ಪುಸ್ತಕ-ನೋಟ

ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’

Share Button

ಮಾರ್ಚ್ 29, 2026 ರಂದು, ಡಾ. ಶೈಲಾರಾಣಿ ಬೋಳಾರ್ ಅವರು ಬರೆದ ಕಿರುಲೇಖನಗಳ ಗುಚ್ಛ ‘ಮನಸಿನ ಪುಟಗಳ ನಡುವೆ’ ಪುಸ್ತಕದ ಲೋಕಾರ್ಪಣೆ ನಡೆಯಿತು. ಸುರಹೊನ್ನೆಯ ಸಂಪಾದಕರಾದ ಶ್ರೀಮತಿ ಹೇಮಮಾಲಾ ಅವರು ಕೃತಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಬರಹಗಾರರಾದ ಡಾ. ಜಯಶ್ರೀ ಅವರು ಕೂಡಾ ಕೃತಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೃತಿ ಬಿಡುಗಡೆಯ ದಿನ ಪುಸ್ತಕದ ವಿಮರ್ಶೆ ಮಾಡಬೇಕೆಂದು ಪುಸ್ತಕದ ಲೇಖಕಿ ಹಾಗೇ ನನ್ನ ಆತ್ಮೀಯರೂ ಆದ ಶೈಲಾ ಮೇಡಂ ನನ್ನಲ್ಲಿ ವಿನಂತಿಸಿದ್ದರು. ಆ ದಿನ ಸಾಹಿತ್ಯಾಸಕ್ತರ ಎದುರಲ್ಲಿ ಹಂಚಿಕೊಂಡ ನನ್ನ ಮಾತುಗಳನ್ನು ಲೇಖನ ರೂಪಕ್ಕೆ ಇಳಿಸುತ್ತಿದ್ದೇನೆ.

“ಮನಸಿನ ಪುಟಗಳ ನಡುವೆ” ಪುಸ್ತಕ- ಶೈಲಾ ಅವರ ಚೊಚ್ಚಲ ಕೃತಿ. ಈ ಪುಸ್ತಕದಲ್ಲಿರುವ ಎಲ್ಲಾ ಲೇಖನಗಳನ್ನು ಒಂದಕ್ಷರ ಬಿಡದೆ ಓದಿದ್ದೇನೆ. ಪ್ರತಿಯೊಂದು ಲೇಖನದ ಬಗ್ಗೆಯೂ ಹಂಚಿಕೊಳ್ಳುವ ವಿಚಾರಗಳು ಬಹಳಷ್ಟಿವೆ. ಕೆಲವು ವರ್ಷಗಳ ಹಿಂದಿನ ಮಾತು. ಶೈಲಾ ಮೇಡಂ ಒಂದು ದಿನ ನನ್ನ ಬಳಿ ಬಂದು “ಮೇಡಂ, ನಿಮ್ಮ ಹತ್ತಿರ ಒಂದು ಕೋರಿಕೆ. ನಾನು ಒಂದೆರಡು ಲೇಖನ ಬರೆದಿದ್ದೇನೆ. ನನ್ನದು ಸಿಂಪಲ್ ಕನ್ನಡ. ನನಗೆ ತೋಚಿದಂತೆ ಬರೆದಿದ್ದೇನೆ. ಓದಿ ತಿದ್ದುಪಡಿ ಮಾಡ್ತೀರಾ?’ ಅಂತ ಕೇಳಿದರು. ಸಂತೋಷದಿಂದ ಮಾಡಿಕೊಟ್ಟೆ. ಆ ಲೇಖನಗಳು ಸುರಹೊನ್ನೆ ಇ-ಪತ್ರಿಕೆಯಲ್ಲಿ ಪ್ರಕಟವಾದವು. ಶೈಲಾ ಮೇಡಂ ಒಳಗೆ ಅವಿತು ಕುಳಿತಿದ್ದ ಲೇಖಕಿ ನನಗೆ ಪರಿಚಯವಾಗಿದ್ದು ಆಗ!ಆದರೆ ಅದಕ್ಕೂ ಮೊದಲು ಅವರು ಬರೆಯುತ್ತಿದ್ದರು ಅನ್ನುವ ವಿಷಯ ತಿಳಿದಿರಲಿಲ್ಲ. ಅದು ಗೊತ್ತಾಗಿದ್ದು ಅವರೇ ಹಂಚಿಕೊಂಡ “ನನ್ನ ಬರವಣಿಗೆಯ ಪಯಣ” ಲೇಖನ ಓದಿದ ಬಳಿಕ. “ನನಗೆ ಬರೆಯಲು ತುಂಬಾ ಇದೆ. ನಿವೃತ್ತಿಯ ಬಳಿಕ ಬರೆಯುತ್ತೇನೆ” ಅಂದಿದ್ರು ಒಮ್ಮೆ. ನುಡಿದಂತೆ ನಡೆದಿದ್ದಾರೆ. ಇಂದು ಪುಸ್ತಕ ಬಿಡುಗಡೆ ಆಗುವ ಮಟ್ಟಕ್ಕೆ ಏರಿದ್ದಾರೆ.

ಈ ಪುಸ್ತಕದ ಒಳಹೊಕ್ಕಾಗ  ನನಗನಿಸಿದ್ದು ಹೀಗೆ. ಇಲ್ಲೊಬ್ಬಳು ಗೆಳತಿ, ನನ್ನ ಬಳಿ ಕುಳಿತು ತನ್ನ ಜೀವನದ ಕೆಲ ಘಟನೆಗಳನ್ನು, ಕೆಲವು ಅನುಭವಗಳನ್ನು, ತನ್ನೊಳಗನ್ನು ಹಂಚಿಕೊಂಡಂತಹ ಭಾವ. ತಮ್ಮ ಬಾಲ್ಯದ  ದಿನಗಳಲ್ಲಿದ್ದ ಕೌಟುಂಬಿಕ ಜೀವನ, ಅಂದಿನ ಸಾಮಾಜಿಕ ಜನಜೀವನ ಹೇಗಿತ್ತು ಅನ್ನುವ ಚಿತ್ರಣ ಅವರ ಬರಹಗಳಲ್ಲಿ ಕಾಣಸಿಗುತ್ತವೆ. ಐಸ್-ಕ್ಯಾಂಡಿ ತಿಂದದ್ದು, ಬೋರ್-ವೆಲ್ ನೀರು ಕುಡಿಯುತ್ತಿದ್ದದ್ದು, ದೀಪಾವಳಿಯ ಅಂಗಡಿಪೂಜೆಯ ಸಂದರ್ಭ ಲಡ್ಡು ಕೊಡುತ್ತಾರೆಂದು ಅಂಗಡಿಗಳಿಗೆ ಹೋಗುತ್ತಿದ್ದದ್ದು, ಸಹಪಾಠಿಗಳ ಜೊತೆ ತುಸು ದೂರ ಇರಿಸಿಕೊಂಡದ್ದು ಇತ್ಯಾದಿಗಳೆಲ್ಲಾ ನಮ್ಮ ನೆನಪುಗಳನ್ನೂ ಕೆದಕುತ್ತವೆ. ‘ನೆನಪಿನಂಗಳಕ್ಕೆ ಮನವು ಜಾರಿದಾಗ’, ‘ಮೊದಲ ಟಿವಿ ತಂದ ಸಂಭ್ರಮ’, ‘ನಮ್ಮ ಬಾಲ್ಯದ ದೀಪಾವಳಿಯ ಸೊಗಸು’, ‘ಬದಲಾಗುತ್ತಿರುವ ಜೀವನ ಶೈಲಿ’, ‘ಸೌಂದರ್ಯವೆಲ್ಲಿದೆ?’,… ಮುಂತಾದ ಲೇಖನಗಳಲ್ಲಿ ತಮ್ಮ ಬಾಲ್ಯ ಜೀವನದ ಹತ್ತು ಹಲವು ಘಟನೆಗಳನ್ನು ಹಂಚಿಕೊಂಡಿದ್ದಾರೆ.

ನಾಟಕವೊಂದರಲ್ಲಿ ತಾವು ಬಯಸಿದ ಪಾತ್ರ ತಮಗೆ ಸಿಗದೆ ಹೋದಾಗ ‘ತನ್ನ ರೂಪ ಚೆನ್ನಾಗಿಲ್ಲ. ಅದಕ್ಕೆ ಆ ಪಾತ್ರ ಸಿಗಲಿಲ್ಲ’ ಎಂದು ಕೊರಗಿದಾಗ, ಅವರಮ್ಮ ಹೇಳಿದ ಕಿವಿಮಾತು ‘ದೇವರು ಕೈಕಾಲು ಸರಿಯಾಗಿ ಕೊಟ್ಟು ಹುಟ್ಟಿಸಿದ್ದಾನೆ. ಒಳ್ಳೆ ವಿದ್ಯೆ ಬುದ್ಧಿ ಕಲಿತು ಉತ್ತಮ ವ್ಯಕ್ತಿಯಾಗು’ ಅಂದಿನಿಂದ ತಾನು ಹೇಗೆ ಬದಲಾದೆ ಅನ್ನುವ ಪರಿಯನ್ನು ವಿವರಿಸಿ, ವಿನಯ, ಸಜ್ಜನಿಕೆ, ಪ್ರಾಮಾಣಿಕತೆಯಲ್ಲಿ ಮನುಷ್ಯನ ಸೌಂದರ್ಯ ಅಡಗಿದೆ ಅನ್ನುವ ಸಂದೇಶ ನೀಡಿದ ಲೇಖನ ಮನ ಮುಟ್ಟಿತು.

ಈ ಪುಸ್ತಕದ ಬಹುಪಾಲು ಲೇಖನಗಳಿಗೆ ಮನೋವಿಜ್ಞಾನದ ನಂಟಿದೆ. ಯುವ ಮನಸ್ಸುಗಳ ಜೊತೆ ಬೆರೆಯುವ ನಮ್ಮಂತಹ ಅಧ್ಯಾಪಕರಿಗೆ ಮನೋವಿಜ್ಞಾನವನ್ನು ಅಭ್ಯಾಸ ಮಾಡದೆಯೂ ಕೆಲವು ಸಂವಹನ ಕಲೆಗಳು ತನ್ನಿಂತಾನೇ ಬೆಳೆಯುತ್ತವೆ. ಮನಸಿನ ಭಾವನೆಗಳಿಗೆ ನೋವಾಗುವುದು, ಖುಷಿಯಾಗುವುದು, ಮನಸು ಪಶ್ಚಾತ್ತಾಪಪಡುವುದು, ನಮ್ಮೊಳಗಿನ ಒಳ್ಳೆಯತನವನ್ನು ಗುರುತಿಸಿದ ವಿದ್ಯಾರ್ಥಿಗಳು/ವ್ಯಕ್ತಿಗಳು ಸ್ಪಂದಿಸುವ ರೀತಿ, ನಾವು ಕೈಗೊಳ್ಳುವ ನಿರ್ಣಯಗಳು- ಇಂತಹ ವಿಷಯಗಳ ಬಗ್ಗೆ ತಮ್ಮ ಅನುಭವಗಳು, ವಿಚಾರಧಾರೆಗಳನ್ನು  ಬಹು ಸುಂದರವಾಗಿ ‘ನಾವೆಷ್ಟು ಸಹೃದಯರು?’, ‘ಹೃದಯದ ಭಾಷೆ ನಗು’, ‘ಮಾತು ನೋಯಿಸದಿರಲಿ’, ‘ಸೌಂದರ್ಯವೆಲ್ಲಿದೆ?’, ‘ನಿಮ್ಹಾನ್ಸಿನಲ್ಲಿ ಎರಡು ವಾರ’, ‘ವಿದ್ಯಾರ್ಥಿಯೊಂದಿಗೆ ಹೃದಯಸ್ಪರ್ಶಿ ಅನುಭವ’, ‘ಶ್ರೇಷ್ಠ ನಿರ್ಣಯಗಳೇ ಬದುಕಿನ ಬೆಳಕು’ ಲೇಖನಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಎಲ್ಲಾ ಲೇಖನಗಳಲ್ಲಿ ಅವರು ಬೇರೆ ಯಾರ ತಪ್ಪುಗಳನ್ನು ಎತ್ತಿ ತೋರಿಸಿಲ್ಲ. ಸ್ವತಃ ತಮ್ಮನ್ನೇ ಉದಾಹರಣೆಯಾಗಿಟ್ಟುಕೊಂಡು ನಾನು ಮಾಡಿದ್ದು ತಪ್ಪು/ನಾನು ಹಾಗೆ ಮಾಡಬಾರದಿತ್ತು ಅಂತ ನೊಂದುಕೊಂಡ ತಮ್ಮ ಅನುಭವಗಳನ್ನೇ ವಿವರಿಸಿದ್ದಾರೆ. ವ್ಯಕ್ತಿತ್ವದ ಕನ್ನಡಿಯಂತಿರುವ ಮಾತಿನ ಔಚಿತ್ಯದ ಬಗ್ಗೆ ವಿವರಿಸುತ್ತಾ ತಪ್ಪು ಮಾತನಾಡಿ ಇನ್ನೊಬ್ಬರ ಮನವನ್ನು ನೋಯಿಸಿದ್ದಕ್ಕೆ ಕ್ಷಮೆ ಕೇಳುವುದರ ಮೂಲಕ ತಮ್ಮನ್ನು ತುಸುವಾದರೂ ಹಗುರಾಗಿಸಿಕೊಂಡಿದ್ದಾರೆ. ತನ್ನ ವಿದ್ಯಾರ್ಥಿಯೊಬ್ಬ ರಿಕ್ಷಾ ಡ್ರೈವರ್ ಆಗಿ ದುಡಿದು ಪ್ರಾಮಾಣಿಕವಾಗಿ ಜೀವನ ಸಾಗಿಸುವುದನ್ನು ಬರಹಕ್ಕಿಳಿಸಿ ಅವನು ತಮ್ಮ ಮೇಲಿಟ್ಟ ಅಭಿಮಾನ ತೋರಿಸಿದ ಘಟನೆಯನ್ನು ವಿವರಿಸಿ “ಮಾಡುವ ಕೆಲಸವನ್ನು ಪ್ರೀತಿಯಿಂದ ಇಷ್ಟಪಟ್ಟು ಮಾಡಿದರೆ ಯಶಸ್ಸು ಲಭಿಸುವುದು” ಅನ್ನುವ ಕಿವಿಮಾತು ಸೇರಿಸಿದ್ದಾರೆ. ಸಾವಕಾಶ, ಸಮಾಧಾನ, ಶಾಂತತೆಯಿಂದ ಕುಟುಂಬ ಸದಸ್ಯರೊಡನೆ ಚರ್ಚಿಸಿ ತೆಗೆದುಕೊಳ್ಳುವ ನಿರ್ಧಾರ ಒಳ್ಳೆಯದೆನ್ನುವ ಸಂದೇಶ ಓದುಗರಿಗೆ ವರ್ಗಾಯಿಸುತ್ತಾರೆ. “ನಾವೆಷ್ಟು ಸಹೃದಯರು?” ಹಾಗೂ “ಮಾನವೀಯ ಸಂಬಂಧಗಳು ನಶಿಸುತ್ತಿವೆಯೇ?” ಎಂದು ಪ್ರಶ್ನಿಸುತ್ತಾ ಕಾಳಜಿಭರಿತ ವಿಶ್ಲೇಷಣೆ ಮಾಡುತ್ತಾರೆ. ಹಾಗೆಯೇ ಇನ್ನೊಂದೆಡೆ ‘ಉಡುಗೊರೆಯೆಂಬ ಭಾವನಾತ್ಮಕ ಬೆಸುಗೆ’  ಲೇಖನದಲ್ಲಿ ಸಂಬಂಧಗಳನ್ನು ಬೆಸೆಯುವಲ್ಲಿ ಉಡುಗೊರೆಗಳ ಮಹತ್ವವನ್ನು ವಿವರಿಸುತ್ತಾರೆ..

ಇವರ ಲೇಖನಗಳ ಇನ್ನೊಂದು ಆಯಾಮ ಅವರ ವೃತ್ತಿ ಬದುಕಿಗೆ ಸಂಬಂಧಿಸಿದ್ದು. ಉದ್ಯೋಗಕ್ಕೆ ಸೇರಿದಾಗಿನಿಂದ ತೊಡಗಿ ನಿವೃತ್ತಿಯ ತನಕದ ಹತ್ತು ಹಲವು ಅನುಭವಗಳನ್ನು ‘ಮಕ್ಕಳೇ, ಗ್ರಂಥಾಲಯಕ್ಕೆ ಬನ್ನಿರಿ’, ‘ನಿಮ್ಹಾನ್ಸ್ ನಲ್ಲಿ ಎರಡು ವಾರ’, ‘ನನ್ನ ವೃತ್ತಿ ಬದುಕಿನ ಹೆಜ್ಜೆಗಳು’, ‘ಪುಸ್ತಕ ಓದುವಿಕೆಯ ಖುಷಿ’ ಲೇಖನಗಳಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ‘ಬಾಳ ಸಂಜೆಯಲಿ ಒಂಟಿ ಪಯಣ’ ಅನ್ನುವ ಲೇಖನದಲ್ಲಿ ಪತಿಯ ಅಗಲಿಕೆಯಿಂದ ವೈಯಕ್ತಿಕವಾಗಿ ನೋವು ತಿಂದ ವಿಚಾರಗಳನ್ನು ಹಂಚಿಕೊಂಡು ಆ ಬಳಿಕ ಎಲ್ಲಾ ನೋವುಗಳನ್ನು ಮೆಟ್ಟಿ ನಿಂತು ಧೈರ್ಯವಂತೆಯಾಗಿ ‘ನಿವೃತ್ತಿಯನ್ನು ಪ್ರವೃತ್ತಿಯಾಗಿಸಿದ ಬಗೆ’ಯನ್ನು ಎಳೆ ಎಳೆಯಾಗಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.

ಈ ಪುಸ್ತಕದ ಹಲವು ವಿಷಯಗಳು ಶೈಲಾ ಅವರ ಆತ್ಮಕಥೆಗಳು. ಅವರೊಳಗಿನ ಪಕ್ವ ಮನಸ್ಸಿನ ಕಾಳಜಿಭರಿತ ಮೃದು ಮಾತುಗಳು. ತಾನೂ ಚೆನ್ನಾಗಿರಬೇಕು, ತನ್ನ ಸುತ್ತಮುತ್ತಲಿನವರೂ ಚೆನ್ನಾಗಿರಬೇಕು ಅನ್ನುವ ಆಶಯ ಅವರದು. ಅವರೆಂದೂ ಹೇಳಿಕೊಂಡಿಲ್ಲವಾದರೂ ನಮಗೆಲ್ಲ ಗೊತ್ತು- ಕೊಡುಗೈ ದಾನಿ ಅವರೆಂದು. ವಿದ್ಯಾರ್ಥಿಗಳನ್ನು ಬಹುವಾಗಿ ಪ್ರೀತಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತೋರುವಂತಹ ಪ್ರೇರಣಾದಾಯಕ ಲೇಖನ ‘ರೆಕ್ಕೆ ಬಿಚ್ಚಲಿ ಕನಸುಗಳು’.

ಒಟ್ಟಿನಲ್ಲಿ ಹೇಳುವುದಾದರೆ ವೈವಿಧ್ಯಮಯ ವಿಷಯಗಳು, ಸರಳ ಸುಂದರ ಭಾಷೆ, ಇರುವುದನ್ನು ಇರುವಂತೆ ಹಂಚಿಕೊಂಡ ನುಡಿಗಳು, ಶಬ್ದಾಡಂಬರವಿಲ್ಲ. ಆಡುಭಾಷೆಯಲ್ಲಿ ಬಂದಂತೆ ಮಾತುಗಳು- ಬಳಕೆಯ ಆಂಗ್ಲಪದಗಳನ್ನು ಮಾತುಗಳಲ್ಲಿ ಬಳಸಿದಂತೆ ಬಳಸಿಕೊಂಡಿದ್ದಾರೆ.. ಕೆಲವೊಂದು ಲೇಖನಗಳನ್ನು ಇನ್ನೂ ಸ್ವಲ್ಪ ಹಿಗ್ಗಿಸಿ ವಿಸ್ತರಿಸಿ ಬರೆಯಬಹುದಿತ್ತು ಅನ್ನಿಸಿತು. ಇನ್ನು ಕೆಲವೊಂದು ವಿಷಯಗಳನ್ನು ಮತ್ತೊಮ್ಮೆ ಬೇರೆ ಶಬ್ದಗಳಲ್ಲಿ ವಿವರಿಸಿರುವಂತೆ ಅನ್ನಿಸಿದರೂ, ಕೆಲವು ವಿಷಯಗಳು ಹೇಗೆ ಅವರನ್ನು ಕಾಡುತ್ತವೆ ಅನ್ನುವ ವಿಷಯ ವೇದ್ಯವಾಗುತ್ತದೆ.

ಎಲ್ಲಾ ಲೇಖನಗಳು ಆಪ್ತವಾಗಿ ಮೂಡಿ ಬಂದಿವೆ. ಪ್ರತಿ ಲೇಖನಗಳಲ್ಲೂ ಲೇಖಕಿಯಲ್ಲಿರುವ ಹಾಸ್ಯಪ್ರಜ್ಞೆ ಎದ್ದು ಕಾಣುತ್ತದೆ. ಹಾಗೆಯೇ ಅವರ ಹಲವು ಲೇಖನಗಳಲ್ಲಿ ಅವರ ಜೀವನದ ವಿವಿಧ ಕಾಲಘಟ್ಟಗಳ ವಿವರಣೆಯಲ್ಲಿ, ಲೇಖಕಿಯ  ಪ್ರಚಂಡ ನೆನಪಿನ ಶಕ್ತಿಯ ಅರಿವಾಗುತ್ತದೆ. ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ಲೇಖನ “ನನ್ನೊಳಗಿನ ನನ್ನನ್ನು ಅರಿತ ಕ್ಷಣ”

ಇಂತಹ ಸ್ವವಿಶ್ಲೇಷಣೆಯ ಬರಹ ಬರೆಯುವುದು ತುಸು ಕಷ್ಟವೇ. ತನ್ನಲ್ಲಿ ಋಣಾತ್ಮಕ ಅಂಶಗಳಿದ್ದವು ಅನ್ನುವುದನ್ನು ಬಿಚ್ಚಿಡುವ ಪ್ರಕ್ರಿಯೆಯೇ ‘ನನ್ನನ್ನು ನಾನು ಅರಿತುಕೊಂಡ ಕ್ಷಣ’ ಎಂದರೆ ತಪ್ಪಿಲ್ಲ. ಶ್ರೀ ರವಿಶಂಕರ್ ಗುರೂಜಿ ಅವರ “ಆರ್ಟ್ ಆಫ್ ಲಿವಿಂಗ್” ತರಬೇತಿ, “ದ ವೆಲ್ತ್ ಮನಿ ಕಾಂಟ್ ಬಯ್” ಅನ್ನುವ ಪುಸ್ತಕ ಬೀರಿದ ಗಾಢ ಪರಿಣಾಮಗಳನ್ನು ವಿವರಿಸುತ್ತಾ “ನಿನ್ನೊಳಗೆ ನೀ ಹೊಕ್ಕು, ನಿನ್ನನ್ನೇ ನೀ ಕಂಡು, ನೀನು ನೀನಾಗು ಗೆಳೆಯ” ಎಂಬ ಮಾತಿನಂತೆ ತನ್ನ ಮನದಾಳವನ್ನು ತೆರೆದಿಟ್ಟು, ತಾನು ಹೇಗಿದ್ದೆ, ಹೇಗೆ ಬದಲಾದೆ ಅನ್ನುವುದನ್ನು ಹಂಚಿಕೊಂಡ ಗೆಳತಿಗೆ ಸಲಾಂ.

ಗೆಳತಿ ನೀವು ಬಯಸಿದಂತೆ ನಿಮ್ಮ ಸಾಹಿತ್ಯಕ ಬರವಣಿಗೆಯ ಪಯಣ ಸಾಗಲಿ. ಶ್ರೇಷ್ಠ ಕೃತಿಗಳು ನಿಮ್ಮಿಂದ ಬರಲಿ. ನಿಮ್ಮ ಆತ್ಮಚರಿತ್ರೆಯನ್ನು ಬರೆಯುವ ಕೆಲಸವನ್ನು ಸುಗಮಗೊಳಿಸಿದ್ದೀರಿ. ಆತ್ಮಚರಿತ್ರೆಯ ಪುಸ್ತಕವೂ ಬೇಗ ಬರಲಿ. ಮತ್ತೊಮ್ಮೆ ಶುಭಹಾರೈಕೆಗಳು.

ಡಾ. ಕೃಷ್ಣಪ್ರಭ ಎಂ, ಮಂಗಳೂರು

3 Comments on “ಪುಸ್ತಕಾವಲೋಕನ : ‘ಮನಸಿನ ಪುಟಗಳ ನಡುವೆ’

  1. ಪುಸ್ತಕಾವಲೋಖನ ಚೆನ್ನಾಗಿ ಮೂಡಿಬಂದಿದೆ.. ಈ ಲೇಖನ ಗಳೆಲ್ಲಾ ಸುರಹೊನ್ನೆಯ ಲ್ಲಿ ನಾವೂ ಓದಿದ್ದರಿಂದ ಇನ್ನೂ ಆಪ್ತವಾಯಿತು…ಮೇಡಂ..ಇದು ಆರಂಭ ಎಂದು ತಿಳಿದು ಮುಂದುವರೆಯಿರಿ…

  2. ನಿಮ್ಮಂತಹ ಸ್ನೇಹಿತೆಯ ಪ್ರೋತ್ಸಾಹ ಮತ್ತು ಮೆಚ್ಚುಗೆ ನನಗೆ ಇನ್ನಷ್ಟು ಉತ್ತಮವಾಗಿ ಬರೆಯುವ ಆತ್ಮವಿಶ್ವಾಸವನ್ನು ನೀಡಿದೆ. ನಿಮ್ಮ ಈ ಅಮೂಲ್ಯ ಸಮಯ ಮತ್ತು ಪ್ರೀತಿಪೂರ್ಣ ಬೆಂಬಲಕ್ಕೆ ಸದಾ ಕೃತಜ್ಞಳಾಗಿರುತ್ತೇನೆ.
    ನನ್ನ ಪುಸ್ತಕವನ್ನು ಚೆನ್ನಾಗಿ ವಿಶ್ಲೇಷಿಸಿ ಮೆಚ್ಚುಗೆ ವ್ಯಕ್ತಪಡಿಸಿದಕ್ಕಾಗಿ ತುಂಬಾ ಧನ್ಯವಾದಗಳು. ನಿಮ್ಮ ಮಾತುಗಳು ನನಗೆ ಬಹಳ ಸಂತೋಷ ಮತ್ತು ಪ್ರೇರಣೆ ನೀಡಿವೆ. ಧನ್ಯವಾದಗಳು ಮೇಡಂ

  3. ಚಂದದ ಪುಸ್ತಕಾವಲೋಕನ. ಜೀವನಾನುಭವವನ್ನು ಅಕ್ಷರಗಳಗಳಲ್ಲಿ ಹಿಡಿದಿಟ್ಟಿರುವ ಪರಿಯನ್ನು ಮೆಚ್ಚಿ ಬೆನ್ನು ತಟ್ಟಿರುವ ರೀತಿ ಲೇಖಕಿಗೆ ನೆನಪಿನ ಬುತ್ತಿಯ ಮತ್ತಷ್ಟು ಹೊಳಹುಗಳನ್ನು ಆಚೆ ತರಲು ಪ್ರೇರೇಪಿಸುವಂತಿದೆ.

    ನಮ್ಮ ನೆಚ್ಚಿನ ಸುರಹೊನ್ನೆಯ ಸಂಪಾದಕಿ ಹೇಮಮಾಲಾ ಅವರಿಂದ ಪುಸ್ತಕ ಲೋಕಾರ್ಪಣೆಗೊಂಡದ್ದು ಸಂತಸದ ಸಂಗತಿ.

Leave a Reply to Shailarani Bolar Cancel reply

 Click this button or press Ctrl+G to toggle between Kannada and English

Your email address will not be published. Required fields are marked *