ವಾಟ್ಸಾಪ್ ಕಥೆ 49 : ನೆರವು-ಕಾರಣ.
ಒಂದು ಕಾಡು. ಅಲ್ಲಿದ್ದ ಒಂದು ಪಕ್ಷಿಯು ಮಳೆಗಾಲ ಪ್ರಾರಂಭವಾಗುವುದರೊಳಗೆ ತನ್ನದೊಂದು ಪುಟ್ಟ ಗೂಡನ್ನು ಕಟ್ಟಿಕೊಳ್ಳಲು ಸೂಕ್ತವಾದ ಸ್ಥಳ ಹುಡುಕುತ್ತಿತ್ತು. ಏಕೆಂದರೆ ಅದು ವಾಸವಾಗಿದ್ದ ಗೂಡು ತುಂಬ ಶಿಥಿಲವಾಗಿತ್ತು. ಪಕ್ಷಿಯ ಮೊಟ್ಟೆಗಳು ಬಿರಿದು ಮರಿಗಳು ಹೊರಬರುವ ಹಂತದಲ್ಲಿದ್ದವು. ಅದಕ್ಕಾಗಿ ಭದ್ರತೆ ಬೇಕಾಗಿತ್ತು. ಸುತ್ತಮುತ್ತ ನೋಡಿದಾಗ ಒಂದು ದೊಡ್ಡ ಮರ ಸಮೀಪದಲ್ಲಿತ್ತು. ಆ ಹಕ್ಕಿಯು ಮರದ ಬಳಿ ಹೋಗಿ ”ಮರವೇ ನಾನು ನಿನ್ನಲ್ಲಿ ಗೂಡು ಕಟ್ಟಿಕೊಳ್ಳಲು ಅವಕಾಶ ನೀಡು” ಎಂದು ಕೇಳಿಕೊಂಡಿತು.
ಮರವು ಆಗುವುದಿಲ್ಲವೆಂದು ಖಡಾಖಂಡಿತವಾಗಿ ನಿರಾಕರಿಸಿತು. ಪಕ್ಷಿಗೆ ಬೇಸರವಾಯಿತು. ಅಲ್ಲಿಂದ ಇನ್ನೂ ಸ್ವಲ್ಪ ಮುಂದೆ ಹೋಗಿ ಮತ್ತೊಂದು ಹಸಿರಾಗಿದ್ದ ಮರವನ್ನು ಕೇಳಿಕೊಂಡಿತು. ಅಲ್ಲಿ ಅವಕಾಶ ದೊರಕಿತು. ಭದ್ರವಾದ ಗೂಡನ್ನು ಕಟ್ಟಿಕೊಂಡು ತನ್ನೆಲ್ಲ ಮೊಟ್ಟೆಗಳನ್ನು ಅಲ್ಲಿಗೆ ಸ್ಥಳಾಂತರಿಸಿತು. ನೆಮ್ಮದಿಯಾಗಿ ಸ್ವಲ್ಪ ಕಾಲ ಕಳೆಯಿತು. ಒಂದು ದಿನ ಭಯಂಕರ ಬಿರುಗಾಳಿ ಬೀಸತೊಡಗಿತು. ಜೊತೆಗೆ ರಭಸದಿಂದ ಮಳೆಯೂ ಸುರಿಯಿತು. ಅದರ ಹೊಡೆತಕ್ಕೆ ಸಿಕ್ಕಿ ಅನೇಕ ಮರಗಿಡಗಳು ನೆಲಕ್ಕುರುಳಿದವು. ಪಕ್ಷಿಯು ಮೊದಲು ಅಶ್ರಯ ಕೇಳಿದ್ದ ಮರವೂ ಧರೆಗುರುಳಿತು.
ಆ ಹಕ್ಕಿಗೆ ಮನಸ್ಸಿನಲ್ಲಿ ನನಗೆ ಆಶ್ರಯ ಕೊಡಲು ನಿರಾಕರಿಸಿದ ಮರಕ್ಕೆ ತಕ್ಕ ಶಾಸ್ತಿಯಾಯಿತು ಎಂದು ಆನಂದ ಪಟ್ಟಿತು. ಇದು ಕೆಳಗೆ ನೆಲದ ಮೇಲೆ ಉದ್ದಕ್ಕೆ ಬಿದ್ದಿದ್ದ ಮರಕ್ಕೆ ಅರ್ಥವಾಯಿತು. ಅದು ನೊಂದ ದನಿಯಲ್ಲಿ ”ಎಲೈ ಪಕ್ಷಿಯೇ ನೀನು ಏನನ್ನು ಆಲೋಚಿಸಿ ಸಂತೋಷಪಡುತ್ತಿದ್ದೀಯೆ ಎಂಬುದು ನನಗೆ ತಿಳಿದಿದೆ. ನಾನು ನಿನಗೆ ಅವಕಾಶ ನಿರಾಕರಿಸಿದ್ದಕ್ಕೆ ಬಲವಾದ ಕಾರಣವಿದೆ. ನಾನು ಬಹಳ ವೃದ್ಧನಾಗಿದ್ದೇನೆ. ನನ್ನ ಬೇರುಗಳೆಲ್ಲ ಸಡಿಲವಾಗಿದ್ದವು. ಹಾಗಾಗಿ ಯಾವುದೇ ಸಮಯದಲ್ಲಿ ಬಿರುಗಾಳಿ, ಮಳೆಗೆ ನಾನು ನೆಲಕ್ಕುರುಳುವುದು ಖಂಡಿತವೆಂಬುದು ನನಗೆ ಅನ್ನಿಸಿತ್ತು. ನಿನಗೆ ನಾನು ಅವಕಾಶ ಕೊಟ್ಟಿದ್ದರೆ ನೀನು ಕಟ್ಟಿಕೊಳ್ಳುತ್ತಿದ್ದ ಗೂಡು, ನಿನ್ನ ಮರಿಗಳು ಎಲ್ಲವೂ ನನ್ನೊಡನೆ ಧರೆಗುರುಳಿ ಹಾಳಾಗುತ್ತಿದ್ದವು. ನಿನಗೆ ತುಂಬ ದುಃಖವಾಗುತ್ತಿತ್ತು. ಅದನ್ನು ತಪ್ಪಿಸಲು ನಾನು ನಿನಗೆ ಜಾಗ ಕೊಡಲಿಲ್ಲ. ಈಗ ಮತ್ತೊಂದು ಮರದಲ್ಲಿ ನೀನು ಸುಭದ್ರವಾಗಿದ್ದೀಯೆ. ನನಗೆ ಸಂತೋಷವಾಗಿದೆ” ಎಂದಿತು.
ಆ ಹಕ್ಕಿಯು ತಾನು ಕಾರಣ ತಿಳಿಯದೇ ಮರವನ್ನು ತಪ್ಪು ತಿಳಿದೆನಲ್ಲಾ ಎಂದು ಪಶ್ಚಾತ್ತಾಪ ಪಟ್ಟಿತು. ಯಾರಾದರೂ ಸಮಯದಲ್ಲಿ ನಮಗೆ ನೆರವಾಗದಿದ್ದರೆ ಅವರನ್ನು ತಪ್ಪು ತಿಳಿಯಬಾರದು. ಅದಕ್ಕೆ ಬೇರೆ ಕಾರಣಗಳಿರಬಹುದು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ನಮ್ಮ ಜೀವನದಲ್ಲಿಯೂ ಇಂತಹ ಪರಿಸ್ಥಿತಿ ಬರುತ್ತಿರುತ್ತದೆ, ನಾವು ಅರ್ಥ ಮಾಡಿಕೊಳ್ಳದೆ ದುಡುಕುತ್ತಿರುತ್ತೇವೆ. ನೀತಿಪೂರ್ಣ ಕಥೆ.
ಧನ್ಯವಾದಗಳು ನಯನಮೇಡಂ
ಪ್ರಕಟಣೆಗಾಗಿ..ಸುರಹೊನ್ನೆ ಸಂಪಾದಕರಾದ ಗೆಳತಿ ಹೇಮಾರವರಿಗೆ ಧನ್ಯವಾದಗಳು.
ಸುಂದರ ರೇಖಾಚಿತ್ರದೊಂದಿಗೆ ಸಂದೇಶಯುಕ್ತ ಕಥೆ ಮುದನೀಡಿತು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಉತ್ತಮವಾದ ಸಂದೇಶವಿರುವ ಕಥೆ
ಧನ್ಯವಾದಗಳು ಗಾಯತ್ರಿ ಮೇಡಂ
ಜೀವನದಲ್ಲಿ ಹಿತಶತ್ರುಗಳಿರುವಂತೆ ಮುನ್ನೆಲೆಗೆ ಬಾರಲಿಚ್ಚಿಸದ ಹಿತೈಷಿಗಳೂ ಇರುತ್ತಾರೆ ಎಂಬ ಸಂದೇಶವನ್ನು ನೀಡುವ ಸುಂದರ ಕಥೆ. ಗುರುತಿಸುವ ಪರಿಪಾಠವನ್ನು ಬೆಳೆಸಿಕೊಳ್ಳ ಬೇಕು.
ಧನ್ಯವಾದಗಳು ಪದ್ಮಾ ಮೇಡಂ