ಅರೆರೆ ಅರಗಿಳಿ…
ಹಾರುವ ಹೂವೊಂದು ಮರದ ಮೇಲೆ ಕುಳಿತಿದೆ
ಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ
ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳು
ಕತ್ತು ಅಲ್ಲಾಡಿಸಿದಾಗ ಮೇಲೆದ್ದು ಕೂರುವ ಕೆಂಪನೆಯ ಜುಟ್ಟಿನ ಭಾಗಗಳು
ಕಡು ನೀಲಿ ಬಣ್ಣದ ಪುಕ್ಕಗಳು ಹಳದಿ ವರ್ಣದ ಮೈಗೆ ಮೆರಗು ನೀಡಿವೆ
ಚೂಪಾದ ಉಗುರುಗಳು ಕಾಂಡಕ್ಕೆ ಚುಚ್ಚಿ ಬಳಸಿ ಹಿಡಿದಿವೆ
ಬೀಸುವ ಗಾಳಿಗೆ ನುಣುಪಾದ ಕೂದಲುಗಳು ಕೆದರಿ ಅಲ್ಲಲ್ಲಿ ಕುಳಿ ಬಿದ್ದಿವೆ
ನೋಡುವ ಕಣ್ಣಿಗೆ ಮರೆಯಲಾಗದ ಹಬ್ಬದೂಟವ ನೀಡಿವೆ
ಗತಕಾಲದ ನೋವುಗಳಲ್ಲಿ ಮುಳುಗಿದ ಮನಕೆ ಮುದವ ತಂದಿವೆ
ಹಾರಿ ಹೋಗದಿರಲಿ ನಿಸರ್ಗದಲಿ ಮೈದಳೆದ ಈ ಸುಂದರ ಹಕ್ಕಿ
ಜರುಗುವ ಈ ಕ್ಷಣಗಳು ಅರೆಕಾಲ ನಿಂತು ಬಿಡಲಿ ಕಣ್ಣು ಕುಕ್ಕಿ
ನೀಲಾಕಾಶದ ಹಿನ್ನಲೆಯಲಿ ಹಸಿರು ಬಣ್ಣದ ಎಲೆಗಳ ಮಧ್ಯದಲಿ ಇದು ಬೆಳಗುವ ಚುಕ್ಕಿ
–ಕೆ.ಎಂ ಶರಣಬಸವೇಶ
ಸರಳ ಸುಂದರ ಕವನ…ಒಳ್ಳೆ ಯ ಸಂದೇಶವಿದೆ..ಸಾರ್…
ಚಂದದ ಕವನ
ಚಂದದ ಗಿಳಿಯ ಅಂದದ ಕವನ
ಸುಂದರ ನಿಸರ್ಗಾರಾಧನೆಯ ಕವಿತೆ.