ದೋಸೆ ವೈವಿಧ್ಯ
ದೋಸೆಯೆಂದರೆ ಇಷ್ಟ ಪಡದವರು ಬಹಳ ಕಡಿಮೆ. ದಿನವೂ ದೋಸೆ ಕೊಟ್ಟರೂ ತಿನ್ನುವ ಭೂಪರೂ ಇದ್ದಾರೆ ಅಂದರೆ ಆಶ್ಚರ್ಯವೇನಿಲ್ಲ. ಈಗ ನಾನು ಸ್ವಲ್ಪ ವಿಭಿನ್ನ ಬಗೆಯ ಮೂರು ದೋಸೆಗಳ ರೆಸಿಪಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮಾಡಿ ತಿಂದು ಹೇಗೆನಿಸಿತು ಹೇಳ್ತೀರಲ್ವಾ?
ಬೆಂಡೆಕಾಯಿ ದೋಸೆ
ಆಶ್ಟರ್ಯನಾ? ದೋಸೆಗೆ ಬೆಂಡೆಕಾಯಿ ನೆಂಚಿಗೆ ಮಾಡಬಹುದುˌಆದರೆ ಬೆಂಡೆಕಾಯಿಯಲ್ಲೇ ದೋಸೆ.ಹೌದು ಬೆಂಡೆಕಾಯಿಯಿಂದ ರುಚಿಯಾದ ದೋಸೆ ಮಾಡಬಹುದು. ನಮ್ಮ ಅಮ್ಮ ನಾವು ಚಿಕ್ಕವರಿದ್ದಾಗ ಮಾಡುತ್ತಿದ್ದರು.
ಏನೇನ್ ಬೇಕು?
1 ಪಾವು ಅಕ್ಕಿ. 10—15 ಬೆಂಡೆಕಾಯಿಗಳು ಎಳೆಯದಾದರೆ ಉತ್ತಮ.
ಹೇಗ್ ಮಾಡೋದು?
ಅಕ್ಕಿಯನ್ನು 6—8 ಗಂಟೆಕಾಲ ನೆನಸಿ. ಬೆಂಡೆಕಾಯಿ ತೊಳೆದು ಹುಳಿಗೆ ಹೆಚ್ಚುವಂತೆ ಹೆಚ್ಚಿಕೊಂಡು ಅಕ್ಕಿಯೊಂದಿಗೆ ನುಣ್ಣಗೆ ರುಬ್ಬಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆಮಾಡಿ. ಇದನ್ನು ತಕ್ಷಣ ಮಾಡಬಹುದು. ಹುದುಗಿಸುವ ಅಗತ್ಯವಿಲ್ಲ.. ಚಟ್ನಿ ಗೊಜ್ಜು ಯಾವುದಾದರ ಜೊತೆಗೂ ಚನ್ನಾಗಿರುತ್ತೆ.
ಸೊಪ್ಪಿನ ಖಾರ ದೋಸೆ
ಏನೇನ್ ಬೇಕು
ಒಂದು ಪಾವು ಅಕ್ಕಿ ಆರು ಗಂಟೆ ನೆನೆಸಿ ಇಟ್ಟುಕೊಳ್ಳಿ
1 ಚಮಚ ಕೊತ್ತಂಬರಿ ಬೀಜ
4 ಬ್ಯಾಡಗಿ ಮೆಣಸಿನಕಾಯಿ
ನಿಂಬೆಗಾತ್ರ ಹುಣಸೆಹಣ್ನು
1 ಕಪ್ ಕಾಯಿತುರಿ
ಚೆನ್ನಾಗಿ ತೊಳೆದು ಸಣ್ಹಗೆ ಹಚ್ಚಿದ ಸೊಪ್ಪು (ಮೆಂತ್ಯ, ಬಸಳೆ, ನುಗ್ಗೆಸೊಪ್ಪು ಯಾವುದಾದರೂ ಒಂದು)
ಹೇಗ್ ಮಾಡೋದು?
ಸೊಪ್ಪು ಒಂದನ್ನು ಬಿಟ್ಟು ಮಿಕ್ಕ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ. ದೋಸೆ ಹೊಯ್ಯುವ ಮೊದಲು ಸೊಪ್ಪು ಮತ್ತು ಉಪ್ಪು ಸೇರಿಸಿ ಇದು ಫರ್ಮೆಂಟ್ ಆಗುವ ಅಗತ್ಯವಿಲ್ಲ. ರುಬ್ಬಿದ ತಕ್ಷಣ ಮಾಡಬಹುದು .
ಬಾಳೆದಿಂಡಿನ ದೋಸೆ
ಹಾ ಅಂತ ಹುಬ್ಬೇರಿಸಬೇಡಿ .ನಿಜಕ್ಕೂ ತುಂಬಾ ಆರೋಗ್ಯಕರ ಹಾಗೂ ರುಚಿಯಾದದ್ದು ಈ ದೋಸೆ .
ಬಾಳೆ ದಿಂಡಿನ ಮಹತ್ವದ ಬಗ್ಗೆ ಬೇರೆ ಏನೂ ಹೇಳಲೇ ಬೇಕಿಲ್ಲ ಅಲ್ಲವೇ ?ನಾರಿನ ಅಂಶ ಹೆಚ್ಚಿರುವ ಇದು ಮಲಬದ್ಧತೆಯನ್ನು ದೂರ ಮಾಡುತ್ತದೆ .ಮಧುಮೇಹಕ್ಕೂ ಬಹಳ ಒಳ್ಳೆಯದು. ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸುವ ಶಕ್ತಿ ಇದಕ್ಕಿದೆ ಎನ್ನುತ್ತಾರೆ . ಸರಿ ಇನ್ನೇಕೆ ತಡ ಬಾಳೆದಿಂಡಿನ ದೋಸೆ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ .
ಏನೇನು ಬೇಕು :
8 ಇಂಚು ಉದ್ದದ ಬಾಳೆಯ ದಿಂಡು
ಒಂದೂವರೆ ಪಾವು ಅಕ್ಕಿ
ರುಚಿಗೆ ತಕ್ಕಷ್ಟು ಉಪ್ಪು
ಹೇಗ್ ಮಾಡೋದು ?
ಮೊದಲಿಗೆ ಅಕ್ಕಿಯನ್ನು 6_8 ಗಂಟೆ ಕಾಲ ನೆನೆಸಿ .ಬಾಳೆಯ ದಿಂಡನ್ನು ಚಕ್ರಾಕಾರವಾಗಿ ಹಚ್ಚಿಕೊಂಡು ಅದರಲ್ಲಿರುವ ನಾರನ್ನು ತೆಗೆಯಿರಿ ನಂತರ ಸಣ್ಣಗೆ ಕೋಸಂಬರಿಗೆ ಹಚ್ಚಿಕೊಳ್ಳುವ ಹಾಗೆ ಹಚ್ಚಿಕೊಳ್ಳಿ. ನೆನೆಸಿಟ್ಟ ಅಕ್ಕಿ ಹಾಗೂ ಬಾಳೆ ದಿಂಡನ್ನು ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಹಾಕಿ . ಈ ಹಿಟ್ಟನ್ನು ಮತ್ತೆ ನೆನೆಸುವ ಅಗತ್ಯ ಇಲ್ಲ ತಕ್ಷಣವೇ ದೋಸೆ ಮಾಡಬಹುದು .
–ಸುಜಾತಾ ರವೀಶ್ , ಮೈಸೂರು
ಹೊಸ ಹೊಸ ದೋಸೆ ಗಳನ್ನು… ಮಾಡುವ ಪರಿಯನ್ನು ತಿಳಿಸಿ ರುವ..ಸೋದರಿ ನಿನಗೆ…ಧನ್ಯವಾದಗಳು..
ಧನ್ಯವಾದಗಳು ಅಕ್ಕಾ…….ಮನೆಗೆ ಬನ್ನಿ. ಮಾಡಿಕೊಡುವೆ.
ಧಿಡೀರ್ ದೋಸೆಗಳ ವೈವಿಧ್ಯತೆ ಆಕರ್ಷಕವಾಗಿದೆ. ಪ್ರಯತ್ನಿಸಲು ಮನವು ಬಯಸುತ್ತಿದೆ.
ಮಾಡಿ ನೋಡಿ. ಹೇಗಿತ್ತು ಹೇಳಿ ಪದ್ಮಾ
ವೆರೈಟಿ ದೋಸೆಗಳು. ಚೆನ್ನಾಗಿವೆ
ಧನ್ಯವಾದಗಳು ನಯನಾ
ಧಿಡೀರ್ ದೋಸೆಗಳು ಚೆನ್ನಾಗಿವೆ
ಧನ್ಯವಾದಗಳು
ಓಹ್ ಪರವಾಗಿಲ್ಲ. ಹೊಸ ರೀತಿಯ ರುಚಿಯ ದೋಸೆಗಳು.
ಧನ್ಯವಾದಗಳು ಸುಧಾ ಅವರೇ
ಬೆಂಡೆಕಾಯಿ ದೋಸೆ ವಿಶೇಷವೆನಿಸಿತು…ಪ್ರಯತ್ನಿಸಬೇಕು. ಅದರ ಲೋಳೆಯಂತಹ ರಸವನ್ನು ಸರಿ ಮಾಡಲು ಅಡುಗೆಯಲ್ಲಿ ಸ್ವಲ್ಪ ಹುಳಿ ಹಾಕುವುದು ರೂಢಿ. ದೋಸೆಗೆ ರುಬ್ಬುವಾಗ ಹುಳಿ ಹಾಕುವುದು ಬೇಡವೇ? ಉಳಿದೆರಡು ದೋಸೆಗಳು ಗೊತ್ತು… ಬಹಳ ರುಚಿಯಾಗಿರುತ್ತವೆ.