ಯಾವ ಭಾವದ ನೆರಳು
ಮರಗಳ ಎಲೆಗಳ ಮರೆ
ಕೋಗಿಲೆ ಕಾಣದು ಎಲ್ಲೂ
ಯಾರೇ ಕೇಳಲಿ ಬಿಡಲಿ
ಎದೆ ಆಳದಿಂದಲದರ ಕುಕಿಲು
ಬಿಸಿಲಿನ ತಾಪಕೆ ಅದು ದೂರಿದೆಯೇ
ಸಹಿಸಲಾರದೇ ಬೇಗೆ ?
ನೆರಳಿನ ತಂಪ ಸವಿದು ಹೊಗಳಿದೆಯೇ
ಪ್ರಕೃತಿ ಇತ್ತ ಸೊಗಕೆ !
ಹಕ್ಕಿಯೊರಲ ಒಡಲಲಿ ಇದೆಯೆ
ಕರುಳ ಕತ್ತರಿಸಿ ಹಾರಿದ
ಅಮ್ಮನ ಕಾಣುವ ಬಯಕೆ
ಕೂಗುವ ಕಂಠದಿ ಕೇಳಿದೆಯೆ
ತುತ್ತನಿತ್ತೂ ಹೊರಹಾಕಿದ
ಸಾಕಿದ ತಾಯಿಯ ನೆನಕೆ
ಯಾವ ಭಾವ ಕೋಗಿಲೆ ಕೂಗಲಿ
ತುಂಬಿ ಹಾಡಾಗಿದೆಯೋ
ಕೇಳುವವನ ಭಾವದ ನೆರಳು
ಹಕ್ಕಿಯ ಕಂಠದಿ ಧ್ವನಿಸುತ್ತಿದೆಯೋ
– ಅನಂತ ರಮೇಶ್
ಕವಿತೆ ಚೆನ್ನಾಗಿದೆ… ಸಾರ್
ಧನ್ಯವಾದಗಳು
ತುಂಬು ಕಂಠದಿಂದ ಹಾಡುವ ಕೋಗಿಲೆಯ ಭಾವವು ಕೇಳುಗನ ಭಾವದೊಂದಿಗೆ ಮೇಳೈಸಲು, ಅದರ ಮಾಧುರ್ಯವೇ ಅದ್ಭುತ.. ಚಂದದ ಭಾವಗೀತೆ