ವಾಟ್ಸಾಪ್ ಕಥೆ 37: ಉಪಯೋಗಕ್ಕೆ ಬಾರದ ವಜ್ರವೂ ಕಲ್ಲಿಗೆ ಸಮ.
ಒಬ್ಬರಾಜನು ತನ್ನ ಗುರುಗಳಾದ ಸಂನ್ಯಾಸಿಯೊಬ್ಬರನ್ನು ತನ್ನ ಅರಮನೆಗೆ ಬರಬೇಕೆಂದು ಆಗಾಗ ಒತ್ತಾಯಿಸುತ್ತಲೇ ಇದ್ದನು. ಸಂನ್ಯಾಸಿಗೆ ರಾಜವೈಭವವನ್ನು ನೋಡಬೇಕೆಂಬ ಕುತೂಹಲವಿಲ್ಲದಿದ್ದರೂ ಶಿಷ್ಯನನ್ನು ತೃಪ್ತಿಪಡಿಸುವ ಸಲುವಾಗಿ ಒಮ್ಮೆ ಅರಮನೆಗೆ ತೆರಳಿದರು.
ರಾಜನು ತನ್ನ ಅರಮನೆಯ ಆಸ್ಥಾನದ ವೈಭವ, ಪೀಠೋಪಕರಣಗಳು, ಗಜಸಂಪತ್ತು, ಗೋಸಂಪತ್ತು, ಅಶ್ವಸಂಪತ್ತು, ಎಲ್ಲವನ್ನೂ ಸಂನ್ಯಾಸಿಗೆ ತೋರಿಸಿದ. ಆದರೂ ಗುರುವಿನ ಬಾಯಿಂದ ಒಂದೇಒಂದು ಮೆಚ್ಚುಗೆಯ ಮಾತಿಲ್ಲ. ಆಗ ರಾಜನು ಅವರನ್ನು ತನ್ನ ಭಂಡಾರಕ್ಕೆ ಕರೆದೊಯ್ದ. ಅಲ್ಲಿದ್ದ ಅಮೂಲ್ಯ ರತ್ನಾಭರಣಗಳನ್ನು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕೋಹಿನೂರ್‌ಗೆ ಸರಿಸಮನಾದ ವಜ್ರವೊಂದನ್ನು ತೋರಿಸಿ ”ಇದು ಹೇಗಿದೆ ಗುರುಗಳೇ?” ಎಂದು ಪ್ರಶ್ನಿಸಿದ.
ರಾಜನ ಮಾತನ್ನು ಕೇಳಿದ ಸಂನ್ಯಾಸಿ ವಜ್ರವನ್ನು ನೋಡಿದಮೇಲೆ ”ಅಯ್ಯೋ ಇದೇನು ಮಹಾ ! ನಮ್ಮ ನೆರೆಮನೆಯಲ್ಲಿ ಒಬ್ಬ ಹಾಲು ಮಾರುವವಳಿದ್ದಾಳೆ. ಅವಳ ಮನೆಯಲ್ಲಿ ಇದಕ್ಕಿಂತಲೂ ದೊಡ್ಡದಾದ ವಜ್ರವಿದೆ” ಎಂದರು. ಆಗ ರಾಜನು ”ಹಾಗಿದ್ದರೆ ನಾನದನ್ನು ಈಗಲೇ ನೋಡಬೇಕಲ್ಲಾ?” ಎಂದು ಕೋರಿದನು. ಸಂನ್ಯಾಸಿಯು ”ಅದಕ್ಕೇನಂತೆ ಬನ್ನಿ ಎಂದು ರಾಜನನ್ನು ಆ ಹಾಲು ಮಾರುವವಳ ಮನೆಗೆ ಕರೆದುಕೊಂಡು ಹೋಗಿ ಅಡುಗೆ ಮನೆಯ ಮೂಲೆಯಲ್ಲಿದ್ದ ಬೀಸುವ ಕಲ್ಲನ್ನು ತೋರಿಸಿ ನೋಡಿ ಅಲ್ಲಿದೆ. ಅದೆಷ್ಟು ಅಮೂಲ್ಯವಾದ ರತ್ನ ” ಎಂದರು.
ಗುರುಗಳ ಮಾತನ್ನು ಕೇಳಿ ರಾಜನು ಗಹಗಹಿಸಿ ನಕ್ಕುಬಿಟ್ಟ. ”ಗುರುಗಳೇ ಅದು ಬೀಸುವ ಕಲ್ಲು, ಹೇಗೆ ರತ್ನವಾದೀತು?” ಎಂದ. ಆಗ ಗುರುಗಳು ನುಡಿದರು ”ಆ ಬೀಸುವ ಕಲ್ಲಿನಿಂದ ದೊರಕುವ ಹಿಟ್ಟಿನಿಂದ ತಯಾರಾಗುವ ರೊಟ್ಟಿಯನ್ನು ಸಾವಿರಾರು ಜನರು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು. ನಿನ್ನಲ್ಲಿರುವ ವಜ್ರವು ರತ್ನವೇ ಆದರೂ ಅದರಿಂದ ಸಾಮಾನ್ಯ ಜನರಿಗೆ ಯಾವ ರೀತಿಯಲ್ಲಿ ಉಪಯೋಗವಾಗಬಲ್ಲುದು?. ಹೆಚ್ಚು ಜನರಿಗೆ ಉಪಯೋಗಕ್ಕಾಗುವ ಬೀಸುವ ಕಲ್ಲನ್ನೇ ಅಮೂಲ್ಯ ರತ್ನವೆಂದು ತಿಳಿಯಬೇಕು ” ಎಂದರು. ”ನಿನ್ನಲ್ಲಿರುವ ಮುತ್ತು, ರತ್ನಗಳು ಕೇವಲ ಕಳ್ಳರಿಗೆ ಬೇಕು. ಅದಕ್ಕಾಗಿ ಬೇರೆಯವರ ಪ್ರಾಣವನ್ನೂ ಅವರು ತೆಗೆಯಬಹುದು. ನಿನ್ನ ರತ್ನವು ಕಳ್ಳರ ಮೂಲಕ ಇತರರ ಪ್ರಾಣಕ್ಕೆ ಎರವಾಗಬಲ್ಲುದು. ಆದರೆ ಬೀಸುವಕಲ್ಲು ಹಲವರಿಗೆ ಪ್ರಾಣ ನೀಡುತ್ತದೆ” ಎಂದು ಹೇಳಿದರು.
ನಿಜ, ಈ ಜಗತ್ತಿನಲ್ಲಿ ನಮಗೆ ಬೇಕಾದದ್ದು ಉಪಯುಕ್ತವಾಗುವ ವಸ್ತುಗಳು. ದೈನಂದಿನ ಬದುಕಿನಲ್ಲಿ ಹತ್ತು ಜನರಿಗೆ ಪ್ರಯೋಜನಕಾರಿಯಾದ ವಸ್ತುಗಳೇ ನಮಗೆ ಮುಖ್ಯವೆಂದೆನಿಸಬೇಕು. ಅವುಗಳನ್ನು ಖರೀದಿಸಬೇಕು, ಸಂಗ್ರಹಿಸಬೇಕು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶವಿದೆ ಕಥೆಯಲ್ಲಿ
ಚೆನ್ನಾಗಿದೆ
ಜೀವನಕ್ಕೆ ಬೇಕಾದ ಉಪಯುಕ್ತ ವಸ್ತುಗಳ ಮಹತ್ವವನ್ನು ಒತ್ತಿ ಹೇಳುವ ಕಥೆ ಎಂದಿನಂತೆ ಚಂದ…ನಾಗರತ್ನ ಮೇಡಂ
ಧನ್ಯವಾದಗಳು ನಯನಮೇಡಂ ಆಶಾ ನೂಜಿಮೇಡಂ ಹಾಗೂಶಂಕರಿ ಮೇಡಂ..
ವಸ್ತುವಿನ ಉಪಯುಕ್ತತೆಯ ಮಹತ್ವವನ್ನು ಸಾರುವ ಚಂದದ ಚೊಕ್ಕ ಕಥೆ
ಧನ್ಯವಾದಗಳು ಪದ್ಮಾ ಮೇಡಂ