ಕುಂತಿಯ ಒಡಲು
ದಟ್ಟಡವಿ ಕಾಡುಪ್ರಾಣಿ ,ಮುಳ್ಳುಗಳ ಸರಮಾಲೆ
ಪಾದುಕೆಗಳೇ ಇಲ್ಲದ ಕಾಲುಗಳು
ನೊರಜುಕಲ್ಲುಗಳ ಮೇಲೆ.
ಐವರು ಶೂರಪುತ್ರರಿದ್ದರೂ,
ರಕ್ಕಸರ ಭಯದ ನೆರಳಿನ ಮಾಲೆ
ಎದೆಯುದ್ದ ಬೆಳೆದ ಮಕ್ಕಳನು ಸೆರಗಿನಲಿ ಮುಚ್ಚಿಡಲಾರದೆ
ಯಾವ ಊರು ಯಾವ ಕೇರಿ ಸುತ್ತಿದೆಯೋ!
ಕಿರಿಚಿದ್ದು ಅರಚಿದ್ದು ಬಿಕ್ಕಿದ್ದು ಎಷ್ಟೋ ಸಾರಿ
ನಕ್ಕಿದ್ದು ಎಷ್ಟು ಸಾರಿ?
ಐವರ ಹೊಟ್ಟೆ ತುಂಬಿಸಲು ತಡಕಿದ್ದೇನು… ಹುಡುಕಿದ್ದೇನು… ತನಗಾಗಿ ತಳದಲ್ಲಿ
ಉಳಿದದ್ದೇನು?
ಬತ್ತಿಹೋದ ಒಡಲಿಂದ. ಬಿಸಿಯುಸಿರ
ಹೊರಹೊಮ್ಮಿದ್ದೇನು!
ಒಂದಲ್ಲ ಎರಡಲ್ಲ ಹದಿಮೂರು ವರ್ಷಗಳು
ಐವರನು ಕಾಯುತ್ತಾ ಕಣ್ಣಿಗೆ ಎಣ್ಣೆ ಬಿಟ್ಟಂತೆ
ಕತ್ತಲಲ್ಲಿ ಬೆಳಕನ್ನು ಹುಡುಕುತ್ತಾ
ಕುಳಿತವಳಿಗೆ
ಸಿಕ್ಕಿದ್ದೇನು? ದಕ್ಕಿದ್ದೇನು?
ಕಾದ ರಾಜ್ಯ ಸಿಕ್ಕದಾ ರಾಜ್ಯ
ಗೋರಿಗಳೊಳಗೆ ನಗುತ್ತಿರುವ
ಪಿಶಾಚಿಗಳ ಸಾಮ್ರಾಜ್ಯ
ಸುತ್ತಿಕೊಂಡಾ ಬಳ್ಳಿ ,ಹತ್ತಿಕೊಂಡಾ ಬೆಂಕಿ
ದಿನವೂ ಸುಟ್ಟುಹೋದ ಜೀವ
ಸುಡಲೆಲ್ಲಿತ್ತು ನಿನ್ನೊಳಗಿನ ಭಾವ.,
ವಿಶ್ವವನ್ನೇ ಕಲಕಿದ ಜೀವ.
– ಪುಷ್ಪಾ ನಾಗತಿಹಳ್ಳಿ.
ಅರ್ಥವತ್ತಾದ ಕವನ..