ಪುಸ್ತಕ ಪರಿಚಯ: ‘ಅರಿವಿನ ಕಡಲು ಸರ್ವಜ್ಞ’ – ಪ್ರೊ.ಪದ್ಮಿನಿ ಹೆಗಡೆ

Share Button

ನಲ್ನುಡಿ

”ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ| ಧಾರುಣಿಯು‌ ಎಲ್ಲಾ ಕುಲ ದೈವ” ಎಂದು ಸಾರಿದ ಸರ್ವಜ್ಞ ವಿಶ್ವಕುಟುಂಬಿ. ಪ್ರಪಂಚವನ್ನೇ ಪರಮಾತ್ಮನನ್ನಾಗಿ ಕಂಡು ಪೂಜಿಸಿದಾತ. ಈ ಮಹಂತನ ಬಾಲ್ಯದ ಬದುಕೊಂದು ದುರಂತ ಗಾಥೆ. ಇವನ ಅಪ್ಪ‌ ಅವ್ವನೆಂದು ತರ್ಕಿಸಲಾದ ಬಸವರಸ- ಕುಂಬಾರ ಮಾಳಿಯ ಪ್ರಣಯ ದಂತಕಥೆ ಸತ್ಯವೋ ಸುಳ್ಳೋ ತಿಳಿಯದು. ಆದರೆ ಕೆಲವು ತಿಳಿಗೇಡಿಗಳು ಅವರ ಕುರಿತಾಗಿ‌ ಇಲ್ಲ ಸಲ್ಲದ ಕುಹಕದ ನುಡಿಯನ್ನಾಡಿ ಸರ್ವಜ್ಞನನ್ನು ಕೆಣಕಿದಂತಿದೆ. ಅದಕ್ಕಾಗಿಯೇ‌ ಆತನು ತನ್ನ ವಚನಗಳಲ್ಲಿ ತಾನು ಶಿವನ ಮಗನೆಂದುಕೊಂಡು, ಮನೆಬಿಟ್ಟು ಹೊರಟು‌ ಅಲೆಮಾರಿಯಾಗಿ ಲೋಕ ಸುತ್ತಿ, ಲೋಕಶಾಲೆಯಲ್ಲಿ ಸರ್ವರಿಂದ‌ ಒಂದೊಂದೇ ನುಡಿ ಕಲಿತು, ವಿದ್ಯಾಗಿರಿಯಾದ. ತನ್ನರಿವ ಗುರುವಿನ ಮಾರ್ಗದರ್ಶನದಲ್ಲಿ ಸರ್ವಜ್ಞತ್ವವನ್ನು ಪಡೆದು ರಸಿಕ ದಾರ್ಶನಿಕನಾಗಿ ಶಶಿಯಂತೆ ಉದಿಸಿ, ಮೇಲೇರಿ, ಸೂರ್ಯನಂತೆ ಬೆಳಗಿದ; ಬದುಕಿನ ದಟ್ಟ‌ ಅನುಭವಿ, ಅನುಭಾವಿಯಾದ; ವಿರಕ್ತ, ವಿವೇಕಿ, ಸತ್ಯನಿಷ್ಠ, ಖಂಡಿತವಾದಿಯಾಗಿ ಮೆರೆದ. ರಾಗದ್ವೇಷರಹಿತನಾಗಿ ಬದುಕಿದ‌ ಆತ ಬದುಕಿನ ನಿಗೂಢ ಸತ್ಯವನ್ನು ಆಳವಾಗಿ ಪರಿಭಾವಿಸಿದವನು. ಅವನ ಅನುಭವ-ವೇದದಲ್ಲಿ ಅವನು ನೋಡಿದ ಸಮಾಜದ ಗುಣದೋಷಗಳ ಢಾಳ ಚಿತ್ರಗಳಿವೆ, ಕಟು ವಿಡಂಬನೆಗಳಿವೆ, ಸುನೀತಿ ತತ್ತ್ವಬೋಧೆಗಳಿವೆ, ಮತಧರ್ಮ‌ ಅಭಿನಿವೇಶಗಳಿವೆ; ಜೊತೆಗೆ ಅವನ ಸ್ವಂತ ಬದುಕಿನ ಚಿತ್ರಗಳೆಲ್ಲಾ ಹಾಸುಹೊಕ್ಕಾಗಿ ಬೆರೆತುಕೊಂಡಿವೆ.

ಸರ್ವಜ್ಞನು ತನ್ನ ವಿಚಾರಧಾರೆಯನ್ನು ಜನಸಾಮಾನ್ಯರಿಗೆ‌ ಎಟುಕಬಹುದಾದ ತ್ರಿಪದಿ ಛಂದಸ್ಸಿನಲ್ಲಿ ಎರಕ ಹೊಯ್ದಿದ್ದಾನೆ. ಮೌಖಿಕ ಪರಂಪರೆಯಲ್ಲಿರುವ ಸರ್ವಜ್ಞನ ವಚನಗಳನ್ನು ನೆಚ್ಚಿಕೊಂಡ‌ ಅನೇಕರು ಸುಲಭಗ್ರಾಹ್ಯವಾದ ಈ ಛಂದಸ್ಸಿನಲ್ಲಿ ತಮ್ಮ‌ಅಭಿರುಚಿಗೆ ತಕ್ಕಂತೆ ವಚನಗಳನ್ನು ರಚಿಸಿ, ಅವುಗಳನ್ನು ಸರ್ವಜ್ಞನ ವಚನಗಳ ಮಧ್ಯೆ, ಅವನದ್ದೇ‌ ಎಂಬಂತೆ ತೇಲಬಿಟ್ಟದ್ದೂ‌ ಉಂಟು. ಹೀಗಾಗಿ ಸರ್ವಜ್ಞನ ವಚನಗಳ ಸಂಖ್ಯೆ ಲಂಬಿಸಿ ಸುಮಾರು ಏಳೆಂಟು ಸಾವಿರಕ್ಕೂ ಮಿಕ್ಕಿ ಬೆಳೆದುಕೊಂಡಿದೆ. ಇವುಗಳಲ್ಲಿ ಸರ್ವಜ್ಞ ಬರೆದುದೆಷ್ಟು? ಇತರರು ಸೇರಿಸಿದ್ದು ಎಷ್ಟು? ಎಂದು ಬೇರ್ಪಡಿಸಿ ತಿಳಿಯುವುದು ಕಷ್ಟಸಾಧ್ಯ. ಹೀಗಾಗಿ ಸರ್ವಜ್ಞನ ವಿಚಾರಧಾರೆಯ ಸುಸ್ಪಷ್ಟ ಚಿತ್ರಣವನ್ನು‌ ಒಟ್ಟಿಗೆ ಕಟ್ಟಿಕೊಡುವುದು ಕಷ್ಟಸಾಧ್ಯ. ಆದರೂ‌ ಇಂಥ ಕಷ್ಟಸಾಧ್ಯ ಕೆಲಸಕ್ಕೆ ಪದ್ಮಿನಿ ಹೆಗಡೆಯವರು ದಿಟ್ಟತನದಿಂದ ಮುಂದಾಗಿ, ಸರ್ವಜ್ಞನ ಕೆಲವೇ ಕೆಲವು ವಚನಗಳ ಹಿನ್ನೆಲೆಯಲ್ಲಿ ಸರ್ವಜ್ಞನ ಸಾಂಸ್ಕೃತಿಕ ಲೋಕದ ಚಿತ್ತಾರವನ್ನು ನಮ್ಮ ಮುಂದಿಡುತ್ತಾರೆ. ಅದಕ್ಕಾಗಿ‌ ಅವರನ್ನು ಹೃತ್ಪೂರ್ವಕವಾಗಿ‌ ಅಭಿನಂದಿಸುತ್ತೇನೆ.

ಪದ್ಮಿನಿ ಹೆಗಡೆಯವರು ತತ್ತ್ವಶಾಸ್ತ್ರ ಪ್ರಾಧ್ಯಾಪಕರು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಆಳವಾದ ಜ್ಞಾನ ಉಳ್ಳವರು ಮತ್ತು ನನ್ನ ನಿಡುಗಾಲದ ಸ್ನೇಹಿತ, ರಸರಾಮಾಯಣದ ಗ್ರಂಥಕರ್ತ, ಪ್ರೊ. ಗಜಾನನ ಹೆಗಡೆಯವರ ಶ್ರೀಮತಿಯವರಾಗಿದ್ದಾರೆ. ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮ ಚಿಂತನಶೀಲ ಬರವಣಿಗೆಗಳಿಂದ ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಮೈಸೂರು‌ ಎಫ್. ಎಂ. 100.6 ಆಕಾಶವಾಣಿಯು ”ಅರಿವಿನ ಶಿಖರ” ಕಾರ್ಯಕ್ರಮ ಸರಣಿಯನ್ನು ಆಯೋಜಿಸಿದಾಗ ಅಲ್ಲಿ ಪದ್ಮಿನಿ ಹೆಗಡೆ ವ್ಯಾಖ್ಯಾನಿಸಿದ ಸರ್ವಜ್ಞನ ವಚನಗಳನ್ನು ಈ ಗ್ರಂಥದಲ್ಲಿ ವ್ಯವಸ್ಥಿತ ರೀತಿಯಲ್ಲಿ ಸಂಯೋಜಿಸಿ ಸರ್ವಜ್ಞನ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಿ ಕೊಡುತ್ತಾರೆ. ಸುಮಾರು ಏಳೆಂಟು ಸಾವಿರ ತ್ರಿಪದಿಗಳ ಪರಿಮಿತಿಗಳವಟ್ಟ ಸರ್ವಜ್ಞನ ಸತ್‌ ಕಾವ್ಯ ಗ್ರಂಥದ ಸಾರವತ್ತಾದ 108 ತ್ರಿಪದಿಗಳನ್ನು ಮಾತ್ರ‌ ಆಯ್ಕೆ ಮಾಡಿಕೊಂಡು ಪದ್ಮಿನಿ ಹೆಗಡೆಯವರು‌ ಅವನ್ನು 1. ಕವಿ ಸರ್ವಜ್ಞ 2. ಘನ ವ್ಯಕ್ತಿತ್ವ 3. ವೀರಶೈವ ಪರಂಪರೆ 4. ಸಾಂಖ್ಯಯೋಗ 5. ಉತ್ತಮ ಬದುಕು 6. ಮೌಲ್ಯಗಳು 7. ಹದ್ದುಮೀರಿದ ನಡವಳಿಕೆ 8. ಸಚ್ಚಾರಿತ್ರ್ಯ 9. ನುಡಿನಮನ ಹೀಗೆ ಒಂಬತ್ತು ಅಧ್ಯಾಯಗಳಲ್ಲಿ ವಿಶ್ಲೇಷಿಸಿ ವಿಮರ್ಶಿಸುತ್ತಾರೆ.

ಗ್ರಂಥದಲ್ಲಿ ಸರ್ವಜ್ಞನ ಘನ ವ್ಯಕ್ತಿತ್ವ, ಗುರು, ಲಿಂಗ, ಜಂಗಮ, ಷಟ್ಸ್ಥಲ, ಅಷ್ಟಾವರಣಾದಿ ವೀರಶೈವ ಮತಧರ್ಮ ವಿಷಯಕ ವಿಚಾರಗಳ, ಸಾಂಖ್ಯಯೋಗಕ್ಕೆ ಸಂಬಂಧಿಸಿದ ಯೋಗ, ಯೋಗಿ, ಸಿದ್ಧಿ, ಕುಂಡಲಿನಿ, ಆನಂದ, ಅಮೃತಕಲಶ ಮುಂತಾದವುಗಳ ವಿವರ ವ್ಯಾಖ್ಯಾನಗಳಿವೆ. ಉತ್ತಮ ಬದುಕ ನಿರ್ವಹಣೆಯ ಮಾರ್ಗೋಪಾಯಗಳು, ಮಾಯೆ, ಆಶಾಪಾಶ, ನಿಜಸುಖದ ಬೆಲೆ, ಜೀವನ ಮೌಲ್ಯಗಳ ಪ್ರತಿಪಾದನೆ, ಜ್ಯೋತಿಷ್ಯ, ಅಪಶಕುನ, ಜೂಜು, ಅನೈತಿಕತೆ, ಲಂಪಟತನ, ಅವಿವೇಕ, ಅಪನಂಬಿಕೆ ರಾಜಕೀಯ, ಸಮಾಜ ವಿಡಂಬನೆ ಈ ಮುಂತಾದ ಸಂಗತಿಗಳನ್ನು ಪ್ರಚುರಪಡಿಸುವ ಹಲವಾರು ತ್ರಿಪದಿಗಳ ತಲಸ್ಪರ್ಶಿಯಾದ ವ್ಯಾಖ್ಯಾನವನ್ನು ಸಹ ಈ ಗ್ರಂಥದಲ್ಲಿ ಅವಲೋಕಿಸಬಹುದಾಗಿದೆ.

ತ್ರಿಪದಿಗಳ ಮೀಮಾಂಸೆಯನ್ನು ಮಾಡುವ ಕಾಲಕ್ಕೆ ಪ್ರೊ. ಪದ್ಮಿನಿ ಹೆಗಡೆಯವರ ಬಹುಶ್ರುತ ಪಾಂಡಿತ್ಯದ ಹೆಜ್ಜೆ ಗುರುತುಗಳು ನಿಚ್ಚಳವಾಗಿ ಗೋಚರಿಸುತ್ತವೆ. ವ್ಯಾಖ್ಯಾನಿತ ತ್ರಿಪದಿಗಳ ಆಯ್ಕೆಯಲ್ಲಿ ಹೊಸತನವಿದೆ. ಆಯ್ಕೆಯ ಕಾಲಕ್ಕೆ ಈ ವರೆಗೆ ಜನಪ್ರಿಯವಾದ ತ್ರಿಪದಿಗಳ ಕಡೆಗಷ್ಟೇ ಗಮನ ಹರಿಸದೆ ಬೆಡಗಿನ ವಚನಗಳ ರೂಪದಲ್ಲಿರುವ, ಸಾಂಖ್ಯ ಯೋಗಗಳಿಗೆ ಸಂಬಂಧಿಸಿದ ಕ್ಲಿಷ್ಟಕರ‌ ಇನ್ನಿತರ ತ್ರಿಪದಿಗಳೆಡೆಗೂ ತಮ್ಮ ತೀಕ್ಷ್ಣವಾದ ಕಣ್ಣೋಟ ಹೊರಳಿಸಿ ಅವನ್ನು ಸುಲಲಿತವಾಗಿ, ಸಶಕ್ತವಾಗಿ ವ್ಯಾಖ್ಯಾನಿಸುವಲ್ಲಿ ಪದ್ಮಿನಿ ಹೆಗಡೆಯವರು ಸಾಫಲ್ಯವನ್ನು ಕಾಣುತ್ತಾರೆ. ಜೊತೆಗೇನೇ ಕನ್ನಡ ಸಂಸ್ಕೃತಿಯ ವಾರಸುದಾರನಾಗಿ ಮೆರೆದ ಸರ್ವಜ್ಞನ ಕಾವ್ಯ ಶಿಲ್ಪದ ಮಾದರಿಯನ್ನು ಸೊಗಸಾಗಿ ಕಂಡರಿಸಿ ಸಹೃದಯಿಗಳ ಮುಂದಿಡುವಲ್ಲಿಯೂ ಯಶಸ್ವಿಯಾಗುತ್ತಾರೆ. ಸತ್‌ಕವಿಯಾದ ಸರ್ವಜ್ಞನ ವಿಚಾರಧಾರೆಯ ಮಿಂಚನ್ನೊಳಗೊಂಡ ಈ ಸತ್ಕೃತಿಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಹಾಗೂ ಮುಂದಿನ ದಿನಗಳಲ್ಲಿ ಪ್ರೊ. ಪದ್ಮಿನಿ ಹೆಗಡೆಯವರಿಂದ‌ ಇನ್ನೂ ಸತ್ವಪೂರ್ಣವಾದ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.

-ಡಾ. ಎನ್. ಆರ್. ನಾಯಕ,
ಪ್ರಕಾಶಕರು, ಜನಪದ ಪ್ರಕಾಶನ
ಹೊನ್ನಾವರ

3 Responses

  1. ಪುಸ್ತಕ ಪರಿಚಯ…ಚೆನ್ನಾಗಿದೆ..

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ಉತ್ಕೃಷ್ಟವಾದ ಪುಸ್ತಕವೊಂದರ ವಿಮರ್ಶಾತ್ಮಕ ಪರಿಚಯ ಲೇಖನ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: