ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ : ಭಾಗ- 2
ಕರಿಕಲ್ಲಿನತ್ತ ಲಕ್ಷ್ಯ
ನಮ್ಮ ತಂಡದ 37 ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು.
ದಟ್ಟ ಕಾಡು. ಕಾಡಿನ ದಾರಿಯಲ್ಲಿ ಸುಮಾರು 50 ಡಿಗ್ರಿ ಇಳಿಜಾರು. ಸಾಮರ್ಥ್ಯ ಇರುವವರು ಮುಂದೆ ಮುಂದೆ ಹೋದರು. ನಡಿಗೆ ಸಾಧಾರಣಮಟ್ಟಕ್ಕೆ ಇರುವವರು ಸ್ವಾಭಾವಿಕವಾಗಿ ಹಿಂದೆ ಉಳಿದರು. ಎಲ್ಲರ ಹಿಂದೆ ನಾನು ಹೋಗಬೇಕಾಗಿ ಬಂತು. ತಂಡದ ಸದಸ್ಯರು ಅದರಲ್ಲೂ ಹೆಂಗಸರು ಹಿಂದುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನಿತಿದ್ದರು ನನಗೆ. ನಾನೂ ಖುಷಿಯಿಂದಲೇ ಈ ಹೊಣೆಯನ್ನು ಹೊತ್ತುಕೊಂಡೆ. ಇಳಿಯಲು ಆಗದವರಿಗೆ ಒಬ್ಬರಿಗೊಬ್ಬರು ಕೈ ಕೊಟ್ಟು ಸಹಾಯ ಮಾಡುತ್ತ ಸಾಗಿದೆವು. ಶೀಗೇಕೇರಿಯಿಂದ ಕರಿಕಲ್ಲಿಗೆ ಸುಮಾರು 22 ಕಿಮೀ ದೂರ ಕಾಡು, ನಾಡು ಕ್ರಮಿಸಬೇಕಿತ್ತು. ದಾರಿಯುದ್ದಕ್ಕೂ ಕುರುಚಲು ಕಾಡಿನಿಂದ ಹಿಡಿದು ಹಸುರಿನಿಂದ ಕೂಡಿದ ಬೆಟ್ಟಗಳು, ನಡು ನಡುವೆ ಪುಟ್ಟ ಗ್ರಾಮಗಳು, ಗದ್ದೆಗಳು, ತೋಟಗಳು. ಅಲ್ಲಲ್ಲಿ ಸಿಗುವ ಮನೆಯವರ ಉಪಚಾರ ಎಲ್ಲವನ್ನೂ ನೋಡುತ್ತ ಅನುಭವಿಸುತ್ತ ಖುಷಿಯಿಂದಲೇ ಹಾದಿ ಸವೆಸಿದೆವು.
ಮಧ್ಯಾಹ್ನ 12.30 ಕ್ಕೆ ನೀರು ಹರಿಯುವ ತೊರೆ ಬಳಿ ತಲಪಿದೆವು. ನಾವು ಒಂದಷ್ಟು ಜನ ತಲಪಿದಾಗ ತಂಡದ ಬಹುತೇಕ ಸದಸ್ಯರು ಊಟ ಮುಗಿಸಿದ್ದರು. ನಾವು ಬುತ್ತಿ ಬಿಚ್ಚಿದೆವು. ಚಿತ್ರಾನ್ನ ಹಳಸಿತ್ತು. ಅದು ನೀರಲ್ಲಿರುವ ಜಲಚರಗಳ ಪಾಲಿಗಾಯಿತು. ಚಪಾತಿ ದೋಸೆ ಇತ್ತು ಅವನ್ನೆ ತಿಂದು ನೀರು ಕುಡಿದು ಸುಧಾರಿಸಿದೆವು.
1.30 ಗಂಟೆಗೆ ಅಲ್ಲಿಂದ ಹೊರಟೆವು. ಸುಮಾರು ಆರೇಳು ಕಿಮೀ ದೂರ ನಡೆದು ಮಹಾಬಲೇಶ್ವರ ಹೆಗಡೆ ಮನೆ ತಲಪಿದೆವು. ಅಲ್ಲಿ ಚಹಾ, ಮಜ್ಜಿಗೆ ಕುಡಿಯುವವರು ಕುಡಿದರು. ಅಲ್ಲಿ ತುಸು ವಿರಾಮ. ಅಲ್ಲಿಂದ ಸುಮಾರು 6 ಕಿಮೀ ದೂರ ಟಾಟಾ ಮೊಬೈಲು ಜೀಪಿನಲ್ಲಿ ಕ್ರಮಿಸಿದೆವು. ಅಷ್ಟು ದೂರವನ್ನು ರಸ್ತೆಯಲ್ಲೆ ಹೋಗಬೇಕಿತ್ತು. ಬೇಡ್ತಿ ನದಿ ದಾಟಲು ರಾತ್ರೆಯಾಗುತ್ತದೆ ಎಂದು ಜೀಪ್ ವ್ಯವಸ್ಥೆ ಮಾಡಿದ್ದರು. 19-20 ಜನರ ಹಾಗೆ 2 ಸಲ ಜೀಪು ನಮ್ಮನ್ನು ಹೊತ್ತು ಸಾಗಿಸಿತು. ಅಲ್ಲಿಂದ ರಸ್ತೆಯಲ್ಲೆ 3. ಕಿಮೀ ದೂರ ನಡೆದು ಗಂಗಾವತಿ (ಬೇಡ್ತಿ) ನದಿ ತಲಪಿದೆವು.
ಕರಿಕಲ್ಲು ನಾರಾಯಣ ಹೆಗಡೆಯವರಲ್ಲಿ ವಾಸ್ತವ್ಯ. ಅವರ ಮನೆಗೆ ಹೋಗಬೇಕಾದರೆ ಗಂಗಾವಳಿ (ಬೇಡ್ತಿ) ನದಿ ದಾಟಬೇಕಿತ್ತು. ನೀರಿನ ಹರಿವು ಸೊಂಟದವರೆಗೆ ಇತ್ತು. ಶೂಗಳ ಹಾರವನ್ನು ಕೊರಳಿಗೆ ಹಾಕಿ (ಹೂಹಾರ ಯಾರೂ ಹಾಕದಿದ್ದರೂ ಶೂ ಹಾರ ಹಾಕಿಕೊಂಡು ತೃಪ್ತಿ ಹೊಂದಿದೆವು!), ಜೀವರಕ್ಷಕ ಉಡುಪು ಧರಿಸಿ ಹಗ್ಗ ಹಿಡಿದು ನದಿ ದಾಟಿದೆವು. ರಾಣಿ, ಸತೀಶ್, ನಾರಾಯಣ ಹೆಗಡೆ ನದಿ ದಾಟಿಸಲು ಸಹಾಯಹಸ್ತ ಚಾಚಿದ್ದರು. ನದಿ ದಾಟುವ ಕ್ಷಣವದು ಬಲು ಸೋಜಿಗವೆನಿಸಿತ್ತು. ಸಂಜೆ ೬.೩೦ ಗಂಟೆಗೆ ನಾವು ಗಮ್ಯಸ್ಥಾನ ತಲಪಿದ್ದೆವು.
ನಾರಾಯಣ ಹೆಗಡೆಯವರ ಮನೆ ತಲಪಿ ಅಲ್ಲಿ ಚಹಾ, ಉಪ್ಪಿಟ್ಟು ಸೇವನೆ. ತೋಟದಲ್ಲಿ ಹಂಡೆಯಲ್ಲಿ ಬಿಸಿನೀರು ಕಾಯಿಸಿದ್ದರು. ಅಲ್ಲಿಂದ ನೀರು ಹೊತ್ತು ತಂದು ಬಿಸಿನೀರು ಸ್ನಾನ ಮಾಡಿ ಕೂತೆವು. 7 ಗಂಟೆಗೆ ಟೊಮೆಟೊ ಸೂಪು ಕುಡಿದೆವು. ಮನೆಯ ಹೆಂಗಸರೊಂದಿಗೆ ಅಡುಗೆಮನೆಯಲ್ಲಿ ಮಾತಾಡುತ್ತ ಅವರ ಫೋಟೋ ಕ್ಲಿಕ್ಕಿಸಿದೆವು.
ಗೂಟಿ ಬಾರಿಸುತ್ತ (ಚೆಂಡೆಯಂತಹ ವಾದ್ಯ ಪರಿಕರ) ಅಲ್ಲಿಯ ಸ್ಥಳೀಯರು ಹಾಡಿದರು. ಅದನ್ನು ನೋಡುತ್ತ ಕೂತೆವು. ಚಪಾತಿ ಪಲ್ಯ, ಅನ್ನ ತಂಬ್ಳಿ, ಸಾರು, ಸಾಂಬಾರು, ಕಾಯಿ ಹೋಳಿಗೆ ಊಟ ಹೊಟ್ಟೆ ಸೇರಿತು. ಊಟವಾಗಿ ಬೆಂಕಿ ಸುತ್ತ ಕೂತೆವು. ಹಾಡು, ತಮಾಷೆ ಮಾತು, ಇತ್ಯಾದಿಯಾಗಿ ಕಷಾಯ ವಿತರಣೆ. ನಿದ್ರೆ.
ಮುದದಿಂದ ಮೋತಿಗುಡ್ಡದತ್ತ
11-12.2014 ಬೆಳಗ್ಗೆ 6 ಗಂಟೆಗೆ ಎದ್ದು ಚಹಾ, ಏಳೂವರೆ ಗಂಟೆಗೆ ಇಡ್ಲಿ ಸಾಂಬಾರು, ಚಟ್ನಿ. ಬುತ್ತಿಗೆ ಚಪಾತಿ ಪಲ್ಯ ಹಾಕಿಸಿಕೊಂಡು ಮೋತಿಗುಡ್ಡಕ್ಕೆ ಹೊರಡಲು ಅಣಿಯಾದೆವು. 8.30 ಗೆ ತಂಡದ ಫೋಟೊ ತೆಗೆಸಿಕೊಂಡು ನಾರಾಯಣ ಹೆಗಡೆ ಮತ್ತು ಮನೆಯವರಿಗೆ ಧನ್ಯವಾದ ಅರ್ಪಿಸಿ ಮುಂದುವರಿದೆವು. ಗಂಟೆ 9 ಕಳೆದಿತ್ತು. ಭಾರತಿಯವರು ನೇರ ಯಾಣ ಶಿಬಿರಕ್ಕೆ ಹೋಗುವೆನೆಂದು ಹೇಳಿದ್ದವರು ಮನಸ್ಸು ಬದಲಾಯಿಸಿ ನಮ್ಮೊಡನೆ ಹೊರಟರು. ಭಾರತಿ ಹಾಗೂ ಹೇಮಾಮಾಲಾ ಅವರ ಹಿಂದೆ ನಾನು. ನನ್ನ ಹಿಂದೆ ವೇಲಾಯುಧನ್ ಹಾಗೂ ರಾಮಚಂದ್ರ. ಬಾಕಿಯವರೆಲ್ಲ ನಮ್ಮ ಕಣ್ಣಿಗೆ ಕಾಣಿಸದಷ್ಟು ಮುಂದೆ.
ಕರಿಕಲ್ಲಿನಿಂದ ಮೋತಿಗುಡ್ಡದೆಡೆಗೆ ಸಾಗುವ ದಾರಿ ರಸ್ತೆ, ಮುಂದೆ ಹೋದಂತೆ ಕಾಡು. ಕೆಲವೆಡೆ ದಟ್ಟಕಾಡು, ಅಲ್ಲಲ್ಲಿ ಕುರುಚಲು ಸಸ್ಯ. ಮಧ್ಯೆ ನೀರ ತೊರೆ, ಸಾಗಿದಂತೆ ಅಡಿಕೆ ಬಾಳೆ ತೋಟ, ಭತ್ತದ ಗದ್ದೆ. ಅಲ್ಲಲ್ಲಿ ಒಂಟಿ ಮನೆ. ಮನೆಗಳಲ್ಲಿ ಜನಸಂಖ್ಯೆ ವಿರಳ. ಅವರ ಮನೆಯಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಮಜ್ಜಿಗೆ, ನೀರು ಬೆಲ್ಲ ಕುಡಿಯುವವರು ಕುಡಿದು ನಾಲ್ಕು ಮಾತಾಡಿ ಮುಂದೆ ಸಾಗಿದೆವು. ಕಾಡೊಳಗೆ ನಡೆಯುತ್ತ ಸಾಗಿದಂತೆ ನನ್ನ ಶೂ ಸೋಲ್ ಅರ್ಧ ಸೋಲೊಪ್ಪುವಂತೆ ಕಂಡಿತು. ಅದಕ್ಕೆ ಹೇಮಮಾಲಾ ಕೊಟ್ಟ ರಬ್ಬರ್ ಬ್ಯಾಂಡ್ ಬಿಗಿದು ಮುಂದೆ ಸಾಗಿದೆ. ಸೋಲಿನಿಂದ ತಾತ್ಕಾಲಿಕವಾಗಿ ಪಾರಾದೆ!
ಮುಂದೆ ತೊರೆ ಬಳಿ ಎಲ್ಲರೂ ಊಟವಾಗಿ ವಿಶ್ರಾಂತಿಗೈದಿದ್ದರು. ನಾವು 122 ಗಂಟೆಗೆ ಬುತ್ತಿ ಬಿಚ್ಚಿದೆವು. ಊಟವಾಗಿ ಸ್ವಲ್ಪ ಹೊತ್ತು ವಿರಮಿಸಿ ಸಾಗಿದೆವು. ಅರ್ಧ ಪರ್ಲಾಂಗು ದೂರದಲ್ಲಿ ಮಹಾಬಲೇಶ್ವರ ಹೆಗಡೆ ಮನೆ. ಅಲ್ಲಿ ಮಧ್ಯಾಹ್ನದ ಪೂಜೆ ಆಗುತ್ತಿತ್ತು. ನಾವು ಅಲ್ಲಿ ಕುಳಿತು ಮನೆಯವರೊಂದಿಗೆ ಮಾತಾಡಿ ಮುಂದೆ ಹೊರಡಲನುವಾದೆವು. ಇನ್ನೂ ತುಂಬ ದೂರ ನಡೆಯಬೇಕಲ್ಲ, ಆಗುತ್ತ ನಿಮಗೆ? ಕಷ್ಟ ಕಷ್ಟ ಎಂಬ ಅವರ ಸಹಾನುಭೂತಿ ಮಾತು ಕೇಳುತ್ತ ಮುಂದುವರಿದೆವು. ಅವರ ತೋಟದೊಳಗೆಯೇ ಸಾಗಿದೆವು. ಮಂಗಗಳ ಉಪಟಳ ಜೋರಿರಬೇಕು. ಬಾಳೆಗೊನೆಗಳಿಗೆ ಗೋಣಿಚೀಲ ಮುಚ್ಚಿರುವುದು ಕಾಣಿಸಿತು. ಮುಂದೆ ಬಾಳೆಕಾಯಿಗಳಿಲ್ಲದ ಬೋಳು ಗೊನೆ. ಕಪಿರಾಯ ಒಂದೂ ಬಿಡದೆ ಖಾಲಿ ಮಾಡಿದ್ದ! ಬಾಳೆಮೋತೆಯನ್ನು ಮಾತ್ರ ಉಳಿಸಿದ್ದ!
ತೋಟದ ದಾರಿ ಮುಕ್ತಾಯವಾದಂತೆ ಕಾಡು ದಾರಿ. ಕಾಡೊಳಗೆ ಒಬ್ಬನೇ ಹಿಂದೆ ಉಳಿದು ದಾರಿ ತಪ್ಪೀತೆಂಬ ಭಯವೇ ಆಗದಂತೆ ಅಲ್ಲಲ್ಲಿ ಮರ, ಬಂಡೆಗಳಮೇಲೆ ಬಾಣದ ಗುರುತನ್ನು ಆಯೋಜಕರು ಮಾಡಿದ್ದರು. ಅಷ್ಟು ಸುವ್ಯವಸ್ಥೆಯ ಹಿಂದೆ ಆಯೋಜಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಬಾಣದ ಗುರುತು ನೋಡುತ್ತ ಮುಂದೆ ಸಾಗಿದರಾಯಿತು. ಎಲ್ಲೆಲ್ಲಿ ನೋಡಲಿ ಬಾಣದ ಗುರುತನ್ನೇ ಕಾಣುವೆ ಎಂಬ ಹಾಡು ಗುನುಗುತ್ತ ಉತ್ಸಾಹದಿಂದ ಸಾಗಿದೆವು.
ಮಾಮೂಲು ನನ್ನ ನಡಿಗೆಯ ವೇಗದಿಂದ ಮೂರುಪಟ್ಟು ನಿಧಾನಗತಿಯಲ್ಲಿ ಸಾಗಿದ್ದರಿಂದ ನನಗೆ ಲಾಭವೇ ಆಗಿದೆ. ಪರಿಸರ, ಪ್ರಕೃತಿ, ಜನರ ಭಾವನೆಗಳನ್ನು ಅರಿಯಲು ಇದರಿಂದ ಸಹಾಯವಾಯಿತು. ಅದಕ್ಕಾಗಿ ಹೇಮಮಾಲಾ ಹಾಗೂ ಭಾರತಿಯವರಿಗೆ ಧನ್ಯವಾದ. ಒಮ್ಮೆ ಏರುದಾರಿ ಬಂದರೆ ಮುಂದೆ ಇಳಿಜಾರು , ಸಮತಟ್ಟು ದಾರಿ ಹೀಗೆಯೇ ಮುಂದುವರಿಕೆ. ಕಾಡುದಾರಿಯಲ್ಲಿ ನಮ್ಮ ಹೆಣಭಾರದ (ಹೆಣ ಭಾರವೇ? ಎಂದು ಹೊತ್ತು ಅನುಭವವಿಲ್ಲ! ಕೇವಲ ಕಲ್ಪನೆ ಅಷ್ಟೆ!) ಚೀಲ ಹೊತ್ತು ನಡೆಯುವ ಅನುಭವ ನಿಜಕ್ಕೂ ಖುಷಿ ಕೊಟ್ಟಿದೆ. ಚೀಲದ ಭಾರವನ್ನು ಸ್ವಲ್ಪ ಹಗುರಗೊಳಿಸಬಹುದಿತ್ತು ಎಂಬ ಅನುಭವವೂ ಆಗಿದೆ! ಇಂಥ ಚಾರಣಕ್ಕೆ ಕನಿಷ್ಟ ಸಾಮಾನು ತರುವುದು ಕ್ಷೇಮಕರ.
ಕಾಡುಹೂಗಳು ಮನಕ್ಕೆ ಮುದವನ್ನಿತ್ತವು. ಇರುವೆಗಳ ಸೈನ್ಯ ಸಾಕಷ್ಟು ಕಂಡೆವು. ದೈತ್ಯ ಮರಗಳು, ಪೊದೆಯಂಥ ಸಸ್ಯಗಳು ದಾಟಿ ಮುಂದುವರಿದೆವು.
ಮಳೆಹನಿ ಬೀಳಲು ಸುರುವಾಯಿತು. ಹಾಗೆ ಎಲ್ಲರೂ ಒಂದು ಗುಡಿಸಲಿನಲ್ಲಿ ಕೂತೆವು. ಅದರ ಬಳಿ ಬೈಹುಲ್ಲು ಕಣ ಇತ್ತು. ಅದರದೆದುರು ಬೆರ್ಚಪ್ಪನನ್ನು ನಿಲ್ಲಿಸಿದ್ದರು. ಬೆರ್ಚಪ್ಪ ಚೆನ್ನಾಗಿತ್ತು! ದಾರಿ ಮಧ್ಯೆ ಅನಂತನಾಯಕರ ಮನೆಯಲ್ಲಿ ಎಳನೀರು ಕುಡಿದೆವು. ಆಗ ಮರಹತ್ತಿ ಎಳನೀರು ಕೊಯಿದು ಕೊಟ್ಟಿದ್ದರು. ಅವರು ಬೆನ್ನ ಹಿಂದೆ ಮಚ್ಚನ್ನು ಸಿಕ್ಕಿಸಿದ ವಿಧಾನ ಮೆಚ್ಚುಗೆಯಾಗಿ ಫೋಟೊ ಕ್ಲಿಕ್ಕಿಸಿದೆ!
ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದರು. ಅದನ್ನು ಹಗ್ಗದಲ್ಲಿ ಇಳಿಸುತ್ತಿದ್ದರು. ಕಾಡುದಾರಿಯಲ್ಲಿ ನಮಗೆ ಕೋತಿ ಬಿಟ್ಟರೆ ಬೇರೆ ಯಾವ ಪ್ರಾಣಿಯೂ ದರ್ಶನವೀಯಲಿಲ್ಲ. ಹೌದು! ಇಷ್ಟೊಂದು ಮಂದಿ ಕಾಡುದಾರಿಯಲ್ಲಿ ಹರಟೆ ಹೊಡೆಯುತ್ತ ಗದ್ದಲ ಮಾಡುತ್ತ ನಡೆಯುತ್ತಿದ್ದರೆ ಯಾವ ಪ್ರಾಣಿ ಎದುರು ಇದ್ದೀತು? ಪಕ್ಷಿಗಳ ದನಿ ಮಾತ್ರ ಕೇಳಿಸುತ್ತಿತ್ತು. ಮೋತಿಗುಡ್ಡದ ಹತ್ತಿರ ತಲಪಿದಾಗ ಮಾತ್ರ ದೈತ್ಯ ಗಾತ್ರದ ಮಂಗಟ್ಟೆ ಹಕ್ಕಿ ಬಾನಿನಲ್ಲಿ ಹಾರುತ್ತ ಸಾಗಿದ ಅಪೂರ್ವ ದೃಶ್ಯ ನೋಡಿ ಪಾವನಗೊಂಡೆವು. ಎಂಥ ಚಂದ ಅದರ ರೆಕ್ಕೆ. ಒಂದುಕ್ಷಣ ನಮಗೆ ದರ್ಶನ ನೀಡಿ ಮಾಯವಾಯಿತು! ಸುಮಾರು ೧೬ಕಿಮೀ ದೂರ ನಾವು ನಡೆದು ಮೋತಿಗುಡ್ಡ ತಲಪಿದೆವು.
ಸೂರ್ಯನ ನಿರ್ಗಮನ- ಭಾಸ್ಕರನ ಸ್ವಾಗತ!
ಮೋತಿಗುಡ್ಡದಲ್ಲಿ ಭಾಸ್ಕರ ಹೆಗಡೆಯವರ ಮನೆ ತಲಪುವಾಗ ಸಂಜೆ ಸೂರ್ಯ ಅಸ್ತಮಿಸಲು ತಯಾರಿಯಲ್ಲಿದ್ದ. ಆ ಸೂರ್ಯ ಅಸ್ತಮಿಸಿದರೂ ಈ ಭಾಸ್ಕರ ಬೆಳಕು ತೋರಿ ನಮಗೆ ಆತಿಥ್ಯ ನೀಡಿದ್ದರು! ಚಹಾ, ಅವಲಕ್ಕಿಯನ್ನಿತ್ತು ಸ್ವಾಗತಿಸಿದರು. ಟೊಮೆಟೊ ಸೂಪು ಕುಡಿದು ಸ್ನಾನಾದಿ ಮುಗಿಸಿ ಕೂತೆವು. ರಾತ್ರಿ ಮನೆ ಎದುರು ಚಪ್ಪರದಲ್ಲಿ ಹೊಸತೋಟ ಮಂಜುನಾಥ ಭಾಗವತರಿಂದ ಸತ್ಯ ಮತ್ತು ಅಹಿಂಸೆ ಎಂಬ ವಿಚಾರಭರಿತ ಭಾಷಣ ಕೇಳುವ ಸುಯೋಗ ದೊರೆತಿತ್ತು. ನೀವೆಲ್ಲ ಚಾರಣ ಕೈಗೊಂಡದ್ದು ಬಲು ಖುಷಿ ನೀಡಿತು. ಎಂದು ಪ್ರಶಂಸಿದರು. ಬದುಕಿನ ಬಗ್ಗೆ, ಗಾಂಧೀಜಿ ತತ್ತ್ವದ ಬಗ್ಗೆ, ಪ್ರಚಲಿತ ವಿದ್ಯಾಮಾನದ ಬಗ್ಗೆ ಸೊಗಸಾಗಿ ಮಾತಾಡಿದರು. ಒಂದೆರಡು ಪ್ರಸಂಗಗಳ ಯಕ್ಷಗಾನ ಹಾಡುಗಳನ್ನೂ ಹಾಡಿದರು.
(ಭಾಗವತರು ಮೋತಿಗುಡ್ಡದಲ್ಲಿ ಶಾಲೆಬಳಿ ಇರುವ ಅರಳೀಮರದ ಕೆಳಗೆ ಒಂದು ಸಣ್ಣ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಸುಮಾರು ೭೦ರಮೇಲೆ ವಯಸ್ಸು. ಬೆಳಗ್ಗೆ 4.30 ಗೇ ಏಳುತ್ತಾರಂತೆ.) ನಮ್ಮ ತಂಡದಲ್ಲಿ ಕೇರಳ, ಮಹಾರಾಷ್ಟ್ರದಿಂದ ಬಂದ ಹದಿನೈದು ಮಂದಿಗೆ ಕನ್ನಡ ಅರ್ಥವಾಗದ ಕಾರಣ ಮಂಜುನಾಥ ಭಾಗವತರ ಭಾಷಣದ ಸಾರಾಂಶವನ್ನು ಆಂಗ್ಲದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಹೇಮಮಾಲಾ ಹೇಳಿದರು. ಅವರ ನೆನಪು, ಭಾಷೆಯ ಹಿಡಿತ ಸೊಗಸಾಗಿತ್ತು ಹಾಗೂ ಅವರ ಪ್ರತಿಭೆಯನ್ನು ತೋರಿಸಿತು.
ಪಾದಸೇವೆ!
ಹೆಚ್ಚಿನ ಮಂದಿಯ ಪಾದಗಳಲ್ಲೂ ಶೂ ಕಚ್ಚಿ ಬೊಬ್ಬೆಳೆದ್ದಿದ್ದುವು. ಎಲ್ಲರೂ ಮುಲಾಮು ತಿಕ್ಕಿ ಪ್ಲಾಸ್ಟರ್ ಹಾಕಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ನನ್ನ ಪಾದಗಳಿಗೇನೂ ಆಗಲಿಲ್ಲ. ಆದರೆ ಶೂಗಳ ಆರೋಗ್ಯ ಮಾತ್ರ ಹದಗೆಟ್ಟಿತ್ತು. ಸೋಲ್ ಎರಡೂ ಆಚೆ ಬಂದಿತ್ತು. ಮಂಡ್ಯದ ಶಂಕರ ಅವರು ಫೆವಿಕ್ವಿಕ್ ಕೊಟ್ಟರು. ಅದನ್ನು ಹಾಕಿ ಸೋಲ್ ಅಂಟಿಸಿ ಇಟ್ಟೆ. ನಾಳೆಗೆ ಸರಿಯಾದೀತು ಎಂದು ನೆಮ್ಮದಿಯಾಗಿ ನಿದ್ದೆ ಮಾಡಬಹುದು ಎಂದು ಭಾವಿಸಿದೆ.
8.30 ಗಂಟೆಗೆ ಊಟ. ಚಪಾತಿ, ಪಲ್ಯ, ಅನ್ನ ಸಾರು, ಸಾಂಬಾರು, ತಂಬ್ಳಿ, ಪಾಯಸ. ಊಟವಾಗಿ ಮನೆ ಎದುರು ಚಪ್ಪರದಲ್ಲಿ ಎಲ್ಲ ಸೇರಬೇಕೆಂಬ ಅಪ್ಪಣೆಯಾಯಿತು. ಯಾರಿಗೂ ಅಂಥ ಉತ್ಸಾಹ ಇರಲಿಲ್ಲ. ಈಗ ಉತ್ಸಾಹ ಇಲ್ಲ. ಒಮ್ಮೆ ಇಲ್ಲಿ ಸೇರಿದರೆ ಮತ್ತೆ ಸಮಯ ಸರಿದದ್ದೇ ಗೊತ್ತಾಗಲ್ಲ ಎಂದು ಫತೇಖಾನ್(ಗಂಗೋತ್ರಿ ಘಟಕದ ಕಾರ್ಯಕರ್ತರು) ಹೇಳಿದರು. ಅವರಂದಂತೆಯೇ ಆಯಿತು. ಪುಂಖಾನುಪುಂಖವಾಗಿ ಹಾಡು, ಜೋಕು ಒಬ್ಬರಲ್ಲ ಒಬ್ಬರು ಹೇಳುತ್ತಲೇ ಇದ್ದರು. ನಮ್ಮ ತಂಡದಲ್ಲಿ ಎಲ್ಲರಿಗಿಂತ ಚಿಕ್ಕವರಾದ (ಅಂದರೆ ವಿದ್ಯಾರ್ಥಿಗಳು) ಅಪೂರ್ವ, ವಿಭಾ ಶಾಸ್ತ್ರೀಯ, ಜನಪದ ಗೀತೆ ಹಾಡಿ ‘ಒನ್ಸ್ ಮೋರ್’ ಎಂಬ ಚಪ್ಪಾಳೆಗಿಟ್ಟಿಸಿದರು. ಮಹಾರಾಷ್ಟ್ರದ ನಾಸಿಕದವರಿಗೆ ದೇಶಾಭಿಮಾನ ಬಹಳ. ಅವರು ಶಿವಾಜಿಗೆ ಸಂಬಂಧಿಸಿದ ಹಾಡುಗಳನ್ನೆ ಹಾಡಿದರು. ಫತೇಖಾನ್ಸೊಗಸಾಗಿ ಭಾವಗೀತೆ ಹಾಡಿದರು. ಕೇಳುತ್ತ ಇದ್ದಂತೆ ಸಮಯ 10.30 ಗಂಟೆ ಆದದ್ದು ಗೊತ್ತೇ ಆಗಲಿಲ್ಲ. ಅರೆ ಇಷ್ಟು ಬೇಗ ಸಮಯವಾಯಿತೆ ಎಂಬ ಭಾವ ಎಲ್ಲರ ಮೊಗದಲ್ಲೂ! ಅಲ್ಲಿಗೆ ಸಭಾಕೂಟ ಮುಕ್ತಾಯಗೊಳಿಸಿದರು. ಕಷಾಯ ಕುಡಿಯುವವರು ಲೋಟ ತಂದು ಸಾಲಾಗಿ ಹಾಕಿಸಿಕೊಂಡರು.
ಬಿಡದು ಈ ಗೊರಕೆಯ ಮಾಯೆ!
ನಿದ್ದೆ ಬಲು ಬೇಗ ಬಂದೀತೆಂದರೆ ಬಿಡದೀ ಗೊರಕೆಯ ಮಾಯೆ! ಗೊರಕೆಯ ವಿಧವಿಧ ಝೇಂಕಾರ ನಿದ್ದೆಗೆ ಅಡ್ಡಿಯೇ! ಹೊರಗೆ ಚಪ್ಪರದಡಿಯಲ್ಲಿ ಮಲಗಿದವರಿಂದ ಹಿಡಿದು ಒಳಗೆ ಮಲಗಿದವರ ವರೆಗೆ ಒಂದು ಕಡೆ ನಿಲ್ಲುವಾಗ ಇನ್ನೊಂದು ಕಡೆಯಿಂದ ಸುರು! ಈ ಗೊರಕೆಯ ವಿಚಾರವೇ ಸೋಜಿಗ. ನಾವು ಗೊರಕೆ ಹೊಡೆಯುತ್ತೇವೆ ಎಂಬ ಅರಿವು ನಮಗೆ ಇರುವುದಿಲ್ಲ. ಇನ್ನೊಬ್ಬರು ತಿಳಿಸಿದರಷ್ಟೇ ಗೊತ್ತಾಗುವುದು. ಗೊರಕೆ ಹೊಡೆಯುವವರಿಗೆ ನೀವು ‘ಏನು ಗೊರಕೆ ನಿಮ್ಮದು’ ಎಂದರೆ ಇಲ್ಲಪ್ಪ ನಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ಹೇಳುತ್ತಾರೆ!
ಹಿಂದಿನ ಭಾಗವನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ:
ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ- ಭಾಗ-೧ :
…………………….ಮುಂದುವರಿಯುವುದು
ನಿಮ್ಮ ಪ್ರಯಾಣದ ಅನುಭವಗಳನ್ನು ಸುಂದರವಾಗಿ ಅಕ್ಷರಗಳಲ್ಲಿ ವಿವರಿಸಿದ್ದೀರಿ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ..
ನಿಮ್ಮ ಚಾರಣದ ಅನುಭವಗಳು ,ವಿವರಣೆ,ತಿಳಿ ಹಾಸ್ಯ ಕೊನೆಯದಾಗಿ ಬರೆದ ಗೊರಕೆಯ ಉಪಸ ೦ಹಾರಲೇಖನ ತು೦ಬಾ ಇಷ್ಟ ವಾಯಿತು
ಧನ್ಯವಾದಗಳು ಶ್ರುತಿ ಶರ್ಮ, ಸಾವಿತ್ರಿ ಭಟ್