ತಡ ಮಾಡು; ಪವಾಡ ನೋಡು
ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;
ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ !
ಹರಿವ ನೀರನು ನೆನಪಿಸು, ಕಸಕಡ್ಡಿ ತೇಲುವ ತಾಮಸವ ಗಮನಿಸು
ನಿನ್ನನೇ ‘ಲೋಕಿʼಸುವ, ಅವಲೋಕಿಸುವ ಏಕಾಗ್ರತೆಗೆ ; ಜಾಗ್ರತೆಗೆ !
ಹತ್ತು ನಿಮಿಷ ನಿಧಾನಿಸು, ನೀ ಪ್ರತಿಕ್ರಿಯಿಸುವ ಮುನ್ನ ;
ಪ್ರತಿಬಿಂಬಿಸುವ ನಿನ್ನ ಕನ್ನಡಿ ಬಿಂಬಕೆ ; ಡಂಬಡಿಂಬಕೆ !
ಮೌನವಾಗುರಿವ ನೇಸರನುದಯ ಕಾಣಿಸು, ತಂಪೆರೆಯುವ
ಚಂದಿರನ ಚಂದ ಛಾಪಿಸು ; ಬಡಬಡಿಸುವ ಬಡಾಯಿಗೆ !
ಒಳಗೆ ಹುಟ್ಟಿ ಮೂಳೆಮಜ್ಜೆಯ ಕುಟ್ಟಿ ಕಾರುವ, ತಾಪವ ಅಲ್ಲೇ ಶಾಂತಿಸು;
ಕಾರಿಕೊಳುವ ನಿನ್ನ ಅವಿವೇಕದ ಹಳಸಲು ವಾಂತಿಗೆ ; ವ್ಯರ್ಥಕ್ರಾಂತಿಗೆ !
ನಿನ್ನೆಲ್ಲ ಅಹಮಿಕೆಯ ಪರಿತಾಪದ ಬೆಂಕಿಗೆ, ಉರಿದು ಬೂದಿಯಾದ ಏನೆಲ್ಲ
ಜೀವ ಭಾವಕೋಶ ತೂರಿ ಹೋಗಲಿ ಬಯಲಿಗೆ ; ತಡೆಯಿಲ್ಲದ ಗಾಳಿಗೆ !
ನಿನ್ನೊಳಗೇ ನಡೆದು ಆನಂತರ, ನೀನಾಗಲು ಪ್ರಯತ್ನಿಸು; ಆಗಲೂ
ಸ್ಪಂದನ ಬೇಕೆನಿಸಿದರೆ ಪ್ರಜ್ವಲಿಸು, ದೀಪದೆಣ್ಣೆ ಬೆಳಕಿಗೆ ; ಬಾಳಿಗೆ !
ಆರುನೂರು ಸೆಕೆಂಡು, ನಿನ್ನೊಳಗಿಣುಕಿ ನೋಡು; ಪವಾಡ ಮಾಡು !
ಸಹನಿಸು ; ಮನವ ಸಾಂತ್ವನಿಸು; ಸುಮ್ಮನಿದ್ದು ‘ಸಂತʼಸಿಸು !
ಮಾತು ಮದ್ದಲ್ಲ ; ಎದುರಾಳಿಗೆ ಗುದ್ದಲ್ಲ ! ‘ಅಕ್ರಿಯೆʼ ನಿನಗೆ ಗೊತ್ತಿಲ್ಲ,
ಹೂವರಳಿ ನಗುವ ನಿಶ್ಶಬ್ದಕೆ ಯಾರ ಹಂಗೂ ಇಲ್ಲ !
-ಡಾ. ಹೆಚ್ ಎನ್ ಮಂಜುರಾಜ್
ಸುರಹೊನ್ನೆಯ ಸಂಪಾದಕ ಬಳಗಕ್ಕೆ ಧನ್ಯವಾದಗಳು.
ಸೊಗಸಾದ ಕವನ.
ಧನ್ಯವಾದಗಳು ಮೇಡಂ, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
Good words sir
ಚನ್ನಾಗಿ ಇದೆ ಸರ್
ಧನ್ಯೋಸ್ಮಿ
ಮೌನಂ ….ಶಾಂತಿ…. ಸಮ್ಮತಿ….. ಲಕ್ಷಣಂ. ಜೀವನದಲ್ಲಿ ಜಗಳಗಳ ಜಂಜಾಟದ ಮಧ್ಯೆ ಆಲೋಚನೆಯನ್ನೇ ಪರಿವರ್ತಿಸಬಲ್ಲ ಒಂದು ಸುಂದರವಾದ ಕವಿತೆ..
ನಮಸ್ತೆ, ಧನ್ಯವಾದಗಳು
ಕೋಪಬಂದಾಗ ಹತ್ತೆಣಿಸು ಅಂತಾರೆ ತಿಳಿದವರು. ಕೋಪದಿಂದುಂಟಾಗುವ ಕೆಡುಕನ್ನು ಕ್ಷೀಣಿಶಬಹುದು. ಅದೇರೀತಿ ತನ್ನ ಬಗ್ಗೆ ಟೀಕೆ ಟಿಪ್ಪಣಿ ಬಂದಾಗ ಹತ್ತು ನಿಮಿಷ ಲೋಕಿಸಿ ಅವಲೋಕಿಸಿದರೆ ಸತ್ಯದ ಅನಾವರಣವಾಗುತ್ತದೆ. ಆಗ ವಹಿಸಬೇಕಾದ ಜಾಗ್ರತೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮ ನಮ್ಮ ನಿಲುಕಿಗೆ ವೇದ್ಯವಾಗುತ್ತದೆ.
ಸೊಗಸಾದ ಕವಿತೆ
ಧನ್ಯವಾದಗಳು
ಅಭ್ಭಾ…ಅರ್ಥಪೂರ್ಣ ವಾದ ಚಿಂತನೆ ಹಚ್ಚುವ ಕವನ..ಅಭಿನಂದನೆಗಳು ಸಾರ್.
ಸೊಗಸಾದ ಕವಿತೆ
ಧನ್ಯವಾದಗಳು ಸರ್, ನಿಮ್ಮ ಪ್ರತಿಕ್ರಿಯೆಗೆ
ತಾಳ್ಮೆ, ಸಹನೆಯ ಪಾಠ, ಸುಂದರವಾದ ಕವನ. ಕೊನೆಯ ಸಾಲುಗಳು Excellent.
ಓ ! ಧನ್ಯವಾದಗಳು ಮೇಡಂ, ನಿಜ ಹೇಳುವೆ, ಕೊನೆಯ ಸಾಲು ನನಗೂ ಇಷ್ಟವಾಯಿತು. ಇಂಥದು ಬರೆಯುವವರಿಗೆ ಅಪರೂಪ. ಅದು ಹೇಗೆ ಅವತರಿಸುತ್ತದೋ, ವಿಸ್ಮಯ
‘ತಾಳಿದವನು ಬಾಳಿಯಾನು’…. ತಾಳ್ಮೆ, ಸಹನೆಗಳ ಅಗತ್ಯತೆಯನ್ನು ಒತ್ತಿ ಹೇಳುವ ಅರ್ಥಪೂರ್ಣ ಕವನ.
ಅತ್ಯುತ್ತಮ,,, ಕವನ,,,,ಮನನ ಮಾಡಿಸುವ ಕವನ
ಧನ್ಯವಾದಗಳು ಮೇಡಂ
ತಾಳ್ಮೆ, ಸಹನೆಯ ಭವ್ಯತೆಯನ್ನು ಎತ್ತಿ ಹಿಡಿಯುವ ಪ್ರೌಢ ಕವಿತೆ.
ಹೌದೇ ಮೇಡಂ, ನಿಮ್ಮ ಒಳನೋಟದ ಸ್ಪಂದನಕೆ ಧನ್ಯವಾದಗಳು.