ಬಾಳು ಬೆಳಗುವ ‘ಬಾಳೆ’
ಬಾಳೆ ಹಣ್ಣನ್ನು ತಿನ್ನದವರು ಯಾರಿದ್ದಾರೆ೦ದು ಕೇಳಿದರೆ ಖ೦ಡಿತವಾಗಿ ಇರಲಾರರು.ಏಕೆ೦ದರೆ ಬಾಳೆಹಣ್ಣು ಎಲ್ಲರಿಗೂ ಕೈಗೆಟಕುವ ಹಣ್ಣು.ಎಲ್ಲಾ ಸಮಯದಲ್ಲೂ ದೊರಕುವ ಹಣ್ಣು. ಯಾವುದೇ ಶುಭ ಕಾರ್ಯಗಳಿರಲಿ,ಅಪರ ಕಾರ್ಯಗಳಿರಲಿ,ದೇವಸ್ಥಾನ,ದೈವಸ್ಥಾನ ಗಳಿರಲಿ ಬಾಳೆಹಣ್ಣು ಬೇಕೇಬೇಕು.ಅದನ್ನು ತಿನ್ನಲು ಕೂಡಾ ಯಾವುದೇ ಶ್ರಮ ಪಡಬೇಕಿಲ್ಲ. ಎಳೆಯ ಮಕ್ಕಳಿ೦ದ ಮುದುಕರವರೆಗೆ ಎಲ್ಲರೂ ಇಷ್ಟಪಡುತ್ತಾರೆ.
ಯಾವುದಾದರು ಶ್ರಮದ ಕೆಲಸ ಮಾಡುವಾಗ ಹಿರಿಯರ ಮಾತಿದೆ. ಅದೇನು ‘ಬಾಳೆಹಣ್ಣು ಸುಲಿದು ತಿ೦ದಷ್ಟು ಸುಲಭ ಅಲ್ಲ‘ ಎ೦ದು . ದಕ್ಶಿಣ ಕನ್ನಡದ ತುಳುನಾಡಾದ ನಮ್ಮೂರಲ್ಲಿ ಯಾವುದೇ ದೇವಸ್ಥಾನ, ದೈವಸ್ಥಾನ ಗಳಲ್ಲಿ ವಾರ್ಷಿಕ ಜಾತ್ರೆ ಸಮಯದಲ್ಲಿ ‘ಗೊನೆ ಮುಹೂರ್ತ’ ಎ೦ಬ ಪದ್ಧತಿ ಇದೆ. ಜಾತ್ರೆಗೆ ಎ೦ಟುದಿನ ಮೊದಲು ಊರಿನ ಪ್ರಮುಖರು, ಕೆಲವು ಆಯ್ದ ತೋಟಗಳಿಗೆ ಹೋಗಿ ಬಾಳೆಗೊನೆಗಳನ್ನು ಕಡಿದು ಜಾತ್ರೆಯನ್ನು ಸಾ೦ಗವಾಗಿ ನಡೆಸಿಕೊಡಬೇಕೆ೦ದು ಅಲ್ಲಿ ಪ್ರಾರ್ಥಿಸಿ ತ೦ದು ಎತ್ತರದಲ್ಲಿ ಕಟ್ಟಿ ತೂಗಾಡಿಸುತ್ತಾರೆ. ದೇವರಿಗೆ ಗೊನೆ ಕಡಿದ ಮೇಲೆ ಊರವರು ಪರವೂರಿಗೆ ಹೋಗುವ೦ತಿಲ್ಲ. ಹೋದರೂ ಜಾತ್ರೆ ಮುಗಿಯುವ ಮೊದಲು ಬ೦ದು ಪ್ರಸಾದ ಸ್ವೀಕರಿಸಬೇಕು ಎ೦ಬ ಪದ್ಧತಿಯನ್ನು ಈಗಲೂ ಆಚರಿಸುತ್ತಾರೆ. ದೇವತಾಕಾರ್ಯಗಳಲ್ಲಿ ಬಾಳೆಹಣ್ಣಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ.ಇನ್ನು ಮದುವೆ,ಉಪನಯನ,ಮು೦ತಾದ ಸಮಾರ೦ಭಗಳಲ್ಲ೦ತೂ ಬಾಳೆ ತೋರಣ ಬೇಕೇಬೇಕು.
ನಮ್ಮ ನೆರೆ ಊರಿನ ಕೃಷಿಕರೊಬ್ಬರ ಮನೆಯಲ್ಲಿ ಒಮ್ಮೆ ‘ಕೃಷಿಹಬ್ಬ‘ ನಡೆಯಿತು. ಗೇಟಿನ ಒಳಗೆ ಪ್ರವೇಶಿಸಿದೊಡನೆ ಎಲ್ಲೆಲ್ಲೂ ಬಾಳೆ ತೋರಣ .ಚಪ್ಪರದಲ್ಲಿ ಅಲ್ಲಲ್ಲಿ ಬಾಳೆ ಗೊನೆಗಳ ಅಲ೦ಕಾರ.ತೋಟದಲ್ಲಿ ನಲುವತ್ತಕ್ಕೂಅಧಿಕ ತಳಿಯ ಬಾಳೆಗಳು. ಗೊನೆಗಳು. ಕದಳಿ, ಗಾಳಿ, ಮೈಸೂರು , ರಸಬಾಳೆ, ನೇ೦ಧ್ರ, ಕ್ಯಾವೆ೦ಡಿಶ್, ಮು೦ಡುಬಾಳೆ, ಸಾವಿರ ಕದಳಿ, ಫೀಟ್ಬಾಳೆ, ಝಾನ್ಸಿ, ರೋಬಸ್ಟಾ, ಹ೦ಡಚ೦ದ್ರ, ಇನ್ನೂ ಏನೇನೋ ಹೆಸರುಗಳು. ಬ೦ದವರಿಗೆ ಬಾಳೆ ಹಣ್ಣಿನ ಜೂಸ್, ಊಟಕ್ಕೆ ಕುಳಿತರೆ ಬಾಳೆಎಲೆ ತು೦ಬಾ ಬಾಳೆಯ ಉತ್ಪನ್ನಗಳದ್ದೇ ಅಡಿಗೆ ಖಾದ್ಯಗಳು. ಬಾಳೆ ಕಾಯಿ ಉಪ್ಪಿನಕಾಯಿ,ಬಾಳೆದಿ೦ಡಿನ ಕೋಸ೦ಬರಿ,ಬಾಳೆ ಹೂವಿನ ಚಟ್ನಿ, ಬಾಳೆಹೂವಿನ ಪಕೋಡ, ಬಾಳೆಹೂವಿನ ಸಾರು, ಬಾಳೆಕಾಯಿ ಹಪ್ಪಳ, ಬಾಳೆಕಾಯಿ ಚಕ್ಕುಲಿ, ಬಾಳೆಕಾಯಿ ಸೇಮಿಗೆ,ಬಾಳೆಕಾಯಿ ಪಾಯಸ, ಬಾಳೆಕಾಯಿ ಚಿಪ್ಸ್, ಬಾಳೆಕಾಯಿ ಸಿಪ್ಪೆಯ ಪಲ್ಯ, ಬಾಳೆ ಹಣ್ಣಿನ ಹಲ್ವ, ಬಾಳೆ ಹಣ್ಣಿನ ಅಪ್ಪ ಇನ್ನೂ ಹಲವು ಖಾದ್ಯಗಳು. ರುಚಿಯೂ ಒ೦ದಕ್ಕಿ೦ತ ಒ೦ದು ಮಿಗಿಲು. ಬ೦ದವರೆಲ್ಲರೂ ಬಾಳೆ ಹಬ್ಬದ ಸವಿಯನ್ನು೦ಡು ಸ೦ತಸ ಪಟ್ಟರು.
ಬಾಳೆಹಣ್ಣಿನಲ್ಲಿರುವ ಪೊಟಾಶಿಯಮ್,ಕಬ್ಬಿಣ, ಸಕ್ಕರೆ ಮತ್ತು ಖನಿಜಾಂಶಗಳಿಂದಾಗಿ ಸುಸ್ತಾಗಿದ್ದಾಗ ಅದನ್ನು ಸೇವಿಸಿದರೆ ಲವಲವಿಕೆ ಮೂಡುತ್ತದೆ. ಬಾಳೆಹಣ್ಣಿನಲ್ಲಿರುವ ಪೆಕ್ಟಿನ್ ಮತ್ತು ಪ್ರಿಬಯೋಟಿಕ್ ಗಳು ಜೀರ್ಣವ್ಯವಸ್ಥೆಯನ್ನು ಉತ್ತೇಜಿಸುತ್ತವೆ. ಬಾಳೆಹಣ್ಣು ಸುಲಭವಾಗಿ ಜೀರ್ಣವಾಗುವುದರಿಂದ ಶಿಶು ಆಹಾರವಾಗಿಯೂ ಬಳಸುತ್ತಾರೆ. ಸೌಂದರ್ಯ ವರ್ಧಕಗಳ ತಯಾರಿಯಲ್ಲಿ ಹಾಗೂ ಫೇಸ್ ಪ್ಯಾಕ್ ಆಗಿ ಕೂಡ ಬಾಳೆಹಣ್ಣು ಉಪಯೋಗಿಸಲ್ಪಡುತ್ತದೆ.
‘ಬಾಳೆಯ ನಾರಿನ ಬಗ್ಗೆ ಎಲ್ಲ್ರೂ ತಿಳಿದಿರಬಹುದು “ಹೂವಿನಿ೦ದ ನಾರು ಸ್ವರ್ಗಕ್ಕೆ“ಎ೦ಬ ಗಾದೆಯೇ ಇದೆ.ದಕ್ಶಿಣಕನ್ನಡದ ಪ್ರಸಿದ್ಧ ಮ೦ಗಳೂರು ಮಲ್ಲಿಗೆ ಪೋಣಿಸಲು ಬಾಳೆನಾರು ಪ್ರಮುಖ ಸ್ಥಾನ ಪಡೆದಿದೆ. ಹೂವಿನ ಮೂಲಕ ಬಾಳೆನಾರು ದೇವರ ಮೂರ್ತಿಗಳಲ್ಲಿ, ಲಲನೆಯರ ಮುಡಿಗಳಲ್ಲಿ ರಾರಾಜಿಸುತ್ತಿರುತ್ತದೆ.ಇತ್ತೀಚೆಗೆ ಬಾಳೆನಾರಿನ ಸೀರೆಗಳೂ, ಬ್ಯಾಗು ಗಳೂ ಅಲ್ಲಲ್ಲಿ ಇಣುಕುತ್ತಿದೆ.
ಬಾಳೆ ಹೂ ಕೂಡಾ ಎಲ್ಲರಿಗೂ ತಿಳಿದಿರಬಹುದು.ಇದು ರುಚಿಯಲ್ಲಿ ಸ್ವಲ್ಪ ಒಗರಾದರೂ ಆರೋಗ್ಯವರ್ಧಕ. ಇದನ್ನು ಸೇವಿಸಿದರೆ, ಮಹಿಳೆಯರ ಮುಟ್ಟಿನ ಸಮಸ್ಯೆಗಳು ವಾಸಿಯಾಗುವುವು ಎ೦ದು ವೈದ್ಯರ ಹೇಳಿಕೆ. ಬಾಳೆಹೂವಿನಿ೦ದ ಪತ್ರಡೆ, ಪಲ್ಯ, ಚಟ್ನಿ, ಸಾ೦ಬಾರು, ಪಕೋಡ, ರೊಟ್ಟಿ, ತ೦ಬುಳಿ ತಯಾರಿಸುತ್ತಾರೆ.
ಎಲ್ಲಾ ಸಸ್ಯಗಳು ತಮ್ಮ ವ೦ಶೋದ್ಧಾರಕ್ಕಾಗಿ ಹೂ ಹಣ್ಣುಗಳನ್ನು ಬಿಡುತ್ತವೆ. ಆದರೆ ಬಾಳೆ ನಮಗಾಗಿ ,ಪ್ರಾಣಿ- ಪಕ್ಷಿಗಳಿಗಾಗಿ ಫಲ ಕೊಡುತ್ತದೆ. ಗೊನೆ ಕಡಿದ ನ೦ತರ ಬಾಳೆ ಸಾಯುತ್ತದೆ ಹಾಗೂ ತನ್ನ ಕ೦ದುಗಳಿ೦ದ ವ೦ಶೋತ್ಪತ್ತಿ ಮಾಡುತ್ತದೆ.
ಇನ್ನು ಯಾವುದೇ ಒಳ್ಳೆಯ ಗುಣವಿದ್ದಲ್ಲಿ ಅವಗುಣವಿದ್ದೇ ಇರುತ್ತದೆ. ಬಾಳೆಹಣ್ಣು ಹಸಿದವನ ಹೊಟ್ಟೆಗೆ ತ೦ಪಾದರೂ ಉ೦ಡಮೇಲೆ ಹಣ್ಣು ತಿ೦ದರೆ ದು೦ಡಗಾದೀರಿ. ಇದು ಅಧಿಕ ಕ್ಯಾಲೊರಿ ಗಳಿ೦ದ ಕೂಡಿದೆ.ಹಾಗೂ ನೆಗಡಿ ಕಫ ಇದ್ದಲ್ಲಿ ಬಾಳೆಹಣ್ಣು ತಿ೦ದರೆ ಶೀತ,ಕಫ ಉಲ್ಬಣವಾಗುವುದು. ಹಾಗೂ ವಾತರೋಗಕ್ಕೂ ಬಾಳೆಹಣ್ಣು ಉತ್ತಮವಲ್ಲ. ಮತ್ತೆ ಬಾಳೆಗೊನೆ ಕಡಿಯಹೊರಟರೆ ಅದರ ನೀರು ಸಿಡಿದಲ್ಲಿ ಬಟ್ಟೆಯ ಮೇಲೆ ಅಳಿಸಲಾಗದ ಕಲೆಗಳಾಗುತ್ತವೆ. ಯಾವ ಡಿಟರ್ಜೆಂಟ್ ಗಳೂ ಸೋಲೊಪ್ಪಬೇಕು.
ಬಾಳೆಯ ಬಗ್ಗೆ ಬರೆಯುವುದಿದ್ದರೆ ಇನ್ನೂ ಎಷ್ಟೋ ವಿಷಯಗಳಿವೆ. ತಾನು ಅ೦ತ್ಯಗೊ೦ಡು ಇತರರಿಗಾಗಿ ಉತ್ತಮ ಹಣ್ಣು ಕೊಡುವ ಬಾಳೆಯ ಬಾಳು ಸಾರ್ಥಕ. ಎಲ್ಲಾ ಸಮಯದಲ್ಲಿ ಹಾಗೂ ದೇಶದ ಮೂಲೆ ಮೂಲೆಯಲ್ಲೂ ವಿದೇಶಗಳಲ್ಲೂ ದೊರಕುವ ಹಣ್ಣು ಇದಾದುದರಿ೦ದ ಹಣ್ಣಿನ ರಾಜ ಬಾಳೆಹಣ್ಣು ಎ೦ದರೂ ತಪ್ಪಲ್ಲ.
– ಸಾವಿತ್ರಿ ಎಸ್.ಭಟ್, ಪುತ್ತೂರು
Very informative article.. Mouth watering too..! 😉
ಅಬ್ಬಾ!! ಬಾಳೆಯ ವಿಶ್ವರೂಪ ನೋಡಿ ದಂಗಾದೆ..!
very nice. simple and beautiful.
ಗುಡ್ ಗುಜರಾತಿನಲ್ಲಿ ಗೊನೆ ಕಡಿದ ಮೇಲೆ ಉಳಿಯುವ ಬಾಳೆದಿಂಡಿಗೆ ಅತ್ತ್ಯುತ್ತಮ ಬೇಡಿಕೆ ,ಬೆಲೆ ಎರಡೂ ಇದೆ.ಅಲ್ಲಿ ಬಾಳೆಯ ಕಾಂಡದ ರಸವನ್ನು ಬಟ್ಟೆ ತಯಾರಿಯಲ್ಲಿ ಬಣ್ಣ ಉಳಿಯಲು ಬಳಸುತ್ತಾರೆ .ಹಾಗೆ ಕಾಂಡ ಮಾರಲೂ ಬಹುದು. ೧೫೦ ರೂ.ಲೀಟರ್ ಗೆ .ರೈತ ಬಂಧು ಸರಕಾರ .
ಕದಳಿಫಲ ಅತ್ಯುತ್ತಮ.
ಚಿತ್ರದಲ್ಲಿ ತೋರಿಸಿರುವ ಸೀರೆಗಳು ಬಾಳೆ ನಾರಿನವೇ ?ಎಲ್ಲಿ ಸಿಗುತ್ತವೆ ?
ಸಿಲ್ಕ್ ಅಲ್ಲವೇ ?
ಲಭ್ಯ ಮಾಹಿತಿಯ ಪ್ರಕಾರ ಆ ಸೀರೆಗಳು ಬಾಳೆನಾರಿನಿಂದ ತಯಾರಿಸಿದವು. ಸಿಲ್ಕ್ ಸೀರೆಯಷ್ಟೇ ಸೊಗಸಾಗಿವೆ. ಬೆಲೆ 400 – 1000 ರೂ ಇರುತ್ತವಂತೆ. ಚೆನ್ನೈ ಯ ಕೆಲವು ಬಟ್ಟೆ ಅಂಗಡಿಗಳಲ್ಲಿ ಬಳಿ ಸಿಗುತ್ತವಂತೆ. ( ಮಾಹಿತಿ: ಅಂತರ್ಜಾಲ)
ಗುಡ್ ಒನ್.ಬ್ಯೂಟಿಫುಲ್.
VERY GOOD KNOWLEDGABLE ARTICLE
Fruit available for 365 days. More medicinal properties and vitamins
ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿ ಹಾಗೂ ವರ್ಣರ೦ಜಿತ ಚಿತ್ರಗಳನ್ನು ಪ್ರಕಟಿಸಿದ ನಮ್ಮ ಸ೦ಪಾದಕಿಯವರಿಗೆ ತು೦ಬಾ ವ೦ದನೆಗಳು. ಹಾಗೂ ಉತ್ತಮ ಪ್ರತಿಕ್ರಯೆ ನೀಡಿ ಪ್ರೋತ್ಸಾಹಿಸಿದ ಓದುಗರಿಗೂ ಧನ್ಯವಾದಗಳು.
nice article and informative too…
Very informative article. Ishtella vishayagalu irabahudenno yochaneye mattashtu chintanege orehachitu…oh…its really wonderful as well as meaningful title….
ಅಬ್ಬ ಅದೆಷ್ಟು ವಿಷಯಗಳು ಓದಿ beragaade
ಬಾಳೇ ನಾರಿನ ಸೀರೆಗಳು ಗುರುವಾಯೂರ್ ನಲ್ಲಿ ಸೀಗುತ್ಥೆ.