ಕಲಾ ಜ್ಯೋತಿ
(ಕನ್ನಡ ಚಲನಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಕುಮಾರಿ ಎನ್.ಜ್ಯೋತಿ ಅವರ ಸಂಸ್ಮರಣೆಯ ಲೇಖನ)
ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗೀತೆಗಳ ಸಂಗೀತ ಸಂಜೆಯಲ್ಲಿ ಈ ದೇಶದ ವಿವಿಧ ಸ್ಥಳಗಳಲ್ಲಿ ಹಾಗೂ ವಿದೇಶಗಳಲ್ಲೂ ಜೊತೆಗೆ ಹಾಡಿದ ಒಬ್ಬ ಖ್ಯಾತ ಹಿನ್ನೆಲೆ ಗಾಯಕಿ ಮೈಸೂರಿನವರು. ಅವರು ಯಾರೆಂದು ಈಗಿನ ತಲೆಮಾರಿನ ಮೈಸೂರಿಗರಿಗೆ ಪರಿಚಯವಿರಲಿಕ್ಕಿಲ್ಲ. ಇವರು ಮೈಸೂರಿನ ರಂಗಭೂಮಿ ಹಾಗೂ ಚಲನಚಿತ್ರಗಳ ನಟರೂ, ಖ್ಯಾತ ಚಿತ್ರಸಾಹಿತಿ ಆಗಿದ್ದ ಸೋರಟ್ ಅಶ್ವಥ್ ಅವರ ಮಗಳು. ನಾಲ್ಕೈದು ವರ್ಷದ ಮಗುವಾಗಿದ್ದಾಗಲೇ ಈಕೆ ರೇಡಿಯೋದಲ್ಲಿ ಬರುವ ಹಾಡುಗಳನ್ನು ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾಗ ರತ್ನಾಕರ್ ಅವರು ಈಕೆಯ ಬೆನ್ನು ತಟ್ಟಿ ಹಾಡಲು ಪ್ರೋತ್ಸಾಹಿಸುತ್ತಿದ್ದರು.
ಬಡತನದಿಂದ ಸೋರಟ್ ಅಶ್ವಥ್ ಅವರು ಊರಿಂದ ಊರಿಗೆ, ಮೈಸೂರಿನಿಂದ ಮದ್ರಾಸಿಗೆ ನಾಟಕಗಳು ಹಾಗೂ ಚಲನಚಿತ್ರಗಳ ಅಭಿನಯಗಳ ಅವಕಾಶಕ್ಕಾಗಿ ಮನೆಯಿಂದ ಹೊರಗೆ ಸುತ್ತುತ್ತಿದ್ದಾಗ, ಚಿಕ್ಕಂದಿನಿಂದ ಜ್ಯೋತಿ ತಮ್ಮ ಹಾಡುಗಳಿಂದ ಬಂದ ಸಂಪಾದನೆಯಿಂದ ತಮ್ಮ ಕುಟುಂಬವನ್ನು ಪೋಷಿಸಿದ್ದರು.
ಬಹಳ ಹಿಂದೆ ಮೈಸೂರಿನಲ್ಲಿ ಮೇಕಪ್ ಸುಬ್ಬಣ್ಣನವರ ಮಗಳ ಮದುವೆಯ ಸಂದರ್ಭದಲ್ಲಿ ಗುರುರಾಜ್ ವಾದ್ಯಗೋಷ್ಠಿಯಲ್ಲಿ ಹಾಡುತ್ತಿದ್ದ ಕುಮಾರಿ ಜ್ಯೋತಿ, ಆಗ ಅಲ್ಲಿಗೆ ಬಂದಿದ್ದ ಚಿತ್ರನಟಿ ಚಂದ್ರಕಲಾ ಹಾಗೂ ಅವರ ತಂದೆ ನಿರ್ಮಾಪಕ ಎಮ್.ಎಸ್.ನಾಯಕ್ ಅವರ ಕಣ್ಣಿಗೆ ಬಿದ್ದರು. ಆಗ ‘ಒಂದೇ ಬಳ್ಳಿಯ ಹೂಗಳು‘ ಚಿತ್ರಕ್ಕಾಗಿ ‘ಅಣ್ಣಾ ನಿನ್ನ ಸೋದರಿಯನ್ನ’ ಎಂಬ ಗೀತೆ ಹಾಡುವ ಅವಕಾಶ ಪಡೆದರು. ಮುಂದೆ ಮಧು-ರತ್ನಾಕರ್ ಅವರ ನಿರ್ದೇಶನದ ‘ಭಾಗ್ಯ ದೇವತೆ’ ಚಿತ್ರಕ್ಕಾಗಿ ಒಂದು ಶ್ಲೋಕ ಹಾಡಿದ್ದರು. ಮುಂದೆ ನಾಯಕ್ ಅವರ ‘ಮನಃಶಾಂತಿ’ ಚಿತ್ರಕ್ಕೆ ಇವರು 4 ಗೀತೆಗಳನ್ನು ಹಾಡಿದರು. ಮುಂದೆ ಪಂಢರೀಬಾಯಿ ಅವರ ಶ್ರೀ ಕೃಷ್ಣ ಚೈತನ್ಯ ನಾಟಕ ಸಭಾ ಸಂಸ್ಥೆಯಿಂದ ಪ್ರದರ್ಶನಗೊಳ್ಳುತ್ತಿದ್ದ ‘ಶಾಂತಿ ನಿವಾಸ ‘ಹಾಗೂ ‘ಭಕ್ತಮೀರಾ’ ನಾಟಕಗಳಿಗಾಗಿ ಇವರು ರಾಜನ್- ನಾಗೇಂದ್ರ ಇವರ ನಿರ್ದೇಶನದಲ್ಲಿ ಹಾಡುಗಳನ್ನ ಹಾಡುವ ಸೌಭಾಗ್ಯ ಇವರಿಗೆ ಸಿಕ್ಕಿತ್ತು. ಮುಂದೆ ಆಕಾಶವಾಣಿಯಲ್ಲಿ, ದೂರದರ್ಶನದಲ್ಲಿ, ದೇವಾಲಯಗಳಲ್ಲಿ ಸಂಗೀತ, ಭಾವಗೀತೆ, ದೇಶಭಕ್ತಿಗೀತೆ, ಚಿತ್ರಗೀತೆ ಹಾಡಿದರು. ಕರ್ನಾಟಕದ ಎಲ್ಲಾ ಪ್ರಸಿದ್ಧ ದೇವಸ್ಥಾನಗಳಲ್ಲಿ ಪುಣ್ಯ ಕ್ಷೇತ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವರು ಸೋರಟ್ ಅಶ್ವಥ್ ಅವರ ಪುತ್ರಿ. ವಿದ್ವತ್‌ವರೆಗೆ ಸಂಗೀತ ಅಭ್ಯಾಸ ಮಾಡಿದರು. ಶ್ರೀಮತಿ ವಸಂತ, ಶ್ರೀ ಲಕ್ಷ್ಮೀಪತಿ ಸೋದರರು ಹಾಗೂ ಶ್ರೀ ಆರ್.ಕೆ ಪದ್ಮನಾಭ ಅವರಿಂದ ಶಾಸ್ತ್ರೀಯ ಸಂಗೀತ ಕಲಿತರು. ಆಕಾಶವಾಣಿಯ ಬಿ-ಹೈ ಶ್ರೇಣಿ ಪಡೆದಿದ್ದರು. ಆಕಾಶವಾಣಿಯಲ್ಲಿ ಭಾವಗೀತೆಗಳು, ಜಾನಪದ ಗೀತೆಗಳು ಹಾಗೂ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಎಚ್.ಆರ್. ಲೀಲಾವತಿ, ಪದ್ಮಚರಣ್, ಆನಂದ್ ಹಾಗೂ ವೆಂಕಟೇಶ್ ಇವರ ನಿರ್ದೇಶನದಲ್ಲಿ ಗಾಯನ ಮಾಡಿದರು. ದೂರದರ್ಶನದಲ್ಲೂ ಹಾಡಿದ್ದಾರೆ. ಭಕ್ತಿಸುಧಾ, ಗಾನಸುಧಾ, ಸರ್ವಜ್ಞನ ಪದಗಳು, ಅಯ್ಯಪ್ಪನ ಗೀತೆಗಳು ಮುಂತಾದ ಕ್ಯಾಸೆಟ್‌ಗಳಲ್ಲೂ ಹಾಡಿದ್ದಾರೆ. 1978 ರಲ್ಲಿ ಕಲಾಜ್ಯೋತಿ ಸಂಗೀತ ತಂಡ ಆರಂಭಿಸಿ ಕಲಾಜ್ಯೋತಿ ಸಂಗೀತ ಶಾಲೆಯನ್ನು ಆರಂಭಿಸಿದ್ದರು. ಇವರಿಗೆ ಕನ್ನಡದ ಕೋಗಿಲೆ, ಜೂನಿಯರ್ ಲತಾ ಇತ್ಯಾದಿ ಬಿರುದುಗಳು, ಆರ್ಯಭಟ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ದೊರಕಿವೆ.
12 ನೇ ವಯಸ್ಸಿಗೆ ಹಾಡುವುದನ್ನು ಆರಂಭಿಸಿ 46 ವರ್ಷಗಳವರೆಗೆ ಸಾವಿರಾರು ಹಾಡುಗಳನ್ನು ಎಲ್ಲಾ ಭಾಷೆಗಳಲ್ಲಿ ಹಾಡಿ, ಒಳ್ಳೆಯ ಹೆಸರನ್ನು ಪಡೆದರು. ಆದರೆ ಎಷ್ಟೇ ಕಷ್ಟಗಳನ್ನು ಅನುಭವಿಸಿದರೂ ಇವರ ಯಾವ ಅಭಿಲಾಷೆಯೂ ಪೂರ್ಣಗೊಳ್ಳದೇ, ಅಭಿವೃದ್ಧಿಯ ಮೆಟ್ಟಿಲು ಹತ್ತುವಾಗ ಆತ್ಮೀಯರಿಂದಲೇ ಮೋಸ ಹೋಗಿ ಅಪಮೃತ್ಯುವಿಗೆ ಬಲಿಯಾದ ಜ್ಯೋತಿ ಎಂಬ ಕರ್ನಾಟಕದ ಹಾಡುವ ಕೋಗಿಲೆಯ ಆತ್ಮ ದೂರ ಬಹುದೂರಕ್ಕೆ ಹಾರಿಹೋಯಿತು.
ಹುಟ್ಟಿದ್ದು 10-4-1953. ಅಗಲಿದ್ದು 27-5-2011 ರಂದು.
ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗೀತೆಗಳ ಸಂಗೀತ ಸಂಜೆಯಲ್ಲಿ ಈ ದೇಶದ ವಿವಿಧ ಸ್ಥಳಗಳಲ್ಲಿ ಹಾಗೂ ವಿದೇಶಗಳಲ್ಲೂ ಜೊತೆಗೆ ಹಾಡಿದ ಒಬ್ಬ ಖ್ಯಾತ ಹಿನ್ನೆಲೆ ಗಾಯಕಿ ಮೈಸೂರಿನವರು. ಅವರು ಯಾರೆಂದು ಈಗಿನ ತಲೆಮಾರಿನ ಮೈಸೂರಿಗರಿಗೆ ಪರಿಚಯವಿರಲಿಕ್ಕಿಲ್ಲ. ಇವರು ಮೈಸೂರಿನ ರಂಗಭೂಮಿ ಹಾಗೂ ಚಲನಚಿತ್ರಗಳ ನಟರೂ, ಖ್ಯಾತ ಚಿತ್ರಸಾಹಿತಿ ಆಗಿದ್ದ ಸೋರಟ್ ಅಶ್ವಥ್ ಅವರ ಮಗಳು. ನಾಲ್ಕೈದು ವರ್ಷದ ಮಗುವಾಗಿದ್ದಾಗಲೇ ಈಕೆ ರೇಡಿಯೋದಲ್ಲಿ ಬರುವ ಹಾಡುಗಳನ್ನು ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾಗ ರತ್ನಾಕರ್ ಅವರು ಈಕೆಯ ಬೆನ್ನು ತಟ್ಟಿ ಹಾಡಲು ಪ್ರೋತ್ಸಾಹಿಸುತ್ತಿದ್ದರು.
ಡಾ. ಪಿ.ಬಿ ಶ್ರೀನಿವಾಸ್ ಅವರು ೧೪-೩-೧೯೯೪ರಲ್ಲಿ ಜ್ಯೋತಿ ಅವರಿಗೆ ಶುಭ ಹಾರೈಸಿ ಬರೆದು ಕಳಿಸಿರುವ ಸಂಖ್ಯಾಕ್ಷರ ಶುಭ ಸಂದೇಶ ಗೀತೆ- ಕಾಮನಬಿಲ್ಲಿನ ಸೌಂದರ್ಯ ಈಗ ನಿಮ್ಮ ಮುಂದಿದೆ.
-ಎನ್.ವ್ಹಿ.ರಮೇಶ್, ಮೈಸೂರು
ಪರಿಚಯಾತ್ಮಕ ಲೇಖನ ಚೆನ್ನಾಗಿದೆ…ಧನ್ಯವಾದಗಳು ಸರ್
ಗಾಯಕಿ ಜ್ಯೋತಿ ಅವರ ಕುರಿತಾದ ವಿವರಣಾತ್ಮಕ ಲೇಖನ ಮಾಹಿತಿಪೂರ್ಣವಾಗಿದೆ.
ಬಹಳ ಚೆನ್ನಾಗಿದೆ ಲೇಖನ, ಅಪರೂಪದ ಲೇಖನ
ಜ್ಯೋತಿಯವರ ಪರಿಚಯ ಲೇಖನ ಮನಮುಟ್ಟುವಂತಿದೆ.
ಅತ್ಯಂತ ಪ್ರತಿಭಾವಂತೆ ಗಾಯಕಿ ಜ್ಯೋತಿಯವರ ಕೊನೆಯ ದಿನಗಳು ಅಸಹನೀಯವಾಗಿತ್ತೆನ್ನುವುದು, ನಮ್ಮ ನಡುವಿರುವ ಸಮಾಜದ ಇನ್ನೊಂದು ಕ್ರೂರ ಮುಖವನ್ನು ಅನಾವರಣಗೊಳಿಸಿದೆ.