ವಯಸ್ಸಾದ ವ್ಯಕ್ತಿಯೊಬ್ಬರು ಊಟದ ಹೋಟೆಲಿಗೆ ಬಂದರು. ಕೌಂಟರಿನಲ್ಲಿದ್ದ ಹೋಟೆಲಿನ ಮಾಲೀಕರನರನ್ನು “ಒಂದು ಊಟಕ್ಕೆ ಎಷ್ಟು ಚಾರ್ಜು?” ಎಂದು ಕೇಳಿದರು. ಮಾಲೀಕರು “ಮೀನು ಸೇರಿದರೆ ಐವತ್ತು ರೂಪಾಯಿ. ಅದನ್ನು ಬೇಡವೆಂದರೆ ಮೂವತ್ತು ರೂಪಾಯಿ ಮಾತ್ರ. ನಿಮಗೆಂತಹ ಊಟಬೇಕು?” ಎಂದರು. ಬಂದಿದ್ದ ಮುದುಕರು “ಕ್ಷಮಿಸಿ ನನ್ನ ಬಳಿ ಇರುವುದೇ ಹತ್ತು ರೂಪಾಯಿ. ಬರೀ ಅನ್ನ ಸಾರಾದರೂ ಸಾಕು. ಹೊಟ್ಟೆಗೆ ನೆನ್ನೆಯಿಂದ ಏನೂ ಇಲ್ಲ” ಎಂದರು.
ವ್ಯಕ್ತಿಯ ಮಾತನ್ನು ಕೇಳಿಸಿಕೊಂಡ ಮಾಲೀಕರು ಕನಿಕರದಿಂದ ಸಪ್ಲೈಯರನ್ನು ಕರೆದು “ಇವರಿಗೆ ಮೀನೊಂದನ್ನು ಬಿಟ್ಟು ಉಳಿದೆಲ್ಲವನ್ನೂ ಊಟದಲ್ಲಿ ಬಡಿಸು” ಎಂದು ಹೇಳಿದರು.
ತಟ್ಟೆಯಲ್ಲಿ ಬಡಿಸಿದ್ದ ಆಹಾರವನ್ನು ತಿನ್ನುತ್ತಾ ಮುದುಕರು ಮಧ್ಯೆ ಮಧ್ಯೆ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು. ಇದನ್ನು ನೋಡುತ್ತಿದ್ದ ಪಕ್ಕದಲ್ಲಿನ ವ್ಯಕ್ತಿಯು “ಏಕಜ್ಜಾ ತುಂಬ ದುಃಖಪಡುತ್ತಿದ್ದೀರಿ?” ಎಂದರು.
ಮುದುಕರು “ಏನೂಂತ ಹೇಳಲಪ್ಪಾ, ನನ್ನ ಬದುಕಿನ ಬವಣೆಯನ್ನು ನೆನಪಿಸಿಕೊಂಡೆ ಅಷ್ಟೇ. ಕಣ್ಣೀರು ತಾನಾಗೇ ಬಂದುಬಿಟ್ಟಿತು. ನನಗೂ ಮೂರುಜನ ಗಂಡುಮಕ್ಕಳಿದ್ದಾರೆ. ತಕ್ಕಮಟ್ಟಿಗೆ ಎಲ್ಲರನ್ನೂ ಓದಿಸಿ ಕೆಲಸಕ್ಕೆ ಸೇರಿಸಿದ್ದೇನೆ. ಎಲ್ಲರ ಮದುವೆಗಳನ್ನೂ ಮಾಡಿದೆ. ನನ್ನಲ್ಲಿದ್ದ ಗಂಟನ್ನೆಲ್ಲ ಅವರಿಗೆ ಸಮನಾಗಿ ಹಂಚಿಬಿಟ್ಟೆ. ನಾನು ಮತ್ತು ನನ್ನ ಪತ್ನಿ ಮಕ್ಕಳೊಡನೆ ನಾನೇ ಕಟ್ಟಿದ್ದ ಮನೆಯಲ್ಲಿ ಮಕ್ಕಳೊಡನೆ ವಾಸವಿದ್ದೆವು. ಕೆಲವು ತಿಂಗಳ ಹಿಂದೆ ನನ್ನ ಪತ್ನಿಯೂ ಕಾಲವಾದಳು. ನಾನೊಬ್ಬನೇ ಹೇಗೋ ಮೊಮ್ಮಕ್ಕಳ ಮುಖ ನೋಡಿಕೊಂಡು ಕಾಲಕಳೆಯುತ್ತಿದ್ದೆ. ನನ್ನ ಮಕ್ಕಳು ನನ್ನನ್ನು ಇಟ್ಟುಕೊಳ್ಳಲು ಇಷ್ಟಪಡದೆ ನಾನೇ ಕಟ್ಟಿದ ಮನೆಯಿಂದ ಯಾವಾಗ ಹೋಗುವೆ ಎಂದು ಪ್ರಶ್ನಿಸುತ್ತಿದ್ದರು. ಮೊಮ್ಮಕ್ಕಳು ನನ್ನೊಡನೆ ಬೆರೆಯದಂತೆ ನಿರ್ಬಂಧ ಹೇರಿದರು. ನಾನು ಒಂಟಿಯಾಗಿಬಿಟ್ಟೆ. ಇಷ್ಟೆಲ್ಲ ಆದರೂ ವಿಧಿಯಿಲ್ಲದೆ ಹೇಗೋ ಇದ್ದೆ. ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ಎರಡು ದಿನಗಳ ಹಿಂದೆ ನನ್ನ ಸೊಸೆಯೊಬ್ಬಳು ತನ್ನ ಒಡವೆ ಕದ್ದಿದ್ದೇನೆ ಎಂದು ತನ್ನ ಗಂಡನೊಡನೆ ದೂರು ಹೇಳಿದಳು. ಮಗ ಸತ್ಯಾಂಶ ಏನೆಂದು ವಿಚಾರಿಸದೇ ನನ್ನ ಮೇಲೇ ಕೈಮಾಡಲು ಬಂದ. ಅಕ್ಕಪಕ್ಕದವರು ಮುಂದೆ ನನ್ನ ಮಗನನ್ನು ತಂದೆಯನ್ನು ಹೊಡೆದವನು ಎಂದು ಹಂಗಿಸಿಯಾರು ಎಂದು ಆಲೋಚಿಸಿ. ಅಂತಹ ಆರೊಪ ಅವನಮೇಲೆ ಬರಬಾರದೆಂದು ನಾನೇ ಮನೆಬಿಟ್ಟು ಹೊರಬಂದೆ. ಬೀದಿಪಾಲಾದೆ.” ಎಂದರು. ಅಷ್ಟು ಹೇಳುವಷ್ಟರಲ್ಲಿ ಅವರ ದುಃಖ ಹೆಚ್ಚಾಗಿ ಮುಂದೆ ಊಟಮಾಡಲಾಗದೇ ಎದ್ದು ಕೈತೊಳೆದರು.
ಇವರ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದ ಹೋಟೆಲಿನ ಮಾಲೀಕ ಅವರಿದ್ದಲ್ಲಿಗೇ ಬಂದು ಅವರಿಗೆ ಸಾಂತ್ವನ ಹೇಳಿದ. “ಅಜ್ಜಾ ನೀವು ಯಾವಾಗ ಬೇಕಾದರೂ ನಮ್ಮ ಹೋಟೆಲಿಗೆ ಬಂದು ಊಟ ಮಾಡಿಕೊಂಡು ಹೋಗಿ. ದುಡ್ಡೇನೂ ಕೊಡಬೇಡಿ” ಎಂದು ಹೇಳಿದರು.
ಆದರೆ ವೃದ್ಧರು ಕೈಮುಗಿದು ತಮ್ಮ ಜೇಬಿನಲ್ಲಿದ್ದ ಹಳೆಯ ಹತ್ತುರೂಪಾಯಿಯ ನೋಟೊಂದನ್ನು ತೆಗೆದು ಕೊಡುತ್ತಾ “ಧನ್ಯವಾದಗಳು. ನಾನು ಯಾವತ್ತೂ ಪುಕ್ಕಟೆ ಊಟಮಾಡಿ ಅಭ್ಯಾಸವಿಲ್ಲ. ಕ್ಷಮಿಸಿ” ಎಂದು ಹಿಂದಿರುಗಿ ನೋಡದಂತೆ ಮೆಟ್ಟಿಲುಗಳನ್ನು ಇಳಿದು ಹೊರಟುಹೋದರು.
ಅವರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯು “ಛೇ ಛೇ ಇಂದಿನ ಚಿಗುರು ಮುಂದೊಂದು ದಿನ ತಾನೂ ಹಣ್ಣಾಗುತ್ತೇನೆ ಎಂಬ ಪ್ರಜ್ಞೆಯೂ ಇಲ್ಲದಂತೆ ಸತ್ಯವನ್ನೇಕೆ ಅರಿಯುವುದಿಲ್ಲ” ಎಂದು ಪೇಚಾಡಿಕೊಂಡರು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು


ಪ್ರಕಟಣೆಗಾಗಿ ಸುರಹೊನ್ನೆ ಪತ್ರಿಕೆ ಯ ಸಂಪಾದಕರಿಗೆ ಧನ್ಯವಾದಗಳು…
ವೃದ್ಧಾಪ್ಯದ ಬವಣೆಯ ಸ್ಥೂಲ ಚಿತ್ರಣ ಮನ ಮುಟ್ಟುವಂತೆ ಮೂಡಿದೆ.
ಹೆತ್ತವರ ಪ್ರೀತಿ ವಾತ್ಸಲ್ಯ ಕ್ಕೆ ಸಾಟಿ ಎಲ್ಲಿದೆ