ವಾಟ್ಸಾಪ್ ಕಥೆ 34 : ನಮ್ಮ ಕೆಲಸವನ್ನು ನಾವೇ ಮಾಡಬೇಕು.
ಒಬ್ಬ ವ್ಯಾಪಾರಿಯು ಒಂಟೆಯೊಂದನ್ನು ಸಾಕಿಕೊಂಡಿದ್ದ. ಅವನು ಅದರ ಮೇಲೆ ಸರಕುಗಳನ್ನು ಹೇರಿಕೊಂಡು ಊರಿಂದೂರಿಗೆ ವ್ಯಾಪಾರ ಮಾಡಲು ಹೋಗುತ್ತಿದ್ದ. ಅವನಿಗೆ ಒಂಟೆಯೇ ವ್ಯಾಪಾರಕ್ಕೆ ಮುಖ್ಯ ಆಧಾರವಾಗಿತ್ತು.
ಒಮ್ಮೆ ಪಕ್ಕದೂರಿನಲ್ಲಿ ಜಾತ್ರೆ ನಡೆಯುತ್ತಿತ್ತು. ವ್ಯಾಪಾರಿಯು ಮುಂಜಾನೆಯೇ ಸರಕುಗಳನ್ನು ಹೆಚ್ಚಾಗಿಯೇ ಹೇರಿಕೊಂಡು ವ್ಯಾಪಾರಮಾಡಲು ಹೊರಟ. ಸಂಜೆಯವರೆಗೆ ವ್ಯಾಪಾರ ಚೆನ್ನಾಗಿ ಆಯ್ತು. ಎಂದಿಗಿಂತಲೂ ಹೆಚ್ಚು ಲಾಭ ದೊರಕಿತು. ಖುಷಿಯಾಗಿ ವ್ಯಾಪಾರಿ ಹಿಂದಿರುಗುತ್ತಿದ್ದ. ದಾರಿಯಲ್ಲಿ ಊರಿನ ಹೊರವಲಯದಲ್ಲಿ ಶಿವನ ಗುಡಿಯೊಂದಿತ್ತು. ವ್ಯಾಪಾರಿ ತುಂಬ ದೈವಭಕ್ತ. ತನಗೆ ಆ ದಿನ ಹೆಚ್ಚಿನ ಲಾಭ ದೊರಕುವಂತೆ ಮಾಡಿದ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ ಹೋಗೋಣವೆಂದು ನಿಂತ. ತನ್ನ ಒಂಟೆಯನ್ನು ಸಮೀಪದಲ್ಲೇ ಇದ್ದ ಮರದ ಬಳಿಯಲ್ಲಿ ನಿಲ್ಲಿಸಿ ತಾನು ಗುಡಿಯೊಳಕ್ಕೆ ಪ್ರವೇಶ ಮಾಡಿದ. ದೇವರ ಪೂಜೆಯು ಮುಗಿದು ಚೆನ್ನಾಗಿ ಅಲಂಕಾರ ಮಾಡಿದ್ದರು. ಅದನ್ನು ನೋಡಿ ಭಕ್ತಿಭಾವ ಮೂಡಿತು. ಕಣ್ಮುಚ್ಚಿ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಾ ಧ್ಯಾನಾಸಕ್ತನಾದ. ಸಮಯ ಹೋದದ್ದೇ ಅರಿವಾಗಲಿಲ್ಲ. ಕಣ್ಣುತೆಗೆದು ನೋಡಿದಾಗ ಆಗಲೇ ಕತ್ತಲು ಆವರಿಸಿತ್ತು. ಕೈಮುಗಿದು ಅವಸರದಿಂದ ಹೊರಗೆ ಬಂದು ತನ್ನ ಒಂಟೆಯನ್ನು ನಿಲ್ಲಿಸಿದ್ದ ಮರದ ಬಳಿಗೆ ಹೋದ. ಕತ್ತಲಾದ ಮೇಲೆ ಪ್ರಯಾಣ ಕಷ್ಟವೆಂದು ಬೇಗನೇ ಹಿಂದಿರುಗಲು ನಿರ್ಧರಿಸಿ ಒಂಟೆ ಎಲ್ಲಿ ಹೋಯಿತೆಂದು ಅಕ್ಕಪಕ್ಕದಲ್ಲಿ ಹುಡುಕಾಡಿದ. ಎಲ್ಲಿಯೂ ಕಾಣಿಸದಿದ್ದರಿಂದ ಅವನಿಗೆ ಭಯವಾಯಿತು. ತಕ್ಷಣ ಭಗವಂತನಿಗೆ ಮೊರೆಹೋದ. ”ಭಗವಂತಾ ನಾನು ನಿನಗೆ ಪ್ರಾರ್ಥನೆ ಸಲ್ಲಿಸಲು ಗುಡಿಯೊಳಗೆ ಬಂದಿದ್ದೆ. ಆದರೆ ಹೊರಗೆ ಬಂದಾಗ ನನ್ನ ಒಂಟೆ ಎಲ್ಲಿಯೂ ಕಾಣುತ್ತಿಲ್ಲ. ನೀನು ದಯಾಮಯ ನಿನ್ನ ಭಕ್ತನಿಗೆ ಹೀಗೆ ಅನ್ಯಾಯ ಮಾಡಬಹುದೇ” ಎಂದು ಗೋಳಾಡಿದ. ”ನಾನು ನಿನ್ನ ಮೇಲಿಟ್ಟಿದ್ದ ನಂಬಿಕೆಗೆ ಏನೂ ಬೆಲೆಯಿಲ್ಲವೇ? ” ಎಂದು ದೇವರನ್ನೇ ದೂರತೊಡಗಿದ.
ಅಷ್ಟರಲ್ಲಿ ದೇವಾಲಯದತ್ತ ಒಬ್ಬ ಸಾಧುವಿನ ಆಗಮನವಾಯಿತು. ಆತನು ವ್ಯಾಪಾರಿಯನ್ನು ಏನಾಯ್ತೆಂದು ಪ್ರಶ್ನಿಸಿದ. ವ್ಯಾಪಾರಿ ನಡೆದುದೆಲ್ಲವನ್ನೂ ವಿವರಿಸಿದ. ”ಈ ದೇವರನ್ನು ನಾನೆಷ್ಟು ನಂಬಿದ್ದೇನೆ. ನಾನೆಷ್ಟು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ. ಆದರೆ ಈತನು ನನ್ನ ಒಂಟೆಯನ್ನು ನೋಡಿಕೊಳ್ಳುವ ಒಂದು ಸಣ್ಣ ಕೆಲಸವನ್ನೂ ಮಾಡಲಾರದೇ ಹೋದನಲ್ಲಾ” ಎಂದು ಹೇಳಿದ.
ಸಾಧುವು ವ್ಯಾಪಾರಿಯನ್ನು ”ನೀನು ಒಂಟೆಯನ್ನು ಎಲ್ಲಿ ನಿಲ್ಲಿಸಿದ್ದೆ?” ಎಂದು ಕೇಳಿದ. ವ್ಯಾಪಾರಿ ಮರವನ್ನು ತೋರಿದ. ”ಒಂಟೆಯನ್ನು ಮರಕ್ಕೆ ಹಗ್ಗದಿಂದ ಕಟ್ಟಿಹಠಕಿದ್ದೆಯಾ? ”ಎಂದು ಪ್ರಶ್ನಿಸಿದ. ‘ಇಲ್ಲ’ವೆಂದು ವ್ಯಾಪಾರಿ ಉತ್ತರಿಸಿದ. ಆಗ ಸಾಧು ”ತಪ್ಪನ್ನೆಲ್ಲ ನೀನೇ ಮಾಡಿ ಭಗವಂತನನ್ನು ವೃಥಾ ದೂರುತ್ತಿರುವೆಲ್ಲಾ ಇದು ನ್ಯಾಯವೇ? ಒಂಟೆಯನ್ನು ಭದ್ರವಾಗಿ ಮರಕ್ಕೆ ಕಟ್ಟಿ ಹೋಗದಿದ್ದುದು ನಿನ್ನ ತಪ್ಪು. ಇದೊಂದು ಸಣ್ಣ ಕೆಲಸ. ಭಗವಂತನಿಗೆ ಕೋಟ್ಯಾಂತರ ಜನಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ನಾವು ಮಾಡಬೇಕಾದ ಸಣ್ಣಸಣ್ಣ ಕೆಲಸಕ್ಕೂ ಅವನನ್ನೇ ಕೋರುವುದು ನ್ಯಾಯವಲ್ಲ. ನಮ್ಮ ಕೆಲಸಗಳನ್ನು ನಾವೇ ಮಾಡಬೇಕು. ತಪ್ಪನ್ನು ನಾವು ಮಾಡಿ ದೇವರನ್ನು ದೂರಿದರೆ ಯಾವ ನ್ಯಾಯ?” ಎಂದು ತಿಳಿಸಿದ.
ವ್ಯಾಪಾರಿಗೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದ. ಭಗವಂತನಲ್ಲಿ ಕ್ಷಮೆ ಯಾಚಿಸಿದ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
Nice.
ಚೆನ್ನಾಗಿದೆ
ಧನ್ಯವಾದಗಳು ನಯನಮೇಡಂ.. ಹಾಗೂಸುಚೇತಾ
ಸೊಗಸಾದ, ಅರ್ಥವತ್ತಾದ ಪುಟ್ಟ ಕಥೆ ಚೆನ್ನಾಗಿದೆ… ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
Meaningful story
ಧನ್ಯವಾದಗಳು ಗಾಯತ್ರಿ ಮೇಡಂ
ಒಳ್ಳೆಯ ಸಂದೇಶದ ಸುಂದರ ಕಥೆ.
ಸಂದೇಶ ಚೆನ್ನಾಗಿದೆ