ಥೀಮ್-ಬರಹ

ಅಜ್ಜಿ ಊರಲ್ಲಿ ಬೇಸಿಗೆಯ ರಜೆಯ ಮಜ

Share Button

“ಆಯ್ತು ಹೋಗಪ್ಪ”,
ಅಪ್ಪ, ಅರೆ ಮನಸ್ಸಿನಿಂದ, ಅರೆ ಸಿಟ್ಟಿನಿಂದ, ಹೇಳಿದ್ದೇ ತಡ, ಒಂದು ಬಟ್ಟೆ ಚೀಲದಲ್ಲಿ ಕೈಗೆ ಸಿಕ್ಕಷ್ಟು ಬನೀನು, ಚಡ್ಡಿ, ಶರ್ಟು, ನಿಕ್ಕರ್, ಗಳನ್ನು ಇಟ್ಟುಕೊಂಡು, ಸಪ್ಪೆ ಮೋರೆ ಹಾಕಿಕೊಂಡು ಬಸ್ ಸ್ಟ್ಯಾಂಡಿನ ಕಡೆ ಹೋಗುತ್ತಿದ್ದ ಅಜ್ಜಿ (ಅಮ್ಮನ ಅಮ್ಮ) ಬಳಿ ಓಡಿ ಹೋಗಿ, ಜೊತೆ ಸೇರಿದಾಗ ಅಜ್ಜಿಯ ಮುಖದಲ್ಲೂ ಸಂತೋಷ, ಸಂಭ್ರಮ.

ಇದು ಅರವತ್ತರ ದಶಕ. ಆಗ ನಾವು ಚಿತ್ರದುರ್ಗದಲ್ಲಿ ಪ್ರೈಮರಿ ಸ್ಕೂಲ್ ವಿದ್ಯಾರ್ಥಿಗಳು. ಬೇಸಿಗೆ ರಜ ಪ್ರಾರಂಭವಾದ ತಕ್ಷಣ, ನಮ್ಮ ಅಜ್ಜಿ ನಮ್ಮನ್ನು ಊರಿಗೆ ಕರೆದುಕೊಂಡು ಹೋಗಲು ಬರುತ್ತಿದ್ದರು. ಆದರೆ ಇನ್ನೂ ನಮ್ಮ ಅಣ್ಣಂದಿರಿಗೆ ಪರೀಕ್ಷೆಗಳು ನಡೆಯುತ್ತಿದ್ದು, ಅವರಿಗೆ ರಜೆ ಬಿಟ್ಟ ನಂತರ ಕಳುಹಿಸುವುದಾಗಿ ಖಡಾ ಖಂಡಿತವಾಗಿ ಅಪ್ಪ ಹೇಳಿದಾಗ, ಅಜ್ಜಿ ಸಪ್ಪೆ ಮೋರೆ ಹಾಕಿಕೊಂಡು ವಾಪಾಸ್‌ ಹೋಗುತ್ತಿದ್ದರು. ಆದರೆ ನಮ್ಮ ಹಠ ಮತ್ತು ಅಳು ಮೋರೆ ನೋಡಿ ಅರ್ಧ ಸಿಟ್ಟಿನಿಂದ, ಅರ್ಧ ಬೇಜಾರಿನಿಂದ, ಅಪ್ಪ ಅನುಮತಿ ನೀಡುತ್ತಿದ್ದರು. ಹುಡುಗರು ಇಲ್ಲೇ ಇದ್ದು ರಜೆಯಲ್ಲಿ ಮಗ್ಗಿ, ಇಂಗ್ಲಿಷ್ ಗ್ರಾಮರ್, ಜನರಲ್ ನಾಲೆಡ್ಜ್ ಗಳನ್ನು ಕಲಿಯಲಿ, ಆ ಹಳ್ಳಿಗೆ ಹೋಗಿ ಸುಮ್ಮನೆ ತಿರುಗಿ ತಿರುಗಿ ಹಾಳಾಗುತ್ತಾರೆ, ಎನ್ನುವುದು ಅವರ ಅನಿಸಿಕೆ.

ನಾವು ಅಜ್ಜಿಯ ಜೊತೆ “ಜ್ಯೋತಿ ಬಸ್” ನಲ್ಲಿ ಅವರ ಊರಿಗೆ ಹೋಗುತ್ತಿದ್ದೆವು. ನಮ್ಮ ಅಜ್ಜಿಯ ಊರಿನವರೆಗೂ ಯಾವ ಬಸ್ಸುಗಳೂ ಇರುತ್ತಿರಲಿಲ್ಲ. ಸಂಜೆ 5:30 ಕ್ಕೆ ಚಿತ್ರದುರ್ಗದಿಂದ ಹೊರಟರೆ ನಮ್ಮ ಅಜ್ಜಿಯ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ಮುಷ್ಟಲಗುಮ್ಮಿಗೆ ಹೋಗುತ್ತಿತ್ತು. ಅಷ್ಟರಲ್ಲಿ ರಾತ್ರಿ 8:30 ಆಗಿ ಕತ್ತಲಲ್ಲಿ ಹೋಗಲು ಯಾರೂ ಜೊತೆ ಇಲ್ಲದಿದ್ದರೆ ಅಲ್ಲೇ ಸಾಹುಕಾರರ ಮನೆಯ ಒಳ ಜಗಲಿಯ ಮೇಲೆ ಮಲಗಿ, ಬೆಳಗ್ಗೆ ಎದ್ದು ನಡೆದು ಹೋಗುತ್ತಿದ್ದೆವು. ಮಧ್ಯದಲ್ಲಿ ಚಿನ್ನಹಗರಿ ಹಳ್ಳ. ಅದರಲ್ಲಿ ಕೈ ಕಾಲು ಮುಖ ತೊಳೆದು ಒರೆಸಿಕೊಳ್ಳಲು ಟವಲ್ ಇಲ್ಲದೆ ಹಾಗೇ ಹೋಗ್ತಾ ಹೋಗ್ತಾ ಒಣಗಿಸಿ ಕೊಳ್ಳುತ್ತಿದ್ದೆವು.

ಊರು ಮುಟ್ಟಿದ ನಂತರ ನಮ್ಮ ದಿನಚರಿಯೆಲ್ಲಾ ನಮ್ಮ ದೊಡ್ಡಮ್ಮನವರ ಜೊತೆ. ಬೆಳಗ್ಗೆ ಎದ್ದ ತಕ್ಷಣ ಹಸುಗಳನ್ನು ಊರ ಮುಂದಿನ ಮಂದೆಗೆ ಹೊಡೆದುಕೊಂಡು ಹೋಗಬೇಕು. ಹಸುಗಳು ಅಭ್ಯಾಸ ಬಲದಿಂದ ತಮ್ಮಷ್ಟಕ್ಕೆ ತಾವೇ ಹೋದರೂ, ನಾವು ಒಂದು ಜೋಳದ ದಂಟು ಕೈಯಲ್ಲಿ ಹಿಡಿದು ಹೊಯ್‌ ಹೋಯ್‌ಎನ್ನುತ್ತಾ ಹೊಡೆದುಕೊಂಡು ಹೋಗಿ, ನಮ್ಮ ಹಸುಗಳು ಊರ ಮುಂದಿನ ಊರ ದನಗಳ ಗುಂಪಿಗೆ ಸೇರಿಸಿದ ಮೇಲೆ, ಅವುಗಳನ್ನು ಎಲ್ಲಾ ಹಸುಗಳ ಜೊತೆ ಹೊಡೆದುಕೊಂಡು ಹೋಗುತ್ತಾರೋ ಇಲ್ಲವೋ ಅಂತ ಅನುಮಾನವಾಗಿ, ಅಲ್ಲೇ ಕಟ್ಟೆಯ ಮೇಲೆ ಕೂಡುತ್ತಿದ್ದೆವು. ಊರಿನಲ್ಲಿರುವ ಎಲ್ಲಾ ಹಸುಗಳು ಬಂದಮೇಲೆ ದನ ಕಾಯುವವರು ಅವುಗಳನ್ನೆಲ್ಲ ಮೇಯಿಸಲು, ಹೊಡೆದುಕೊಂಡು ಹೋಗುವವರೆಗೂ ಕುಳಿತು, ನಂತರ ಹಿಂದಿರುಗಿ ಬರುತ್ತಿದ್ದೆವು. ನಂತರ ಎಮ್ಮೆಗಳ ಸರದಿ.

ಅವೆರಡನ್ನು ಕಳುಹಿಸಿದ ನಂತರ (ಮಕ್ಕಳನ್ನು ಶಾಲೆಗೆ ಕಳುಹಿಸಿದ ಹಾಗೆ), ನಾವು ಸ್ನಾನ ಮಾಡಿ, ಪಕ್ಕದಲ್ಲೇ ಇದ್ದ ಈಶ್ವರನ ಗುಡಿಗೆ ಹೋಗಬೇಕು. ಬರೀ ಕೈಯಲ್ಲಿ ಹೋಗುವ ಹಾಗಿಲ್ಲ. ಸಣ್ಣ ಬೆಲ್ಲದ ಚೂರನ್ನು ಹಿಡಿದು ದೇವಸ್ಥಾನಕ್ಕೆ ಹೋಗಿ, ಎಗರಿ ಎಗರಿ ಗಂಟೆ ಹೊಡೆದು, ಕೈಮುಗಿದು, ಸಾಷ್ಟಾಂಗ ನಮಸ್ಕಾರ ಮಾಡಿ, ತೆಗೆದುಕೊಂಡು ಹೋದ ಬೆಲ್ಲದ ಚೂರನ್ನು ಎರಡು ಭಾಗ ಮಾಡಿ ಒಂದು ಭಾಗ ಈಶ್ವರನಿಗೆ, ಇನ್ನೊಂದು ಭಾಗ ಎದುರಿಗೆ ಕುಳಿತಿದ್ದ ಬಸವಣ್ಣನಿಗೆ, ಹಂಚಿ ಕೈಮುಗಿದು, ಅಡ್ಡ ಬಿದ್ದು ಹೊರ ಬರುವ ವೇಳೆಗೆ, ಅದೇ ಊರಿನ ಮೂಕ ಜಯವ್ವ ( ನಮ್ಮದೇ ವಯಸ್ಸಿನ ಮಾತನಾಡಲು ಬಾರದ ಮೂಕ ಹುಡುಗಿ) ಬಂದು, ದೇವರಿಗೆ ಕೈ ಮುಗಿದು ನಾವು ಇಟ್ಟ ಬೆಲ್ಲವನ್ನು ತಿಂದುಬಿಡುತ್ತಿದ್ದಳು. ನಾವು ಯಾಕೆ ತಿಂದೆ ಅಂತ ಜಗಳ ಮಾಡಿದಾಗ, ಮಾತನಾಡಲು ಬಾರದಿದ್ದರೂ ಕೈ ಬಾಯಿ ಸನ್ನೆ ಮಾಡಿ, ಅದು ದೇವರು ಕೊಟ್ಟ ಪ್ರಸಾದ, ಅದಕ್ಕೆ ತಿಂದೆ ಎನ್ನುತ್ತಿದ್ದಳು.

ನಂತರ ಮನೆಗೆ ಬಂದು ಬೆಳಗಿನ ಉಪಹಾರ ಆಗುವವರೆಗೂ ಕಾಯುತ್ತಾ ಕಟ್ಟೆ ಮೇಲೆ ಕೂತಿರುವಾಗ “ಕಂತೇ ಭಿಕ್ಷ” ಎಂದು ಪಕ್ಕದ ಈಶ್ವರ ಗುಡಿಯಲ್ಲಿ ಪೂಜೆ ಮಾಡುವ ಅಯ್ಯನವರು ಬಂದಾಗ, ಅವರಿಗೆ ಭಿಕ್ಷೆ ಕೊಡಲು ಪೈಪೋಟಿಯ ಮೇಲೆ, ದೊಡ್ಡಮ್ಮ ಕೊಟ್ಟ ಏನಾದರೂ ತಿನಿಸನ್ನು ಕೊಟ್ಟು ಅವರ ಕಾಲಿಗೆ ಅಡ್ಡ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಮತ್ತೊಬ್ಬ ಅಯ್ಯನವರು, “ಕೋರಾಣ್ಯದಲಿ ಭಿಕ್ಷೆ” ಅಂತ ಬರುತ್ತಿದ್ದರು ಅವರಿಗೆ ಯಾವುದಾದರೂ ಧಾನ್ಯವನ್ನು ಕೊಡಬೇಕಾಗಿತ್ತು, ಅದಕ್ಕೂ ಮತ್ತೆ ಪೈಪೋಟಿ. ಅಷ್ಟೋತ್ತಿಗೆ ಬೆಳಗಿನ ಉಪಾಹಾರ ತಿನ್ನಲು ಕಟ್ಟೆಯ ಮೇಲೆ ಸಾಲಾಗಿ ಕೂರುತ್ತಿದ್ದೆವು.

ಅಷ್ಟರಲ್ಲಿ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋಗುವ ಹೊತ್ತಾಗುತ್ತಿತ್ತು. ನಸುಕಿನಲ್ಲೇ ಎದ್ದು, ಬೇಸಾಯಕ್ಕೆ ಹೋದ ದೊಡ್ಡಪ್ಪನವರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದೆವು. ಮುದ್ದೆ,ಅನ್ನ , ಸಾರು, ಮೊಸರು, ಮಜ್ಜಿಗೆ, ಚಟ್ನಿ ಎಲ್ಲಾ ಒಂದು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ನಮ್ಮ ದೊಡ್ಡಮ್ಮ ಹೊರಟರೆ, ಅವರ ಜೊತೆ ನಾವೂ ಹೊರಡುತ್ತಿದ್ದೆವು. ಬುಟ್ಟಿ ಹೊರಲು ನಾ ಮುಂದು ತಾ ಮುಂದು ಅಂತ ಜಗಳ. ಸ್ವಲ್ಪ ಸ್ವಲ್ಪ ದೂರ ಒಬ್ಬೊಬ್ಬರ ತಲೆ ಮೇಲೆ ಇಡುತ್ತಿದ್ದರು. ನಾವು ಹೊಲ ಮುಟ್ಟುವಷ್ಟರಲ್ಲಿ ಮಜ್ಜಿಗೆ ಸಾರು ತುಳುಕಾಡಿ ಚೆಲ್ಲಿ ದೊಡ್ಡಮ್ಮನ ಕೈಯಲ್ಲಿ ಬೈಸಿಕೊಳ್ಳುತ್ತಿದ್ದೆವು. ಹೊಲ ಮುಟ್ಟಿದ ನಂತರ ಬಾವಿಯ ಬಳಿಯಲ್ಲಿದ್ದ ಮಾವಿನ ಮರದ ಕೆಳಗೆ ಬುಟ್ಟಿ ಇಟ್ಟುಕೊಂಡು ಕೂರುತ್ತಿದ್ದೆವು. ಅಷ್ಟರಲ್ಲಿ ಪಂಪ್ ಚಾಲು ಮಾಡಿದ್ದರೆ, ಅಲ್ಲಿ ನೀರಿನಲ್ಲಿ ಆಟವಾಡಿ, ಬಟ್ಟೆಯನ್ನೆಲ್ಲ ನೆನೆಸಿಕೊಂಡು, ಬಿಸಿಲಿನಲ್ಲಿ ಒಣಗಿಸಿಕೊಳ್ಳುತ್ತಿದ್ದೆವು. ದೊಡ್ಡಪ್ಪನವರು ಕೈಕಾಲು ಮುಖ ತೊಳೆದು ಊಟಕ್ಕೆ ಬರುತ್ತಿದ್ದರು. ಅವರ ಜೊತೆ ನಾವೂ (ಮನೆಯಲ್ಲಿ ತಿಂದು ಬಂದಿದ್ದರೂ ಸಹ) ತಿನ್ನಲು ಕೈ ಒಡ್ಡಿ ಕೂರುತ್ತಿದ್ದೆವು. ಇದು ಮೊದಲೇ ಗೊತ್ತಿದ್ದ ದೊಡ್ಡಮ್ಮ ಸ್ವಲ್ಪ ಜಾಸ್ತಿಯೇ ಇಟ್ಟುಕೊಂಡು ಬಂದಿರುತ್ತಿದ್ದರು. ಅವರ ಜೊತೆ ಮಾವಿನ ಮರದ ನೆರಳಿನಲ್ಲಿ ಊಟ ಮಾಡಿ, ಅವರ ಜೊತೆ ನೇಗಿಲು ಹಿಡಿದು ಹೊಲ ಉಳಲು ಹೋಗುತ್ತಿದ್ದೆವು. ನಿಮಗೆ ಆಗೊಲ್ಲ ಬಿಡ್ರೋ ಅಂದರೂ ಬಿಡದೆ ಹಠ ಮಾಡಿ ಸ್ವಲ್ಪ ದೂರ ಜೊತೆಯಲ್ಲಿ ಹೋಗುತ್ತಿದ್ದೆವು. ನಂತರ ಬಾವಿಯ ಬಳಿ ಬಂದು ಬಟ್ಟೆ ಬಿಚ್ಚಿ ಬಾವಿ ಒಳಗೆ ಇಳಿಯಲು ಮಾಡಿದ ದಾರಿಯಲ್ಲಿ ಇಳಿದು, ನೀರಿನ ಆಳಕ್ಕೆ ತಕ್ಕಂತೆ ಮೇಲಿನಿಂದ ಎಗರಿ ಈಜುತ್ತಿದ್ದೆವು. ಎಷ್ಟೋ ಹೊತ್ತಿನ ನಂತರ ನಮ್ಮ ದೊಡ್ಡಮ್ಮ “ಸಾಕು ನಡಿರೋ ಹೊತ್ತಾಯಿತು ಮನೆಗೆ ಹೋಗಬೇಕು” ಎನ್ನುತ್ತಿದ್ದರು. ಮತ್ತೆ ಖಾಲಿ ಬುಟ್ಟಿ ಹೊರಲು ಪೈಪೋಟಿ. ಈಗ ಚೆಲ್ಲುವಂತಹದು ಏನೂ ಇರದಿದ್ದರಿಂದ, ದೊಡ್ಡಮ್ಮನೂ ನಿರಾತಂಕವಾಗಿ ಬುಟ್ಟಿ ಹೊರಿಸುತ್ತಿದ್ದರು.

ಮನೆಗೆ ಬಂದು ಸ್ವಲ್ಪ ಹೊತ್ತು ಚೌಕ ಬಾರ, ಗೊಟ್ಟು ಗುಣಿ ಆಡಿ, ಏನಾದರೂ ರುಬ್ಬುವುದು, ಬೀಸುವುದು ಇದ್ದರೆ ಅಲ್ಲೂ ದೊಡ್ಡಮ್ಮನವರಿಗೆ ಸಹಾಯ (ಸಹಾಯಕ್ಕಿಂತ ನಮ್ಮಿಂದ ಅವರಿಗೆ ತೊಂದರೆಯೇ ಜಾಸ್ತಿ) ಮಾಡುತ್ತಿದ್ದೆವು. ಅಷ್ಟು ಹೊತ್ತಿಗೆ ಮಧ್ಯಾಹ್ನದ ಊಟ ಮತ್ತು ವಿಶ್ರಾಂತಿ. ಸ್ವಲ್ಪ ಬಿಸಿಲು ಕಡಿಮೆ ಆದಮೇಲೆ ಬಟ್ಟೆ ಒಗೆಯುವ ಕಾರ್ಯಕ್ರಮ. ಎಲ್ಲರೂ ಬಿಟ್ಟ ಬಟ್ಟೆಗಳನ್ನು ಎಷ್ಟು ಜನರಿರುತ್ತಾರೋ ಅಷ್ಟು ಗಂಟುಗಳನ್ನು ಮಾಡಿ, ತಲೆ ಮೇಲೆ ಹೊರೆಸುತ್ತಿದ್ದರು. ಎಲ್ಲಾ ಊರ ಮುಂದಿನ ಹಳ್ಳಕ್ಕೆ ಹೋಗಿ ಒಬ್ಬೊಬ್ಬರು ಒಂದೊಂದು ಬಂಡೆಗಳನ್ನು ಹಿಡಿದು, ಆ ಬಂಡೆಗಳನ್ನು ತೊಳೆದು, ಕೂರುತ್ತಇದ್ದೆವು. ಇದೆಲ್ಲಾ ನಮ್ಮ ದೊಡ್ಡಮ್ಮನ ತರಬೇತಿ. ಅಷ್ಟರಲ್ಲೇ ದೊಡ್ಡಮ್ಮ ಚಿಕ್ಕ ಚಿಕ್ಕ ಬಟ್ಟೆಗಳನ್ನು ನೀರಿನಲ್ಲಿ ನೆನೆಸಿ ಸೋಪು ಹಾಕಿ ನಮಗೆ ಒಗೆಯಲು ಕೊಡುತ್ತಿದ್ದರು. ಬಟ್ಟೆಯನ್ನು ಒಗೆಯುವಾಗ, ಬಟ್ಟೆ ಕುಪ್ಪೆ, ಕುಪ್ಪೆ ಬೀಳಬೇಕು, ಇಲ್ಲದಿದ್ದರೆ, ಬಟ್ಟೆ ಹರಿದು ಹೋಗುತ್ತದೆ ಎಂದು ಹೇಳುತ್ತಿದ್ದರು. ನಾವು ಬಟ್ಟೆ ಒಗೆದು ನೀರಿನಲ್ಲಿ ಜಾಲಾಡಿಸಿ ಸೋಪ್ ಎಲ್ಲಾ ಹೋದ ನಂತರ ಹಿಂಡಿ ಒಣಹಾಕಿ. ಬಂದು ಮುಂದಿನ ಬಟ್ಟೆ ತೆಗೆದುಕೊಳ್ಳುತ್ತಿದ್ದೆವು. ಈ ರೀತಿ ಬಟ್ಟೆ ಒಗೆಯುವುದೆಲ್ಲ ಮುಗಿದ ಮೇಲೆ, ಸ್ವಲ್ಪ ನೀರು ಜಾಸ್ತಿ ಇರುವ ಕಡೆ ನೀರಿನಲ್ಲಿ ಮಲಗಿ, ಕೈ ಮೈ ಎಲ್ಲಾ ಉಜ್ಜಿಕೊಂಡು, ಹಾಗೆ ಮರಳಿನ ಮೇಲೆ ಹೋಗಿ ಮೈ ಒಣಗಿಸಿ ಕೊಳ್ಳುತ್ತಿದ್ದೆವು. ಅಷ್ಟರಲ್ಲಿ ನಾವು ಒಗೆದು ಹಾಕಿದ ಬಟ್ಟೆಗಳು ಒಣಗಿರುತ್ತಿದ್ದವು. ಅವುಗಳನ್ನು ಅಚ್ಚುಕಟ್ಟಾಗಿ ಮಡಚುತ್ತಿದ್ದೆವು. ಸೀರೆ ಪಂಚೆಗಳಾದರೆ ಇಬ್ಬಿಬ್ಬರು ಸೇರಿ ಮಡಚುತ್ತಿದ್ದೆವು. ಈ ರೀತಿ ಒಗೆದ ಬಟ್ಟೆಗಳನ್ನು ಮತ್ತೆ ಗಂಟು ಕಟ್ಟಿಕೊಂಡು ಮನೆಗೆ ಬರುತ್ತಿದ್ದೆವು. ಅಷ್ಟು ಹೊತ್ತಿಗೆ ಅದು ನೀರು ಸೇದುವ ಸಮಯ.

ಪಕ್ಕದಲ್ಲೇ ಇದ್ದ ಸೇದೋ ಬಾವಿಗೆ ಹಗ್ಗ ಕೊಡಪಾನಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಆಗ ಊರಿನ ಬೇರೆ ಜನರೂ ನೀರು ಸೇದಲು ಬರುತ್ತಿದ್ದರು. ನಾವು ನಮ್ಮ ಸರತಿಗಾಗಿ ಕಾಯುತ್ತಾ ನಮ್ಮ ಮುಂಚೆ ಇದ್ದವರಿಗೆ ಸಹಾಯ ಮಾಡಿ, ನಮ್ಮ ಕೊಡಪಾನ ಬಾವಿಯಲ್ಲಿ ಬಿಟ್ಟು ನಮ್ಮ ಮುಂದಿನ ಸರದಿಗೆ ಕಾಯುವವರ ಸಹಾಯದಿಂದ ನೀರು ಹೊತ್ತುಕೊಂಡು ಬರುತ್ತಿದ್ದೆವು. ಹೀಗೆ ಮನೆಯಲ್ಲಿ ಇರುವ ಕೊಳಗ, ಸೋರೆ, ಎಲ್ಲಾ ತುಂಬಿದ ಮೇಲೆ, ತುಂಬಿದ ಕೊಡಪಾನಗಳನ್ನು ಇಳಿಸಬೇಕಾಗಿತ್ತು. ಅಷ್ಟೊತ್ತಿಗೆ ಕತ್ತಲಾಗುವ ಸಮಯ. ಮನೆಯಲ್ಲಿರುವ ಲಾಟೀನು, ದೀಪಗಳ ಗಾಜುಗಳನ್ನು ಬೂದಿಯಿಂದ ತಿಕ್ಕಿ ತೊಳೆದು, ಅವುಗಳಿಗೆ ಸೀಮೆಎಣ್ಣೆ ತುಂಬಿಸಿ ರೆಡಿ ಮಾಡುತ್ತಿದ್ದೆವು. ಕತ್ತಲಾದ ನಂತರ ದೇವರ ದೀಪ ಹಚ್ಚಿ ಲಾಟೀನುಗಳನ್ನು ಹಚ್ಚಿ ಇಡುತ್ತಿದ್ದರು. ಆಗ ನಾವೆಲ್ಲ ಲಾಟೀನು ಬೆಳಕಿನಲ್ಲಿ ಸುತ್ತ ಕುಳಿತು ಸ್ವಲ್ಪ ಹೊತ್ತು ಓದುವುದು ಬರೆಯುವುದು ಮಾಡಬೇಕಾಗಿತ್ತು. ಅಷ್ಟರಲ್ಲಿ ರಾತ್ರಿ ಅಡುಗೆ ತಯಾರಾಗುತ್ತಿತ್ತು. ರಾತ್ರಿ ಊಟ ದೊಡ್ಡಪ್ಪನವರ ಜೊತೆ ಕುಳಿತು ಬಿಸಿ ಬಿಸಿ ಅನ್ನ, ತುಪ್ಪ ,ಉಪ್ಪು ಮಿಟಿಕೆ ಮಾಡಿ ತಿನ್ನುತ್ತಿದ್ದೆವು. ಊಟದ ನಂತರ ದೊಡ್ಡ ಕಟ್ಟೆಯ ಮೇಲೆ ದೊಡ್ಡದೊಂದು ಜಮಖಾನ ಹಾಸಿರುತ್ತಿದ್ದರು. ಅದರ ಮೇಲೆ ನಾವು ರಾತ್ರಿ ನಿದ್ದೆ ಬರುವವರೆಗೂ, ಆಕಾಶ ನೋಡುತ್ತಾ, ನಕ್ಷತ್ರ ಎಣಿಸುತ್ತ, ಹರಟೆ ಹೊಡೆಯುತ್ತಾ, ಮಲಗುತ್ತಿದ್ದೆವು.

ಇದು ನಮ್ಮ ಬೇಸಿಗೆ ರಜೆಯಲ್ಲಿ ಅಜ್ಜಿ ಊರಿನ ಒಂದು ದಿನದ ದಿನಚರಿ.

ಟಿ ವಿ ಬಿ ರಾಜನ್, ಬೆಂಗಳೂರು

11 Comments on “ಅಜ್ಜಿ ಊರಲ್ಲಿ ಬೇಸಿಗೆಯ ರಜೆಯ ಮಜ

  1. ಸರಳ ಸುಂದರ ಬಾಲ್ಯದ ಜೀವನದ ಅನಾವರಣ ಚೆನ್ನಾಗಿ ಮೂಡಿಬಂದಿದೆ ಸಾರ್

  2. ಸರಳ ಸುಂದರ ಬಾಲ್ಯಜೀವನದ ಅನಾವರಣ ಚೆನ್ನಾಗಿ ಮೂಡಿಬಂದಿದೆ ಸಾರ್

  3. ಬಾಲ್ಯದ ನೆನಪುಗಳು ಯಾವಾಗಲೂ ಆನಂದಕರ, ಉಲ್ಲಾಸದಾಯಕ. ನಿಮ್ಮ ಲೇಖನವು ಓದುಗರನ್ನು ತಮ್ಮ ತಮ್ಮ ಬಾಲ್ಯದತ್ತ ಒಯ್ಯುವಲ್ಲಿ ಸಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ!

  4. Myself also experienced the routine at woodevu or Hudem now atleast for 1 year when Myself and my beloved brother Mallikarjunappa studied together at rural middle school. Now we remember the good olden days of village life , not to be seen nowadays. Thanks for the simple village life and unlimited enjoyment. Thanks for Mr Rajan .

Leave a Reply to Dr. Rashmi Hegde Cancel reply

 Click this button or press Ctrl+G to toggle between Kannada and English

Your email address will not be published. Required fields are marked *