ಸತ್ತು ಬದುಕುವ ಪರಿ…….
ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿ
ಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು
ಹಸಿದ ಹೊಟ್ಟೆಯಲಿ ಸಂಕಟ ತುಂಬಿಕೊಂಡು ಕಣ್ಣೀರು ಸುರಿಸಿದ ಬಂಧುಗಳೆಲ್ಲಾ
ಅಂತ್ಯಸಂಸ್ಕಾರದ ತಯಾರಿಯಲ್ಲಿ ತೊಡಗಿರಲು
ಹಚ್ಚಿದ ಊದುಬತ್ತಿಯ ಸುವಾಸನೆ ವಿಚಿತ್ರ ಅನುಭೂತಿ ತರುತಿರಲು
ಹಾಕಿದ ಹಾರಗಳು ಭಾರವೆಂದು ಹೇಳಲು ಬಾಯೆಲ್ಲಿ ?
ಕೂತು ಕಿರಿ ಕಿರಿ ಮಾಡುವ ನೊಣಗಳ ಓಡಿಸಲು ಕೈಯೆಲ್ಲಿ ?
ಬಂದ ಬಂಧು ಭಾಂಧವರ ಗೆಳೆಯರ ನೋಡಲು ಕಣ್ಣೆಲ್ಲಿ ?
ನೆರೆದ ಸನ್ಮಿತ್ರ ಬಳಗದವರೆಲ್ಲಾ ನಿನ್ನ ದುಬಾರಿ ಕಾರಿನ ಬಗ್ಗೆ ಹೇಳರು
ಸೇರಿದ ಪರಿಚಯದ ಜನರೆಲ್ಲಾ ನೀ ಕಟ್ಟಿಸಿದ ಭವ್ಯ ಬಂಗಲೆ ನೋಡಿ ಹೊಗಳರು
ಹಿಡಿ ಮಣ್ಣು ನೀಡಲು ಬಂದ ಅಭಿಮಾನದ ಜನರೆಲ್ಲಾ ನೀ ನಡೆಸಿದ ಅಧಿಕಾರದ ಜೀವನ ನೆನಸರು
ಇರುವಾಗ ಇದ್ದ ನಿನ್ನ ಮಾನವೀಯತೆಯ ಗುಣಗಳ ಈಗ ನೆನೆದು ಮಾತನಾಡುವರು
ಸ್ಪಂದಿಸುವ ಮನುಜನಾಗಿ ಜೀವಿಸಿದ ನಿನ್ನ ಅಮೃತ ಕ್ಷಣಗಳ ಮೆಲುಕು ಹಾಕುವರು
ಅಹಂಕಾರ ತೊರೆದು ಇನ್ನೊಬ್ಬರ ನೋವ ನೀಗಿಸಿದ ನಿನ್ನ ಗುಣವ ಕೊಂಡಾಡುವರು
ಬೆವರು ಬಸಿದು ಗಳಿಸಿದ ಆಸ್ತಿ ಕೂಡಿಟ್ಟ ಹಣಕ್ಕಿಂತ
ಪ್ರೀತಿ ವಿಶ್ವಾಸ ತುಂಬಿದ ಸಂತೈಸುವ ನುಡಿಗಳೇ ನಿನ್ನ ಸತ್ತ ಮೇಲೂ ಜೀವಂತವಾಗಿಡುವವು…….
-ಕೆ.ಎಂ ಶರಣಬಸವೇಶ
ಇದ್ದಾಗ ಬದುಕನ್ನು ನೆಡೆಸುವಪರಿಯ ಅನಾವರಣ ದ ಕವನ ಅರ್ಥಪೂರ್ಣ ವಾಗಿದೆ ಸಾರ್
ನಿಜ ಸರ್, ನಾವು ತೋರಿಸುವ ಮಾನವೀಯತೆಯನ್ನಷ್ಟೇ ನಾವು ಸತ್ತ ಮೇಲೂ ಜನ ನೆನೆಯುವುದು ಹೊರತು ನಾವು ಕೂಡಿಟ್ಟ ಸಂಪತ್ತನ್ನಲ್ಲ.
Benki
ಜೀವಂತವಾಗಿರುವಾಗ ಮನುಷ್ಯನು ಹೇಗಿರಬೇಕೆಂದು ತೋರಿಸಿಕೊಡುವ ಸೊಗಸಾದ ಕವನ,
ನಾಗರತ್ನ,ನಯನ ಬಜಕೂಡ್ಲು,ಶಂಕರಿ ಶರ್ಮ ಈ ಮೂರು ಮುತ್ತುಗಳು ನಮ್ಮ ಸುರಹೊನ್ನೆ ಬಳಗಕ್ಕೆ ತಾವೇ ಸೊಗಸಾಗಿ ಬರೆಯುವುದಲ್ಲದೆ ಬೇರೆಯವರ ಪ್ರತಿಯೊಂದು ಬರಹಗಳನ್ನು ಓದಿ ಪ್ರೋತ್ಸಾಹ ಭರಿತ ಪ್ರತಿಕ್ರಿಯೆ ನೀಡುತ್ತಾರೆ. ಮೂರು ಮುತ್ತುಗಳಿಗೆ ಧನ್ಯವಾದಗಳು.