ಲಹರಿ

ನೆನಪಿನ ಪುಟಗಳಲ್ಲಿ: ‘ಗಳಾಸಿನ ನಂಟು’

Share Button

ಶಿರೋನಾಮೆ ನೋಡಿ ಹೆದರಬೇಡಿ. ಇದು ಆ ಗ್ಲಾಸ್‌ ಅಲ್ಲ. ಇದು ನನ್ನ ಬಾಲ್ಯದಲ್ಲಿ ನಡೆದ ಘಟನೆಗಳ ಆಧಾರಿತ ಲೇಖನ.

ನನಗಾಗ ಆರು ವರ್ಷ. ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಾನು ಒಂದನೇ ತರಗತಿಯ ವಿದ್ಯಾರ್ಥಿ. ಆಗೆಲ್ಲಾ ರಜೆ ಸಿಕ್ಕಾಗೆಲ್ಲಾ ಊರೂರು ತಿರುಗುವ ಅಭ್ಯಾಸಗಳು ಇರಲಿಲ್ಲ. ರಜಾ ದಿನಗಳಲ್ಲಿ, ಮನೆಯಲ್ಲಿ ಸ್ನಾನ ಮಾಡಿ ,ತಿಂಡಿ ತಿಂದು ಮುಗಿಸಿದರೆ, ಮತ್ತೆ ಮನೆಗೆ ಹಾಜರಾಗುತ್ತಿದ್ದುದು, ಮಧ್ಯಾಹ್ನದ ಊಟಕ್ಕೇ. ಅಲ್ಲಿಯವರೆಗೆ ಮನೆಯಿಂದ ಹೊರಗೆ ಹೋದರೆ ಸ್ನೇಹಿತರ ಜೊತೆ ಓಡಾಟದಲ್ಲಿ ಆಟೋಟದಲ್ಲಿ ನಿರತರಾಗಿರುತ್ತಿದ್ದೆವು. ಒಮ್ಮೆ ಮನೆಯಿಂದ ತುಸು ದೂರವೇ ಇದ್ದ ಶಾಲೆಯ ಬಳಿ ಹೋಗಿ ಸ್ನೇಹಿತರ ಜೊತೆ ಆಟವಾಡುತ್ತಿದ್ದೆವು. ಜೂಟಾಟ, ಐಸ್‌ ಪೈಸ್‌ ಆಟಗಳು ಹೀಗೆ. ಒಮ್ಮೆ ಬಚ್ಚಿಟ್ಟುಕೊಳ್ಳಲು ಓಡುತ್ತಿದ್ದಾಗ, ಶಾಲೆ ಹಿಂಭಾಗದಲ್ಲಿ ಒಂದು ಒಡೆದು ಹೋಗಿದ್ದ ಗ್ಲಾಸ್ ( ಆಗ ಟೀ ಕಾಫಿ ಕುಡಿಯಲು ಹೋಟೆಲ್‌ ಗಳಲ್ಲಿ ಉಪಯೋಗಿಸುತ್ತಿದ್ದ ಗಾಜಿನ ಲೋಟ ಗಳಿಗೆ ಗ್ಲಾಸ್ (ಗಳಾಸ್) ಎನ್ನುತ್ತಿದ್ದರು). ಮೇಲೆ ನೋಡಿ ನೋಡಿ ಕಾಲಿಟ್ಟೆ. ತಕ್ಷಣ ಅಂಗಾಲಿನಲ್ಲಿ ಸುಮಾರು 3 ಇಂಚಿನಷ್ಟು ಉದ್ದದ ಗಾಯ ಆಗಿ ರಕ್ತ ಸ್ರವಿಸಲು, ಪ್ರಾರಂಭವಾಯಿತು. ಅದೃಷ್ಟಕ್ಕೆ ಗಾಜಿನ ಚೂರು ಕಾಲಿನಲ್ಲಿ ಸಿಕ್ಕಿ ಹಾಕಿಕೊಂಡಿರಲಿಲ್ಲ. ಹಾಗೇ ರಕ್ತ ಸೋರಿಸಿಕೊಳ್ಳುತ್ತಾ, ಕುಂಟುತ್ತಾ ಮನೆಗೆ ಬಂದರೆ, ನನ್ನ ಅವಸ್ಥೆ ನೋಡಿ, ಅಮ್ಮ ಮೊದಲು ಒಂದು ಏಟು ಕೊಟ್ಟು, ಎಲ್ಲಿ ಹೋಗಿದ್ದೆ ಏನು ಮಾಡಿಕೊಂಡು ಬಂದೆ ಎಂದು ಗದರಿಸಿ, ಕೂರಿಸಿ ಒಂದು ಬಟ್ಟೆಯಲ್ಲಿ ಅಂಗಾಲನ್ನು ಒರೆಸಿ, ಒಣಗಿದ ಮಾವಿನ ಎಲೆ (ಹಬ್ಬಕ್ಕೆಂದು ಬಾಗಿಲಿಗೆ ತೋರಣಕ್ಕೆ ಕಟ್ಟಿದ್ದ ಮಾವಿನ ಎಲೆಗಳು) ತೆಗೆದುಕೊಂಡು, ದೀಪದಲ್ಲಿ ಸುಟ್ಟು, ಆ ಬೂದಿಯನ್ನು ಗಾಯಕ್ಕೆ ಮೆತ್ತಿ, ಅದರ ಮೇಲೆ ಒಂದು ಹಳೆಯ ಬಟ್ಟೆಯ ತುಂಡನ್ನು ಬಿಗಿಯಾಗಿ ಕಟ್ಟಿ, ನಡಿ ಅಂದರು. ಆ ಗಾಯದ ಕಲೆ ಈಗಲೂ 60 ವರ್ಷಗಳ ನಂತರವೂ ನನ್ನ ಅಂಗಾಲಿನಲ್ಲಿ ಕಾಣಬಹುದಾಗಿದೆ.

ಇದೇ ಘಟನೆ ಈಗಿನ ಮಕ್ಕಳಿಗೆ ಏನಾದರೂ ಆಗಿದ್ದರೆ, ಊಹೆ ಮಾಡಿಕೊಳ್ಳಲೂ ಆಗದಂತಹ ಆತಂಕದಿಂದ ಅಪ್ಪ-ಅಮ್ಮ ಅಂಬುಲೆನ್ಸ್ ಗೆ ಫೋನ್ ಮಾಡಿ, ಅಂಬುಲೆನ್ಸ್ ಕರೆಸಿ, ಒಂದು ಆಸ್ಪತ್ರೆಗೆ ಅಡ್ಮಿಟ್ ಮಾಡಿ, ಒಂದು ವಾರ ಇದ್ದು, ಶುಶ್ರೂಷೆ ಕೊಡಿಸಿ, ಒಂದೆರಡು ಲಕ್ಷ ಬಿಲ್ ಪಾವತಿ ಮಾಡಿ, ಮನೆಗೆ ಕರೆದುಕೊಂಡು ಬರುತ್ತಿದ್ದರು.

ಈ ಘಟನೆಯಾಗಿ ಮತ್ತೆ ಮೂರು ವರ್ಷಗಳ ನಂತರ ಇಂತಹದೇ ಘಟನೆ ಪುನರಾವರ್ತನೆಯಾಯಿತು. ಈ ಗಳಾಸು ಬೆನ್ನು ಬಿಡದ ಬೇತಾಳನಂತೆ ನನ್ನ ಬೆನ್ನು ಹತ್ತಿತ್ತು. ಈಗ ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿ. ಚಿತ್ರದುರ್ಗದಲ್ಲಿ, ಒಮ್ಮೆ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆ. ನಾನು ನನ್ನ ಜೊತೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ಸಾಗುತ್ತಿದ್ದೆವು. ನಮ್ಮಿಂದ ಸ್ವಲ್ಪ ಹಿಂದೆ, ಇನ್ನೊಬ್ಬ ಸ್ನೇಹಿತ ಒಬ್ಬನೇ ಬರುತ್ತಿದ್ದ. ಅವನು,ಸುಮ್ಮನೆ ಇರಲಾರದೆ, ಅಲ್ಲೇ ಇದ್ದ ಒಂದು ಗ್ಲಾಸಿನ ತುಂಡನ್ನು ತೆಗೆದುಕೊಂಡು ( ಹಿಂದಿನ ದಿನ ಒಡೆದ ಗ್ಲಾಸ್ ಅನ್ನು ಕಿಟಕಿಯಿಂದ ಬಿಸಾಡಿದ್ದರು) ನೆಲಕ್ಕೆ ಅಪ್ಪಳಿಸಿದ. ತಕ್ಷಣ ಅಲ್ಲಿಂದ ಒಂದು ಗಾಜಿನ ಚೂರು ಹಾರಿ ಬಂದು ನನ್ನ ಬಲಗೆನ್ನೆಯನ್ನು ಸವರಿಕೊಂಡು, ಮತ್ತೆ ಸುಮಾರು 3 ಇಂಚಿನ ಗಾಯ ಮಾಡಿ ಮುಂದೆ ಹೋಯಿತು.. ಅದೃಷ್ಟಕ್ಕೆ ಆ ಚೂರು ಕೆನ್ನೆಯಲ್ಲಿ ಸಿಕ್ಕಿ ಹಾಕಿಕೊಳ್ಳಲಿಲ್ಲ. ಆದರೆ ಭರಪೂರ ರಕ್ತ ಸೋರುತ್ತಿತ್ತು. ಹಾಗೆಯೇ ಗಾಯವಾದ ಜಾಗವನ್ನು ಕೈಯಲ್ಲಿ ಮುಚ್ಚಿಕೊಂಡು, ಅಲ್ಲೇ ಹತ್ತಿರದಲ್ಲಿ ಇದ್ದ ಜಿಲ್ಲಾ ಆಸ್ಪತ್ರೆಗೆ ಹೋದೆವು. (ಆ ಘಟನೆಗೆ ಕಾರಣನಾದವನು ಓಡಿ ಹೋಗಿಬಿಟ್ಟ. ಆಸ್ಪತ್ರೆಗೆ ಬರಲಿಲ್ಲ). ಆಗ ತಕ್ಷಣ ತುರ್ತು ಚಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗಿ, ವೈದ್ಯರು ಸುಮಾರು ಐದು ಆರು ಹೊಲಿಗೆ ಹಾಕಿ, ರಕ್ತಸ್ರಾವವನ್ನು ನಿಲ್ಲಿಸಿ, ಬ್ಯಾಂಡೇಜ್ ಹಾಕುತ್ತಿದ್ದರು. ಅಷ್ಟರಲ್ಲಿ ನಮ್ಮ ಒಬ್ಬ ಸ್ನೇಹಿತ ನಮ್ಮ ಮನೆಗೆ ಹೋಗಿ ಸುದ್ದಿ ಮುಟ್ಟಿಸಿದ. ನಮ್ಮ ತಂದೆಯವರು ಗಾಬರಿಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಶುಶ್ರೂಷೆಯ ಎಲ್ಲಾ ಹಂತಗಳು ಮುಗಿದು ಆಗಿತ್ತು.

ಮುಖದ ಮೇಲಿನ ಈ ಗಾಯದ ಕಲೆ ಈಗಲೂ ಇದೆ. ಇದನ್ನು ಕೇಳಿದವರಿಗೆಲ್ಲ ವಿವರವಾಗಿ ಘಟನೆಯನ್ನು ವಿವರಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಯಾರಾದರೂ ಕೇಳಿದರೆ ನಾನು ಬೆಂಗಳೂರಿನಲ್ಲಿ ದೊಡ್ಡ ರೌಡಿಯಾಗಿದ್ದೆ, ಹೊಡೆದಾಟದಲ್ಲಿ ಆದ ಗಾಯ ಇದು ಎಂದು ಹೇಳುತ್ತಿದ್ದೆ. ಹೀಗಿದೆ ಗಳಾಸಿನ ಜೊತೆ ನನ್ನ ನೆಂಟಸ್ತಿಕೆ!

ಟಿ ವಿ ಬಿ ರಾಜನ್‌, ಬೆಂಗಳೂರು

6 Comments on “ನೆನಪಿನ ಪುಟಗಳಲ್ಲಿ: ‘ಗಳಾಸಿನ ನಂಟು’

  1. ಬಾಲ್ಯದ ಗಳಾಸಿನ ಗೆಳೆತನವು ಗಾಯದ ರೂಪದಲ್ಲಿ ನಿರಂತರ ನೆನಪಿನಲ್ಲಿ ಉಳಿಯುವಂತೆ ಮಾಡಿದ ಮಾತ್ರಕ್ಕೆ ಕುಗ್ಗದೆ, ಆ ನೋವಿನ ನೆನಪನ್ನು ಈ ಲೇಖನದಲ್ಲಿ ಪಡಿಮೂಡಿಸಿರುವಿರಿ…ಧನ್ಯವಾದಗಳು.
    ಬೇರೆಲ್ಲಾ ಮರೆತರೂ, ಇಂತಹ ಗಾಯಗಳು ಬಾಲ್ಯದ ಕೆಲವು ಘಟನೆಗಳಿಗೆ ಸಾಕ್ಷಿಯಾಗಿ ನಿಂತು ಎಂದಿಗೂ ಮರೆಯಲಾರದಂತೆ ಮಾಡಿಬಿಡುತ್ತವೆ!

  2. ಅನುಭವ ಕಥನನೊಂದಿಗೆ ಅಂದಿಗೂ ಇಂದಿಗೂ ಇರುವ ಅಜಗಜಾಂತರವನ್ನೂ ಗುರುತಿಸಿರುವುದೊಂದು ಗಮನೀಯ ಅಂಶ.

  3. ಚಿಕ್ಕದಾದ ಅನುಭವ ಕಥನ ಚೆನ್ನಾಗಿ ಮೂಡಿಬಂದಿದೆ..ಮಾವಿನ ಎಲೆಯನ್ನು ಸುಟ್ಟು ಬೂದಿ ಹಾಕಿ ರಕ್ತ ನಿಲ್ಲಿಸಬಹುದು ಎಂಬ ಮನೆ ಮದ್ದು ತಿಳಿಯಿತು..ಸಾರ್

  4. ಪ್ರೋತ್ಸಾಹದ ನುಡಿಗಳಿಗೆ ಧನ್ಯ ವಾದಗಳು.
    ಪ್ರಕಟಿಸಿದ ಸಂಪಾದಕಿ ಮೇಡಂ ರವರಿಗೆ ಹೃತ್ಪೂರ್ವಕ ಧನ್ಯವಾದಗಳು

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *