ಕವಿಯ ಕಾವ್ಯ ಪರಿಚಯ
ಮನದಾಳದಲ್ಲಿ ಹರಳುಗಟ್ಟಿದ ಭಾವನೆಗಳ ಅಭಿವ್ಯಕ್ತಿ ಈ ಕಾವ್ಯ
ಹೇಳಬೇಕೆಂಬ ತುಡಿತಕ್ಕೆ ಹೊರಬಾಗಿಲು ಈ ಕವನ
ಪದಗಳೆಂಬ ಸಿಂಹಾಸನದ ಮೇಲೆ ರಾರಾಜಿಸುವ ರಾಣಿ ಈ ಕಬ್ಬ
ಶೋಕವೇ ಮಡುಗಟ್ಟಿ ಕೊರಳು ಒತ್ತಿ ಬರುವಾಗ
ಅಕ್ಷರಗಳೆಂಬ ಕಣ್ಣೀರಾಗಿ ಹರಿಯುವ ಈ ಪದ್ಯ
ಹೃದಯ ಖುಷಿಯಿಂದ ತುಂಬಿ ಮೈ ಮನಗಳೇ ನರ್ತಿಸುತ್ತಿರುವಾಗ
ಸಾಲುಗಳೆಂಬ ನಗುವಾಗಿ ಬರುವ ಈ ಗೀತೆ
ಕಣ್ಣು ಕೆಂಪಾಗಿ ತುಟಿಗಳೆಲ್ಲಾ ಆಕ್ರೋಶದಿಂದ ಕಂಪಿಸುತ್ತಿರುವಾಗ
ಸಿಡಿಲಂತೆ ಬಂದೆರುಗುವ ಕೋಪಈ ಕಾವ್ಯ
ಸುತ್ತಮುತ್ತಣ ಚೆಲವು ಮನವ ಆವರಿಸಿ
ಎಲ್ಲೆಲ್ಲೂ ಪ್ರಕೃತಿಯ ಸೊಬಗೇ ಮೇಳೈಸಿದಾಗ
ನಿಸರ್ಗದ ಚಿತ್ರಣದಂತೆ ಈ ಕವನ
ಭಕ್ತಿ ಭಾವದೀ ಮನ ತೇಲಿ ನಯನಗಳಲಿ ದಿವ್ಯ ಮೂರ್ತಿಯ ಕಂಡು
ತಿಳಿಯದೇ ಸುರಿಯುವ ಆನಂದ ಬಾಷ್ಪ ಈ ಗೀತೆ
ಅನುಭವ ನರ ನಾಡಿಗಳಲಿ ತುಂಬಿ ಸೂಳ್ನುಡಿಗಳು
ಸಹಜವಾಗಿ ಹೊರ ಹೊಮ್ಮುವ ಜನಪದವೇ ಈ ಕಬ್ಬ
ಪ್ರಸನ್ನತೆ ತೆಗೆದುಕೊಳ್ಳುವ ಉಸಿರಾಗಿ
ಜಗವೆಲ್ಲಾ ಪ್ರೇಮಮಯವಾಗಿ ಚಿಮ್ಮುವ ಭಾವನೆಗಳ
ಕಾರಂಜಿಯೇ ಈ ಕವನ
ಮಹಾದಾನಂದದಲಿ ಮನಸ್ಸು ದೇಹಗಳು ಮಿಳಿತವಾಗಿ ಯೋಚನಾರಹಿತ ಸ್ಥಿತಿ ತಲುಪಿ
ನಿರ್ಮೋಹ ಅಂತಃಕರಣದಿಂದ ಸ್ಪುರಿಸುವ ಪ್ರವಚನವೇ ಈ ಗೀತೆ
ಹೇಳುವ ವಿಚಾರಗಳ ಭಟ್ಟಿ ಇಳಿಸಿ ಸಾರ ತುಂಬಿದ ಕಷಾಯವೇ ಈ ಪದ್ಯ
ಕವಿ ಮನಸ್ಸಿನ ಸಾಹಿತ್ಯ ಸವಿಯುವ ಓ ಸಹೃದಯರೇ ಬನ್ನಿ ಇಂದು ಕವನ ಕಾವ್ಯ ಕಬ್ಬ ಪದ್ಯ ಗೀತೆ
ಹಾಡುಗಳ ಮೆರವಣಿಗೆ ಮಾಡುವ
ಓದಿ ಅಸ್ವಾದಿಸಿ ಆನಂದಿಸಿ ಜ್ಞಾನಾಮೃತವ ಪಡೆಯುವ
ಭಾವಗಳ ಸಾಗರದಲಿ ತೇಲುತ ಮೋಕ್ಷವ ಹುಡುಕುವ
–ಕೆ.ಎಂ ಶರಣಬಸವೇಶ
ಸೊಗಸಾದ ಆಶಯ ವನ್ನು ಹೊರಹೊಮ್ಮಿಸಿರುವ ಕವನ..ಧನ್ಯವಾದಗಳು ಸಾರ್
ನೀವು ಹೇಳಿರುವ ಪ್ರತಿ ಸಾಲು ನನ್ನ ಅನುಭವಕ್ಕೆ ಬಂದಿದೆ,,,,ಅದರೆ,,ಕವನಗಳಾಗಿ ಹುಟ್ಟಲಿಲ್ಲ ಅಷ್ಟೇ,,,
ನಿಮ್ಮ ಅಭಿವ್ಯಕ್ತಿ ತುಂಬಾ ತುಂಬಾ ಚೆನ್ನಾಗಿ ದೆ
ಚೆನ್ನಾಗಿದೆ. ಇನ್ನಷ್ಟು ಹರಳುಗಟ್ಟಿದ ಭಾವಗಳು ಹೊರಹೊಮ್ಮಿದರೆ ತಾನೇ ತಾನಾಗಿ ಅಡಕಗೊಳ್ಳುವುದು. ಪ್ರಯತ್ನಕೆ ಶುಭಹಾರೈಕೆಗಳು. ಒಳಿತಾಗಲಿ
ಸೊಗಸಾಗಿದೆ
ಕವನ ಹುಟ್ಟುವಾಗಿನ ಮನದ ತಲ್ಲಣಗಳ ಅನಾವರಣ ಸುಂರರವಾಗಿ ಮೂಡಿ ಬಂದಿದೆ. ಅಭಿನಂದನೆಗಳು.
ಕವಿಯ ಮನದೊಳಗಿನ ತುಡಿತ ಸೊಗಸಾಗಿ ಮೂಡಿಬಂದಿದೆ.
ಓದಿ ಪ್ರತಿಕ್ರಿಯೆ ನೀಡಿದ ಬಿ.ಆರ್ ನಾಗರತ್ನ ಮೇಡಂ,ವಿದ್ಯಾ ಮೇಡಂ, ನಯನ ಬಜಕೂಡ್ಲು ಮೇಡಂ ಹಾಗೂ ಮಂಜುರಾಜ್ ಅವರಿಗೆ ಧನ್ಯವಾದಗಳು. ನಮ್ಮಗಳ ಬರಹ ಪ್ರಕಟಿಸುತ್ತಿರುವ ಹೇಮಾಮಾಲ ಮೇಡಂ ಗೂ ಧನ್ಯವಾದಗಳು