ನೆನಪಿನ ಸುರುಳಿ ಬಿಚ್ಚಿಕೊಂಡಾಗ
ನೆನಪಿನ ಪುಟಗಳನ್ನು ತಿರುವಿದಾಗ ಥಟ್ಟನೆ ತೆರೆದುಕೊಳ್ಳುವ ಪುಟಗಳಲ್ಲಿ ಈ ಘಟನೆಯೂ ಒಂದು. 1994 ರಲ್ಲಿ ನಡೆದ ಘಟನೆ. ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿ ವರುಷವೊಂದು ಕಳೆದಿತ್ತು. ದೇವರ ದಯೆಯಿಂದ ಉದ್ಯೋಗವೂ ಖಾಯಂ ಆಗಿತ್ತು. ಅದೊಂದು ದಿನ ಮಧ್ಯಾಹ್ಞದ ಹೊತ್ತಿನಲ್ಲಿ ನಮ್ಮ ವಿಭಾಗ ಮುಖ್ಯಸ್ಥರು ನನ್ನ ಬಳಿ ಬಂದು “ಮೇಡಂ, ನಾಳೆಯಿಂದ ನಾಲ್ಕು ದಿನಗಳ ಕಾಲ ನಮ್ಮ ಪಠ್ಯವಿಷಯಕ್ಕೆ ಸಂಬಂಧಿಸಿದ ಕಾರ್ಯಾಗಾರವೊಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ವಿದ್ಯಾವರ್ಧಕ ಸಂಘದ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ. ನೀವು ಹೋಗಬೇಕು. ನಿಮ್ಮ ವೃತ್ತಿಯಲ್ಲಿ ಇನ್ನು ಮುಂದೆ ಇಂತಹ ಕಾರ್ಯಾಗಾರಗಳಿಗೆ ಆಗಾಗ ಹೋಗಬೇಕಾಗುವುದು. ನಿಮ್ಮ ಕೆರೀಯರ್‌ಗೆ ಸಹಾಯ ಆಗ್ತದೆ” ಎಂದಾಗ ನಿರಾಕರಿಸುವ ಮನಸ್ಸಾಗಲಿಲ್ಲ. “ಆಯಿತು ಸರ್” ಅಂದವಳು, ಆ ದಿನ ಕಾಲೇಜಿನಿಂದ ತುಸು ಬೇಗ ಹೊರಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಹೋಗಿ ಆ ದಿನದ ರಾತ್ರೆ ಪ್ರಯಾಣಕ್ಕೆ ಬಸ್ ಟಿಕೆಟ್ ಕಾಯ್ದಿರಿಸಿ, ಅದೇ ದಿನ ಕೆಂಪು ಬಣ್ಣದ ಸಾಮಾನ್ಯ ವೇಗದೂತ ಬಸ್ಸಿನಲ್ಲಿ ಕುಳಿತುಕೊಂಡು ರಾತ್ರೆ ಪ್ರಯಾಣದ ಮೂಲಕ ಬೆಂಗಳೂರಿಗೆ ಹೊರಟಿದ್ದೆ. ಈಗಿನಂತೆ ಸ್ಲೀಪರ್ ಬಸ್ಸುಗಳು ಅಥವಾ ಸುಖಾಸೀನ ಬಸ್ಸುಗಳು ಇರಲಿಲ್ಲ. ಮೊಬೈಲ್ ಫೋನುಗಳೂ ಇರಲಿಲ್ಲ. ನನ್ನ ತಮ್ಮ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸಂಸ್ಕೃತಾಧ್ಯಯನ ನಡೆಸುತ್ತಿದ್ದ ದಿನಗಳವು. ಬೆಂಗಳೂರಿನಲ್ಲಿ ಸಂಬಂಧಿಕರ ಮನೆಗಳು ಕೂಡಾ ಇರುವ ಕಾರಣ, ಬೆಂಗಳೂರು ತಲುಪಿದ ಬಳಿಕ ತಮ್ಮನಿಗೆ ಟೆಲಿಫೋನ್ ಬೂತಿಗೆ ಹೋಗಿ ಕರೆ ಮಾಡಿದರಾಯಿತು, ತಮ್ಮ ಬಂದು ನನ್ನನ್ನು ಯಾವುದಾದರೂ ಸಂಬಂಧಿಕರ ಮನೆಗೆ ಕರೆದೊಯ್ಯಬಹುದು ಅನ್ನುವ ವಿಶ್ವಾಸ ಮನದಲ್ಲಿ ದಟ್ಟವಾಗಿತ್ತು.
ಬಸ್ಸು ಬೆಂಗಳೂರು ತಲುಪುವಾಗ ಬೆಳಗಿನ ಐದುವರೆ ಘಂಟೆ. ಬಸ್ಸಿನಿಂದ ಇಳಿಯುವಾಗ ಸ್ನಾತಕೋತ್ತರ ವಿದ್ಯಾಭ್ಯಾಸದ ಸಂದರ್ಭದಲ್ಲಿ ನನ್ನ ಜೂನಿಯರ್ ಆಗಿದ್ದವಳು ಎದುರು ಸಿಕ್ಕಿದಳು. ಅವಳು ಕೂಡಾ ರಾತ್ರಿ ಪ್ರಯಾಣ ಮಾಡಿ ಬೆಂಗಳೂರು ತಲುಪಿದ್ದಳು. “ನೀನೊಬ್ಬಳೇ ಬಂದಿರುವುದಾ?” ಕೇಳಿದಳು. “ಹ್ಞೂಂ” ಎಂದೆ. “ಈಗ ಎಲ್ಲಿಗೆ ಹೋಗ್ತೀಯಾ? ಯಾರಾದರೂ ಬರುತ್ತಾರಾ?” ಕೇಳಿದಳು. “ನನ್ನ ತಮ್ಮ ಇಲ್ಲೇ ಇರುವುದು. ಸ್ವಲ್ಪ ಬೆಳಕು ಹರಿಯಲಿ. ಅವನಿಗೆ ಫೋನ್ ಮಾಡಬೇಕು” ಅಂದೆ. ನಾವಿಬ್ಬರೂ ಮಾತನಾಡುತ್ತಿರಬೇಕಾದರೆ, ಅವಳನ್ನು ಕರೆದುಕೊಂಡು ಹೋಗಲು ಅವಳ ಚಿಕ್ಕಪ್ಪ ಬಂದರು. ಅವಳು ಚಿಕ್ಕಪ್ಪನ ಬಳಿಯೂ “ಇವಳು ನನ್ನ ಸೀನಿಯರ್. ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದಾಳೆ. ಅವಳ ತಮ್ಮನಿಗೆ ಫೋನ್ ಮಾಡಬೇಕಷ್ಟೇ” ಅಂದಳು. ಅವಳ ಚಿಕ್ಕಪ್ಪ “ನೀವೀಗ ಒಬ್ಬರೇ ಇಲ್ಲಿ ನಿಲ್ಲುವುದು ಬೇಡ. ನಮ್ಮ ಜೊತೆ ಬನ್ನಿ. ನಮ್ಮ ಮನೆಗೆ ಹೋದ ಬಳಿಕ ನಿಮ್ಮ ತಮ್ಮನಿಗೆ ಫೋನ್ ಮಾಡಿ” ಎಂದು ಒತ್ತಾಯಿಸಿದರು. ಅವರ ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡ್ ಮಾಡಿ ಬಿಟಿಎಂ ಲೇಔಟ್ ನಲ್ಲಿದ್ದ ಅವರ ಮನೆ ತಲುಪಿದೆವು.
ಮನೆ ತಲುಪಿದಾಗ ಅವರ ಹೆಂಡತಿಯೂ ತುಸುವೂ ಬೇಸರಿಸಿಕೊಳ್ಳದೆ ಪರಿಚಯವೇ ಇಲ್ಲದ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡರು. ಕಾರ್ಯಾಗಾರ ನಡೆಯುವ ಸ್ಥಳಕ್ಕೆ ನಿಮ್ಮನ್ನು ಕರೆದೊಯ್ಯುತ್ತೇನೆ. ಸಂಜೆ ವಾಪಸ್ ನಮ್ಮ ಮನೆಗೇ ಬನ್ನಿ. ನಂತರ ನಿಮ್ಮ ತಮ್ಮನಿಗೆ ಕರೆ ಮಾಡುವ” ಅನ್ನುತ್ತಾ ಬಿಟಿಎಂ ಲೇ ಔಟ್ ತಲುಪಲು ಅಗತ್ಯವಿರುವ ಬಸ್ ನಂಬರ್ ಮಾಹಿತಿ ಕೂಡಾ ನೀಡಿದರು. ಆ ದಿನದ ಕಾರ್ಯಾಗಾರ ಮುಗಿದ ಬಳಿಕ ಅವರ ಮನೆಗೆ ಬಂದು, ನನ್ನ ತಮ್ಮನಿದ್ದ ಪೂರ್ಣಪ್ರಜ್ಞ ವಿದ್ಯಾಪೀಠದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ನನ್ನ ತಮ್ಮ ಎಲ್ಲಿಗೋ ಹೋಗಿರುವ ವಿಷಯ ತಿಳಿಯಿತು. ನಾನು ಪೆಚ್ಚಾದೆ. ಆದರೆ ದಂಪತಿಗಳಿಬ್ಬರೂ “ನೀವೇನೂ ಸಂಕೋಚ ಪಡುವುದು ಬೇಡ. ನಮ್ಮ ಮನೆಯಿಂದಲೇ ಹೋಗಿ ಬನ್ನಿ. ನಾವೇನೂ ಅಡುಗೆ ಮಾಡುತ್ತೇವೆಯೋ ಅದನ್ನು ಹಂಚಿ ತಿನ್ನುವುದು ಅಷ್ಟೇ” ಅಂದರು. ಈಗಿನಂತೆ ಹೋಟೆಲ್ ವಸತಿಗೃಹಗಳಲ್ಲಿ ನಿಲ್ಲುವ ಪರಿಪಾಠ ರೂಢಿಯಾಗದ ದಿನಗಳವು. ನಾನಿದ್ದ ಆ ನಾಲ್ಕು ದಿನಗಳು ಕೂಡಾ ಪರಿಚಯವೇ ಇಲ್ಲದ ನನ್ನನ್ನು ಆಪ್ತಬಂಧುವಿನಂತೆ ಆದರಿಸಿದ ಶ್ರೀ ಎಸ್ ಎಂ ಶರ್ಮಾ ಹಾಗೂ ಅವರ ಕುಟುಂಬಕ್ಕೆ ಹಾರ್ದಿಕ ಕೃತಜ್ಞತೆ ಸಲ್ಲಿಸಿ ಅಲ್ಲಿಂದ ವಾಪಸ್ ಹೊರಟಿದ್ದೆ. ನಾನು ಹೊರಡುವ ದಿನ ಪಾಯಸ ಕೂಡಾ ಮಾಡಿದ್ದರು. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಮಗುವಿಗೊಂದು ಅಂಗಿ ಉಡುಗೊರೆ ನೀಡುವಾಗಲೂ “ಇದೆಲ್ಲಾ ಯಾಕೆ?” ಅಂದಿದ್ದರು.
ಯಾವುದೇ ಪೂರ್ವ ತಯಾರಿ ಇಲ್ಲದೆ, ತಮ್ಮನಿದ್ದಾನೆ ತಾನೇ! ಅಂತ ಹೊರಟ ನನ್ನ ಭಂಡ ಧೈರ್ಯ ನನಗೇ ಅಚ್ಚರಿ ತರಿಸುತ್ತದೆ. ಈಗ ಆ ವಿಷಯದ ಬಗ್ಗೆ ಯೋಚಿಸುವಾಗ ಕೈಯಲ್ಲಿ ಜಾಸ್ತಿ ಹಣ ಇಲ್ಲದೆ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಇಲ್ಲದ ಆ ದಿನಗಳಲ್ಲಿ ನಾನು ಧಿಡೀರ್ ಆಗಿ ಹೊರಡಲು ಹೇಗೆ ಒಪ್ಪಿಕೊಂಡೆ ಅನ್ನುವ ಪ್ರಶ್ನೆ ಮೂಡುತ್ತದೆ. ಒಳ್ಳೆಯ ಉದ್ದೇಶಕ್ಕೆ ಭಗವಂತನ ಸಹಾಯ ಸದಾ ಇದ್ದೇ ಇರುತ್ತದೆ ಅನ್ನುವುದು ನನಗೆ ಅಚಾನಕ್ ಆಗಿ ಸಿಕ್ಕಿದ ಜೂನಿಯರ್ ಹಾಗೂ ಅವಳ ಚಿಕ್ಕಪ್ಪ ಹಾಗೂ ಅವರ ಕುಟುಂಬದ ಮೂಲಕ ಸಾಬೀತಾಯಿತು. ಈ ಲೇಖನದ ಮೂಲಕ ಮತ್ತೊಮ್ಮೆ ನಿಮಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಅನ್ನುವ ಸದಾಶಯ.
–ಡಾ. ಕೃಷ್ಣಪ್ರಭ ಎಂ, ಮಂಗಳೂರು
ಒಳ್ಳೆಯ ಅನುಭವ.ಹಾಗೆ ಹೋಗಿ ಅಭ್ಯಾಸ ಇದ್ದರೆ ಸರಿ .ನಿಮ್ಮ ಜೂನಿಯರ್ ದೇವರಂರೆ ಬಂದಳು.
ಖಂಡಿತಾ ಅಕ್ಕ. ಆ ಬಳಿಕ ಅವಳ ಭೇಟಿ ಆಗಿಲ್ಲ
ಒಮ್ಮೊಮ್ಮೆ ಯಾರೋ ಆತ್ಮೀಯರಾಗಿ ಬಿಡುತ್ತಾರೆ ನಮಗೇ ಗೊತ್ತಿಲ್ಲದೆಯೇ .
ಸೊಗಸಾದ ನೆನಪಿನ ಬರಹ
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
ವಿಸ್ಮಯಕಾರಿ ಘಟನಾವಳಿಗಳು! ಎಲ್ಲವೂ ಸುಸೂತ್ರವಾಗಿ ನಡೆಯಿತಲ್ಲ. ಒಳ್ಳೆದಾಯಿತು..
ಹೌದು. ನಿಜಕ್ಕೂ ವಿಸ್ಮಯಕಾರಿ ಘಟನೆಯೇ. ಪ್ರತಿಕ್ರಿಯೆಗೆ ಹಾಗೂ ಲೇಖನ ಪ್ರಕಟಿಸಿದ ನಿಮಗೆ ಧನ್ಯವಾದಗಳು
ನಿಮ್ಮ ನೆನಪಿನ ಸುರಳಿಯೊಂದಿಗೆ ನಮ್ಮನ್ನು ಕರೆದೊಯ್ಚ ಚೆಂದದ ಬರಹಕ್ಕೆ ವಂದನೆಗಳು
ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಇದಕ್ಕೆ ಹೇಳುವುದು ಮೇಡಂ ಕಾಣದಕೈ..ಅಂತ..ಅನುಭವದ ಲೇಖನ ಚೆನ್ನಾಗಿದೆ..
ಹೌದು ಮೇಡಂ… ನಮ್ಮನ್ನು ಮುಂದೆ ನಡೆಸುವ ನಿಯಾಮಕ ಶಕ್ತಿಯ ಕಾಣದ ಕೈಗಳಾಡಿಸಿದಂತೆ ಕುಣಿಯುವವರು ನಾವು. ಪ್ರತಿಕ್ರಿಯೆಗೆ ವಂದನೆಗಳು ಮೇಡಂ
ಅಭೂತಪೂರ್ವ ಅನುಭವ. ಸಹಾಯ ಮಾಡಿದವರೇ ಬಂಧುಗಳು.
ನಿಜ. ಆಪತ್ತಿಗಾದವರೇ ಬಂಧುಗಳು. ಪ್ರತಿಕ್ರಿಯೆಗೆ ಧನ್ಯವಾದಗಳು
ಸಕಾಲದಲ್ಲಿ ಒದಗುವ ಕಾಣದ ಕೈಯ ಸಹಾಯ ಹಸ್ತವು ಭಗವಂತನ ಇರುವಿಕೆಯನ್ನು ನಮಗೆ ತಿಳಿಸುತ್ತದೆ! ಸೊಗಸಾದ ಅನುಭವ ಲೇಖನ.
ನಿಜ ಅಕ್ಕ. ಭಗವಂತನು ಬೇರೆ ಬೇರೆ ರೂಪದಲ್ಲಿ ನಮಗೆ ಸಹಾಯ ಮಾಡುತ್ತಾನೆ ಅನ್ನುವುದಕ್ಕೆ ಇದೇ ನಿದರ್ಶನ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ
ಒಳ್ಳೆಯ ಕೆಲಸಕ್ಕೆ ಒಳ್ಳೆಯ ಮನಸ್ಸಿನಿಂದ ಹೊರಟಾಗ, ದೇವರ ಕೃಪೆ ಮತ್ತು ಹಿರಿಯರ ಆಶೀರ್ವಾ್ ಇರುತ್ತದೆ ಎಂಬ ನಂಬಿಕೆಗೆ ಸೊಗಸಾದ ಉದಾಹರಣೆ ನಿಮ್ಮ ಅನುಭವ ಲೇಖನ. ಮುದ ನೀಡಿತು.