ಲಹರಿ

ವೃತ್ತಿಯಿಂದ ಪ್ರವೃತ್ತಿಯಡೆಗೆ.

Share Button

ಇತ್ತೀಚೆಗಷ್ಟೇ ನನ್ನ ಪ್ರಿಯವಾದ ಜಪಾನಿನ ಒಂದು ಪುಸ್ತಕ, “ಇಕಿಗೈ” (ದೀರ್ಘ ಹಾಗೂ ಸಂತಸ ಭರಿತ ಜೀವನಕ್ಕೆ ಜಪಾನಿಯರ ಗುಟ್ಟು) ಓದಿದೆ. ಅದೊಂದು ಸುಂದರ ಪರಿಕಲ್ಪನೆಯ ಅನಾವರಣ. ಬದುಕಲು ಕಾರಣ, ಜೀವನದ ಉದ್ದೇಶ, ಬದುಕಿಗೆ ಅರ್ಥ ನೀಡುವ ಅಂಶ , ಸಾರ್ಥಕತೆ ಹೊಂದುವುದು ಹೇಗೆ? ಪ್ರೇರಣೆ ಯಾವ ಮೂಲದಿಂದ ದೊರಕುತ್ತದೆ, ಹೀಗೆ ಹತ್ತು ಹಲವಾರು ಗಂಭೀರ ವಿಷಯಗಳ ಅಷ್ಟೇ ಗಮ್ಯವಾದ ಸಂಗ್ರಹ. ಈ ಪುಸ್ತಕ, ಜೀವನದ ಬಗ್ಗೆ ನನ್ನ ಅನಿಸಿಕೆ ಹಾಗೂ ನಂಬಿಕೆಯನ್ನು ಮತ್ತೊಂದು ಆಯಾಮದೆಡೆಗೆ ಕರೆದುಕೊಂಡು ಹೋಯಿತು ಎಂದರೂ ಅತಿಶಯೋಕ್ತಿ ಏನಲ್ಲ.

ಈ ಪುಸ್ತಕ ಓದಲು ಪ್ರೇರಣೆ ಏನು ಗೊತ್ತೆನ್ರಿ? ಮೊದಲಿಗೆ, ನಾನು ಸುಮಾರು ಮೂವತ್ತಾರು ವರ್ಷ ಸುದೀರ್ಘ ಸೇವೆ ಮಾಡಿ ಕಳೆದ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದಿದ ಸಂಸ್ಥೆ ಜೀವವಿಮಾ ನಿಗಮದಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ಮೀಸಲಾದ ತರಬೇತಿ ಕಾರ್ಯಕ್ರಮ, ನಮ್ಮ ಹೈದರಾಬಾದ್ ನಲ್ಲಿ ಫೆಬ್ರವರಿ ಇಪ್ಪತ್ತಾರಂದು ಜರಗಿತು. ಅದರಲ್ಲಿ ನಾನೂ ಕೂಡ ತುಂಬ ಕುತೂಹಲದಿಂದ ಭರವಸೆಯೊಂದಿಗೆ ಭಾಗವಹಿಸಿದೆ. ನನ್ನ ಭರವಸೆಗೆ ಇನ್ನಷ್ಟು ಇಂಬು ಕೊಡುವಂತೆ ಅಲ್ಲಿನ ತರಬೇತಿ ವರ್ಗ, ನಮ್ಮನ್ನು ನಿವೃತ್ತಿ ಜೀವನದ ಮತ್ತೊಂದು ಸುಂದರ ಪಯಣಕ್ಕೆ ಸಜ್ಜು ಮಾಡುವಂತಿತ್ತು. ನಿವೃತ್ತಿಯ ಬದುಕು ಆರೋಗ್ಯಪೂರಕವಾಗಿರಬೇಕಾದರೆ ನಮ್ಮ ಗುರುತರ ಜವಾಬ್ದಾರಿಗಳೇನು? ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಹೇಗೆ? ಸವಾಲುಗಳನ್ನು ಹೇಗೆ ಎದುರಿಸುವುದು-ಹೀಗೆ ಹತ್ತು ಹಲವಾರು ಉಪಯುಕ್ತ ವಿಚಾರಗಳು ನಮಗೆ ತಿಳಿಸಿದರು. ಅಲ್ಲಿ ಮೇಲಿನ ಪುಸ್ತಕದ ಪ್ರಸ್ತಾವನೆ ಆಗಿತ್ತು. ಒಟ್ಟಿನಲ್ಲಿ ಭಾವಪೂರ್ಣ ಕೃತಜ್ಞತೆಯೊಂದಿಗೆ ಸಂಸ್ಥೆಗೆ ವಿದಾಯ ಹೇಳಿ ನಮ್ಮ ಜೀವನ ಪುಸ್ತಕದ ಹೊಸ ಅಧ್ಯಯನಕ್ಕೆ ಅಣಿ ಮಾಡಿಕೊಂಡು ಬಂದದ್ದಾಯಿತು. ಮತ್ತೊಮ್ಮೆ ಆ ಬೃಹತ್ ಸಂಸ್ಥೆಗೆ ನನ್ನ ಹೃತ್ಪೂರ್ವಕ ಕೃತಜ್ಞತಾ ನಮನಗಳು.

ನಿವೃತ್ತಿಗೆ ಎರಡು-ಮೂರು ವರ್ಷಗಳ ಮೊದಲೇ ನನ್ನೊಳಗೆ ಹೊಸದೊಂದು ಚಿಂತನೆಯ ಕೃಷಿ ಆರಂಭವಾಗಿತ್ತು. ನಿವೃತ್ತಿಯ ನಂತರ ಏನು? ಜೀವನದ ದಿಕ್ಕು ಯಾವ ಕಡೆಗೆ? ನಾನು ಏನು ಮಾಡಬೇಕು? ಎಂಬ ಪ್ರಶ್ನೆಗಳು ನನ್ನನ್ನು ಆಗಾಗ ಕಾಡತೊಡಗಿದ್ದವು. ವೃತ್ತಿಜೀವನದಷ್ಟೇ ನಿವೃತ್ತಿ ಜೀವನವೂ ಸಂತೋಷ, ಸಂಭ್ರಮ ಮತ್ತು ಆತ್ಮತೃಪ್ತಿಯಿಂದ ಕೂಡಿರಬೇಕಾದರೆ, ನಾನು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು? ನನ್ನ ನಿಜವಾದ ಅಭಿರುಚಿ ಯಾವುದು? ನನ್ನೊಳಗಿನ ಪ್ರತಿಭೆ ಮತ್ತು ಆಸಕ್ತಿ ಯಾವ ಕಾರ್ಯದಲ್ಲಿ ಅರಳುತ್ತದೆ?—ಈ ಹುಡುಕಾಟ ನಿರಂತರವಾಗಿ ಸಾಗುತ್ತಲೇ ಇತ್ತು. ನನಗೆ ನೆಮ್ಮದಿ ಮತ್ತು ಸಮಾಧಾನವನ್ನು ನೀಡುವುದು ಯಾವುದು? ನನ್ನ ಮನಸ್ಸು ಯಾವುದನ್ನು ನೋಡಿ, ಕೇಳಿ ಅಥವಾ ಮಾಡಿ ನಿಜವಾಗಿಯೂ ಮುದಗೊಳ್ಳುತ್ತದೆ? ನನ್ನ ಬದುಕಿಗೆ ಅರ್ಥ ಮತ್ತು ಸಾರ್ಥಕತೆ ತರುವ ಕೆಲಸ ಯಾವುದು? ಹೀಗೆ ಒಂದರ ಹಿಂದೆ ಒಂದರಂತೆ ಉದ್ಭವಿಸುತ್ತಿದ್ದ ಅನೇಕ ಪ್ರಶ್ನೆಗಳ ನಡುವೆ ನನ್ನ ಮನಸ್ಸು ಗೀಜಿಗನ ಗೂಡಿನಂತಾಗಿತ್ತು.

ಆದರೆ ಇಂದು ಹಿಂದಿರುಗಿ ನೋಡಿದಾಗ ಅರಿವಾಗುವುದು ಏನೆಂದರೆ, ಆ ಗೊಂದಲವೇ ನನ್ನ ಹೊಸ ಬದುಕಿನ ಹುಡುಕಾಟದ ಮೊದಲ ಹೆಜ್ಜೆಯಾಗಿತ್ತು. ನಿವೃತ್ತಿಯ ನಂತರ ನನ್ನ ಸಣ್ಣಪುಟ್ಟ ಹವ್ಯಾಸಗಳಾದ ತೋಟಗಾರಿಕೆ, ವ್ಯಾಯಾಮ, ಅಧ್ಯಯನ ಮತ್ತು ಸಾಂದರ್ಭಿಕ ಬರವಣಿಗೆಯನ್ನು ಮತ್ತಷ್ಟು ಗಂಭೀರವಾಗಿ ಮುಂದುವರಿಸಬೇಕೆಂದು ಮನಸ್ಸು ಮಾಡಿದ್ದೆ. ಆದರೆ ಅಷ್ಟರಿಂದಲೇ ನನ್ನ ಹುಡುಕಾಟ ಪೂರ್ಣವಾಗಲಿಲ್ಲ. ಒಂದು ದಿನ ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡಿತು. ಇಷ್ಟು ವರ್ಷ ನನ್ನನ್ನು ರೂಪಿಸಿದ, ಬದುಕಿಗೆ ನೆಲೆ ನೀಡಿದ ನನ್ನ ವೃತ್ತಿಗೆ ಕೃತಜ್ಞತೆಯ ಕಾಣಿಕೆಯಾಗಿ ಅದರ ಕುರಿತೇ ಒಂದು ಪುಸ್ತಕ ಬರೆಯಬಹುದಲ್ಲವೇ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ಕ್ಷಣಕಾಲ ಆ ಆಲೋಚನೆ ನನ್ನನ್ನು ಉತ್ಸುಕಗೊಳಿಸಿತು. ಆದರೆ ತಕ್ಷಣವೇ ಮತ್ತೊಂದು ಪ್ರಶ್ನೆ ಎದುರಾಯಿತು. ಅಂತಹ ಪುಸ್ತಕವನ್ನು ಬರೆಯುವಷ್ಟು ನಾನು ಪ್ರಬುದ್ಧ ಬರಹಗಾರ್ತಿಯೇ? ಅಷ್ಟು ವಿಸ್ತಾರವಾದ ವಿಷಯವನ್ನು ಸಮರ್ಪಕವಾಗಿ ಸಂಗ್ರಹಿಸಿ, ನಿರೂಪಿಸುವ ಸಾಮರ್ಥ್ಯ ನನ್ನಲ್ಲಿದೆಯೇ? ಎಂಬ ಆತ್ಮಸಂಶಯ ಕಾಡಿತು. ಕೊನೆಗೆ, ಆ ಆಲೋಚನೆಯನ್ನು ಅಲ್ಲಿಗೇ ಕೈಬಿಟ್ಟೆ.

ಆದರೆ ಈಗ ಯೋಚಿಸಿದಾಗ ಅರ್ಥವಾಗುವುದು ಏನೆಂದರೆ, ಆ ಪ್ರಯತ್ನ ಕೈಬಿಟ್ಟರೂ, ಬರವಣಿಗೆಯ ಬೀಜ ಮಾತ್ರ ಆಗಲೇ ನನ್ನ ಮನಸ್ಸಿನಲ್ಲಿ ಮೊಳಕೆಯೊಡೆಯಲು ಆರಂಭಿಸಿತ್ತು. ಬರವಣಿಗೆಯ ಲೋಕ ಎಷ್ಟು ವಿಶಾಲವಾಗಿದೆ ಎಂಬುದು ಆಗ ನನಗೆ ನಿಧಾನವಾಗಿ ಅರಿವಾಗತೊಡಗಿತು. ಸ್ವತಂತ್ರ ಬರಹಗಾರ್ತಿ (Freelance Writer), ವಿಷಯ ಬರಹಗಾರ್ತಿ (Content Writer), ಯೂಟ್ಯೂಬರ್, ಪಾಡ್‌ಕಾಸ್ಟರ್, ಬ್ಲಾಗರ್, ಜಾಲತಾಣ ಲೇಖಕಿ, ಪ್ರವಾಸ ಲೇಖಕಿ—ಹೀಗೆ ಬರವಣಿಗೆಯ ಅನೇಕ ಆಯಾಮಗಳು ನನ್ನ ಗಮನ ಸೆಳೆದವು. ಇವುಗಳಲ್ಲಿ ಯಾವುದು ನನ್ನ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ? ಯಾವ ಮಾಧ್ಯಮದ ಮೂಲಕ ನನ್ನ ಅನುಭವ, ಆಲೋಚನೆ ಮತ್ತು ಬದುಕಿನ ಕಲಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು? ಎಂಬ ಪ್ರಶ್ನೆಗಳು ನನ್ನನ್ನು ನಿರಂತರವಾಗಿ ಚಿಂತನೆಗೆ ಹಚ್ಚಿದವು. ಎಲ್ಲಿ ನನ್ನ ಸಾಮರ್ಥ್ಯ ಬಳಕೆಯಾಗುತ್ತದೆ. ಯಾವ ಪ್ರತಿಭೆ ನನ್ನಲ್ಲಿ ಸುಪ್ತವಾಗಿದೆ. ಇದನ್ನು ಹೊರ ತೆಗೆಯಲೇ ಬೇಕೆಂಬ ಕಿಚ್ಚು ಹೆಚ್ಚಾಯ್ತು. ಆಗ ನನಗೆ ಅರಿವಾದ ಒಂದು ಸತ್ಯವೆಂದರೆ, ನಿವೃತ್ತಿ ಎಂದರೆ ಪಯಣದ ಅಂತ್ಯವಲ್ಲ; ಅದು ನಮ್ಮೊಳಗಿನ ಹೊಸ ಪ್ರತಿಭೆಗಳನ್ನು ಅನ್ವೇಷಿಸುವ, ಹೊಸ ಕನಸುಗಳಿಗೆ ರೂಪ ಕೊಡುವ ಮತ್ತು ಜೀವನಕ್ಕೆ ಹೊಸ ಅರ್ಥ ನೀಡುವ ಮತ್ತೊಂದು ಆರಂಭ.

ಅಕ್ಷರಗಳ ಮೇಲೆ ಅಕ್ಕರೆಯಿದ್ದ ನನಗೆ, ಬರವಣಿಗೆಯೇ ನನ್ನ ಅಸ್ತಿತ್ವದ ಭಾಗವಾಗಿತ್ತು. ಆದ್ದರಿಂದ ನಿವೃತ್ತಿಯ ನಂತರವೂ ಬರವಣಿಗೆಯನ್ನು ನನ್ನ ಜೀವನದ ಪ್ರಮುಖ ಪ್ರವೃತ್ತಿಯನ್ನಾಗಿ ಮೂದುವರಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಬಲವಾಗತೊಡಗಿತು. ಅಂತಿಮವಾಗಿ, ಬರವಣಿಗೆಯನ್ನೇ ನನ್ನ ಮುಂದಿನ ಜೀವನದ ಪಯಣದ ಸಂಗಾತಿಯನ್ನಾಗಿ ಆರಿಸಿಕೊಳ್ಳಬೇಕೆಂದು ದೃಢವಾಗಿ ನಿರ್ಧರಿಸಿದೆ. ಆದರೆ, ಏನು ಬರೆಯಬೇಕು? ಎಂಬ ಪ್ರಶ್ನೆ ಇನ್ನೂ ನನ್ನ ಮುಂದೆ ನಿಂತೇ ಇತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಸಿಗದ ವಿಷಯಗಳೇ ಇಲ್ಲ ಎನ್ನುವ ಈ ಕಾಲಘಟ್ಟದಲ್ಲಿ ಪರಿಣಾಮಕಾರಿ ಚಿಂತನೆಗಳುಳ್ಳ ಬರವಣಿಗೆ ಕಷ್ಟಸಾಧ್ಯವೇ ಸರಿ. ಅದೇ ಸಮಯದಲ್ಲಿ, ಜಗತ್ತಿನಾದ್ಯಂತ ಮಹತ್ತರ ಬದಲಾವಣೆಗೆ ಕಾರಣವಾಗುತ್ತಿದ್ದ ಕೃತಕ ಬುದ್ಧಿಮತ್ತೆ (Artificial Intelligence – AI) ನನ್ನ ಗಮನ ಸೆಳೆಯಿತು. ಇಂದು ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಸಂವಹನ—ಹೀಗೆ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದೆ. ಈ ತಂತ್ರಜ್ಞಾನವು ಕೇವಲ ಕೆಲಸದ ವಿಧಾನವನ್ನಷ್ಟೇ ಬದಲಾಯಿಸುತ್ತಿಲ್ಲ; ಮನುಷ್ಯನ ಚಿಂತನೆಯ ದಿಕ್ಕು ಮತ್ತು ಬದುಕಿನ ಸಾಧ್ಯತೆಗಳನ್ನೂ ಹೊಸದಾಗಿ ರೂಪಿಸುತ್ತಿದೆ. ಆಗ ನನ್ನ ಮನಸ್ಸಿನಲ್ಲಿ ಒಂದು ಹೊಸ ಆಲೋಚನೆ ಮೂಡಿತು. ನನ್ನ ಬರವಣಿಗೆಯ ಅನುಭವಕ್ಕೂ, ಹೊಸ ತಂತ್ರಜ್ಞಾನದ ಶಕ್ತಿಗೂ ಸೇತುವೆ ಕಟ್ಟಿದರೆ ಹೇಗೆ? ಎಂಬ ಪ್ರಶ್ನೆಯೇ ನನ್ನ ಮುಂದಿನ ಪಯಣಕ್ಕೆ ಹೊಸ ದಿಕ್ಕನ್ನು ತೋರಿಸಿತು.

ಈ ಡಿಜಿಟಲ್ ಯುಗದಲ್ಲಿ ಬರವಣಿಗೆಯ ಮಹತ್ವ ಕಡಿಮೆಯಾಗಿದೆಯೇ? ಬರವಣಿಗೆಯ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬಿದ್ದಿದೆಯಾ? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡಾಗ ಕಂಡುಕೊಂಡ ಉತ್ತರ “ಇಲ್ಲ, ಬರವಣಿಗೆಗೆ ಮುಪ್ಪು ಇಲ್ಲಾ, ಮುಕ್ತಿಯೂ ಇಲ್ಲಾ, ಮನುಸಂಕುಲ ಇರುವವರೆಗೂ ಇದರ ಅಸ್ತಿತ್ವ ಬಲು ಗಟ್ಟಿ” ಎಂಬ ಅಚಲ ನಂಬಿಕೆ ಹಾಗೂ ಅದನ್ನು ಸಾಬೀತು ಪಡಿಸುವ ಪ್ರಾಮಾಣಿಕ ಪ್ರಯತ್ನದ ಮಂಡನೆಯೇ ಈ ವಿಚಾರದ ಉದ್ದಿಶ್ಯಾ. ಏಕೆಂದರೆ ತಂತ್ರಜ್ಞಾನ ಬದಲಾಗಬಹುದು; ಆದರೆ ಅಕ್ಷರಗಳ ಶಕ್ತಿ ಎಂದಿಗೂ ಅಳಿಯುವುದಿಲ್ಲ. ಅಕ್ಷರಗಳು ಅಮರ. ಮನುಷ್ಯನ ಆಲೋಚನೆಗಳು, ಅನುಭವಗಳು, ಸಂವೇದನೆಗಳು ಮತ್ತು ಸೃಜನಶೀಲತೆ ಅಕ್ಷರಗಳ ಮೂಲಕವೇ ಶಾಶ್ವತವಾಗಿ ಉಳಿಯುತ್ತವೆ. ಬದಲಾವಣೆ ಜಗದ ನಿಯಮ, ಹಾಗೆಯೇ ಕಲಿಕೆ ವಿಸ್ತೃತ. ತಂತ್ರಜ್ಞಾನಗಳು ಅಭಿವ್ಯಕ್ತಿಯ ಸಾಧನಗಳಷ್ಟೇ ಹೊರತು, ಅದರ ಹಿಂದಿನ ದುಡಿಮೆ ಮನುಷ್ಯ ಬುದ್ಧಿ ಚಾಕಚಕ್ಯತೆಗೆ ಅವಲಂಬಿತವಾಗಿರುತ್ತದೆ. ಅವನ ಚಿಂತನೆಗಳು, ಅಭಿಪ್ರಾಯಗಳನ್ನು ಯಾವ ತಂತ್ರಜ್ಞಾನವೂ ಊಹಿಸಲಿಕ್ಕಾಗಲಿ ಅಥವಾ ನಶಿಸಲಿಕ್ಕಾಗಲಿ ಸಾಧ್ಯವಿಲ್ಲ. ಅಭಿವ್ಯಕ್ತಿ- ಬರವಣಿಗೆ ಒಂದಕ್ಕೊಂದು ಪೂರಕ.

ಬರವಣಿಗೆ ಎನ್ನುವುದು ಕೇವಲ ಪದಗಳನ್ನು ಜೋಡಿಸುವ ಕಲೆ ಅಲ್ಲ,ಅದು ಮನಸ್ಸಿನ ಕನ್ನಡಿಯಾಗಿದೆ. ಮನುಷ್ಯನ ಭಾವನೆಗಳು, ಚಿಂತನೆಗಳು, ಅನುಭವಗಳು ಮತ್ತು ಜೀವನದರ್ಶನ ಸುಂದರವಾಗಿ ಅಭಿವ್ಯಕ್ತವಾಗುವ ಮಾಧ್ಯಮವೇ ಬರವಣಿಗೆ. ನಿಯಮಿತ ಬರವಣಿಗೆಯಿಂದ ಏಕಾಗ್ರತೆ ಬೆಳೆಯುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಮಯವನ್ನು ಸಾರ್ಥಕವಾಗಿ ಬಳಸಿದ ತೃಪ್ತಿ ದೊರೆಯುತ್ತದೆ. ಏಕಾಗ್ರತೆಗೆ ಬರವಣಿಗೆ ದಿವ್ಯ ಔಷಧಿ. ಮರೆಗುಳಿತನಕ್ಕೆ ಸೂಕ್ತ ಚಿಕಿತ್ಸೆ. ಜಾಗೃತ ಮೆದುಳಿಗೆ ಚೇತೋಹಾರಕ ಅಭ್ಯಾಸ. ಇಂದು ಕೃತಕ ಬುದ್ಧಿಮತ್ತೆ ಬರವಣಿಗೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದೆ. ಮಾಹಿತಿ ಸಂಗ್ರಹಿಸಲು, ಭಾಷೆಯನ್ನು ನಯಗೊಳಿಸಲು, ಹೊಸ ಆಲೋಚನೆಗಳಿಗೆ ದಾರಿ ತೋರಿಸಲು ಅದು ಅತ್ಯುತ್ತಮ ಸಹಾಯಕ. ಆದರೆ ಬರಹದ ಆತ್ಮ, ಅದರ ಭಾವನೆ, ಅನುಭವ ಮತ್ತು ಮೂಲ ಪರಿಕಲ್ಪನೆ ಮಾತ್ರ ಮನುಷ್ಯನ ಮನಸ್ಸಿನಿಂದಲೇ ಬರಬೇಕು. ತಂತ್ರಜ್ಞಾನವು ನಮ್ಮ ಸೃಜನಶೀಲತೆಗೆ ಪರ್ಯಾಯವಲ್ಲ; ಅದು ನಮ್ಮ ಪ್ರತಿಭೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸುವ ಸಹಯಾತ್ರಿಯಾಗಿರುತ್ತದೆ. ಅದು ಎಷ್ಟೇ ಆದರೂ ಕೃತಕ ಕೌಶಲ್ಯ. ಬರವಣಿಗೆ ಶಾಶ್ವತ.

ಇಂದಿನ ಯುವ ಜನಾಂಗಕ್ಕೆ ಹಾಗೂ ವಿಶೇಷವಾಗಿ ಹಿರಿಯ ನಾಗರಿಕರಿಗೆ ಬರವಣಿಗೆ ಅತ್ಯಂತ ಉಪಯುಕ್ತ ಕೌಶಲವಾಗಿದೆ. ಅದು ಭಾಷೆಯ ಮೇಲಿನ ಹಿಡಿತವನ್ನು ಹೆಚ್ಚಿಸುತ್ತದೆ, ಅಭಿವ್ಯಕ್ತಿಯನ್ನು ಪರಿಣಾಮಕಾರಿಗೊಳಿಸುತ್ತದೆ, ಚಿಂತನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಹಾಗೂ ಬದುಕಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ದಾಖಲಿಸುವ ಅವಕಾಶವನ್ನು ನೀಡುತ್ತದೆ. ಜವಾಬ್ದಾರಿಯುತ ಅಭಿವ್ಯಕ್ತಿ, ಆತ್ಮಾವಲೋಕನ ಮತ್ತು ಸಮಾಜದೊಂದಿಗೆ ಸಾರ್ಥಕ ಸಂವಾದ—ಇವೆಲ್ಲಕ್ಕೂ ಬರವಣಿಗೆಯೇ ಅತ್ಯುತ್ತಮ ಸಾಧನ. ಅಂತಿಮವಾಗಿ, ಬರವಣಿಗೆ ಕೇವಲ ಹವ್ಯಾಸವಲ್ಲ; ಅದು ಬದುಕನ್ನು ಅರ್ಥಮಾಡಿಕೊಳ್ಳುವ, ಬದುಕಿಗೆ ಅರ್ಥ ನೀಡುವ ಮತ್ತು ನಮ್ಮ ಅಸ್ತಿತ್ವವನ್ನು ಕಾಲದ ಪುಟಗಳಲ್ಲಿ ಶಾಶ್ವತವಾಗಿ ಉಳಿಸುವ ಸೃಜನಾತ್ಮಕ ಸಾಧನೆ. ಬರವಣಿಗೆ ಕಾಲವನ್ನು ಮೀರಿ ನಿಲ್ಲುವ ಚಿರಂತನ, ನಿತ್ಯ ನೂತನ ಹಾಗೂ ಅನಂತ ಪ್ರಕ್ರಿಯೆ. ಹಾಗಾಗಿ ನನ್ನ ಬರವಣಿಗೆಯ ಮತ್ತೊಂದು ಪರ್ವ ನಿಮ್ಮೆಲ್ಲರ ಶುಭ ಹಾರೈಕೆಯೊಂದಿಗೆ ಸಾಗಲಿ ಎಂದು ಬಯಸುತ್ತೇನೆ.

ವತ್ಸಲ ಸುರೇಶ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *