ನಿನ್ನೆಯ ತಪ್ಪುಗಳಲೆಕ್ಕ ಮರೆತುಬಿಡಿ
ಇಂದಿನದನ್ನು ಇಂದಿಗೆ ಮುಗಿಸಿಬಿಡಿ
ನಾಳೆಯದನ್ನು ನಾಳೆಗೆ ಎತ್ತಿಟ್ಟುಬಿಡಿ
ಬದುಕನ್ನು ಖುಷಿಯಾಗಿ ಅನುಭವಿಸಿಬಿಡಿ
ಚಿಂತೆಗಳ ಚಿತೆಯಲ್ಲಿ ಸುಮ್ಮನೆ ದಹಿಸದಿರಿ
ಚಿಂತನ ಮಂಥನ ನಡೆಸಿ ಮುನ್ನಡೆಯಿರಿ
ಕಷ್ಟಗಳನ್ನು ಗುಡ್ಡೆ ಹಾಕಿಕೊಂಡು ಕೊರಗದಿರಿ
ಯೋಚಿಸಿ ಯೋಚಿಸಿ ಚಿಂತೆಯಲಿ ಮರುಗದಿರಿ
ಇಂದು ಇದ್ದಂತೆ ಬದುಕು ನಾಳೆ ಇರುವುದಿಲ್ಲ
ಏನೇ ಬರಲಿ ಜೀವನದಿ ಎದುರಿಸಲೇ ಬೇಕಲ್ಲ
ಕಷ್ಟಗಳು ಇರದ ಬದುಕು ಬದುಕೇ ಅಲ್ಲ
ಕಷ್ಟ ನಷ್ಟಗಳ ಜೈಸಿದಾಗ ಬದುಕು ಸವಿಬೆಲ್ಲ
ನಿತ್ಯವೂ ಹೋರಾಟದ ಬದುಕು ಇಲ್ಲಿ ನಮ್ಮದೆಲ್ಲ
ಇಲ್ಲಸಲ್ಲದ ಯೋಚನೆಮಾಡಿ ನೋಯಬೇಕಿಲ್ಲ
ಇರುವುದನ್ನ ನೋಡಿ ನಾವು ಖುಷಿಪಡಬೇಕಲ್ಲ
ಯಾರದೋ ಬದುಕಿನ ಜೊತೆ ಹೋಲಿಕೆ ಬೇಕಿಲ್ಲ
ಪರಿಸ್ಥಿತಿ ಮನಸ್ಥಿತಿ ಬದಲಾಗುತ್ತಲೇ ಇರುವುದು
ಹತ್ತಿರ ಇರುವುದು ಕೈ ಜಾರಿ ಹೋಗುವುದು
ಗೊತ್ತೇ ಆಗದಂತೆ ಇನ್ನೇನೋ ನಮ್ಮದಾಗುವುದು
ಯಾವುದೂ ಶಾಶ್ವತವಾಗಿ ಜೊತೆಗೆ ಇರದು
ಇರುವುದನ್ನ ಗೌರವಿಸುವುದ ಮರೆಯಬಾರದು

ನಾಗರಾಜ ಜಿ. ಎನ್. ಬಾಡ


ಬದುಕ ನ್ನು ಇರುವಂತೆಯೇ ಸ್ವೀಕರಿಸಿ..ಬದುಕಿ ಎಂಬ ಸಂದೇಶ ಹೊತ್ತ ಕವನ ಚೆನ್ನಾಗಿದೆ.. ಸಾರ್
ವಾಸ್ತವತೆಯ ಬಿಂಬಿಸುವ ಸುಂದರವಾದ ಕವನ
ಸುಂದರ ಬದುಕನ್ನು ರೂಪಿಸುವ, ಉದಾತ್ತ ಮನೋಭಾವವನ್ನು ರೂಢಿಸುವ ಪಥವನ್ನು ತೋರುವ ಚಿಂತನಾರ್ಹ ಕವನ.
ತಕ್ಕಡಿಯು ಕೇವಲ ತೂಗುತ್ತದೆ; ಗಾತ್ರ ಪಾತ್ರವನ್ನು
ಗುಣವನ್ನಲ್ಲ
ಹಾಗಾಗಿ ಸರಿತಪ್ಪುಗಳಾಚೆ ಸರಿಯಬೇಕು
ಹರಿವ ನೀರಾಗಿ ಚಲಿಸಿ ಮುಂಬರಿಯಬೇಕು
ಎಂಬುದೇ ಕವಿತೆಯ ಅಪೇಕ್ಷೆ.
ಒಂದಷ್ಟು ವರದಿಯ ಗುಣವನ್ನು ಬಿಟ್ಟು
ಜೀವನಶೋಧಕ್ಕಿಳಿದರೆ ಅಂದರೆ
ಇನ್ನೊಬ್ಬರಿಗೆ ಹೇಳುವ ಶೈಲಿ ಪಕ್ಕಕಿಟ್ಟು
ತನ್ನೊಳಗೆ ಮಾತಾಡಿಕೊಳುವ ಸಂವಾದ
ಸಾಧ್ಯವಾದರೆ ಕವಿತೆಯು ಆಳವೂ ಅಗಲವೂ ಆಗಿ
ಪರಿಣಾಮಕಾರಿಯಾಗುವುದು.
ನಾಗರಾಜರು ಈ ದಿಕ್ಕಿನಲ್ಲಿ ಪ್ರಯತ್ನಿಸಲಿ ಎಂಬುದು
ನನ್ನ ಪ್ರಾಮಾಣಿಕ ಬಿನ್ನಹ. ಅನ್ಯಥಾ ಭಾವಿಸದಿರಿ.
Nice