ರೆ…..ಸಾಮ್ರಾಜ್ಯದಲ್ಲಿ…..
ಉರಿಯುವ ದೀಪ ದಿಟ್ಟಿಸುತಾ ಅದರ ಬೆಳಕಲ್ಲಿ
ಕರಗಿ ಯೋಚಿಸುವೆ…..ಕಳೆದ ದಿನಗಳ ಬಗ್ಗೆ………
ಒಮ್ಮೊಮ್ಮೆ ಅಂದುಕೊಳ್ಳುವೆ,
ಕಾಲದ ಚಕ್ರ ಹಿಮ್ಮುಖವಾಗಿ ಚಲಿಸಿ ಹಿಂದಿನ ದಿನಗಳಿಗೆ ಹೋದರೆ….
ಘಟಿಸಿದ ಘಟನೆಗಳ ಬದಲಿಸಲು
ಅಲ್ಲ ಬದಲಿಗೆ ಆ ಕಳೆದ ಕ್ಷಣಗಳ ಸವಿಯನ್ನು
ಮತ್ತೊಮ್ಮೆ ಮನಸಾರೆ ಅನುಭವಿಸಬೇಕೆಂದು…..
ಒಮ್ಮೊಮ್ಮೆ ಅಂದುಕೊಳ್ಳುವೆ,
ಮತ್ತೊಮ್ಮೆ ಎನ್ನ ತಾಯಿಯ ಮಡಿಲಲ್ಲಿ ಮಗುವಾಗಬೇಕೆಂದು
ಎಲ್ಲರೂ ಎತ್ತಿಕೊಂಡು ಮುದ್ದಾಡಲಿ
ಎಂದಲ್ಲ ಬದಲಿಗೆ ಅಮ್ಮನ ಮೊಗದಲ್ಲಿ
ಆ ನಗುವನ್ನು ಕಾಣಬೇಕೆಂದು……
ಒಮ್ಮೊಮ್ಮೆ ಅಂದುಕೊಳ್ಳುವೆ,
ಮತ್ತೊಮ್ಮೆ ಬ್ಯಾಗನ್ನು ಹೆಗಲಿಗೇರಿಸಿ ಶಾಲೆಗೆ ಓಡಿಬಿಡಲೇ ಎಂದು….
ಮತ್ತೆ ಹುಡುಗನಾಗಿ ಕುಣಿಯಲು ಅಲ್ಲ
ಬದಲಿಗೆ ಶಾಲಾಜೀವನದ ನಂತರ ಮತ್ತೆಂದೂ ಭೇಟಿಯಾಗದ
ಆಜೀ ವದ ಗೆಳೆಯರ ಕೂಡ ಇನ್ನಷ್ಟು ಆಡಿ ನಲಿಯಲೆಂದು….
ಒಮ್ಮೊಮ್ಮೆ ಅಂದುಕೊಳ್ಳುವೆ,
ಹಿಪ್ಪಿ ಕ್ರಾಪ್ ತೆಗೆದು ದೊಗಲೆ ಪ್ಯಾಂಟ್ ಧರಿಸಿ ಚಿಗುರು ಮೀಸೆಯೊಂದಿಗೆ
ಮತ್ತೊಮ್ಮೆ ಕಾಲೇಜಿಗೆ ಹೋಗಿಬಿಡಲೇ ಎಂದು
ಗುಂಪು ಕಟ್ಟಿಕೊಂಡು ದಾಂಧಲೆ ಎಬ್ಬಿಸಿ ಕ್ರಾಂತಿಕಾರಿ ಅನಿಸಿಕೊಳ್ಳಲು ಅಲ್ಲ…..
ಬದಲಿಗೆ ಆಗ ಓದಿದ ಪಾಠಗಳ ಸರಿಯಾಗಿ ಅರ್ಥೈಸಿಕೊಳ್ಳಲೆಂದು…
ಒಮ್ಮೊಮ್ಮೆ ಅಂದುಕೊಳ್ಳುವೆ,
ನಿದ್ರೆಯಿಲ್ಲದ ರಾತ್ರಿಗಳ ಕಳೆದು ಬೆಳಗ್ಗೆ ತೂಕಡಿಸುತ್ತಾ ಎದ್ದು
ಡವಗುಟ್ಟುವ ಎದೆಯೊಂದಿಗೆ
ಮತ್ತೊಮ್ಮೆ ಕೆಲಸಕ್ಕೆ ಸೇರಿದ ಮುನ್ನ ದಿನಗಳಿಗೆ ಹೋಗಿಬಿಡಲೇ ಎಂದು
ಕೆಲಸ ಕಡಿಮೆ ಮಾಡಲೆಂದು ಅಲ್ಲ.
ಬದಲಿಗೆ ಮೊದಲ ಸಂಬಳದಲಿ ಅಪ್ಪ ಅಮ್ಮನಿಗೆ ಬಟ್ಟೆಗಳನ್ನು
ಕೊಂಡ ಖುಷಿ ಮನಸಾರೆ ಆನಂದಿಸಲೆಂದು.
ಒಮ್ಮೊಮ್ಮೆ ಅಂದುಕೊಳ್ಳುವೆ,
ಮತ್ತೊಮ್ಮೆ ಎನ್ನ ಮಕ್ಕಳು ಸಣ್ಣವರಾಗಲೆಂದು
ಅವರು ಬಹಳ ಬೇಗ ಎದೆ ಮಟ್ಟಕ್ಕೆ ಬೆಳೆದು
ದೊಡ್ಡವರಾದರು ಎಂದು ಅಲ್ಲ.
ಬದಲಿಗೆ ಇನ್ನೂ ಸ್ವಲ್ಪ ಅವರೊಂದಿಗೆ ಆಡಬೇಕೆಂದು.
ಒಮ್ಮೊಮ್ಮೆ ಅಂದುಕೊಳ್ಳುವೆ,
ಇನ್ನೂ ಹೆಚ್ಚಿನ ಸಮಯ ಎನಗೆ ಬೇಕಿತ್ತು….ಅಂತಾ….
ದೀರ್ಘಾವಧಿಯ ಆಯಸ್ಸು ಎನಗಿರಲೆಂದು ಅಲ್ಲಾ.
ಬದಲಿಗೆ ನನ್ನ ಮೂಲಕ ಇನ್ನೊಬ್ಬರಿಗೆ ಖುಷಿ ಹೇಗೆ ಹಂಚಲೆಂದು.
ಎಷ್ಟೇ ಬಡ ಬಡಿಸಿದರೂ ಎಷ್ಟೇ ಹಪ ಹಪಿಸಿದರೂ
ಕಳೆದ ಕಾಲ ಮತ್ತೊಮ್ಮೆ ಮರಳಿಬಾರದು
ಸಿಗುವ ಪ್ರತಿ ಕ್ಷಣಗಳನ್ನು ಹಾಳು ಮಾಡದೆ ಜೀವಿಸುವ ಪೂರ್ಣವಾಗಿ
ಜರುಗುವ ಪ್ರತಿ ಘಳಿಗೆಯನ್ನು ಸಂಭ್ರಮದಿಂದ.
ಆಚರಿಸೋಣ ಆನಂದಿಸೋಣ ಪ್ರತಿದಿನವನ್ನು.
( Robert Drake ಅವರ ಸುಂದರ ಸಾಲುಗಳನ್ನು ಕನ್ನಡದಲ್ಲಿ ಭಾವನುವಾದ ಮಾಡುವ ಪ್ರಯತ್ನ)
-ಶರಣಬಸವೇಶ ಕೆ.ಎಂ
ಕನವರಿಕೆಯ ಸಾಮ್ರಾಜ್ಯ..ತುಂಬಾ ಆಪ್ತ ವಾಗಿದೆ.. ಸಾರ್..
ಸಾಮಾನ್ಯವಾಗಿ ಈ ರೆ..ಸಾಮ್ರಾಜ್ಯದಲ್ಲಿ ಎಲ್ಲರೂ ಕನವರಿಸುವವರೇ ಹೌದು.
ಅನುವಾದ ಅದ್ಭುತ!
Nice
ನಿಮ್ಮ ಪ್ರಯತ್ನ ಖಂಡಿತಾ ಯಶಸ್ವಿಯಾಗಿದೆ. ಇಷ್ಟವಾಯಿತು. ಅಭಿನಂದನೆಗಳು.
ನಮ್ಮ ಸುರಹೊನ್ನೆಯ ಮುತ್ತುಗಳು ಅಂತಾನೇ ಕರೆಯುತ್ತೇನೆ ಈ ನಾಲ್ಕು ಜನ ಮಹಿಳಾಮಣಿಗಳನ್ನು ಬಿ.ಆರ್ ನಾಗರತ್ನ, ಶಂಕರಿ ಶರ್ಮ, ನಯನ ಬಜಕೂಡ್ಲು ಹಾಗೂ ಪದ್ಮಾ ಆನಂದ್.
ತಾವೇ ಸ್ವತಃ ಒಳ್ಳೆಯ ಬರಹಗಾರರಾಗಿದ್ದರೂ ತಪ್ಪದೇ ಸುರಜಹೊನ್ನೆಯಲ್ಲಿ ಬರುವ ಎಲ್ಲಾ ಲೇಖನಗಳು, ಕಾದಂಬರಿಗಳು ಕವನಗಳನ್ನು ಓದಿ ಪ್ರತಿಕ್ರಿಯೆ ನೀಡುತ್ತಾರೆ…..ನಿಮ್ಮ ಈ ಸಾಹಿತ್ಯ ಪ್ರೇಮ ನಿಮ್ಮನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ನಮ್ಮ ಬರಹಗಳನ್ನು ಪ್ರಕಟಿಸಿ ಬಹು ಅಮೂಲ್ಯವಾದ ಕಾರ್ಯ ಮಾಡುತ್ತಿರುವ ಸಂಪಾದಕರಾದ ಶ್ರೀಮತಿ ಹೇಮಾಮಾಲ ಅವರಿಗೆ ತುಂಬು ಹೃದಯದ ಧನ್ಯವಾದಗಳು
ಸುರಹೊನ್ನೆಗೆ ಬರೆಯುವ ಹಾಗೂ ಪ್ರತಿಕ್ರಿಯಿಸುವ ಕನ್ನಡವನ್ನು ಬಳಸುವ, ಬೆಳೆಸುವ ಸಾಹಿತ್ಯಾಸಕ್ತರಿಗೆಲ್ಲರಿಗೂ ನಮನಗಳು.