ಚಪ್ಪಲಿ ಮತ್ತು ನಾನು..!
ಜೊತೆಯಾಗಿಯೇ ಹುಟ್ಟಿ
ಜೊತೆಯಾಗಿಯೇ ಅಗಲುವ
ನೀವು ಅದಲು;ಬದಲಾಗದೆ ಸದಾ
ಎಡ ಬಲದಲ್ಲಿಯೇ ಮುನ್ನೆಡೆಯುವಿರಿ
ನಾವು ಎಡಬಲ ಕುಳಿತೆ ಜೊತೆಯಾದೆವು
ತಡ ಮಾಡದೆ ಅದಲು;ಬದಲಾದೆವು
ಸದ್ಯ ನನ್ನವಳಿಗೀಗ ನಾನೇ ಎಡ…!
ನಮ್ಮನು ಪುಟ್ಟ ಮಗುವಿನಂತೆ ನಿಮ್ಮ
ಹೆಗಲಿಗೇರಿಸಿಕೊಂಡು ಎಲ್ಲಡೆ ಸುತ್ತಿ
ಕಲ್ಲು ಮುಳ್ಳುಗಳನ ನೀವೇ ಚುಚ್ಚಿಕೊಂಡು
ಹೇಸಿಗೆಯನ್ನೂ ಲೇಪಿಸಿಕೊಂಡು ನಮ್ಮ
ಪಾದಗಳನ್ನ ರಕ್ಷಿಸುವ ನಿಮ್ಮ ಗುಣ
ನಿಜಕ್ಕೂ ಶ್ಲಾಘನೀಯ…!
‘
ಎದುರಿಗೆ ಬರುವ ಕೆಲ ನನಗಾಗದ
ಮುಖಗಳನ್ನ ನೋಡಲಾಗದೆ ನಿಮ್ಮನ್ನೆ
ನೋಡಿಕೊಂಡು ನಡೆದ;ನಡೆಯುವ
ಆ ಘಳಿಗೆಯಂತೂ ಸ್ಮರಣೀಯ!
ನಿಮ್ಮಿಂದ ಥಳಿಸಿಕೊಂಡರೆ...
ಒಗೆಸಿಕೊಂಡರೆ,ಉಗಿಸಿಕೊಂಡರೆ
ಮಾನ;ಮರ್ಯಾದೆ ಮಂಗಮಾಯ
ಇತ್ತೀಚಿನ ಕೆಲ ಸಭೆ,ಸಮಾರಂಭಗಳಲಿ
ನೀವು ಹಾರಿಕೊಂಡು ತೂರಿಕೊಂಡು
ನುಸುಳಿಕೊಳ್ಳುವ ನಿಮಿತ್ಯ ನಿಮ್ಮನ್ನ
ಸ್ವಲ್ಪ ದೂರ…. ಸರಿಸುತ್ತಿದ್ದಾರೆ…
ಮೊನ್ನೆ ಮೊನ್ನೆ ದೂರದಲ್ಲಿದ್ದುಕೊಂಡೆ
ನೀವು ನಸುನಕ್ಕಿದ್ದನ್ನ ನಾ ನೋಡಿದೆ
ನಗೆ ತಡಿಯಲಾಗದೆ ನಾನು ತುಸು ನಕ್ಕೆ..!
– ಕೆ.ಬಿ.ವೀರಲಿಂಗನಗೌಡ್ರ , ಬಾಗಲಕೋಟ ಜಿಲ್ಲೆ
ಕವನ ಓದಿ ನನಗೂ ನಗು ಬಂತು.