸಾಮಿಕ ಗಾಯನವೆಂದೂ ಹೆಸರು.ಕ್ರಮೇಣ ಈ ಸ್ವರಗಳು ಅಭಿವೃದ್ಧಿಹೊಂದಿ ಸಪ್ತಸ್ವರಗಳಾದುವು.ಹೀಗೆ ಧಾರ್ಮಿಕ ಸಂಸ್ಕೃತಿಗನುಗುಣವಾಗಿ ನಮ್ಮ ಸಂಗೀತ ಪರಂಪರೆ ದೃಢ ಹಾಗೂ ಶಾಸ್ತ್ರಬದ್ಧವಾಗಿ ಬೆಳೆದು ಬಂದಿದೆ.

ಹತ್ತು ಶ್ರೇಷ್ಠ ಕಲೆಗಳಲ್ಲಿ ಸಂಗೀತವೇ ಮೊದಲನೆಯದು.ಗಾನಕಲೆಯಲ್ಲಿ ಮಾರ್ಗ, ದೇಶಿ ಎಂದು ಎರಡು ವಿಧ.ಮಾರ್ಗಿ ಸಂಗೀತ, ಶಾಸ್ತ್ರಬದ್ಧವಾದ ಶಾಸ್ತ್ರೀಯ ಸಂಗೀತವಾದರೆ; ದೇಶಿ ಸಂಗೀತವು ಜನರ ಅಭಿರುಚಿಗನುಗುಣವಾಗಿ ಮಾರ್ಪಾಡಾಗುವಂತದ್ದು. ಜನರಂಜನೆಯೇ ಅದರ ಮುಖ್ಯ ಲಕ್ಷಣವಾಗಿದೆ.

ತಂಜಾವೂರು ಮಹಾರಾಜರು ಆಸ್ಥಾನ ಸಂಗೀತ ವಿದ್ವಾಂಸರಿಗೆ ಆಶ್ರಯವಿತ್ತಿತ್ತು. ಹಾಗೆಯೇ ಮೈಸೂರು ಸಂಸ್ಥಾನ ಸಂಗೀತ ಕಲೆಗೆ ಒಂದು ವೇದಿಕೆಯಾಗಿತ್ತು.ಸಂಗೀತ ತ್ರಿಮೂರ್ತಿಗಳಲ್ಲಿ ಮುತ್ತು ಸ್ವಾಮಿ ದೀಕ್ಷಿತರು ಮೂರನೆಯವರು.ಉತ್ತರಾದಿ,ದಕ್ಷಿಣಾದಿ ಸಂಗೀತ, ವೇದಾಂತಗಳಲ್ಲಿಯೂ ಪರಿಣತರು.ಪುರಂದರ ದಾಸರು ತ್ರಿಮೂರ್ತಿಗಳಲ್ಲಿ ಪ್ರಥಮರಾಗಿದ್ದರು.ಕರ್ನಾಟಕ ಸಂಗೀತ ಪದ್ಧತಿಗೆ ಕ್ರಮಬದ್ಧವಾದ ರೂಪು ಕೊಟ್ಟವರು.ಮಾಯಾಮಾಳವಗೌಳ ರಾಗದಲ್ಲಿ  ಬಾಲಪಾಠವನ್ನು ಚೌಕಟ್ಟಿನೊಳಗೆ ಬರೆದಿಟ್ಟಿದ್ದಾರೆ. ಹಾಗೆಯೇ ಶ್ಯಾಮ ಶಾಸ್ತ್ರಿಗಳಿಂದ ರಚಿತವಾದ ಕೃತಿಗಳನ್ನು ವಾದ್ಯಗಳಲ್ಲಿಯೂ ನುಡಿಸಿ ಪ್ರಸಿದ್ಧಿಹೊಂದಿದ ದೇಶ ನಮ್ಮದು.ಸಂಗೀತ ರಾಗಗಳನ್ನು ಅಳವಡಿಸಿಯೇ ಸುಗಮ ಸಂಗೀತ,ಭಕ್ತಿಗೀತೆಗಳನ್ನು ಹಾಡುವ ಕ್ರಮವಿದೆ. ಈಗ ಲಯ ಭಾವಗಳಿಲ್ಲದೆ ಸರಾಗವಾಗಿ ಹಾಡುವ ಸುಗಮಸಂಗೀತವೇ ಜನಪ್ರಿಯತೆ ಹೊಂದಿದೆ.ಈಗ ನಗರಗಳಲ್ಲಿ ಹಬ್ಬದ ದಿನಗಳಿರಲಿ,ಮದುವೆ ಸಮಾರಂಭಗಳಿರಲಿ ಅಥವಾ ಇತರ ಯಾವುದೇ ಕಾರ್ಯಕ್ರಮಗಳಿರಲಿ ಸಿನೆಮಾಹಾಡು,ಪಾಫ್ ಹಾಡುಗಳ ಕಾರ್ಯಕ್ರಮ ಸಂಘಟಿಸುವುದು ಕಂಡುಬರುತ್ತದೆ.ಇದು ಜನರ ಭಕ್ತಿಮಾರ್ಗದಿಂದ ನಿಧಾನವಾಗಿ ದೂರಸರಿಯುತ್ತಿರುವುದರ ಸಂಕೇತ.ಈ ಕುರಿತು ಗಂಭೀರ ಚಿಂತನೆ ಅಗತ್ಯ.

 

–  ಸಾವಿತ್ರಿ  ದೊಡ್ಡಮಾಣಿ, ಕುಂಬಳೆ

4 Responses

  1. Niharika says:

    ಬರಹ ತುಂಭಾ ಇಷ್ಟವಾಯಿತು ಮೇಡಮ್.

  2. VISHWANATH P says:

    ಬರವಣಿಗೆ ಸರಳ, ಸುಲಲಿತವಾಗಿದ್ದರೂ ಚಿಂತನೆಗೆ ಹಚ್ಚುವಂಥಹದ್ದು…ಲೇಖನದ ಕೊನೆಯ ಸಾಲಿನ ಬಗ್ಗೆ ಪ್ರಸ್ತುತ ಸಂದರ್ಭ ಎಲ್ಲರೂ ಯೋಚಿಸಬೇಕಾದ ಅನಿವಾರ್ಯವಿದೆ…..

  3. Shruthi Sharma says:

    ಮಾಹಿತಿಪೂರ್ಣ, ಉತ್ತಮ ಬರಹ..

  4. ಆಳವಾದ ಅರ್ಥಪೂರ್ಣ ಬರಹ. ಎಲ್ಲರಿಗೆ ಎಟುಕುವ ವಿಷಯ ಅಲ್ಲ. ಮಾಹಿತಿ ಉತ್ತಮ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: