ವಾಟ್ಸಾಪ್ ಕಥೆ 40 :ಹೃದಯ ದಾರಿದ್ರ್ಯ
ಒಬ್ಬ ರಾಜನ ಆಸ್ಥಾನದಲ್ಲಿ ಪ್ರಸಿದ್ಧನಾದ ಶಿಲ್ಪಿಯೊಬ್ಬನಿದ್ದ. ಅವನು ತಯಾರಿಸಿದ ಮೂರ್ತಿಗಳು ದೇಶದೆಲ್ಲೆಡೆಯಲ್ಲಿ ಜನರ ಅಭಿಮಾನಕ್ಕೆ ಪಾತ್ರವಾಗಿದ್ದವು. ರಾಜನು ಶಿಲ್ಪಿಯ ಬಗ್ಗೆ ತುಂಬ ಹೆಮ್ಮೆ ವ್ಯಕ್ತಪಡಿಸುತ್ತಿದ್ದ. ಅವನಿಗೆ ರಾಜಸಭೆಯಲ್ಲಿ ಗೌರವದ ಸ್ಥಾನಮಾನಗಳನ್ನು ಕೊಟ್ಟು ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದ. ಶಿಲ್ಪಿಯ ಬದುಕು ಸುಖವಾಗಿ ಸಾಗಿತ್ತು.
ಹೀಗಿರುವಾಗ ಒಮ್ಮೆ ಒಬ್ಬ ತರುಣ ಶಿಲ್ಪಿಯು ರಾಜಾಸ್ಥಾನಕ್ಕೆ ಬಂದನು. ರಾಜನಿಗೆ ”ನಾನೊಬ್ಬ ಶಿಲ್ಪಿ, ಶಿಲ್ಪಕಲೆಯಲ್ಲಿ ಸಾಕಷ್ಟು ನಿಷ್ಣಾತನಾಗಿದ್ದೇನೆ. ತಾವು ನನಗೆ ಒಂದು ಅವಕಾಶ ನೀಡಿದರೆ ನನ್ನ ಶಿಲ್ಪಕಲಾ ಕೌಶಲವನ್ನು ತಮ್ಮಮುಂದೆ ಪ್ರದರ್ಶಿಸಬೇಕೆಂಬುದು ನನ್ನ ಆಸೆ. ತಾವು ದಯಮಾಡಬೇಕು” ಎಂದು ಪ್ರಾರ್ಥಿಸಿದನು. ಅವನ ವಿನಯದ ಕೋರಿಕೆಯನ್ನು ಮನ್ನಿಸಿ ರಾಜನು ಅವನಿಗೆ ಅನುಮತಿಯನ್ನು ನೀಡಿದನು. ಆಸ್ಥಾನದಲ್ಲಿದ್ದ ಹಿರಿಯ ಶಿಲ್ಪಿಯೂ ಇದಕ್ಕೆ ಸಮ್ಮತಿಸಿದನು. ತರುಣನು ಕೆಲವೇ ದಿನಗಳಲ್ಲಿ ಸುಂದರವಾದ ಮೂರ್ತಿಯೊಂದನ್ನು ತಯಾರಿಸಿ ಪ್ರದರ್ಶಿಸಿದ. ಅತ್ಯಲ್ಪ ಕಾಲದಲ್ಲಿ ಅದ್ಭುತವಾದ ಮೂರ್ತಿಯನ್ನು ಕಡೆದದ್ದನ್ನು ನೋಡಿ ರಾಜನಾದಿಯಾಗಿ ಸಭೆಯಲ್ಲಿದ್ದವರೆಲ್ಲರೂ ಬಾಯ್ತುಂಬ ಹೊಗಳಿದರು. ಹಿರಿಯ ಶಿಲ್ಪಿಯೂ ತರುಣನ ಕಲಾನೈಪುಣ್ಯತೆಯನ್ನು ಮನಸಾರೆ ಪ್ರಶಂಸಿಸಿದನು.
ರಾಜನಿಗೆ ಮನಸ್ಸಿನಲ್ಲಿ ಒಂದು ಆಲೋಚನೆ ಬಂದಿತು. ಈಗಿರುವ ಹಿರಿಯ ಶಿಲ್ಪಿಗಾಗಲೇ ಸಾಕಷ್ಟು ವಯಸ್ಸಾಗಿದೆ. ವೃದ್ಧನಾಗಿದ್ದಾನೆ. ಅವನಿಗೆ ವಿಶ್ರಾಂತಿ ನೀಡಿ ತರುಣನಿಗೆ ಅವನ ಸ್ಥಾನ ನೀಡಬಹುದು ಎಂದು. ಅದನ್ನು ಸಭೆಯಲ್ಲಿ ಪ್ರಸ್ಥಾಪಿಸಿ ಎಲ್ಲರ ಅಭಿಮತವನ್ನು ಕೋರಿದನು. ಹಿರಿಯ ಶಿಲ್ಪಿಯೂ ಸೇರಿ ಎಲ್ಲರೂ ಒಕ್ಕೊರಲಿನಿಂದ ರಾಜನ ಪ್ರಸ್ತಾವನೆಯನ್ನು ಅನುಮೋದಿಸಿದರು. ರಾಜನು ”ಇಂದಿನಿಂದ ಆಸ್ಥಾನದ ಶಿಲ್ಪಿಯಾಗಿ ಈ ತರುಣನನ್ನು ನೇಮಿಸಲಾಗಿದೆ. ಇದುವರೆಗೆ ಈ ಸ್ಥಾನದಲ್ಲಿದ್ದ ಹಿರಿಯರಾದ ಶಿಲ್ಪಿಗಳಿಗೆ ವಿಶ್ರಾಂತಿ ನೀಡಲಾಗಿದೆ” ಎಂದು ಆದೇಶಿಸಿದನು. ಅಲ್ಲಿದ್ದವರೆಲ್ಲರೂ ಹಿರಿಯ ಶಿಲ್ಪಿಯ ಮನೋವೈಶಾಲ್ಯವನ್ನು ಹೊಗಳಿದರು. ”ಆತ ಯುವಕನ ಕೌಶಲ್ಯಕ್ಕೆ ಮನಸೋತು ತನ್ನ ಸ್ಥಾನವನ್ನೇ ಬಿಟ್ಟುಕೊಟ್ಟು ಗೌರವಾನ್ವಿತನಾಗಿದ್ದಾನೆ” ಎಂದರು.
ಮನೆಗೆ ಹೋದ ನಂತರ ಹಿರಿಯ ಶಿಲ್ಪಿಯು ನಿಧಾನವಾಗಿ ನಡೆದ ಎಲ್ಲ ಘಟನೆಗಳನ್ನು ವಿಶ್ಲೇಷಿಸಿದ. ”ನಾಳೆಯಿಂದ ನನಗೆ ರಾಜಾಸ್ಥಾನದಲ್ಲಿದ್ದ ಗೌರವದ ಸ್ಥಾನವಿಲ್ಲ, ಅದರಿಂದಾಗಿ ನನಗೆ ದೊರೆಯುತ್ತಿದ್ದ ಇತರ ಸೌಲಭ್ವಗಳೂ ಇನ್ನು ಮುಂದೆ ನನಗೆ ದೊರೆಯಲಾರವು. ನಾನೇ ತರುಣನೊಬ್ಬ ನನ್ನ ಸ್ಥಾನಕ್ಕೆ ಬರಲು ಆಹ್ವಾನ ನೀಡಿದೆ. ಇದು ನನ್ನಿಂದಲೇ ಆದ ದೊಡ್ಡ ತಪ್ಪು” ಎಂದು ವ್ಯಥೆಪಟ್ಟ. ಇದಕ್ಕೆ ಪರಿಹಾರವಾಗಿ ಆ ತರುಣ ರಾಜಸಭೆಗೆ ಬರದಿರುವಂತೆ ಹೇಗಾದರೂ ಮಾಡಬೇಕು. ಅದು ಸಾಧ್ಯವಿಲ್ಲದಿದ್ದರೆ ಆತನು ಈ ರಾಜ್ಯವನ್ನೇ ತೊರೆದು ಹೋಗುವಂತೆ ಏನಾದರೂ ಉಪಾಯ ಮಾಡಬೇಕು. ಅದೂ ಸಾಧ್ಯವಿಲ್ಲದಿದ್ದರೆ ಆ ತರುಣನನ್ನೇ ಇಲ್ಲದಂತೆ ಮಾಡಬೇಕು ಎಂದೆಲ್ಲಾ ಆಲೋಚಿಸಿದ. ಆ ದಿಕ್ಕಿನಲ್ಲಿ ಕಾರ್ಯೋನ್ಮುಖನಾದ. ಈ ವಿಷಯವು ಹೇಗೋ ತರುಣ ಶಿಲ್ಪಿಯ ಕಿವಿಗೂ ತಲುಪಿತು. ಅವನು ಪಶ್ಚಾತ್ತಾಪ ಪಟ್ಟ. ಅವನಿಗೆ ಹಿರಿಯ ಶಿಲ್ಪಿಯ ಬಗ್ಗೆ ತುಂಬ ಗೌರವವಿತ್ತು. ಹಾಗಾಗಿ ಒಂದು ಪತ್ರ ಬರೆದು ಯಾರದೋ ಮುಖಾಂತರ ಹಿರಿಯ ಶಿಲ್ಪಿಗೆ ತಲುಪಿಸುವಂತೆ ಮಾಡಿ ಊರನ್ನೇ ಬಿಟ್ಟು ಬಹುದೂರ ಹೊರಟುಹೋದ.
ಪತ್ರವನ್ನು ಹಿರಿಯ ಶಿಲ್ಪಿ ತೆರೆದು ಓದಿದ. ”ನಿಮಗೆ ರಾಜರ ಆದೇಶ ಇಷ್ಟವಿಲ್ಲದಿದ್ದರೆ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಾನು ಇಲ್ಲಿರುವುದಿಲ್ಲ. ನನಗೆ ಸ್ಥಾನದ ಹಂಬಲವಿಲ್ಲ. ನಾನೊಬ್ಬ ಕಲೋಪಾಸಕ ಮಾತ್ರ, ಸ್ಥಾನೋಪಾಸಕನಲ್ಲ. ನನ್ನನ್ನು ತಪ್ಪಾಗಿ ಭಾವಿಸಿ ನೀವು ಬೇಸರಿಸಬೇಕಾಗಿಲ್ಲ. ನಿಮ್ಮ ಸ್ಥಾನ ಅಬಾಧಿತವಾಗಿರಲಿ. ನಾನು ಈ ಪತ್ರ ನಿಮಗೆ ತಲುಪವಷ್ಟರಲ್ಲಿ ಬಹುದೂರ ಹೊರಟುಹೋಗಿರುತ್ತೇನೆ. ಧನ್ಯವಾದಗಳು” ಎಂದು ಬರೆದಿತ್ತು. ಹಿರಿಯ ಶಿಲ್ಪಿಯ ಮನಸ್ಸಿಗೆ ತರುಣನ ಹೃದಯ ವೈಶಾಲ್ಯ ನನಗಿಲ್ಲವಾಯಿತಲ್ಲಾ ಎಂದು ಹಲುಬಿದನು. ವೃತ್ತಿ ಗೌರವವನ್ನೂ ನಾನು ತೋರಲಿಲ್ಲವೆಂದು ಪಶ್ಚಾತ್ತಾಪ ಪಟ್ಟನು. ಆದರೆ ಕಾಲ ಮಿಂಚಿಹೋಗಿತ್ತು. ತರುಣಶಿಲ್ಪಿ ಬಹುದೂರ ಹೊರಟುಹೋಗಿದ್ದ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಚೆನ್ನಾಗಿದೆ
ಪ್ರಕಟಿಸಿದ.. ಹೇಮಮಾಲಾ ಅವರಿಗೆ..ಧನ್ಯವಾದಗಳು
ಧನ್ಯವಾದಗಳು ನಯನಮೇಡಂ
ಬಹಳ ಚೆನ್ನಾಗಿರುವ ಸಂದೇಶಯುಕ್ತ ಕಥೆ ಇಷ್ಟವಾಯಿತು… ನಾಗರತ್ನ ಮೇಡಂ.