ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 37

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ನಿರ್ಮಲಾ ಪುನಃ ಗರ್ಭಿಣಿಯಾಗಿದ್ದಳು. ಅವಳ ತಾಯಿ, ತಂದೆ, ಚಿಕ್ಕಪ್ಪ-ಚಿಕ್ಕಮ್ಮ ಮಗಳನ್ನು ನೋಡಿಕೊಂಡು ಬರಲು ಹೊರಟರು. ತಿಂಡಿ ತಿಂದುಕೊಂಡು ಹೊರಡುವುದಾಗಿ ಹೇಳಿದ್ದರಿಂದ ನಿರ್ಮಲಾ ಅತ್ತೆ ಊಟಕ್ಕೆ ರೆಡಿಮಾಡಿದ್ದರು.
ಬಂದವರ ಕುಶಲೋಪರಿ ವಿಚಾರಿಸಿ ತಣ್ಣನೆಯ ನೀರು ಮಜ್ಜಿಗೆ ಕುಡಿಯಲು ಕೊಟ್ಟರು. ಹೆಂಗಸರು ಒಳಗೆ ಹೋದರು.

“ಏನ್ಸಮಾಚಾರ ದೀಕ್ಷಿತ್ ಅವರೇ ಈ ಸಲ ಏನು ಹಾಕಿದ್ದೀರಾ?”
“ನಾನು ಜಮೀನು, ಆಸ್ತಿ, ಮನೆ ಮಠ ಮಾರಬೇಕೂಂತಿದ್ದೇನೆ. ಯಾರಾದರೂ ಒಳ್ಳೆ ಗಿರಾಕಿ ಸಿಕ್ಕದರೆ ಹೇಳಿ.”
“ಜಮೀನು ಮಾರ‍್ತಾ ಇರುವುದಕ್ಕೆ ಕಾರಣ ಕೇಳಬಹುದಾ?”
“ಇರುವ ಒಬ್ಬ ಮಗ, ಸೊಸೆ, ಮೊಮ್ಮಕ್ಕಳಿಂದ ಹೇಗೆ ದೂರವಿರಲಿ ನೀವೇ ಹೇಳಿ. ಮಗನಿಗೆ ತನ್ನ ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಅವನ ಮಾತಿಗೆ ನಾವು ಬೆಲೆಕೊಡಬೇಕಲ್ವಾ? ರಾಜರಾಜೇಶ್ವರಿ ನಗರದಲ್ಲಿ ಒಂದು ಮನೆ ಭೋಗ್ಯಕ್ಕೆ ತೊಗೊಂಡಿದ್ದೇವೆ. ಈ ಜಮೀನು ಮಾರಾಟ ಆದ ಮೇಲೆ ಬೇರೆ ಮನೆ ತೊಗೋತೇವೆ.”
“ಒಳ್ಳೆಯದು. ನಾನು ನಿಮ್ಮ ಜಮೀನಿನ ಬಗ್ಗೆ ಯಾರಿಗಾದರೂ ಹೇಳ್ತೀನಿ.”
ಊಟದ ಕಾರ್ಯಕ್ರಮದ ನಂತರ ನಿರ್ಮಲಾ ಅರ್ಧ ಗಂಟೆ ಮಲಗಿದಳು. ನಂತರ ಎದ್ದು ಬಂದು ಡ್ರಾಯಿಂಗ್ ರೂಂನಲ್ಲಿ ತಂದೆ-ಚಿಕ್ಕಪ್ಪನ ಜೊತೆ ಕುಳಿತಳು.

“ಅಪ್ಪ ನಾನು ಒಂದು ಮಾತು ಹೇಳಲಾ?”
“ಹೇಳಮ್ಮ.”
“ನಾನು ನಿಮಗಿಂತ ಬಹಳ ಚಿಕ್ಕವಳು. ಇಷ್ಟು ದೊಡ್ಡ ಮಾತು ಆಡುವುದಕ್ಕೆ ಅರ್ಹತೆ ಇದೆಯೋ ತಿಳಿಯದು.”
“ಸಂಕೋಚ ಬೇಡ ಹೇಳಮ್ಮ. ನೀನು ಏನೇ ಹೇಳಿದರೂ ಯೋಚನೆ ಮಾಡೇ ಹೇಳ್ತೀಯಾಂತ ನನಗೆ ಗೊತ್ತು.”
“ಅಪ್ಪ ಚಿಕ್ಕಪ್ಪ ನಿಮಗೆ ಮನೆ ಇದೆ. ಮಕ್ಕಳ ಜೊತೆ ಇದ್ದೀರ. ಆದರೆ ರಘು ಚಿಕ್ಕಪ್ಪನ ಬಗ್ಗೆ ಯೋಚಿಸಿದ್ದೀರಾ?”
“ಗೋಪಿ ಗುರುಕುಲ ಶುರು ಮಾಡ್ತಾನೆ. ರಘೂನೂ ಅವನ ಜೊತೆ ರ‍್ತಾನೆ.”
“ಆ ಕೆಲಸ ರಘು ಅಂದುಕೊಂಡಷ್ಟು ಸುಲಭವಲ್ಲಪ್ಪ. ಇಂದು ಹಳ್ಳಿಯ ಮಕ್ಕಳೂ ಇಂಗ್ಲೀಷ್ ಮೀಡಿಯಂ ಶಾಲೆ ಬೇಕು ಅಂತಾರೆ. ಗೋಪಿ ಉಚಿತ ವಿದ್ಯಾಭ್ಯಾಸ ಕೊಡೋಣಾಂತಾನೆ. ಯಾವುದೇ ಲಾಭವಿಲ್ಲದೆ ಕೈ ಬರಿದುಮಾಡಿಕೊಳ್ಳಲು ಸಾಧ್ಯಾನಾ?”
“ನಾವು ಕೊಡದೇ ಇರ‍್ತಿವೇನಮ್ಮಾ?”
“ಎಷ್ಟು ದಿನ ಕೊಡ್ತೀರಾ? ನಾಳೆ ನಿಮ್ಮ ಮಕ್ಕಳು, ಸೊಸೆಯರು ಇದಕ್ಕೆ ಒಪ್ತಾರಾ?” ಕಾಲ ಬದಲಾದಂತೆ ಜನ ಬದಲಾಗ್ತಾರೆ ಅಪ್ಪ….”
“ನಾವೇನು ಮಾಡಬೇಕು ಹೇಳು.”

“ಮೊದಲು ರಘು ಚಿಕ್ಕಪ್ಪನ್ನ ಒಪ್ಪಿಸಿ ಗೋಪಿ ಕೆಲಸಕ್ಕೆ ಸೇರುವಂತೆ ಮಾಡಿ. ಆಮೇಲೆ ರಘು ಚಿಕ್ಕಪ್ಪಂಗೆ ಅವರು ಹೇಳಿದ ಕಡೆ ಮನೆ ತೆಗೆದುಕೊಡಿ. ಗೋಪಿಗೆ ಕೈ ತುಂಬಾ ಸಂಬಳ ಬರಬೇಕು. ರಘು ಚಿಕ್ಕಪ್ಪನಿಗೆ ಪೆನ್ಷನ್ ಜೊತೆ ಮನೆ ಬಾಡಿಗೆ ಬರಬೇಕು. ನಂತರ ಗೋಪಿ ಬೇರೆ ವಿಚಾರಗಳ ಬಗ್ಗೆ ಯೋಚಿಸಲಿ.”
“ನೀನು ಹೇಳ್ತಿರುವುದು ಸರಿ ಮಗಳೆ…….”
“ಅಪ್ಪಾ ಚಿಕ್ಕಪ್ಪ ಇನ್ನೊಂದು ಮಾತು. ನಾಳೆ ನಿಮ್ಮ ಮಕ್ಕಳಿಗೇ ಈ ವ್ಯವಸಾಯ, ಡೈರಿ ಬೇಡ ಅನ್ನಿಸಬಹುದು. ನಮಗೆ ಅನ್ನಿಸಿರುವ ಹಾಗೆ ನಾಳೆ ಅವರಿಗೂ ಮಕ್ಕಳು ಪಟ್ಟಣದಲ್ಲಿ ಓದಲಿ ಅನ್ನಿಸಬಹುದು ಆಗೇನು ಮಾಡುತ್ತೀರಾ?”
“ಹಾಗೆಂದು ಎಲ್ಲರೂ ಹಳ್ಳಿ ಬಿಟ್ಟು ಹೋಗಕ್ಕಾಗುತ್ತದೇನಮ್ಮಾ?”
“ನೀವಿಬ್ಬರೂ ಇನ್ನೆಷ್ಟು ದಿನ ದುಡಿಯಲು ಸಾಧ್ಯ? ವಿಶ್ರಾಂತಿ ಬೇಕು. ಮಕ್ಕಳು, ಮೊಮ್ಮಕ್ಕಳ ಜೊತೆ ಇರಬೇಕು ಅನ್ನಿಸಲ್ವಾ? ನೀವು ಈ ಆಸ್ತಿ ಮನೆ ಮಾರೀಂತ ಹೇಳ್ತಿಲ್ಲ. ಕೈಯಲ್ಲಿ ಹಣವಿರುವಾಗ ಬೆಂಗಳೂರಲ್ಲಿ ಮನೆಕೊಂಡುಕೊಳ್ಳಿ. ಜನ ಬೆಂಗಳೂರಿಗೆ ಹುಚ್ಚರಂತೆ ರ‍್ತಾರೆ. ಅಲ್ಲಿ ಹಣವಿಲ್ಲದೆ ಬದುಕೋದು ತುಂಬಾ ಕಷ್ಟ. ಬಾಡಿಗೆ ಕೊಟ್ಟು ಜೀವನಮಾಡುವುದು ಸಾಹಸಾಂತ ಹೇಳಬಹುದು.”
“ನೀನು ಹೇಳಿದ್ದು ಯೋಚಿಸುವಂತಿದೆ.”
“ಗೋಪಿಯ ಓದು ಇನ್ನು ೫-೬ ತಿಂಗಳಿಗೆ ಮುಗಿಯಬಹುದು. ಅವನನ್ನು ಕೆಲಸಕ್ಕೆ ಸೇರಲು ರಘು ಚಿಕ್ಕಪ್ಪ ಒಪ್ಪಿಸಲೇಬೇಕು.”
“ಆಗಲಮ್ಮ. ನೀನು ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದೀಯಾ. ಯೋಚಿಸ್ತೇವೆ” ಎಂದರು ಅವಳ ತಂದೆ.
ಮನೆ ತಲುಪುವ ವೇಳೆಗೆ ಅಣ್ಣ-ತಮ್ಮಂದಿರ ತಲೆ ಕಾರ್ಖಾನೆಯಾಗಿತ್ತು.

ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ರಮಾ, ಶಾರದಾ ಬೇರೆ ರೀತಿ ಯೋಚಿಸುತ್ತಿದ್ದರು. ಗಿರಿಜಾಳಿಂದ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ಶರು ಕೊಂಚ ತಿಳಿವಳಿಕೆ ಕಡಿಮೆ ಇಲ್ಲದವಳು ಅನ್ನಿಸಿತ್ತು. ಮೊದಮೊದಲು ಚಿಕ್ಕ ಹುಡುಗಿ ಎಂದು ಮಾರ್ಜಿನ್ ಕೊಟ್ಟಿದ್ದರು. ಆದರೆ ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಅವರ ಮನಸ್ಸು ಕೆಡಿಸಿತ್ತು. ಹೆಂಗಸರೆಲ್ಲರೂ ಅಡಿಗೆ ಮನೆಯಲ್ಲಿದ್ದರು. ಕೆಲಸದವಳು ತೊಳಿದಿಟ್ಟಿದ್ದ ಪಾತ್ರೆಗಳನ್ನು ಗಿರಿಜಾ, ಶರು ಒರೆಸಿಬೋರಲು ಹಾಕಿತ್ತಿದ್ದರು. ರಮಾ ತರಕಾರಿ ಕಟ್ ಮಾಡುತ್ತಿದ್ದರು. ಶಾಂತಮ್ಮ ಬೆಣ್ಣೆ ತೆಗೆಯುತ್ತಾ ಕುಳಿತಿದ್ದರು. ಅಡಿಗೆ ಕೆಲಸದ ವೇದಮ್ಮ ಶಾಂತಮ್ಮ ಬಳಿ ಬಂದು ನಿಂತು ಬೆಣ್ಣೆ ಕಡೆಯುವುದನ್ನು ನೋಡುತ್ತಿದ್ದರು.
“ಅಮ್ಮಾ ಆಗ ತಾನೆ ತೆಗೆದ ಬೆಣ್ಣೆ ತುಂಬಾ ಚೆನ್ನಾಗಿದೆ. ನನ್ನ ಮೊಮ್ಮಗ ಕಿಶೋರ ಬೆಣ್ಣೆ ನೋಡಿದರೆ ಕೃಷ್ಣನ ತರಹ ಆಡ್ತಾನೆ…….”
“ವೇದಮ್ಮ ಒಂದು ಡಬ್ಬಿ ತೊಗೊಂಡು ಬೆಣ್ಣೆ ಹಾಕಿಸಿಕೊಂಡು ಹೋಗಿ ಶಾರದಾ ಬೆಣ್ಣೆ ಕೊಡಮ್ಮ.”
‘ಆಗಲಿ ಅಕ್ಕಾ’ ಎಂದರು ಶಾರದ.
ಶರು ಅತ್ತೆ ಒಬ್ಬರೇ ಇದ್ದಾಗ ಕೇಳಿದಳು. “ಅತ್ತೆ ಡೈರಿ ಪ್ರಾಡಕ್ಟ್ಸ್ ನಮ್ಮದು. ದೊಡ್ಡತ್ತೆ ಹೇಳಿದ ಮೇಲೆ ನೀವು ಯಾಕೆ ಬೆಣ್ಣೆ ಕೊಟ್ರಿ. ನೀವೇ ಕೊಡಬಹುದಿತ್ತಲ್ವಾ?”
“ನಮ್ಮನೆ ಪದ್ಧತಿಯೇ ನಾವು ಅನುಸರಿಸೋದು. ನೀನು ಗಮನಿಸುತ್ತಿರು ಅರ್ಥವಾಗತ್ತೆ.”

ಅದಾದ ಎರಡು ದಿನಕ್ಕೇ ಕೆಲಸದ ಶಿವಮ್ಮ ಬಂದು ಹೇಳಿದಳು “ಬೆಂಗಳೂರಿನಿಂದ ನೆಂಟರು ಬರ‍್ತಾವ್ರೆ ಕಣಮ್ಮ ಅವರಿಗೆ ರಾಗಿ ಮುದ್ದೆ ಅಭ್ಯಾಸ ಇಲ್ಲ. ಬೈರ ಅಕ್ಕಿ ತರೋದೇ ಮರೆತು ಬುಟ್ಟವ್ನೆ.”
“ಅದಕ್ಕೆ ಯಾಕೆ ಯೋಚನೆ ಮಾಡ್ತೀಯ. ಗಿರಿಜಾ ಕೈಲಿ ಐದು ಸೇರು ಅಕ್ಕಿ ತೊಗೊಂಡು ಹೋಗು.”
ಅವಳು ಖುಷಿಯಿಂದ ಅಕ್ಕಿ ಅಳೆಸಿಕೊಂಡಳು.
“ಶರು ನಮ್ಮಲ್ಲಿ ಭೇದಭಾವವಿಲ್ಲ. ನಾವೆಲ್ಲಾ ಒಂದೇ ಅನ್ನುವ ಭಾವನೆಯಿದೆ. ನಮಗಿಷ್ಟ ಬಂದಿದ್ದನ್ನು ದಾನ ಮಾಡುವ ಸ್ವಾತಂತ್ರ್ಯವೂ ಇದೆ. ನೀನು ಇದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು.”

ಇನ್ನೊಂದು ಸಮಸ್ಯೆ ಅವರ ತಲೆ ತಿನ್ನುತ್ತಿತ್ತು. ಧರ್ಮರಾಜ ಇತ್ತೀಚೆಗೆ ಅಂಗಡಿ ಸರಿಯಾಗಿ ತೆಗೆಯುತ್ತಿರಲಿಲ್ಲ. ಹಿಂದೆಯೂ ಹೀಗೇ ಮಾಡುತ್ತಿದ್ದ. ಎರಡು ದಿನ ಅಂಗಡಿ ಮುಚ್ಚಿದರೆ ಭಾನುವಾರವೆಲ್ಲಾ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚೆಗೆ ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗಿತ್ತು. ಅದೇ ಊರಿನ ಪ್ರೈಮರಿ ಶಾಲೆ ಶಿಕ್ಷಕರು ಗೋವಿಂದಯ್ಯ ಒಂದು ದಿನ ಎದುರಿಗೆ ಸಿಕ್ಕಾಗ ಹೇಳಿದ್ದರು. “ಅಮ್ಮಾ ನಿಮಗೆ ಹೇಗೆ ಈ ವಿಚಾರ ಹೇಳಬೇಕೋ ತಿಳಿಯುತ್ತಿಲ್ಲ. ದಯವಿಟ್ಟು ಅನ್ಯಥಾಭಾವಿಸಬೇಡಿ”
“ನೀವು ನಮ್ಮ ಹಿತೈಷಿಗಳು ಹೇಳಿ ಪರವಾಗಿಲ್ಲ.”
“ಧರ್ಮ ಒಂದು ಹುಡುಗಿ ಜೊತೆ ಓಡಾಡ್ತಿದ್ದಾನಮ್ಮ. ಹುಡುಗಿ ಜಾತಿ ಕುಲ ನನಗೆ ಗೊತ್ತಿಲ್ಲ. ಲಕ್ಷಣವಾಗಿದ್ದಾಳೆ. ಸಿನಿಮಾ, ಹೋಟೆಲ್‌ಗೆ ಕರೆದುಕೊಂಡು ಬಂದಿದ್ದ.”
“ಹಾಸನದಲ್ಲಿ ನೋಡಿದ್ರಾ?”
“ಹೌದಮ್ಮ. ಅವನ ಸ್ನೇಹಿತರು `ಆ ಹುಡುಗಿ ಹೆಸರು ದಿವ್ಯಾಂತ ಹೇಳಿದರು.’ ಅವನು ಅವಳನ್ನೇ ಮದುವೆ ಆಗ್ತಾನೇಂತ ಹೇಳಿದರು.”
“ಸರಿ ಬಿಡಿ ನಾನೇ ವಿಚಾರಿಸ್ತೀನಿ” ಅಂದಿದ್ದರು ಶಾರದ. ಈ ವಿಚಾರ ಅಕ್ಕನಿಗೂ ಹೇಳಿದ್ದರು.
“ಹುಡುಗಿ ಯಾರೂಂತ ವಿಚಾರಿಸೋಣ. ಅನುಕೂಲವಾದರೆ ಮದುವೆ ಮಾಡೋಣ.”
ಅಷ್ಟರಲ್ಲಿ ಅವರು ನಿರ್ಮಲಾಳನ್ನು ನೋಡುವ ಕಾರ್ಯಕ್ರಮ ಬಿದ್ದಿತ್ತು.

ಮರುದಿನ ಧರ್ಮ ತಿಂಡಿಗೆ ಬಂದಾಗ ೧೦ ಗಂಟೆಯಾಗಿತ್ತು.
ಬಿಸಿ ಬಿಸಿ ಇಡ್ಲಿ ಬಡಿಸಿ ಶಾರದಾ ಕೇಳಿದರು. “ಧರ್ಮ ನೀನು ಒಂದು ಹುಡುಗಿ ಜೊತೆ ಓಡಾಡ್ತಿದ್ದೀಯಂತೆ ಯಾರವಳು?”
“ಅಮ್ಮಾ ಅದೂ………”
“ನನಗೆ ವಿಷಯ ಗೊತ್ತು. ದಿವ್ಯಾಂತ ಆ ಹುಡುಗಿ ಹೆಸರು. ಆ ಹುಡುಗಿ ಟೀಚರ್, ತಂದೆ ಪುರೋಹಿತರು. ಜಾತಕಾನೂ ತೋರಿಸಿಯಾಗಿದೆಯಾ?”
“ಹುಂ ಅಮ್ಮ. ಗೋತ್ರ, ಜಾತಕ ಎಲ್ಲಾ ಕೂಡುತ್ತದೆ.”
“ನಮಗ್ಯಾಕೆ ಹೇಳಲಿಲ್ಲ? ನಾವು ಹುಡುಗಿ ತಂದೆ-ತಾಯಿ ಜೊತೆ ಮಾತಾಡುವುದು ಬೇಡವಾ?”
“ನೀವು ಮಾತನಾಡಲೇಬೇಕು. ಆದರೆ ಅದು ಅಷ್ಟು ಸುಲಭವಲ್ಲ ಅನ್ನಿಸ್ತಿದೆ.”
“ಯಾಕಪ್ಪ?”
“ಅವಳು ಹಳ್ಳಿಗೆ ಬಂದಿರಲು ಒಪ್ತಿಲ್ಲ. ಕರೆಸ್ಪಾಂಡೆನ್ಸ್ನಲ್ಲಿ ಬಿ.ಎ ಓದ್ತಿದ್ದಾಳೆ. `ನೀವೇ ಹಾಸನದಲ್ಲಿ ಅಂಗಡಿ ಶುರುಮಾಡಿ’ ಅಂತಿದ್ದಾಳೆ.”
“ನಾನು ನಿಮ್ಮ ತಂದೆಗೆ, ದೊಡ್ಡಪ್ಪಂಗೆ ಹೇಳ್ತೀನಿ” ಎಂದರು ಶಾರದಾ. ಅಂದು ರಾತ್ರಿಯೇ ಅವರು ಗಂಡನಿಗೆ ಹೇಳಿದರು. ಬೆಳಿಗ್ಗೆಯೇ ರಮಾಗೆ ಹೇಳಿದ್ದರು. ರಮಾ ಕೂಡ ಗಂಡನಿಗೆ ಹೇಳಿದರು.
“ನಿರ್ಮಲಾ ಹೇಳಿದ್ದು ನಿಜ ಆಗ್ತಿದೆಯಲ್ಲಾ ರಮಾ? ಆಗಲಿ ಧರ್ಮರಾಜ ಹಾಸನದಲ್ಲಿ ಅಂಗಡಿ ಶುರುಮಾಡಲಿ. ಒಂದು ಮನೆ ಭೋಗ್ಯ ಮಾಡಿಕೊಡೋಣ.”
“ಭೋಗ್ಯ ಬೇಡ. ಅಂಗಡಿ ಮಳಿಗೆ ಇರುವಂತಹ ಮನೆ ತೆಗೆದುಕೊಡೋಣ. ಅವನ ಜವಾಬ್ಧಾರಿ ಮುಗಿಯತ್ತೆ. ಮುಂದೆ ಕೀರ್ತಿ ಕೇಳಿದ ಕಡೆ ಅವನಿಗೆ ಮನೆ ತೆಗೆದುಕೊಡೋಣ.”
“ಸರಿ ಹಾಗೇ ಮಾಡೋಣ.”
“ರಘು ಹತ್ತಿರ ಮಾತಾಡಿದ್ರಾ?”
“ಹುಂ. ಅವನು ತಕರಾರು ತೆಗೆಯಲಿಲ್ಲ. ಗೋಪಿ ಹತ್ತಿರ ಮಾತಾಡ್ತೀನಿ” ಅಂದ.
“ಒಳ್ಳೆಯದು. ನಾವು ನಮ್ಮ ಜವಾಬ್ದಾರಿಗಳನ್ನು ಬೇಗ ಕಳೆದುಕೊಂಡರೆ ನಮಗೇ ಒಳ್ಳೆಯದು.”

ವಾರದಲ್ಲಿ ಧರ್ಮನ ಮದುವೆ ನಿಶ್ಚಯವಾಯಿತು. ಮೈದುನ ಹಾಸನದಲ್ಲಿ ಹೋಗಿ ನೆಲೆಸುವ ವಿಚಾರ ತಿಳಿದು ಶರು ಹೊಟ್ಟೆ ಉರಿದುಕೊಂಡಳು.
ರಘುಪತಿ-ಶಾರದಾ ತಾವು ಮೈಸೂರಿಗೆ ಬರಬೇಕೆಂದಿರುವ ವಿಚಾರ ಮಗನಿಗೆ ತಿಳಿಸಿದರು. ಆರ್.ಜಿ. ಚಂದ್ರಾವತಿ ಆಂಟಿಗೆ ಹೇಳಿದ.
“ಆಂಟಿ ನಮ್ಮ ತಂದೆ-ತಾಯಿ ಬಂದು ಒಂದು ವಾರ ರ‍್ತಾರಂತೆ. ಮನೆ ಕ್ಲೀನ್ ಮಾಡಿಸಬೇಕು.”
“ಯಾವತ್ತು ಬರ‍್ತಾರೆ?”
“ಭಾನುವಾರ ಬರ‍್ತಾರೆ.”
“ಸರಿ. ಶನಿವಾರ ಮಲ್ಲಿ, ಅವಳ ಗಂಡ ಬಂದು ಕ್ಲೀನ್ ಮಾಡ್ತಾರೆ ಬಿಡು.”
“ನೀವ್ಯಾರಾದರೂ ಜೊತೆಯಲ್ಲಿದ್ದು ಮಾಡಿಸಿದ್ರೆ ಒಳ್ಳೆಯದು” ಅವನ ದೃಷ್ಟಿ ವರೂ ಮೇಲಿತ್ತು.
“ವರು ನೀನು ಶಾರದಾ ಜೊತೆ ಇರಮ್ಮ. ನಾನು ಮಲ್ಲಿ ಜೊತೆ ಹೋಗಿ ಕ್ಲೀನ್ ಮಾಡಿಸ್ತೀನಿ.”
“ಬೇಡ ಆಂಟಿ. ಮಲ್ಲಿ ಮನೆ ಧೂಳು ತೆಗೆಯಬಹುದು. ಬಹುಶಃ ಇವರ ವಾರ್ಡ್ರೋಬ್ ಕ್ಲೀನ್ ಮಾಡಲು ಒಂದು ದಿನ ಬೇಕಾಗಬಹುದು. ನಾನೇ ಹೋಗಿ ಮಾಡ್ತೀನಿ.”
“ಹೌದು ಆಂಟಿ. ನೀವು ಆರಾಮವಾಗಿರಿ” ಎಂದ ಆರ್.ಜಿ.
ಶನಿವಾರ ನಾಲ್ಕು ಗಂಟೆಯ ಹೊತ್ತಿಗೆ ಮಲ್ಲಿ, ಅವಳ ಗಂಡ, ವಾರುಣಿ ಹೊರಟರು. ವಾರುಣಿಯನ್ನು ಆರ್.ಜಿ. ಕಾರ್‌ನಲ್ಲಿ ಕರೆದುಕೊಂಡು ಹೊರಟ.
“ಮಲ್ಲಿ, ನೀನು ನಿನ್ನ ಗಂಡಾನೂ ಬನ್ನಿ.”

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44980
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

3 Comments on “ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 37

  1. ಧಾರಾವಾಹಿ ಯಲ್ಲಿ ಗುರುಕುಲ ಪ್ರಾರಂಭ ಮಾಡುವ ಸೂಚನೆ ಕಂಡುಬರುತ್ತಿದೆ ಮೇಡಂ…

  2. ಅನಿರೀಕ್ಷಿತವಾದ ತಿರುವುಗಳಿಂದ ಕಳವಳ ಉಂಟಾದರೂ ಎಲ್ಲಾ ಒಳ್ಳೆಯದೇ ಆಗಲಿ ಎಂದು ಮನ ಬಯಸುತ್ತಿದೆ, ಬಯಸಿದಂತೆ ಕಾದಂಬರಿ ಮುಂದುವರೆಯುವುದೇ? ಕುತೂಹಲ ತೀವ್ರವಾಗುತ್ತಿದೆ.

  3. ಕುತೂಹಲವನ್ನು ಉಳಿಸಿಕೊಂಡು ಸಾಗುತ್ತಿರುವ ಕಥಾ ಪುಟಗಳು ಸೊಗಸಾಗಿ ಮೂಡಿ ಬರುತ್ತಿವೆ ಮೇಡಂ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *