ನೀನು ಮೊಟ್ಟೆಗೆ ಪಾಠ ಹೇಳುವಷ್ಟರಲ್ಲೇ
ಅದು ಲಾರ್ವಾ ಆಗಿರುತ್ತದೆ –
ನಿನ್ನ ಬೋರ್ಡಿನ ಹಿಂದಿನ ಪಾಠವು
ಆ ಕ್ಷಣವೇ ಹಳೆಯದಾಗಿರುತ್ತದೆ.
ನೀನು ಸರಿಹೊಂದಿಕೊಂಡು
ಲಾರ್ವಾದ ರೂಪದ ಜಗತ್ತಿಗೆ ಪಾಠ ಹೇಳಲು ಹೊರಟರೆ,
ಅದು ಪ್ಯೂಪಾ ಆಗಿ ನಿಶ್ಚಲವಾಗಿ
ಹೊಸ ರೂಪ ತಯಾರು ಮಾಡಿಕೊಳ್ಳುತ್ತಿದೆ.
ನೀನು ಹಠದಿಂದ ಪ್ಯೂಪಾದೊಡನೆ ಮಾತನಾಡಲು ಪ್ರಾರಂಭಿಸಿದಾಗ –
ಅದು ಈಗ ಚಿಟ್ಟೆ,
ಬಣ್ಣದ ರೆಕ್ಕೆಗಳಲಿ ಸ್ವಾತಂತ್ರ್ಯದ ಪಾಠ ಬರೆದಿದೆ.
“ನಿನ್ನ ಬೋಧನೆಗಳ ಅಗತ್ಯ ಇಲ್ಲ ನನಗೆ,”
ಎಂದು ಹಾರಿಹೋಗುತ್ತದೆ.
ಆಗ ನೀನು
‘ಟೀಚರ್’ ಎಂಬ ಪಾತ್ರದಿಂದ ಇಳಿದು,
ಮಗುವಾಗಿ ಬದಲಾಗುತ್ತೀಯ-
ಚಪ್ಪಾಳೆ ತಟ್ಟುತ್ತಾ,
ಹಾರುವ ಪಾಠವನ್ನೇ ಕಲಿಯುತ್ತೀಯ.

ತೆಲುಗು ಮೂಲ : ದಗ್ಗುಮಾಟಿ ಪದ್ಮಾಕರ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್


ಚಿನ್ನಾ ದ ಕವಿತೆ.. ಸಾರ್
ಸುಂದರ ಚಿಟ್ಟೆಯ ಜೀವನಚಕ್ರವನ್ನು ಕಣ್ಮುಂದೆ ತಂದ ಅಪರೂಪದ ಅನುವಾದಿತ ಕವನ ಚೆನ್ನಾಗಿದೆ.
ಅರ್ಥಪೂರ್ಣವಾದ , ಉತ್ತಮವಾದ ಸಂದೇಶ ಹೊಂದಿರುವ ಕವನ ವಂದನೆಗಳು
ಜಗತ್ತು ಸದಾ ಬದಲಾಗುತ್ತಿರುತ್ತದೆ
ಆದರೆ ನಾವದನ್ನು ವ್ಯಾಖ್ಯಾನಿಸುವುದರೊಳಗೆ
ಅದರ ಆಖ್ಯಾನ ರೂಪಾಂತರವಾಗಿರುತ್ತದೆ
ಎಂಬ ಲೋಕಸತ್ಯವನು ಸದ್ದಿಲ್ಲದೇ ಪ್ರತೀಕಗಳೊಂದಿಗೆ
ಸಾರುವ ಕವಿತೆ………..
ಅಪರೂಪದ ಧಾಟಿ, ವಿಸ್ಮಯಕಾರೀ ಶೈಲಿ
ಪುಟ್ಟ ಮಗುವೊಂದು ನಿಂತಂತೆ ಬರಿ ಮೈಲಿ !
ವಾಹ್! ಸೂಪರ್ ಸರ್, ಪಾತರಗಿತ್ತಿಯ ಪರಿಪರಿಯ
ಜೀವನಚಕ್ರದೊಂದಿಗೆ ಪತರಗುಟ್ಟುವ ಮನಸಿನಾಳವ
ಶೋಧಿಸ ಹೊರಡುವ ಈ ಕವಿತಾವಸ್ತು ಅಪರೂಪದ್ದು.
ಕನ್ನಡಕೆ ತಂದು ಪುಣ್ಯ ಕಟ್ಟಿಕೊಂಡಿರಿ, ನಿಮಗಿದೋ ನೂರು ನಮನ
ಹೀಗೆ ಮುಂದುವರಿಯಲಿ ಇಂಥ ಅಪೂರ್ವ ಸಮ್ಮಿಲನ…………
ಚೆನ್ನಾಗಿದೆ. ಜೀವನದ ಪ್ರಕ್ರಿಯೆಯನ್ನು ಸೊಗಸಾಗಿ ಬಣ್ಣಿಸಿದ್ದೀರಿ.