(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 2 : ಬಕಿ೦ಗ್ ಹ್ಯಾಮ್ ಅರಮನೆ.
ಅಂತೂ ಇಂತೂ ಬೆಳಗಿನ ಕಾರ್ಯಕ್ರಮಗಳನ್ನು ಮುಗಿಸಿ ನಮ್ಮ ಪ್ರವಾಸದ ಎರಡನೇ ದಿನವನ್ನು ಪ್ರಾರಂಭಿಸಿದೆವು. ಮೊದಲನೇ ದಿನ ಪೂರ್ತಿ ಪ್ರಯಾಣದಲ್ಲೇ ಮುಗಿದಿತ್ತು. ಬೆಳಗ್ಗೆ ಎದ್ದು ಕಿಟಕಿ ಮೂಲಕ ಹೊರಗಡೆ ವಾಹನಗಳು, ವಿಮಾನಗಳು ಕಾಣುತ್ತಿದ್ದವು. ಅದರಲ್ಲೆಲ್ಲ ಏನೂ ವಿಶೇಷತೆ ಇಲ್ಲದಿದ್ದರೂ, ನಾವು ಲಂಡನ್ ನಲ್ಲಿದ್ದೇವೆ, ಹೊರಗೆ ನಾವು ಲಂಡನ್ ನಗರವನ್ನು ನೋಡುತ್ತಿದ್ದೇವೆ, ಎನ್ನುವ ಭಾವನೆಯೇ ನಮಗೆ ರೋಮಾಂಚನ ಉಂಟುಮಾಡುತ್ತಿತ್ತು. ಅಲ್ಲಿಯ ಕಾಂಟಿನೆಂಟಲ್ ಬ್ರೇಕ್ ಫಾಸ್ಟ್ ನೋಡಿ ದಂಗಾದೆವು. ಎಲ್ಲಾ ನಾನಾ ವಿಧವಾಗಿದ್ದ ಬೇಕರಿ ಐಟಂ ಗಳೇ. ಅವುಗಳ ಆಕಾರ ಗಾತ್ರ, ಬೇರೆ ಬೇರೆ ಆದರೂ ತಯಾರಿಸಿದ ಮೂಲ ವಸ್ತು ಒಂದೇ, ಗೋಧಿ ಅಥವಾ ಮೈದಾ. ಜೊತೆಗೆ ವಿಧವಿಧವಾದ ಹಣ್ಣುಗಳು, ಹಣ್ಣಿನ ಜ್ಯೂಸುಗಳು, ಸಲಾಡ್ ಗಳು ಇತ್ಯಾದಿ. ನಮ್ಮ ಇಡ್ಲಿ ದೋಸೆ ಉಪ್ಪಿಟ್ಟು ಏನೂ ಇಲ್ಲ. ಮೊದಲನೇ ದಿನ ಆಗಿದ್ದಿದ್ದರಿ೦ದ, ಆಸಕ್ತಿ ಯಿ೦ದ ಎಲ್ಲಾ ನೋಡಿ ಏನೇನು ಬೇಕೋ ಎಲ್ಲಾ ತಿ೦ದು, ಹೊರಗೆ ಬಂದು ಹೋಟೆಲ್ ಮುಂದೆ ನಿಂತು ಫೋಟೋಗಳನ್ನು ತೆಗೆದುಕೊಂಡೆವು. ನಾವಿದ್ದ ಹೋಟೆಲ್ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿತ್ತು. ಲಂಡನ್ ಸೆಂಟ್ರಲ್ ಅಲ್ಲಿ೦ದ ಸುಮಾರು 30 – 40 ಕಿಮೀ ದೂರದಲ್ಲಿದ್ದು, ಅದನ್ನು ತಲುಪಲು ಸುಮಾರು 90 ನಿಮಿಷಗಳು ಬೇಕಾಗುತ್ತವೆ ಎಂದೂ, ಅದು ನಗರದ ವಾಹನ ದಟ್ಟಣೆಯ ಮೇಲೆ ಅವಲಂಬಿತವಾಗಿರುವುದಾಗಿಯೂ ನಮ್ಮ ಗೈಡ್ ತಿಳಿಸಿದರು. ಟ್ರಾಫಿಕ್ ಜಾಮ್ ಗೆ ಲ೦ಡನ್ ನಗರ ಪ್ರಸಿದ್ಧಿ ಎಂದು ತಿಳಿಸಿದರು. “ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು” ಎನ್ನುವ೦ತೆ ಬೆ೦ಗಳೂರಿನಿ೦ದ ಲ೦ಡನ್ ಗೆ ಬ೦ದರೂ ಬೆ೦ಬಿಡದ ಬೇತಾಳ ನ೦ತೆ ಟ್ರಾಫಿಕ್ ಜಾಮ್ ಇಲ್ಲೂ ಕಾಡುತ್ತಾ ಎ೦ದು ಆಶ್ಚರ್ಯ ಪಟ್ಟೆವು.
ನಮ್ಮ ಗೈಡ್ ಈ ದಿನದ ಕಾರ್ಯಕ್ರಮ, ನೋಡಲು ಹೊರಟಿರುವ ಸ್ಥಳಗಳ ಪಟ್ಟಿ ನೀಡಿ, ಈ ದಿನ ಒಬ್ಬ ಸ್ಥಳೀಯ ಗೈಡ್ ನಮ್ಮ ಜೊತೆ ಇದ್ದು, ಸ್ಥಳ ಪರಿಚಯ ನೀಡುವುದಾಗಿ ತಿಳಿಸಿದರು. 9.00 ಗ೦ಟೆಗೆ ಸರಿಯಾಗಿ ಹೋಟೆಲ್ನಿ೦ದ ಲ೦ಡನ್ನಗರ ಪ್ರದಕ್ಷಿಣೆಗೆ ಹೊರಟೆವು. ದಾರಿಯಲ್ಲಿ ಒಬ್ಬ ಮಹಿಳೆ ನಮ್ಮನ್ನು ಸೇರಿಕೊಂಡು ಬಸ್ ನಲ್ಲಿದ್ದ ಧ್ವನಿವರ್ಧಕದ ಮೂಲಕ ತಮ್ಮನ್ನು ತಾವು ಪರಿಚಯ ಮಾಡಿಕೊಂಡು, ಲಂಡನ್ನಿನ ಇತಿಹಾಸ, ಅಲ್ಲಿಯ ರಾಜಾ ರಾಣಿಯರ ಕಥೆಗಳು, ಅಲ್ಲಿಯ ಪ್ರಮುಖ ಸ್ಥಳಗಳ ಬಗ್ಗೆ ವ್ಯಾಖ್ಯಾನ ಮಾಡುತ್ತಾ ಸಾಗಿದರು. ಆದರೆ ಅವರ ಉಚ್ಚಾರಣೆಯಲ್ಲಿ ನಮಗೆ ಶೇಕಡ ಹತ್ತರಷ್ಟು ಮಾತ್ರ ಅರ್ಥವಾಗುತ್ತಿತ್ತು. ಕೇಂದ್ರ ಲಂಡನ್ ನಗರ ತಲುಪುತ್ತಿರುವಂತೆ ಅಲ್ಲಿಯ ಕಟ್ಟಡಗಳ ಗಾತ್ರ, ವಿನ್ಯಾಸ, ಆಕಾರ,ಗಳನ್ನೆಲ್ಲ ನೋಡುತ್ತಾ ನೋಡುತ್ತಾ ಆನ೦ದದಿ೦ದ ನಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಸಾಗಿದೆವು.
ನಮ್ಮ ಮೊದಲ ಭೇಟಿ ಬಕಿ೦ಗ್ ಹ್ಯಾಮ್ ಅರಮನೆ.
ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ವ್ಹೇರ್ ಹ್ಯಾಡ್ ಯು ಬೀನ್,
ಐ ಹ್ಯಾಡ್ ಬೀನ್ ಟು ಲ೦ಡನ್ ಟು ಸೀ ದ ಕ್ವೀನ್.
ಪ್ರೈಮರಿ ಶಾಲೆ ಪದ್ಯವನ್ನು ಗುನು ಗುನಿಸುತ್ತಾ, ಅರಮನೆಗೆ ಹೊರಟೆವು. ಆದರೆ ರಾಣಿ ಸ್ವರ್ಗಸ್ಥಳಾಗಿರುವುದರಿ೦ದ, ಬರೀ ಅರಮನೆ ನೋಡುವ ಉಮೇದಿನಿ೦ದ ಅರಮನೆ ಬಳಿ ಬ೦ದು ಇಳಿದೆವು.
ಬಕಿಂಗ್ ಹ್ಯಾಮ್ ಆರಮನೆ ಲಂಡನ್ ನಗರದ ಪ್ರಮುಖ ಆಕರ್ಷಣೆ. ರಾಣಿ ಎಲಿಜಬೆತ್ ಮತ್ತು ಅವರ ಕುಟುಂಬದ ವಾಸ ಸ್ಥಳ. ಅವರ ಕಚೇರಿ ಮತ್ತು ಅಧಿಕಾರಿ ವರ್ಗದ ಕಾರ್ಯ ಸ್ಥಾನ. ಸರ್ಕಾರಿ ಅತಿಥಿಗಳು ಮತ್ತು ವಿದೇಶಿ ಗಣ್ಯರನ್ನು ಭೇಟಿ ಮಾಡುವ ಸ್ಥಳ. 1703ರಲ್ಲಿ ಮೊದಲನೇ ಡ್ಯೂಕ್ ಜಾನ್ ಶಫೀಲ್ಡ್ ಈ ಅರಮನೆ ಯನ್ನು ಕಟ್ಟಿಸಿದನು. ಅದನ್ನು ಬ್ರಿಟನ್ ರಾಜಮನೆತನದವರು 1761ರಲ್ಲಿ ಖರೀದಿಸಿದರು. 1837 ರಿಂದ ರಾಜಮನೆತನದ ಅಧಿಕೃತ ನಿವಾಸವಾಯಿತು. ಸುಮಾರು 800 ವೈಭವೋಪೇತವಾದ ಕೊಠಡಿಗಳು, 80 ಅತ್ಯಾಧುನಿಕ ಶೌಚಾಲಯಗಳನ್ನು ಹೊಂದಿರುವ ಈ ಭವ್ಯ ಅರಮನೆ ಲ೦ಡನ್ ನ ಒಂದು ನೋಡ ತಕ್ಕ ಸ್ಥಳ.
ಅರಮನೆಗೆ ಹೋಗುತ್ತಿರುವಾಗ ದಾರಿಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಾದ ಮತ್ತು ರಾಜಕೀಯ ಪ್ರಾಮುಖ್ಯತೆ ಪಡೆದ ಇಂಡಿಯನ್ ಹೌಸ್, ವೆಸ್ಟ್ ಮಿನಿಸ್ಟರ್ ಏರಿಯಾ, ಬಿಗ್ ಬೆನ್, ಹೈಡ್ಪಾರ್ಕ್,(ತು೦ಬಾ ದೊಡ್ಡ ಪಾರ್ಕ್) ಲ೦ಡನ್ ಪಾರ್ಲಿಮೆಂಟ್ ಹೌಸ್, ಪ್ರಸಿದ್ಧ ಟ್ರಾಫಲ್ಗರ್ ಸ್ಕ್ವೆಯರ್, ಪಿಕಾಡಿಲಿ ಸರ್ಕಸ್ ಗಳನ್ನು ಬಸ್ ಒಳಗಿನಿ೦ದಲೇ ನೋಡಿ, ಆನ೦ದಿಸುತ್ತಿದ್ದೆವು. ಕುದುರೆಯ ಮೇಲೆ ಕುಳಿತ ಗಾರ್ಡ್ ಗಳು ಗೊ೦ಬೆಗಳ೦ತೆ ಅಲ್ಲಾಡದೇ ಗ೦ಟೆಗಟ್ಟಲೆ ಪ್ರತಿಮೆಗಳ೦ತೆ ಇದ್ದದ್ದು ನೋಡಿ ಆಶ್ಚರ್ಯ ಪಟ್ಟೆವು. ಗಾರ್ಡ್ಗಳ ಜೊತೆ ಕುದುರೆಗಳೂ ಸಹ ಗೊ೦ಬೆಗಳ೦ತೆ ನಿ೦ತಿದ್ದು ನೋಡಿ ಅವುಗಳ ತರಬೇತಿದಾರರಿಗೆ ಒ೦ದು ಸಲಾ೦ ಹೊಡೆದೆವು. ನಮ್ಮ ಇಂಗ್ಲಿಷ್ ಗೈಡ್ ಹೇಳುತ್ತಿದ್ದಂತೆ, ಫೋಟೋಗಳನ್ನು ತೆಗೆದುಕೊಳ್ಳುತ್ತಾ ಇದ್ದೆವು.. ನಮ್ಮನ್ನು ಬಕ್ಕಿಂಗ್ ಹ್ಯಾಮ್ ಅರಮನೆ ಬಳಿ ಇಳಿಸಿದರು. ನಂತರ ನಮ್ಮ ಗೈಡ್ ನಮ್ಮ ಅದೃಷ್ಟವನ್ನು ಹೊಗಳುತ್ತಾ, ಇನ್ನು ಕೆಲವೇ ನಿಮಿಷಗಳಲ್ಲಿ ಚೇಂಜ್ ಆಫ್ ಗಾರ್ಡ್ ನೋಡುವ ಸೌಭಾಗ್ಯ ನಮ್ಮದಾಗುವುದೆಂದು ತಿಳಿಸಿದರು, ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ಹೋದಮೇಲೆ ಬಕಿ೦ಗ್ಹ್ಯಾಮ್ ಅರಮನೆ ಕಾಣಿಸಿತು. ಅಲ್ಲಿ ಜನವೋ ಜನ. ಚೇ೦ಜ್ ಆಫ್ ಗಾರ್ಡ್ ನೋಡಲು ಜನ ಸೇರಿದ್ದರು, ಸ್ವಲ್ಪ ಸಮಯದಲ್ಲೇ ನಮ್ಮ ಗೈಡ್ ತಿಳಿಸಿದ ಚೇ೦ಜ್ ಆಫ್ ಗಾರ್ಡ್ ಕಾರ್ಯಕ್ರಮ ಪ್ರಾರಂಭವಾಯಿತು. ಸೇನೆಯ ತುಕಡಿಗಳ೦ತೆ ಕ೦ಡ ಅರಮನೆಯ ರಕ್ಷಣಾ ಸಿಬ್ಬಂದಿ, ಬದಲಾಗುವುದನ್ನು ಚೇ೦ಜ್ ಆಫ್ ಗಾರ್ಡ್ ಎಂದು ಕರೆಯುತ್ತಾರೆ. ನಮ್ಮ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಲ್ಲಿ, ಪೆರೆಡ್ ಮಾಡಿಕೊಂಡು ಹೋಗುವ ನಮ್ಮ ಸೈನಿಕರು, ಎನ್ಸಿಸಿ ತಂಡದವರು ನೆನಪಿಗೆ ಬಂದರು. ಪಂಜಾಬ್ ನ ಅಮೃತ್ ಸರ ದ ವಾಘ ಬಾರ್ಡರ್ ನಲ್ಲಿಯ ಸೈನಿಕರ ಕವಾಯಿತು ನೆನಪಾಯಿತು. ತಿಳಿಸಿದ ಸಮಯಕ್ಕೆ ಸರಿಯಾಗಿ ನಾವು ಬಸ್ ಬಳಿ ವಾಪಾಸು ಬಂದೆವು. ನಮ್ಮ ಲಂಡನ್ ನಗರ ಪರ್ಯಟನೆ ಮುಂದುವರೆಯಿತು. ಮಾರ್ಗದಲ್ಲಿ ಬ್ರಿಟನ್ ಪ್ರಧಾನಿ ಅವರ ನಿವಾಸದಂತಹ ಅತ್ಯಂತ ಪ್ರತಿಷ್ಠಿತ ಪ್ರದೇಶಗಳವೀಕ್ಷಣೆ ಮಾಡಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44320
–ಟಿ.ವಿ.ಬಿ.ರಾಜನ್ , ಬೆಂಗಳೂರು



ಪ್ರವಾಸ ಕಥನ ಓದಿಸಿಕೊಂಡುಹೋಯಿತು..
Nice one