Maturity is a Mindset, not Age ಎಂಬ ಹೇಳಿಕೆಯೊಂದಿದೆ. ಒಂದರ್ಥದಲ್ಲಿ ಇದು ಸರಿ, ಇನ್ನೊಂದರ್ಥದಲ್ಲಿ ಸರಿಯಲ್ಲ. ವಯಸಾದಂತೆಲ್ಲಾ ಜೀವನದ ಅನುಭವಗಳಿಂದ ಪಾಠ ಕಲಿತಂತೆಲ್ಲಾ ನಾವು ಪರಿಪಕ್ವವಾಗಬೇಕು. ಮೆಚೂರಿಟಿಗೂ ಏಜಿಗೂ ಸಂಬಂಧ ಇದೆ. ಆದರೆ ಕೆಲವರನ್ನು ಗಮನಿಸಿದಾಗ ನಿರಾಶೆಯಾಗುತ್ತದೆ. ಬದುಕು ಇವರಿಗೆ ಪಾಠ ಕಲಿಸಲಿಲ್ಲವೋ? ಇವರೇ ಬದುಕಿನ ಪಾಠ ಕಲಿಯಲಿಲ್ಲವೋ? ಎಂದು ಗೊತ್ತಾಗದೇ ಅಯೋಮಯವಾಗುತ್ತದೆ. ಪ್ರಬುದ್ಧತೆಯು ಒಂದು ಮನಸ್ಥಿತಿಯೇ. ಆದರೆ ಈ ಮನಸ್ಥಿತಿಯನ್ನು ಹೊಂದಲು ಹಿಂದಿನ ನಮ್ಮ ಹಿರಿಯರು ಹೇಳುತ್ತಿದ್ದಂತೇ ‘ಹಿಂದೆ ಮುಂದೆ ಸುಟ್ಟಿರಬೇಕು.’ ಅಂದರೆ ಹಲವು ಕ್ಲಿಷ್ಟ ಸಂದರ್ಭಗಳನ್ನು ಎದುರಿಸಿ, ಘಟನೆ ಸಂಘಟನೆಗಳಲ್ಲಿ ತೊಡಗಿಸಿಕೊಂಡು ‘ಹಾಗಲ್ಲ, ಹೀಗೆ’ ಎಂಬ ಸರಿತಪ್ಪುಗಳ ವಿವೇಚನೆ ನಡೆಸಿರಬೇಕು. ಪಾಠ ಕಲಿತು ಪರೀಕ್ಷೆಗೆ ಸಿದ್ಧವಾಗಲು ಬದುಕೇನೂ ಶಾಲಾ ಕಾಲೇಜುಗಳಲ್ಲ! ಬದುಕಿನ ಅಖಾಡದಲ್ಲಿ ಮೊದಲೇ ಪರೀಕ್ಷೆ; ಆನಂತರ ಪಾಠ!! ಹಾಗಾಗಿ ಪಕ್ವತೆಯೆಂಬುದು ವ್ಯಕ್ತಿಗತ ಬೆಳವಣಿಗೆಯ ಉಪಫಲವಾಗಿದ್ದು, ಇದು ನಮ್ಮ ಪ್ರತಿಯೊಂದು ನಡೆ ನುಡಿಗಳಲ್ಲೂ ವ್ಯಕ್ತವಾಗುವಂಥದು. ತಪ್ಪುಗಳಿಗೆ ಹೊಣೆ ಹೊರುವ ಗುಣವಾಗಲೀ ಪರಿಸ್ಥಿತಿಗಳಿಗೆ ನಾವು ನೀಡುವ ಪ್ರತಿಕ್ರಿಯೆಯಾಗಲೀ ‘ನಾವು ಯಾರು?’ ಎಂಬುದನ್ನು ಪ್ರತಿಬಿಂಬಿಸುವುದು. ಸಂಕಷ್ಟಗಳ ಸಮಯದಲ್ಲಿ ಅಥವಾ ನಕಾರಾತ್ಮಕ ಮನಸ್ಥಿತಿಯ ಜನರೊಂದಿಗೆ ಒಡನಾಡುವಾಗಲೀ ನಮ್ಮ ಪಕ್ವತೆಯು ಪರೀಕ್ಷೆಗೊಳಪಡುವುದು. ಇಂಥ ಸಂಕಷ್ಟಗಳು ಯಾವುದೇ ಆಗಿರಬಹುದು. ಹಣಕಾಸಿನ ಮುಗ್ಗಟ್ಟೇ ಇರಬಹುದು, ಕುಟುಂಬದ ಸದಸ್ಯರೊಂದಿಗೆ ಯೋಜನೆಗಳನ್ನು ರೂಪಿಸುವಾಗಲೇ ಇರಬಹುದು, ವೃತ್ತಿಯನ್ನು ನಿರ್ವಹಿಸುವ ಜಾಗದಲ್ಲಿ ನಮ್ಮದಲ್ಲದ ತಪ್ಪಿಗಾಗಿ ಆರೋಪಗಳನ್ನು ಹೊತ್ತುಕೊಳ್ಳುವಾಗಲೇ ಇರಬಹುದು. ಇಲ್ಲೆಲ್ಲಾ ನಮ್ಮ ನಡೆ ನುಡಿ, ವ್ಯಕ್ತಿತ್ವ ವರ್ತನೆ, ಹಾವಭಾವ, ಇರುವಿಕೆ ತೋರುವಿಕೆ, ಸಹವರ್ತಿಗಳೊಂದಿಗೆ ಅಳಲುಗಳನ್ನು ವ್ಯಕ್ತಪಡಿಸುವಾಗಿನ ನಮ್ಮ ಬಿಹೇವಿಯರು, ಪ್ರಶ್ನೋತ್ತರ ಧಾಟಿ, ಒಬ್ಬರೇ ಇದ್ದಾಗಿನ ಅದದೇ ವರ್ತನ ಆವರ್ತನಗಳು, ಪ್ರಕರಣವನ್ನು ನಿಭಾಯಿಸುವ ರೀತಿನೀತಿ ಎಲ್ಲವೂ ಈ ಪ್ರಬುದ್ಧತೆಯ ಅಳತೆಗೋಲು. Maturity is, when someone hurts you and you, try to understand their situation and don’t hurt them back ಎಂಬುದೊಂದು ಆತ್ಮಬೋಧೆ. ಅವರು ಹರ್ಟಿಸಿದರೆಂದು ನಾವೂ ಅವರ ಮಟ್ಟಕ್ಕೆ ಇಳಿಯಬಾರದು. ಅವರೇಕೆ ಹಾಗೆ ವರ್ತಿಸಿದರೆಂಬ ಕಾರಣಗಳನ್ನು ನಮ್ಮನ್ನೂ ಸೇರಿಸಿಕೊಂಡು ಪ್ರಶ್ನಿಸಿಕೊಳ್ಳಬೇಕು. ಇಷ್ಟು ದಿವಸ ಹಾಗಿಲ್ಲದಿದ್ದವರು ಇಂದೇಕೆ ಹಾಗೆ ನಡೆದರು? ಮತ್ತು ನುಡಿದರು? ನಾನೇ ಎಲ್ಲೋ ತಪ್ಪಿರಬೇಕು ಅಥವಾ ಬೇರಾವುದೋ ಕಾರಣಕ್ಕಾಗಿ ಅವರ ಮೂಡು ಸರಿಯಿಲ್ಲದಿರಬಹುದು. ವ್ಯಗ್ರಗೊಂಡ ಹತಾಶ ಮತ್ತು ನಿರಾಶ ಮನಸ್ಥಿತಿಯಲ್ಲಿರುವವರು ಸರಿಯಾಗಲು ಸಮಯ ಹಿಡಿಯುವುದರಿಂದ ತಕ್ಷಣ ಪ್ರತಿಕ್ರಿಯಿಸಿ, ‘ನೀನು ತಾನು’ ಎಂದು ನಾವೂ ಕೂಗಾಡಿ, ಅವರ ತಪ್ಪುಗಳನ್ನು ಎತ್ತಿ ತೋರಿಸುತ್ತಾ, ಅಪಕ್ವಗೊಳ್ಳಬಾರದು. ಇಲ್ಲೇ ಪಕ್ವತೆಯ ಪರಿಶೀಲನ ಮತ್ತು ಸಮತೋಲನ. ಕದಡಿದ ನೀರು ತಿಳಿಯಾಗಲು ಏನೂ ಮಾಡಬೇಕಿಲ್ಲ, ಕಾಯಬೇಕು. ಸಮಯ ಸರಿಯಬೇಕು. ಆಗ ತಂತಾನೇ ತಿಳಿಯಾಗುವುದು. ತಿಳಿಯಾಗಲು ನಾವು ಏನೂ ಮಾಡಬೇಕಿಲ್ಲ, ಯಾರೋ ಕಲ್ಲೆಸೆದರೆಂದು ನಾವೂ ಇನ್ನೊಂದು ಕಲ್ಲನೆಸೆದರೆ, ತಿಳಿಯಾಗುವುದು ತಾನೇ ಹೇಗೆ? ನಿಂತ ನೀರಿಗೆ ಕಲ್ಲು ಎಸೆದಷ್ಟೂ ರಾಡಿಯಾಗುವುದು ಹೆಚ್ಚು; ಮನಸಿನಲ್ಲಿ ತರಂಗಗಳೆದ್ದು, ಹಿಂಸಿಸುವುದು ಖಚಿತ. ಅದಕಾಗಿ ಹೊರಗಲ್ಲ, ನಮ್ಮೊಳಗೆ ಪ್ರಯಾಣಿಸಬೇಕು. ಆತ್ಮಾವಲೋಕನ ಎಂದರೆ ಇದೇ. ನಮ್ಮ ದುರ್ಬಲತೆಗಳನ್ನು ಒಪ್ಪಿಕೊಂಡಾಗಲೇ ಗಟ್ಟಿಯಾಗುವುದು ಜೊತೆಗೆ ಮುಂದಿನ ದಾರಿ ಯಾವುದೆಂದು ಅರಿವಾಗುವುದು. ಇಂಥಲ್ಲಿಯೇ ವಿನೀತಭಾವ ಅಂಕುರಿಸುವುದು. ‘ಫರ್‌ಗೀವ್ ಅಂಡ್ ಫರ್‌ಗೆಟ್’ ಎಂಬ ಮಾತಿನಂತೆ, ಕ್ಷಮಿಸುವುದು ಉತ್ತಮ ; ಮರೆತು ಬಿಡುವುದು ಸರ್ವೋತ್ತಮ.
ಗೀತೆಯಲ್ಲಿ ಕರ್ತವ್ಯ ಬೋಧೆ ಮಾಡುವ ಎರಡನೇ ಅಧ್ಯಾಯದ ನಲವತ್ತೇಳನೇ ಶ್ಲೋಕದ ಒಳಾರ್ಥವನ್ನು ಪರಿಭಾವಿಸಬೇಕು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಮಾ ಕರ್ಮಫಲ ಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ|| ಕರ್ಮಣ್ಯೇವಾಧಿಕಾರಸ್ತೇ: ನಿನಗೆ ನಿನ್ನ ಕರ್ತವ್ಯವನ್ನು ಮಾಡುವುದರಲ್ಲಿ ಮಾತ್ರವೇ ಹಕ್ಕಿದೆ. ಮಾ ಫಲೇಷು ಕದಾಚನ: ಆದರೆ ಆ ಕರ್ಮದ ಫಲಿತಾಂಶದ ಮೇಲೆ ನಿನಗೆ ಎಂದಿಗೂ ಯಾವುದೇ ಹಕ್ಕಿಲ್ಲ. ಮಾ ಕರ್ಮಫಲ ಹೇತುರ್ಭೂಃ: ಫಲದ ಆಸೆಯಿಂದ ನೀನು ಕರ್ಮವನ್ನು ಮಾಡಬೇಡ (ಫಲಕ್ಕೆ ನೀನೇ ಕಾರಣನೆಂದು ಭಾವಿಸಬೇಡ). ಮಾ ತೇ ಸಂಗೋಸ್ತ್ವಕರ್ಮಣಿ: ಹಾಗೆಯೇ, ಫಲ ಸಿಗುವುದಿಲ್ಲವೆಂದು ಮಾಡುವ ಕೆಲಸ (ಕರ್ಮ) ವನ್ನು ನಿಲ್ಲಿಸಬೇಡ. ಫಲದ ನಿರೀಕ್ಷೆಯಿಲ್ಲದೆ, ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ನಮ್ಮ ಕರ್ತವ್ಯವನ್ನು ನಾವು ಮಾಡಿಕೊಂಡು ಹೋಗುವುದೇ ಪರಿಪೂರ್ಣ ಪರಿಪಕ್ವತೆ. ಗೆಲುವು-ಸೋಲು, ಲಾಭ-ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಮುನ್ನಡೆಯುವುದೇ ನಿಜವಾದ ಕರ್ಮಯೋಗ.
ನಮ್ಮ ಮಿತಿ ಮತ್ತು ದೌರ್ಬಲ್ಯಗಳನ್ನು ನಾವಷ್ಟೇ ಕಂಡುಕೊಳ್ಳಲು ಸಾಧ್ಯ. ನಮ್ಮ ಸಾಮರ್ಥ್ಯವನ್ನು ಇತರರು ಗುರುತಿಸಬೇಕು. ಹಾಗೆ ಗುರುತಿಸುವುದು ಅವರ ದೊಡ್ಡತನವಷ್ಟೇ. ಹಾಗಾದಾಗ ನಾವು ಗರ್ವ ಪಟ್ಟರೆ ಆಗದು, ಪರಿಪಕ್ವತೆ ಆಗಲಾರದು. ಮೌಲ್ಯಗಳ ಬದುಕೇ ಪ್ರಬುದ್ಧತೆಯನ್ನು ತಂದು ಕೊಡುವಂಥದು. ಇದಕ್ಕಾಗಿ ಸಾಕಷ್ಟು ಸಿದ್ಧತೆ ಮತ್ತು ಬದ್ಧತೆ ಬೇಕಾಗುವುದು. ‘ನಾನು ಮಾತ್ರ ಸರಿ’ ಎಂದುಕೊಳ್ಳದೇ ‘ಇತರರೂ ಸರಿ ಇರಬಹುದು’ ಎಂದು ಒಪ್ಪಿಕೊಳ್ಳುವಲ್ಲಿ ಪಕ್ವತೆಯಿದೆ. ಮೊಗ್ಗಾಗಿ, ಹೂವಾಗಿ, ಹೀಚಾಗಿ, ಕಾಯಾಗಿ, ದೋರುಗಾಯಾಗಿ ಹಣ್ಣಾಗುವಾಗಲೂ ಅದು ತಿನ್ನಲು ಪಕ್ವವಾಗಬೇಕು. ಹಾಗೆ ನಮ್ಮ ಬದುಕು. ಸಾರಾಸಾರ ವಿವೇಚನೆಯಿಂದ ಬಾಳುವಾಗ ಸದಸದ್ವಿವೇಕ ನಮ್ಮ ಕೈ ಹಿಡಿದು ನಡೆಸುವುದಿದೆಯಲ್ಲ, ಅದು ಪರಿಪಕ್ವವಾದುದು. ಕಾರಣ ಹೇಳದೇ ನೆಪಗಳನ್ನು ಹುಡುಕದೇ ಕೆಲಸ ಮಾಡುವುದು, ಕೆಲಸದಲ್ಲಿ ಚಿಕ್ಕದು, ದೊಡ್ಡದು ಎಂಬ ಭೇದವಿಲ್ಲ, ಚೆನ್ನಾಗಿ ಮಾಡಿದ ಎಲ್ಲ ಕೆಲಸವೂ ದೊಡ್ಡದೇ ಎಂದಂದುಕೊಳ್ಳುವುದು ಪಕ್ವತೆ. ಇತರರ ದುರ್ಬಲತೆಗಳನ್ನು ಒಪ್ಪಿಕೊಂಡು, ಅದನ್ನು ಎತ್ತಾಡದೇ ಯಾರೂ ಪರಿಪೂರ್ಣರಲ್ಲ, ಜೀವನವೆಂದರೆ ಪರಿಪೂರ್ಣತೆಯತ್ತ ಸಾಗುವ ದಾರಿ ಎಂದು ಆಲೋಚಿಸುವುದು ಪಕ್ವತೆ. ತಪ್ಪುಗಳ ಹೊಣೆ ಹೊರುವುದು ಕೂಡ ಪಕ್ವತೆ. ಪರಿಪಕ್ವಗೊಂಡವರು ಸಮಸ್ಯೆಗಳಿಗೆ ಇತರರನ್ನು ದೂರದೇ, ಪರಿಹಾರ ಹುಡುಕುವರು. ದೂರುವ ಮುನ್ನ ದಾಟಿದರೆ ಚೆನ್ನ ಎಂದವರಿಗೆ ಬದುಕು ಹೇಳಿಕೊಟ್ಟಿರುತ್ತದೆ. ಸಾಮಾನ್ಯವಾಗಿ ನಮ್ಮ ಪಕ್ವತೆಯನ್ನು ಪರೀಕ್ಷೆ ಮಾಡುವ ಸಂದರ್ಭಗಳಲ್ಲಿ ಮುಖ್ಯವಾದ ಮೂರನ್ನು ಪಟ್ಟಿ ಮಾಡುವುದಾದರೆ, ಮೊದಲನೆಯದು ನಮ್ಮ ಮನೆ ಮತ್ತು ಕುಟುಂಬ ಸಮುದಾಯ, ನೆಂಟರಿಷ್ಟರು ಮತ್ತು ಆಪ್ತೇಷ್ಟರು. ಎರಡನೆಯದು ನಾವು ವೃತ್ತಿಯನ್ನು ನಿರ್ವಹಿಸುವ ಸ್ಥಳ ಮತ್ತದಕ್ಕೆ ಸಂಬಂಧಿಸಿದ ಅಧಿಕಾರಿ-ನೌಕರ ಶ್ರೇಣೀಕರಣ ಮತ್ತು ಸಹೋದ್ಯೋಗಿ ವರ್ಗ. ಮೂರನೆಯದು ಇವೆರಡರಾಚೆಗಿನ ಸಮಾಜ, ಸಾರ್ವಜನಿಕ ಜನ ಜೀವನ. ಈ ಮೂರೂ ಬೇರೆ ಬೇರೆಯಲ್ಲವಾದರೂ ನಮ್ಮ ತಿಳಿವಳಿಕೆಗೋಸ್ಕರವಾದರೂ ಇಂಥ ಕೃತಕ ವಿಭಜನೆಯನ್ನು ಮಾಡಿಕೊಳ್ಳಬೇಕಾಗುವುದು. ಮನೆ ಮತ್ತು ಕುಟುಂಬದಲ್ಲಿ ನನ್ನ ಪಾತ್ರವೇನು? ಸ್ಥಾನ ಮತ್ತು ಜವಾಬುದಾರಿಗಳೇನು? ಪ್ರೀತಿ ಮತ್ತು ಗೌರವಗಳನ್ನು ಕೊಟ್ಟು ತೆಗೆದುಕೊಳ್ಳುವುದು ಹೇಗೆ? ಎಂಬುದನ್ನು ಅನುಭವದಿಂದ ತಿಳಿಯಬೇಕು. ಇಂಥಲ್ಲಿ ದೊಡ್ಡವರೆನಿಸಿಕೊಂಡವರು ಸೋಲಬೇಕು ಮತ್ತು ಪುಟ್ಟವರೆನಿಸಿಕೊಂಡವರು ದೊಡ್ಡವರಿಗೆ ಗೌರವ ಕೊಡಬೇಕು. ಇಲ್ಲದಿದ್ದರೆ ವಿಶ್ವಾಸ ಮಮತೆಗಳ ಗೂಡು ಮಸಣದ ಬೀಡಾಗುವುದು. ಮನೆಯ ದೊಡ್ಡವರು ದರ್ಪ ದೌಲತ್ತುಗಳಿಂದಲೂ ಪುಟ್ಟವರು ಬೇಜವಾಬ್ದಾರಿಯಿಂದಲೂ ವರ್ತಿಸಿದಾಗ ಅಲ್ಲೊಂದು ನಾಟಕರಂಗ ಶುರುವಾಗುವುದು. ಸಹಜತೆ ಮಾಯವಾಗಿ ಕೃತಕಾಭಿನಯವೇ ವಿಜೃಂಭಿಸುವುದು. ತ್ಯಾಗದಿಂದ ನೆಮ್ಮದಿಯನ್ನು ಗಳಿಸಿಕೊಳ್ಳುವ ಬದಲು ಸ್ವಾರ್ಥದಿಂದ ಮನಸ್ತಾಪಗಳು ಹೆಚ್ಚಾಗಿ ಮನೋರೋಗ ಉಲ್ಬಣವಾಗುವುದು. ಇಂಥಲ್ಲಿ ಪಕ್ವತೆಯೆಂಬುದು ಮರೀಚಿಕೆ. ಕೇವಲ ನಮ್ಮ ‘ಮೂಗಿನ ನೇರ’ವೇ ಬದುಕಾಗಿ ಎಲ್ಲೆಲ್ಲೂ ಅಶಾಂತಿ ಮತ್ತು ಅಸ್ವಸ್ಥತೆ. ಇನ್ನು ವೃತ್ತಿ ಬದುಕಿನ ಪ್ರಬುದ್ಧತೆಯ ಸ್ವರೂಪವೇ ಬೇರೆ. ಹಲವರು ‘ವೃತ್ತಿಯೂ ಬದುಕು’ ಎಂದೂ ಇನ್ನು ಕೆಲವರು ‘ವೃತ್ತಿಯೇ ಬದುಕು’ ಎಂದೂ ತಿಳಿದವರು. ಬದುಕಲು ಒಂದು ವೃತ್ತಿ ಬೇಕು ಅಷ್ಟೇ. ವೃತ್ತಿಯನ್ನು ನಿರ್ವಹಿಸುವ ಜಾಗದಲ್ಲಿ ವೈಯಕ್ತಿಕ ಭಾವಗಳಿಗೆ ಆಸ್ಪದ ಇರಬಾರದು ಎನ್ನುವ ಪಕ್ಷದವರು ವೃತ್ತಿಯನ್ನು ಪ್ರೀತಿಸುತ್ತಿರುವುದಿಲ್ಲ; ಬರುವ ಸಂಬಳವನ್ನಷ್ಟೇ ಗಮನಿಸುತ್ತಿರುತ್ತಾರೆ. ಎಲ್ಲೋ ಕೆಲವರು ಮಾತ್ರ ವೃತ್ತಿಯೇ ಬದುಕೆಂದುಕೊಂಡು ನಿಗದಿಪಡಿಸಿದ ಕೆಲಸಕಾರ್ಯಗಳಾಚೆಗೂ ಕಣ್ಣು ಹಾಕುತ್ತಾರೆ, ಕೈಲಾದ ನೆರವು ನೀಡುತ್ತಾರೆ ಮತ್ತು ಮಾಡುವ ಕಾಯಕದಲ್ಲೇ ಎಲ್ಲ ಸುಖಶಾಂತಿಗಳನ್ನು ಕಾಣಲು ಹಾತೊರೆಯುತ್ತಾರೆ. ಇಂಥವರಿಗೆ ಮೇಲಿನ ಅಧಿಕಾರಿ ಎಂಬುವವರಾಗಲೀ ನಿಗದಿಪಡಿಸಿದ ಸಮಯ ಚೌಕಟ್ಟುಗಳಾಗಲೀ ಮುಖ್ಯವಲ್ಲ; ಆತ್ಮಸಂತೋಷ ಮುಖ್ಯ. ತಾವು ಪಡೆದುಕೊಳ್ಳುವ ವೇತನದಲ್ಲಿ ಕನಿಷ್ಠ ಅರ್ಧಭಾಗದಷ್ಟಾದರೂ ನ್ಯಾಯ ಸಲ್ಲಿಸುವ ಉಮೇದಿನವರಿವರು. ತಮ್ಮ ಸಂಸ್ಥೆ, ಕಂಪೆನಿ, ಕಾರ್ಖಾನೆಗಳ ಅಭ್ಯುದಯಕ್ಕೆ ಟೊಂಕ ಕಟ್ಟಿ ನಿಂತ ಇವರು ಯಾವುದೇ ಕೆಲಸಕಾರ್ಯಗಳನ್ನು ಮಾಡಲು ಹಿಂಜರಿಯರು. ಅನ್ನ ನೀಡುವ ಮನೆ ಚೆನ್ನಾಗಿದ್ದರೆ ಅನ್ನ ಬೇಯುವ ಮನೆ ಸುಖವಾಗಿರುತ್ತದೆಂಬ ಧೋರಣೆ. ನೀತಿ ನಿಯಮ, ಕಾನೂನುಗಳ ಕಟ್ಟಳೆಗಳಿಗಿಂತಲೂ ಸತ್ಯಕ್ಕೆ, ನ್ಯಾಯಕ್ಕೆ, ಮನಸ್ಸಾಕ್ಷಿಗೆ ನಿಷ್ಠೆಯಿಟ್ಟ ಇವರದು ಮರ್ಮದ ಮೆಹನತ್ತಲ್ಲ; ಧರ್ಮದ ಹಾದಿ. ಹೀಗಿರುವಾಗ ಕೆಲಸ ಮಾಡುವ ಜಾಗದಲ್ಲಿ ಒಂದು ಮಾತು ಬರುವುದೂ ಅದೊಮ್ಮೆ ನಮಗೆ ಅಹಿತವಾಗುವುದೂ ತಪ್ಪು ಮಾಡದಿದ್ದರೂ ಆರೋಪ ಹೊತ್ತುಕೊಳ್ಳುವುದು, ಅಪರಾಧಿ ಸ್ಥಾನದಲ್ಲಿ ನಿಲ್ಲುವುದು ಸಹಜ. ಆಗ ನಮ್ಮ ವರ್ತನೆ ಹೇಗಿರುತ್ತದೆ? ಅದನ್ನು ಯಾವ ಮನಸ್ಥಿತಿಯಿಂದ ಸ್ವೀಕರಿಸುತ್ತೇವೆ ಎಂಬುದೇ ಮೆಚೂರಿಟಿಯ ಅಳತೆಗೋಲು. ಇಂಥಲ್ಲಿ ಮೌನವು ಅನರ್ಥಕ್ಕೂ ಮಾತು ಅಪಾರ್ಥಕ್ಕೂ ಎಡೆಮಾಡಿಕೊಡುವ ದುಃಸ್ಥಿತಿ. ಏಕೆಂದರೆ ಅರ್ಥ ಮಾಡಿಕೊಳ್ಳುವುದು ಸುಲಭ; ಅರ್ಥೈಸುವುದು ಬಲು ಕಷ್ಟ. ನಮ್ಮನ್ನು ನಾವೇ ‘ಜಸ್ಟಿಫೈ’ ಮಾಡಿಕೊಳ್ಳುವುದು ಅಹಮಾಗಿ ಬಿಡುತ್ತದೆ. ಅದುವರೆಗಿನ ಕೆಲಸ ಕಾರ್ಯಗಳ ಮಹತ್ವವೆಲ್ಲಾ ಮಸುಳಿಸುತ್ತದೆ. ಸಂಬಳ ಕೊಡುವ ಧಣಿಗಳ ಮೂಡು ಒಂದೇ ರೀತಿಯದಾಗಿರುವುದಿಲ್ಲ. ಇಲ್ಲಿ ಎಲ್ಲವೂ ಪ್ರಸಂಗಾಧಾರಿತ ಮತ್ತು ಸಂದರ್ಭಾನುಸಾರ. ಇಂಥಲ್ಲಿ ಪರಿಪಕ್ವತೆಯೆಂದರೆ, ನಾವೇ ಬೇರೆ; ಕೆಲಸ ಮಾಡುವ ನಮ್ಮೊಳಗಿನ ನೌಕರನೇ ಬೇರೆ ಎಂಬ ದ್ವೈತಭಾವವನ್ನು ರೂಢಿಸಿಕೊಳ್ಳುವುದು ಅರ್ಥಾತ್ ಮಾತನ್ನೂ ಆರೋಪವನ್ನೂ ಅವಮಾನವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳದೇ ಇರುವುದು. ನನ್ನಿಂದಲೂ ತಪ್ಪಾಗಿರಬಹುದೇನೋ! ಎಂಬ ಅಂತರಾವಲೋಕನವು ಅಧಿಕಾರಿಗಳಲ್ಲೂ ನೌಕರರಲ್ಲೂ ಮೂಡಿದರಷ್ಟೇ ಪಕ್ವತೆ. ಅಸಮಾಧಾನವನ್ನು ಸಾಧಿಸಿಕೊಂಡು ಹೋಗುವುದಿದೆಯಲ್ಲ ಅದು ಅಪರಿಪಕ್ವತೆ. ಎಲ್ಲಕೂ ಕಾಲವೇ ದಿವ್ಯೌಷಧ. ಮನಸಿಗಾದ ಗಾಯ ಮಾಯುವುದು ನಿಧಾನ. ಆದರೆ ಅದು ಮಾಯುವಂತೆ ನೋಡಿಕೊಳ್ಳುವ ಹೊಣೆಯೂ ನಮ್ಮದೇ. ಕೆಲಸ ಮಾಡುವ ಸ್ಥಳದಲ್ಲಿ ನೌಕರರು ಕಣ್ಣು ಮುಚ್ಚಿಕೊಂಡಿರಬೇಕು; ಅಧಿಕಾರಿಗಳು ಕಿವಿ ಮುಚ್ಚಿಕೊಂಡಿರಬೇಕು ಎಂಬೊಂದು ತಮಾಷೆಯ ಮಾತೊಂದಿದೆ. ಅಂದರೆ ಹತ್ತಾರು, ನೂರಾರು ಮಂದಿ ಕೆಲಸ ಮಾಡುವ ಸ್ಥಳದಲ್ಲಿ ಏನೋ ಬರುತ್ತದೆ, ಏನೋ ಹೋಗುತ್ತದೆ. ನಮಗದರ ಹಿನ್ನೆಲೆ ಮುನ್ನೆಲೆ ತಿಳಿದಿರುವುದಿಲ್ಲ. ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡಬೇಕು ಎಂಬಂತೆ, ಒಟ್ಟಿಗೆ ಕಲೆತು, ಕುಳಿತು ನಿಧಾನವಾಗಿ ಮಾತನಾಡಿದಾಗ ಅಸಹನೆ ಬಗೆಹರಿಯುತ್ತದೆ, ನಾವಂದುಕೊಂಡಿದ್ದೆಲ್ಲಾ ನಾವು ನೋಡಿದ್ದೆಲ್ಲಾ ನಿಜವಲ್ಲ ಎಂಬ ತಥ್ಯ ಹೊಳೆಯುತ್ತದೆ.
ಮೂರನೆಯದಾದ ಸುತ್ತಲ ಸಮಾಜ ಅಂದರೆ ಸಾರ್ವಜನಿಕ ಜೀವನ. ಇದು ನಂನಮ್ಮ ವೃತ್ತಿ, ಸ್ವಭಾವ ಮತ್ತು ನಡೆವಳಿಕೆಯನ್ನು ಆಧರಿಸಿರುವಂಥದು. ಸಾರ್ವಜನಿಕ ಜೀವನದಲ್ಲಿ ಯಾರಿಗೂ ಟೀಕೆ ಟಿಪ್ಪಣಿ ತಪ್ಪಿದ್ದಲ್ಲ. ಅದನ್ನು ಪ್ರಬುದ್ಧವಾಗಿ ಎದುರಿಸಬೇಕು ಮತ್ತು ನಮ್ಮ ಕೆಲಸಗಳ ಮೂಲಕವೇ ಉತ್ತರಿಸಬೇಕು. ಟೀಕೆಗಳು ಸತ್ತು, ಕೆಲಸಗಳು ಉಳಿದಾಗಲೇ ಅದು ಪರಿಪಕ್ವತೆ. ಕುಟುಂಬದ ಮನಸ್ತಾಪವನ್ನು ಹೇಗೆ ಊರಿಗೆಲ್ಲಾ ಹಂಚದೇ ನಾವೇ ಸರಿಪಡಿಸಿಕೊಳ್ಳುವಲ್ಲಿ ನಿಗಾ ವಹಿಸುತ್ತೇವೆಯೋ ಹಾಗೆಯೇ ನಾವು ಕಾರ್ಯ ನಿರ್ವಹಿಸುವ ಸಂಘ ಸಂಸ್ಥೆಗಳಲ್ಲಿ ಆದ ನೋವನ್ನು ಸಮಾಜಕ್ಕೂ ಉಣಬಡಿಸಬಾರದು. ಅದು ಏನೇ ಆಗಲೀ, ನಮ್ಮ ಸಂಸ್ಥೆಯೆಂಬ ಅಭಿಮಾನ ತೊರೆಯಬಾರದು. ಹೆತ್ತವರು ಒಂದು ಮಾತಾಡುತ್ತಾರೆ, ಹಾಗೆಯೇ ನಮ್ಮನ್ನು ದುಡಿಸಿಕೊಂಡು ಸಂಬಳ ಕೊಡುವವರು ಸಹ. ಹಾಗಾಗಿ ನಮ್ಮ ಮಾತಿಗಿಂತಲೂ ನಮ್ಮ ವರ್ತನೆ ಇಂಥಲ್ಲಿ ಅತಿ ಮುಖ್ಯ. ಅದು ಪ್ರಬುದ್ಧ ರೀತಿಯಲ್ಲಿರಬೇಕು; ಘನತೆಯನ್ನು ಕಾಯ್ದುಕೊಳ್ಳಬೇಕು. ಒಂದು ಮಾತಿಗೆ ರೆಕ್ಕೆ ಪುಕ್ಕ ಸೇರಿ ಅಂತೆಕಂತೆಗಳ ವ್ಯಾಖ್ಯಾನ ಜೊತೆಗೂಡಿ ಸುಳ್ಳುಗಳು ವಿಜೃಂಭಿಸುತ್ತವೆ; ಸತ್ಯ ಸಾಯುತ್ತದೆ. ಅಂದವರು ಮತ್ತು ಅನ್ನಿಸಿಕೊಂಡವರಿಬ್ಬರಿಗಷ್ಟೇ ಗೊತ್ತು. ದುರುದ್ದೇಶ ಜೊತೆಯಾದರೆ ಆರೋಗ್ಯಕರ ಜೀವನಕ್ಕೆ ಕುತ್ತು. ಬಯ್ದವರು ಬೇವಿನಗಿಡವಾದರೆ, ಬಯ್ಯಿಸಿಕೊಂಡವರು ಮಾವಿನಗಿಡವಂತೆ. ಕ್ಷಮಿಸುತ್ತಾ, ಮರೆಯುತ್ತಾ ಮುಂದೊಡಗುವುದೇ ಜೀವನ. ಇದನ್ನು ಅರ್ಥ ಮಾಡಿಕೊಂಡರೆ ಬದುಕು ಸರಳ; ಇಲ್ಲದಿರೆ ದುಸ್ಸಹ.
ಯಾವುದು ಪಕ್ವತೆ, ಯಾವುದು ಅಲ್ಲ ಎಂಬುದನ್ನು ಪಟ್ಟಿ ಮಾಡುವುದಕಿಂತ, ಪರಿಪಕ್ವತೆಯುಳ್ಳವರು ಹೇಗೆ ನಡೆದುಕೊಳ್ಳುತ್ತಾರೆಂದು ಗುರುತಿಸುವುದು ಸುಲಭ. ಇಂಥವರು ಬುದ್ಧಿಗಷ್ಟೇ ಹೃದಯಕ್ಕೂ ಗಮನವೀಯುವವರು. ಯಾವಾಗ ಬುದ್ಧಿಯ ಕೈಗೆ ಮನಸು ಕೊಡಬೇಕು? ಯಾವಾಗ ಮನಸಿನ ಕೈಗೆ ಬುದ್ಧಿಯನ್ನು ನೀಡಬೇಕೆಂದು ತಿಳಿದವರು. ವ್ಯಕ್ತಿತ್ವದ ನಿಜವಾದ ಆಸ್ತಿ ಹಣವಲ್ಲ, ಅದು ಭೌತಿಕ ಪದಾರ್ಥಗಳಿಂದ ನಿಗದಿಗೊಳ್ಳುವುದಲ್ಲ, ಜಾಣುಮೆ ಮತ್ತು ತಾಳುಮೆ ಎಂದು ಅರಿತವರು. ಸಂಕಷ್ಟದ ಸಮಯದಲ್ಲಿ ತನ್ನದೇ ದೋಷಗಳನ್ನು ಗುರುತಿಸಿ, ನಿವಾರಿಸಿಕೊಳ್ಳಲು ದೊರೆತ ಸದವಕಾಶ ಎಂದು ಬಗೆದವರು. Insane people are always sure that they are fine; It is only the sane people who are willing to admit that they are crazy ಎಂಬುದು ನೋರಾ ಎಫ್ರಾನ್ ಎಂಬ ಚಿಂತಕರ ಮಾತು. ಹುಚ್ಚರು ಸದಾ ತಾವು ಸರಿಯೆಂದು ನಂಬುತ್ತಾರೆ; ಆದರೆ ವಿವೇಕಿಗಳು ಮಾತ್ರ ತಾವು ತಪ್ಪಿರಬಹುದು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. Maturity is the ability to reap without apology and not complain when things don’t go well ಎಂಬುದು ಜಿಮ್ ರ‍್ಹೋನ್ ಅವರ ಇಂಥದೇ ಇನ್ನೊಂದು ಮಾತು. ಯಶಸ್ಸಿನಲ್ಲಿ ಅಹಮಿಲ್ಲದೇ ವಿಫಲತೆಯಲ್ಲಿ ದೂರು ಹೇಳದೇ ಬದುಕುವುದಿದೆಯಲ್ಲ ಅದೊಂದು ತಪಸ್ಸು. ನಾವು ಬದಲಿಸಲಾಗದ ಲಕ್ಷ ಲಕ್ಷ ಸಂಗತಿಗಳಿವೆ ಮತ್ತು ವ್ಯಕ್ತಿಗಳಿದ್ದಾರೆಂದು ತಿಳಿದು, ಇಂಥ ಹಲವು ಭ್ರಮೆಗಳನ್ನು ಅರ್ಥ ಮಾಡಿಕೊಳ್ಳುವುದು ಸಹ ಪರಿಪಕ್ವ ಮನಸ್ಥಿತಿಯ ಲಕ್ಷಣ. ಕುಟುಂಬದಲ್ಲಿ ಒಮ್ಮೊಮ್ಮೆ ಮನಸ್ತಾಪಗಳಾಗುವುದು, ಕೆಲಸ ಮಾಡುವ ಜಾಗದಲ್ಲಿ ಅನಿಶ್ಚಿತತೆ, ಒತ್ತಡ, ಅನಾರೋಗ್ಯಕರ ಸ್ಪರ್ಧೆ, ಈಗೋ ಸಂಘರ್ಷಗಳು, ಅಧಿಕಾರಿಗಳ ದರ್ಪ-ದಬ್ಬಾಳಿಕೆಗಳು, ಒಡೆದು ಆಳುವ ಹಿಕಮತ್ತು ಇವೆಲ್ಲವೂ ಇರುತ್ತವೆಂದು ತಿಳಿಯವುದು ಹಾಗೂ ಹೊರಗಿನ ಸಾರ್ವಜನಿಕ ರಂಗದಲ್ಲಿ ಪೈಪೋಟಿ, ಕೀಳರಿಮೆಯಿಂದಾಗಿಯೇ ಹುಟ್ಟುವ ಜಂಭ, ಸತ್ಯ-ನ್ಯಾಯ-ನೀತಿಗಳನ್ನು ಗಾಳಿಗೆ ತೂರಿ ದಿಢೀರ್ ಸಿರಿವಂತರಾಗಿಬಿಡುವ ಹುನ್ನಾರ, ಯಾವ ರೀತಿಯಲ್ಲಾದರೂ ಸರಿ ಗಮನ ಸೆಳೆದು ಹೆಸರು-ಕೀರ್ತಿ-ಪ್ರಶಸ್ತಿ-ಪುರಸ್ಕಾರ ಪಡೆಯುವ ಲಾಬಿ ಈ ಎಲ್ಲವೂ ಎಲ್ಲ ಕಾಲದಲ್ಲೂ ಇರುತ್ತವೆಂದು ಜ್ಞಾನೋದಯಗೊಳ್ಳುವುದು ಅಂಥ ಪರಿಪಕ್ವವಾದವರ ಗುಣಲಕ್ಷಣ. ಎಲ್ಲ ಕ್ಷೇತ್ರಗಳಲ್ಲೂ ತನಗಿಂತ ಮೇಲಿನವರಿಗೆ ನಿಷ್ಠರಾಗಿರಬೇಕಾದ (Accountability) ಉತ್ತರದಾಯಿತ್ವ ಇದ್ದೇ ಇರುವುದು. ಹಾಗಿರುವಾಗ ಕಾರ್ಯದೊತ್ತಡವುಂಟಾಗಿ, ಅದನ್ನು ಸಮರ್ಪಕವಾಗಿ ನಿರ್ವಹಿಸಲು ಆಗದಂಥ ಸಂದರ್ಭದಲ್ಲಿ ಸಿಟ್ಟು ಸೆಡವು, ರೇಗುವಿಕೆ, ಬಯ್ಯುವಿಕೆ, ಹೀಯಾಳಿಸುವಿಕೆ ಸಹಜವೆಂದೂ ಹಾಗೆ ಮೂದಲಿಸಿದವರಿಗೆ ತಮ್ಮ ನಿಜಸಾಮರ್ಥ್ಯಗಳೂ ವೃತ್ತಿಬದ್ಧತೆಗಳೂ ಗೊತ್ತಿರುವುದೆಂದೂ ಇಂಥ ಪಕ್ವಮನದವರು ಬಲ್ಲವರಾಗಿರುತ್ತಾರೆ. ತನ್ನನ್ನು ಇಷ್ಟಪಟ್ಟು ಹೊಗಳಿದರೆ ಮಾತ್ರ ಒಳ್ಳೆಯವರೆಂದೂ ತನ್ನನ್ನು ಕಂಡರಾಗದವರು ನಿಂದಿಸಿದರೆ ಅಂಥವರು ಕೆಟ್ಟವರೆಂದೂ ಯಾವತ್ತೂ ಪಕ್ವಹೃದಯಿಗಳು ತಿಳಿಯವುದಿಲ್ಲ. ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಹೆಚ್ಚು ಸಮಯ ನಿಲ್ಲುವುದಿಲ್ಲ; ಈ ವಿಷ ಅಥವಾ ವಿಷಮ ಪರಿಸ್ಥಿತಿ ಸಹ ಕಾಲಾನಂತರ ಅಳಿದು ಹೋಗುವುದೆಂಬ ನಿರ್ಲಿಪ್ತತೆಯನ್ನು ಪ್ರಬುದ್ಧರು ಹೊಂದಿರುತ್ತಾರೆ. ಪ್ರತಿಯೊಬ್ಬರ ಹುಟ್ಟು, ಮನೆ, ಮನೆತನ, ಕುಟುಂಬ, ಸಮಾಜ, ಸಂಸ್ಕೃತಿ, ಪಡೆವ ವಿದ್ಯೆ-ಜ್ಞಾನ, ಅರಿವು ಅನುಭವ, ಕಲ್ಪನ, ಯೋಚನ, ಭಾವನ, ಆಲೋಚನ ಮತ್ತು ಕಾರ್ಯಶೈಲಿಗಳೆಲ್ಲವೂ ವಿಭಿನ್ನ, ನಮ್ಮ ಹಾಗೆಯೇ! ನಮ್ಮಂತೆಯೇ ಅವರಿಗೂ ನಟಿಸುವುದು ಗೊತ್ತಿದೆ, ನಮ್ಮಂತೆಯೇ ಅವರಿಗೂ ಇನ್ನಷ್ಟು ಮತ್ತಷ್ಟು ಒಳ್ಳೆಯವರಾಗುವ ಮತ್ತು ಎಲ್ಲರಿಗೂ ಬೇಕಾಗುವ ವ್ಯಕ್ತಿಗಳಾಗಬೇಕೆಂಬ ಅವಸರವಿದೆ ಎಂದು ತಿಳಿಯುವುದು ಸಹ ಪ್ರಬುದ್ಧತೆಯೇ. ‘ನನ್ನಲ್ಲಿರುವ ಒಳ್ಳೆಯತನ ಅವರಲ್ಲೂ ಇದೆ; ಅವರಲ್ಲಿರುವ ಕೆಟ್ಟತನ ನನ್ನಲ್ಲೂ ಇದೆ’ ಎಂದು ಬದುಕನ್ನು ಅದರೆಲ್ಲ ಮಗ್ಗಲುಗಳಿಂದ ಅರ್ಥ ಮಾಡಿಕೊಳ್ಳುವ ಕಲೆಯೇ ಪರಿಪಕ್ವತೆ.
ಜೀವಿಯ ವಿಕಾಸವಾಯಿತು; ಅದರಂತೆ ಜೀವಾತ್ಮವೂ ವಿಕಾಸವಾಗಬೇಕು; ನಾನೂ ವಿಕಸಿತಗೊಳ್ಳಬೇಕು. ಹೂವೊಂದು ಪೂರ್ಣ ಪ್ರಮಾಣದಲ್ಲಿ ಅರಳಿದಾಗ ಅದರಿಂದ ತಂತಾನೇ ಸೌಸವ ಸೂಸುವ ತೆರದಲ್ಲಿ ಈ ಪಕ್ವತೆ. ಗಿಡದಿಂದ ಕಿತ್ತ ಮೇಲೂ ಹೂವು ಅರಳುವುದನ್ನು ಮತ್ತು ಘಮಿಸುವುದನ್ನು ನಿಲ್ಲಿಸದು. ಅಂತೆಯೇ ಮರದಿಂದ ಕಿತ್ತರೂ ಕಾಯಿ ಹಣ್ಣಾಗುವುದನ್ನು ತಪ್ಪಿಸಲಾಗದು. ಹಾಗೇ ಒಮ್ಮೆ ಪ್ರಬುದ್ಧತೆಯನ್ನು ತಲಪಿದವರು ಎದುರಾದ ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳುವ ಅವಕಾಶ ಎಂದು ತಿಳಿಯುವರು; ಆಕಾಶದತ್ತ ಮುಖ ಮಾಡಿ ಆರ್ತನಾದ ಮಾಡುವುದಿಲ್ಲ. ನಗು ನಗುತ್ತಲೇ ನೋವುಣ್ಣುತ್ತಾರೆ; ಎಂದೂ ಇನ್ನೊಬ್ಬರಿಗೆ ನೋವನೆಣಿಸುವುದಿಲ್ಲ ಮತ್ತು ನೋವನುಣಿಸುವುದಿಲ್ಲ. ತನ್ನಂತೆಯೇ ಅವರೂ ಪಕ್ವತೆಯ ಹಾದಿಯಲ್ಲಿ ಪ್ರಯಾಣಿಸುತ್ತಿದ್ದಾರೆಂದು ಅರಿಯುತ್ತಾರೆ. ‘ದೊಡ್ಡ ಬಂಡೆಯನ್ನಾರೂ ಎಡಹುವುದಿಲ್ಲ; ಎಡಹುವುದೇನಿದ್ದರೂ ಚಿಕ್ಕ ಪುಟ್ಟ ಕಲ್ಲುಗಳನ್ನೇ’ ಎಂದು ಮನವರಿಕೆ ಮಾಡಿಕೊಳ್ಳುತ್ತಾರೆ. ಹರ್ಟ್ ಮಾಡಿದವರ ಹಾರ್ಟನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ತೋರುತ್ತಾರೆ. ನಾವು ಇನ್ನೊಬ್ಬರಿಗೆ ಹರ್ಟ್ ಮಾಡಿದಾಗಲೂ ಅವರೂ ನನ್ನಂತೆಯೇ ನೋವುಣ್ಣುತ್ತಾರೆಂಬುದನ್ನು ಅರಿಯುತ್ತಾರೆ. ಉಳಿದವರಿಂದ ನಾನು ಯಾರಿಂದ ಏನನ್ನು ಇಷ್ಟಪಡುವುದಿಲ್ಲವೋ ಅದನ್ನು ನಾನೂ ಮಾಡದಿರುವುದೇ ಪರಿ ಪರಿ ಪಕ್ವತೆ; ಇದು ವಿದ್ಯೆಯಲ್ಲ, ಜ್ಞಾನವಲ್ಲ, ಕೌಶಲ ಮೊದಲೇ ಅಲ್ಲ. ಇದು ಶುದ್ಧವಾಗಿ ಬದುಕು ಮತ್ತು ನೆಮ್ಮದಿಯ ಸರಕು; ಸುಮ್ಮನೇತಕೆ ಇಲ್ಲದ ಕ್ಯಾತೆಗಳ ಕೆದಕು!
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ


