ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.
ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ ಖುರ್ಚಿಯಲ್ಲಿ ಕುಳ್ಳಿರಿಸಿದ. ಗ್ರಾಹಕನಿಗೆ ಎಂತಹ ಚಪ್ಪಲಿಗಳು ಬೇಕು ಎಂಬುದನ್ನು ಕೇಳಿ ತಿಳಿದುಕೊಂಡ. ನಂತರ ಹಲವಾರು ನಮೂನೆಗಳ ಚಪ್ಪಲಿಗಳನ್ನು ಮುಂದೆ ಹರಡಿದ. ಪ್ರತಿಯೊಂದನ್ನೂ ಅಳತೆ ಮತ್ತು ಆಯ್ಕೆಯ ಸಲುವಾಗಿ ಗ್ರಾಹಕನ ಪಾದಗಳಿಗೆ ತೊಡಿಸಿ ತೋರಿಸ ತೊಡಗಿದ.
ಅದನ್ನು ಕಂಡು ಗ್ರಾಹಕ ಸಿಡಿಮಿಡಿಗೊಂಡು “ನೀನು ಪ್ರತಿ ಬಾರಿ ನನ್ನ ಪಾದಗಳನ್ನು ಮುಟ್ಟುತ್ತಾ ಚಪ್ಪಲಿಗಳನ್ನು ತೊಡಿಸಬೇಡ. ಕೊಡು ನಾನೇ ಹಾಕಿಕೊಂಡು ಅಳತೆ ನೋಡಿಕೊಳ್ಳುತ್ತೇನೆ” ಎಂದು ಹೇಳಿದ.
ಅವನ ಮಾತನ್ನು ಕೇಳಿದ ಅಂಗಡಿಯ ಪರಿಚಾರಕ “ ಸ್ವಾಮಿ ನನ್ನನ್ನು ಮಾಲೀಕರು ಇಲ್ಲಿ ಸಂಬಳ ಕೊಟ್ಟು ನೌಕರಿಗೆ ಇಟ್ಟುಕೊಂಡಿರುವುದು ಗ್ರಾಹಕರಿಗೆ ಚಪ್ಪಲಿಗಳನ್ನು ತೊಡಿಸಿ ಯಾವುದು ಸರಿಯಾಗಿದೆಯೋ ಅದನ್ನು ಮಾರುವುದಕ್ಕೋಸ್ಕರ. ನಾನು ಹತ್ತಾರು ಬಾರಿ ಗ್ರಾಹಕರ ಕಾಲು ಮುಟ್ಟುತ್ತೇನೆ ಅದು ನನ್ನ ಕೆಲಸದ ಒಂದು ಭಾಗ. ಅದೇ ಅಂಗಡಿಯ ಹೊರಗಡೆ ಒಂದು ಸಾವಿರ ರೂಪಾಯಿ ಕೊಡುತ್ತೇನೆಂದರೂ ನಾನು ನಿಮ್ಮ ಪಾದಗಳನ್ನು ಮುಟ್ಟಲು ತಯಾರಿಲ್ಲ. ಆದರೆ ಇಲ್ಲಿ ಮಾತ್ರ ನನ್ನ ಕರ್ತವ್ಯವಾಗಿ ಅದನ್ನು ಮನಸ್ಸಿಟ್ಟು ಮಾಡುತ್ತೇನೆ. ನಿಮಗೆ ಒಂದು ಜೊತೆ ಚಪ್ಪಲಿ ಮಾರುವುದರಲ್ಲಿ ನಾನು ಯಶಸ್ವಿಯಾದರೆ ನನಗೆ ಮಾಲೀಕರು ಕೊಡುತ್ತಿರುವ ಸಂಬಳ ಸಾರ್ಥಕವಾದಂತೆ ಎಂದು ಭಾವಿಸುತ್ತೇನೆ. ನನ್ನ ಕರ್ತವ್ಯ ಮಾಡಲು ಬಿಡಿ” ಎಂದು ತನ್ನ ಕೆಲಸವನ್ನು ಮುಂದುವರಿಸಿದನು. ಗ್ರಾಹಕನಿಗೆ ಚಪ್ಪಲಿ ಮಾರುವುದರಲ್ಲಿ ಯಶಸ್ವಿಯಾದನು. ಅವನ ಮುಖದಲ್ಲಿ ಸಂತಸ ಕಾಣಿಸಿತು.
ಗ್ರಾಹಕನಾಗಿ ಬಂದಿದ್ದ ವ್ಯಕ್ತಿಯು ಪರಿಚಾರಕನ ಮಾತನ್ನು ಕೇಳಿ ಅವನ ಕರ್ತವ್ಯನಿಷ್ಠೆಗೆ ತಲೆಬಾಗಿದನು. ಕೆಲಸ ದೊಡ್ಡದು, ಚಿಕ್ಕದೆಂಬ ಭೇದವಿಲ್ಲ. ಮಾಡುವ ಕೆಲಸದಲ್ಲಿ ನಿಷ್ಠೆ ಮುಖ್ಯವಾಗುತ್ತದೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ..
ಉತ್ತಮ ಸಂದೇಶವಿದೆ ಕತೆಯಲ್ಲಿ
ಧನ್ಯವಾದಗಳು ನಯನಮೇಡಂ
ಕರ್ತವ್ಯ ನಿಷ್ಠೆ,, ಶ್ರದ್ದೆಯ ಸಂದೇಶ ಇರುವ ಉತ್ತಮ ಕಥೆ
ಧನ್ಯವಾದಗಳು ಗಾಯತ್ರಿ ಮೇಡಂ
ಉತ್ತಮ ಸಂದೇಶವನ್ನು ಹೊತ್ತ, ಸೂಕ್ತ ರೇಖಾಚಿತ್ರವನ್ನೊಳಗೊಂಡ ಚಂದದ ಕಥೆಗೆ ಧನ್ಯವಾದಗಳು, ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಸುಖ ಜೀವನಕ್ಕೆ ಸರಳವಾದ ತತ್ವಗಳನ್ನು ಚಂದದ ರೇಖಾ ಚಿತ್ರಗಳೊಂದಿಗೆ ಕಥಾರೂಪದಲ್ಲಿ ಹೆಣೆದಿರುವ ರೀತಿ ಆಕರ್ಷಕವಾಗಿದೆ.
ಧನ್ಯವಾದಗಳು ಪದ್ಮಾ ಮೇಡಂ
ನಮ್ಮ ಔದಾರ್ಯವು ಇನ್ನೊಬ್ಬರ ಕಾಯಕಕ್ಕೆ ಸಂಚಕಾರವಾಗಬಾರದು ಎಂಬ ನೀತಿ
ಕಾರಂತರ ಔದಾರ್ಯದ ಉರುಳಲ್ಲಿ ಕಾದಂಬರಿ ನೆನಪಾಯಿತು.
ಚೆನ್ನಾಗಿದೆ ಮೇಡಂ