ಕನ್ನುಡಿಯ ಸಾರ ಸತ್ವ ಸಾರಸ್ವತ
ಮನಸು ಹೃದಯ ಒಂದೆ ಆಗಿ –
ಕನಸಿನಲ್ಲು ತುಡಿಯುತಿರುವ
ನೆನಹನೆನಗೆ ನೀಡು ದೇವಿ ಕೊರೆಯು ಬರದೊಲು
ಇನಿದು ಜೇನು ನುಡಿಯ ಗುಡಿಯ
ಜನುಮ ಭೂಮಿ ಹಿರಿಮೆಯನ್ನು
ಅನವರತವು ಶಿಖರದಲ್ಲಿ ಮೆರೆಪ ಸುಕೃತವ
ಕಡೆದು ಇಹುದದಾವ ಭಾಷೆ
ಮೃಡನ ಮುಡಿಗೆ ಪೂರ್ಣ ಚಂದ್ರ
ಒಡಮೂಡಿದ ಜಾತಿಮುತ್ತು ಮೀರಿ ಹೊಳೆಯುವ
ಕಡು ಚೆಲುವಿನ ಲಿಪಿಯ ಸಿರಿಯು
ಪೊಡವಿಯೆಲ್ಲ ನುಡಿಯ ನಡುವೆ
ಒಡೆದು ತೋರಿ ರಾಜಿಸುವುದು ಗುಡಿಯ ಗುಡಿಯೊಲು
ಮೊಲೆಯವಾಲಿನೊಡನೆ ಕಿವಿಗೆ
ಸುಲಲಿತದೀ ಜೇನ ಧಾರೆ
ಒಲವಿನಿಂದ ಎರೆಯೆ ತಾಯಿ ಉಬ್ಬಿ ನಲಿವೊಲು
ಹಲವು ಕಲಿಯಲಿರದು ಕಷ್ಟ
ನೆಲದ ಭಾಷೆ ಹಾಲುನುಡಿಯ
ನಲಿದು ಜನನಿ ಜನಕರಲದದಾರು ಕಲಿಪರು
ಭುವಿಯ ಸುತ್ತಿ ಬಂದರೇನು
ಭುವನಕೊಡೆಯನಾದರೇನು
ದವನ ಮರುಗ ಮಲ್ಲಿಗೆಗಳ ಕಂಪಿನಾನುಡಿ
ಅವನಿಯೆಲ್ಲ ಗಾನವಕ್ಕಿ
ಸ್ವನವ ಹೀರಿ ರೂಹುಗೊಂಡ
ಸವಿಯ ಗೇಯದಂಥ ಭಾಷೆಯೆಂತು ಮರೆವೆಯೊ
ತನ್ನತನದ ಗುರುತಿದೆನುತ
ಮುನ್ನ ಮೆರೆಸಿ ಗರುವದಿಂದ
ಸೊನ್ನೆಗಿರದ ರೀತಿ ಅಂತ್ಯವಿರದನಾದಿಯ
ಚೆನ್ನ ನುಡಿಗೆ ಮೊದಲ ಮಣೆಯು
ಹೊನ್ನ ಎದೆಯ ಪೀಠಕಿಡಲು
ಇನ್ನು ಬೇರೆಯೆಲ್ಲ ಅನ್ನಕಾಗಿಯಲ್ಲವೆ
ಹೊರಗಿನೆಲ್ಲ ವಿಸ್ಮಯಗಳ
ಬೆರಗಿನಿಂದ ಸವಿಯುತಿರಲು
ಮರೆಸುವಂತೆ ನುಡಿಯ ಪುಲಕ ವೀಣೆ ಮಿಡಿದೊಲು
ಮರಿದುಂಬಿಯ ಝೇಂಕಾರವೊ
ಹರಿವ ನದಿಯ ಓಂಕಾರವೊ
ಸರಸ ನುಡಿಯೊ ಎನುವಲೊಂದು ಕಿವಿಯ ತಾಕಲು
ಅಲ್ಲೆ ನವಿಲ ಲಾಸ್ಯವಿರುತ
ಮೊಲ್ಲೆಯರಳ ಸೌಮ್ಯ ಚೆಲುವು
ಹುಲ್ಲೆಶಾಬ ಕುಣಿತವಾಗಿ ಎದೆಯ ರಿಂಗಣ
ಬಲ್ಲರಲ್ಲದಿರಲದೇನು
ಸೊಲ್ಲು ಬಂಧವನ್ನು ಬೆಳೆಸಿ
ಎಲ್ಲೆ ಇದ್ದು ಮರಳಿದರೂ ಬೆಸೆವ ನೇಹವು
ಬಾಗಿ ಹೀರಿಕೊಳುವ ದಾಹ
ತೂಗಿ ಮೌಲ್ಯ ಕಟ್ಟಬಹುದೆ
ಸಾಗಿ ದೂರ ಪಯಣದಲ್ಲಿ ಇಂಥ ಬೆರಗಿಗೆ
ಮುಗಿಲ ಮಲ್ಲೆ ಪಾರಿಜಾತ
ಸೊಗದ ಇಕ್ಷು ಮಧುವ ಧಾರೆ
ಬಗೆಯ ತುಂಬಿ ಸಾರ್ಥವೆನಿಪ ಸೊಗದ ಚಣವದು
ಅನ್ಯ ನುಡಿಯ ಮೆರೆಸಿ ಶಿರದಿ
ತನ್ನ ಸಿರಿಯ ಮರೆಯಲೇಕೆ
ಸ್ತನ್ಯವನ್ನು ಈಂಟುವಂತೆ ಸಹಜವಲ್ಲವೆ
ತನ್ನದೆಂಬ ಅಭಿಮಾನವ
ಮುನ್ನ ತಾನೆ ಬಿತ್ತದಿರಲು
ಸೊನ್ನೆಯಾಗಿ ಹೋಹದಿಹುದೆ ತನ್ನ ಅಸ್ಮಿತೆ
ಯಾವ ಕೊರೆಯು ಇಹುದು ಹೇಳಿ
ಭಾವ ಜಗವ ತುಂಬಿ ತಣಿಪ
ದೇವ ಬಲೆಯೊ ದಿವಿಯ ಕಲೆಯೊ ದಿವ್ಯ ವಾಙ್ಮಯ
ಜೀವವೇಕೆ ಹೇವ ಬೇಕು
ಗಾವಿಲರೂ ನಗದೆ ಇಹರೆ
ನೋವನೀಯ ಬಹುದೆ ಹೆತ್ತ ಮಾತೆಗೀಪರಿ
ಪೂರ್ವಸೂರಿಗಡಣ ಹಿರಿದು
ಸಾರ್ವಭೌಮ ಕಾವ್ಯ ಸಿರಿಯು
ಗೀರ್ವಾಣದಿ ಪುಷ್ಟಿ ಪಡೆದ ಸೊಬಗಿನಾ ನುಡಿ
ಪೂರ್ವಜವಿದೆ ಸಾಕ್ಷಿ ವಿಫುಲ
ಗೀರ್ವಾಣರು ಮೆಚ್ಚರೇನು
ಗೀರ್ವಾಣಿಯು ನಲಿದು ಒಲಿವನನ್ಯ ವಾಙ್ಮಯ
ಕೊಟ್ಟುಕೊಳದೆ ಬೆಳೆದುದುಂಟೆ
ಇಟ್ಟುಕೊಳದೆ ಉಳಿದುದುಂಟೆ
ಗಟ್ಟಿ ಪ್ರೇಮ ಅಭಿಮಾನದಿ ಹಿಡಿಯಬೇಕಿದೆ
ಹೊಟ್ಟೆಯುರಿದು ಪೂತ್ಕರಿಸಲು
ಕುಟ್ಟಿ ಕೆಡವಿ ಸತ್ವ ತೋರೆ
ಮೆಟ್ಟಿ ಏರದಿಹುದೆ ಶೃಂಗ ಬೆರಗು ತೋರುತ
ಕನ್ನುಡಿಗಿಂ ಸಾಟಿಯುಂಟೆ
ಕನ್ನಡಿಯನು ಸ್ವಚ್ಛವಿಡಲು
ಚೆನ್ನವೆನಿಪ ಛಂದದೊಡವೆ ಸೊಬಗು ಹೊಳೆವುತ
ತನ್ನ ಎಲ್ಲ ಧಾರೆಗಳನು
ಮುನ್ನ ಸೊಗಯಿಪಂತೆ ತೆರೆದು
ಚೆನ್ನವಾಗಿ ಮೀಯಿಸುತ್ತ ಮೀರಿ ಬೆಳಗಲು
ಕುಡಿಸಿ ಬೆಳೆಸೆ ನುಡಿಯ ಮಧುವ
ನಡೆಯಲ್ಲಿಯು ಸೌಜನ್ಯವು
ತೊಡಿಗೆ ಎನಿಪ ಸೌಹಾರ್ದವುದಾರ ಹೃದಯವು
ಒಡಮೂಡುತ ತೋರದಿಹುದೆ
ಗಡಿಯ ಮೀರಿ ಬೆಳೆವ ಶಕುತಿ
ನುಡಿಯು ರಕುತದಲ್ಲಿ ಇಳಿಪ ವಿರಳವೀ ಗುಣ
ಧ್ಯಾನ ಜ್ಞಾನ ಮೌನ ಗಾನ
ದಾನ ಮೇಧೆ ಕಲೆಯಲೆಮ್ಮ
ಮಾನಿಸರದೆಷ್ಟೋ ಚೂಲದಲ್ಲಿ ಕೇತನ
ಊನವಿರದ ಪದ ಸಂಪದ
ತಾನದಿಂಪು ವಿನಿಕೆ ಸೊಬಗು
ಸೂನಕೇರಿ ಬೆಳಕನಿತ್ತ ಪೂರ್ಣಸಿದ್ಧರು
ಬರೆದೊಲಂತೆ ಉಲಿವ ಹಿರಿಮೆ
ತಿರುಗಿಸಿದರು ಅದೇ ಗರಿಮೆ
ವಿರಳವಲ್ತೆ ನುಡಿಯ ಬೆಳವಿದೇನಿದಚ್ಚರಿ
ಸ್ವರವರ್ಣಕೆ ಬದಲಿ ಬೇಕೆ
ಪರಿಪೂರ್ಣತೆಗಿಲ್ಲ ಕೊರತೆ
ಸರಳವೆನಿಪ ನಾಮಲಿಂಗ ನೀರೊಲಿಳಿವುದು
ನಿಂತ ನೀರಿದಲ್ಲನಾದಿ
ಪಿಂತೆಯೆ ಮೈದುಂಬಿಕೊಂಡು
ಮುಂತೆ ಕೈಯ ಚಾಚಿ ಮುದದಿ ಸರುವ ಜ್ಞಾನವ
ಗೊಂತದೆನಲು ಪಾತ್ರವನ್ನು
ಅಂತವಿಲದೆ ವಿಸ್ತರಿಸುತ
ಗಂತವ್ಯವು ನುಡಿಯನಪ್ಪಿ ಹಿಗ್ಗಿ ನಡೆವುದು
ಇನ್ನಿದನ್ನು ಅರಿತ ಮೇಲೆ
ತನ್ನದಿದುವೆ ದಾಯವೆಂದು
ಜೊನ್ನ ನಗೆಯ ಶಿಶುವು ತನ್ನ ತಾಯ ಬಿಡದೊಲು
ಮುನ್ನ ನಲಿದು ತಕ್ಕೈಸುತ
ಘನ್ನ ವಿಷ್ಟರಕ್ಕಿಟ್ಟು
ಅನ್ನಿಗರನು ಗೌರವಿಸುವ ರನ್ನ ನುಡಿಯಿದು
–ರತ್ನಾ ಮೂರ್ತಿ
ಚೆನ್ನಾಗಿದೆ
ಕನ್ನಡ ನುಡಿಯ…ಹಿರಿಮೆ ಗರಿಮೆಯನ್ನು..ತೋರು ಅಭಿಮಾನ ಉಕ್ಕಿಸಯವ ಕವಿತೆ ಚೆನ್ನಾಗಿ ಮೂಡಿಬಂದಿದೆ ಮೇಡಂ..
ಹಳಗನ್ನಡದ ಭಾಷೆಯ ಬಳಕೆ ಚೆನ್ನಾಗಿದೆ
ತುಂಬಾ ಸುಂದರವಾಗಿದೆ
ಚಂದದ ಕವನ
ಚಂದದ ಕವನ
ನಮ್ಮ ಸವಿಗನ್ನಡದ ಹಿರಿಮೆಯನ್ನು ಸುಂದರ ಆದಿಪ್ರಾಸ ಬದ್ಧ ಕವನದಲ್ಲಿ ಪಡಿಮೂಡಿಸಿದ ರತ್ನಾ ಮೇಡಂ ಅವರಿಗೆ ಧನ್ಯವಾದಗಳು
ಕನ್ನಡನುಡಿ ಹಿರಿಮೆಯೊರೆದು
ನನ್ನಿಯಿಂದ ಸೊಗವ ಮೆರೆದು
ಎನ್ನ ಮನಕೆ ಪದದ ಮುದದ ತಂಪನೆರೆದಿರಿ
ಇನ್ನು ಇದರಲೊಂದು ತತ್ತ್ವ
ಚೆನ್ನ ಬಾಳಿನರ್ಥ ಸತ್ತ್ವ
ತನ್ನ ಇರವ ತೋರದಂತೆ ಅಡಕವಾಗಿದೆ
– ಎಚ್. ಆನಂದರಾಮ ಶಾಸ್ತ್ರೀ
ಕನ್ನಡ ನಾಡು-ನುಡಿಯ ಪರಿಚಾರಕ