ವಾಟ್ಸಾಪ್ ಕಥೆ 4:ಜಿಪುಣತನ ಜೀವಕ್ಕೇ ತುತ್ತಾಯಿತು..
ಒಂದೂರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನ ಬಳಿ ಅಪಾರವಾದ ಆಸ್ತಿಪಾಸ್ತಿ, ಹಣಕಾಸಿನ ಸಂಪತ್ತು ಇದ್ದರೂ ಅವನಿಗೆ ಅತಿಯಾದ ಆಸೆಯಿತ್ತು. ಇನ್ನಷ್ಟು ಗಳಿಸಬೇಕು, ಮತ್ತಷ್ಟು ಶ್ರೀಮಂತನಾಗಬೇಕೆಂದು. ಅವನು ಎಲ್ಲ ರೀತಿಯಿಂದ ಗಳಿಸಿದ ಹಣದಿಂದ ಬಂಗಾರ, ಬೆಳ್ಳಿ, ವಜ್ರಗಳನ್ನು ಕೊಂಡು ತನ್ನ ಮನೆಯ ನೆಲಮಾಳಿಗೆಯ ಗುಪ್ತ ಕೊಠಡಿಯಲ್ಲಿ ಗುಟ್ಟಾಗಿ ಸಂಗ್ರಹಮಾಡಿ ಇಡುತ್ತಿದ್ದ. ಅಲ್ಲಿಗೆ ಆತನ ಹೊರತು ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ರಾತ್ರಿಕಾಲದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ತಾನೊಬ್ಬನೇ ಮೇಣದ ಬತ್ತಿಯೊಂದನ್ನು ಕೈಯಲ್ಲಿ ಹಿಡಿದು ನೆಲಮಾಳಿಗೆಗೆ ಹೋಗುತ್ತಿದ್ದ. ಬೀಗ ತೆಗೆದು ಕೋಣೆಯೊಳಗೆ ಪ್ರವೇಶಿಸಿದೊಡನೆ ಒಳಗಿನಿಂದ ಬಾಗಿಲು ಭದ್ರಪಡಿಸಿ ತನ್ನ ಭಂಡಾರವನ್ನೆಲ್ಲ ಒಂದೊಂದಾಗಿ ಪರೀಕ್ಷಿಸುತ್ತಿದ್ದ. ಅವುಗಳನ್ನು ತನ್ನ ಮನಸ್ಸಿಗೆ ಸಮಾಧಾನವಾಗುವವರೆಗೆ ನೋಡಿ ಸಂತೋಷಪಟ್ಟು ಮತ್ತೆ ಕೊಠಡಿಯನ್ನು ಮೊದಲಿನಂತೆ ಬೀಗಹಾಕಿ ಭದ್ರಪಡಿಸಿ ಹಿಂದಿರುಗಿ ಬಂದು ಮಲಗುತ್ತಿದ್ದ. ಒಂದು ದಿನ ತನ್ನ ಸಂಪತ್ತಿನ ದರ್ಶನ ಮಾಡದಿದ್ದರೂ ಅವನಿಗೆ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.
ಒಂದು ದಿನ ಹೀಗೇ ರಾತ್ರಿಕಾಲದಲ್ಲಿ ತನ್ನ ನೆಲಮಾಳಿಗೆಯ ಭಂಡಾರವನ್ನು ಪ್ರವೇಶಿಸಿದ. ಒಳಗಿನಿಂದ ಬೀಗಹಾಕಿದ ನಂತರ ತನ್ನ ಸಂಗ್ರಹವನ್ನು ಪರೀಕ್ಷಿಸುತ್ತಾ ಸ್ವಲ್ಪ ಸಮಯ ಕಳೆದ. ಅಷ್ಟರಲ್ಲಿ ಹೊರಗಡೆ ಏನೋ ಶಬ್ಧವಾದಂತಾಯಿತು. ಇದರಿಂದ ಶ್ರೀಮಂತನಿಗೆ ಅನುಮಾನವುಂಟಾಯಿತು. ತನ್ನ ಕೈಯಲ್ಲಿದ್ದ ಮೇಣದ ಬತ್ತಿಯನ್ನು ತಾನೇ ನಂದಿಸಿಬಿಟ್ಟ. ಅದರ ಬೆಳಕು ನೋಡಿ ಯಾರಾದರೂ ಅತ್ತಕಡೆ ಬಂದಾರೆಂಬ ಆತಂಕ. ಗಡಿಬಿಡಿಯಲ್ಲಿ ಅವನ ಬೀಗದ ಕೈ ಕತ್ತಲೆಯಲ್ಲಿ ಯಾವುದೋ ಪೆಟಾರಿಯೊಳಕ್ಕೆ ಬಿದ್ದುಹೋಯಿತು. ಆತ ಬೆಂಕಿಪೊಟ್ಟಣವನ್ನು ತೆಗೆದುಕೊಂಡು ಹೋಗಿರಲಿಲ್ಲ. ಹಾಗಾಗಿ ಮೇಣದಬತ್ತಿಯನ್ನು ಮತ್ತೆ ಬೆಳಗಿಸಲು ಆಗದೇ ಕತ್ತಲೆಯಲ್ಲಿಯೇ ಎಲ್ಲಕಡೆ ತಡಕಾಡತೊಡಗಿದ. ಬೀಗ ತೆಗೆದು ಹೊರಗೆ ಹೋಗಲು ಅವನಿಗೆ ಸಾಧ್ಯವಾಗಲಿಲ್ಲ. ಶಬ್ಧಮಾಡುವ ಹಾಗಿಲ್ಲ. ಹೊರಗಿನವರಿಗೆ ಸಂಗ್ರಹದ ಗುರುತಾಗಬಾರದು. ಹೀಗೇ ರಾತ್ರಿಯೆಲ್ಲಾ ಪರದಾಡಿದ. ಆ ಕೊಠಡಿಗೆ ಎಲ್ಲಿಂದಲೂ ಬೆಳಕು ಬಾರದಂತೆ ಕಟ್ಟಿಸಿದ್ದರಿಂದ ಬೆಳಗಾದದ್ದೂ ತಿಳಿಯಲಿಲ್ಲ. ಸುಸ್ತಾಗಿ ಹಾಗೇ ನಿದ್ರೆ ಮಾಡಿದ. ಹೊರಗಡೆಯಿಂದ ಮನೆಯವರನ್ನು ಕರೆಯೋಣವೆಂದು ಕೊನೆಯ ಪ್ರಯತ್ನ ಮಾಡಿದ. ಕೊಠಡಿಯ ಗೋಡೆಗಳು ಸಾಕಷ್ಟು ದಪ್ಪವಾಗಿ ನಿರ್ಮಾಣವಾಗಿದ್ದುದರಿಂದ ಅವನ ಕೂಗು ಯಾರಿಗೂ ಕೇಳಿಸಲೂ ಇಲ್ಲ. ಜೊತೆಗೆ ನೆಲಮಾಳಿಗೆ ಇರುವುದು ಬೇರೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ಅವನು ಅಲ್ಲಿಯೇ ಪ್ರಾಣ ಬಿಡಬೇಕಾಯಿತು.
ಮನೆಯವರು ಶ್ರಿಮಂತನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಸಿಗದಿದ್ದಾಗ ಸುಮ್ಮನಾಗಿಬಿಟ್ಟರು. ಹೀಗೇ ಹಲವು ವರ್ಷಗಳು ಕಳೆದವು ಶ್ರೀಮಂತನ ಮಕ್ಕಳು ಬೇರೆ ಬೇರೆ ಕಡೆಗಳಲ್ಲಿ ತಮ್ಮ ನೆಲೆ ಕಂಡುಕೊಂಡರು. ಆದ್ದರಿಂದ ತಮ್ಮ ತಂದೆಯ ಹಳೇಮನೆಯನ್ನು ಯಾರಿಗೋ ನಗರದ ಸಾಹುಕಾರರಿಗೆ ಮಾರಾಟಮಾಡಿದರು. ಮನೆಯನ್ನು ಕೊಂಡ ಹೊಸ ಮಾಲೀಕ ಆ ಮನೆಯನ್ನೇ ಪುನರ್ನಿರ್ಮಾಣ ಮಾಡಲು ಆಲೋಚಿಸಿದ. ಹಾಗಾಗಿ ಹಳೆಯ ಕಟ್ಟಡವನ್ನು ಪೂರ್ತಿಯಾಗಿ ಬೀಳಿಸಿದ. ನೆಲಮಾಳಿಗೆಯು ಅವನಿಗೆ ಕಾಣಿಸಿತು. ಕುತೂಹಲದಿಂದ ಅದನ್ನೂ ಅಗೆದು ತೆಗೆದಾಗ ಅಚ್ಚರಿಯೇ ಕಾಣಿಸಿತು. ಅಲ್ಲಿ ಸಂಗ್ರಹಮಾಡಿ ಹಲವಾರು ಪೆಟ್ಟಿಗೆಗಳಲ್ಲಿ ತುಂಬಿಸಿ ಇಡಲಾಗಿದ್ದ ಬೆಳ್ಳಿ, ಬಂಗಾರ, ಆಭರಣಗಳನ್ನು ಕಂಡು ತುಂಬ ಸಂತೋಷವಾಯಿತು. ಮನುಷ್ಯನೊಬ್ಬನ ಅಸ್ತಿಪಂಜರ ಕೂಡ ಅಲ್ಲಿತ್ತು. ಹೊಸ ಕಟ್ಟಡವನ್ನು ಕಟ್ಟುವ ಮುಂಚೆ ದೋಷನಿವಾರಣೆಗಾಗಿ ಪೂಜೆಗಳನ್ನು ಮಾಡಿಸಿ ಸಂಪತ್ತನ್ನೆಲ್ಲ ಹೊಸ ಮಾಲೀಕ ಅನುಭವಿಸಿದ.
ಶ್ರೀಮಂತ ಅಷ್ಟೆಲ್ಲ ಸಂಪತ್ತನ್ನು ಗಳಿಸಿದ್ದರೂ ತನ್ನ ಅತಿಯಾಸೆ, ಜಿಪುಣತನದಿಂದ ಯಾವುದನ್ನೂ ಅನುಭವಿಸದೆ ನೆಲಮಾಳಿಗೆಯಲ್ಲೇ ಹೆಣವಾದ.
–ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ನೀತಿಯಿಂದ ಕೂಡಿದ ಕಥೆ
ಅತೀ ಆಸೆ ಮಾಡಬಾರದು ಅಲ್ವಾ …ನೀತಿಯ ಕಥೆ ಸೂಪರ್
ವಾಟ್ಸಾಪ್ ನಲ್ಲಿ ಬರುವ ಕಥೆಯ ಸಂಗ್ರಹದ ಜೊತೆಗೆ ಸೂಕ್ತ ಪೂರಕ ಚಿತ್ರ ರಚನೆಯು ಬಹಳ ಸೊಗಸಾಗಿ ಮೂಡಿಬಂದಿದೆ ನಾಗರತ್ನ ಮೇಡಂ…ಧನ್ಯವಾದಗಳು
ಪ್ರೀತಿ ಯ ಪ್ರತಿಕ್ರಿಯೆ ಗಳಿಗೆ ಹೃತ್ಪರ್ವಕ ಧನ್ಯವಾದಗಳು ನಯನ ,ಮೇಡಂ ಶಂಕರಿ, ಮೇಡಂ ಹಾಗೂ ಆಶಾನೂಜಿ ಮೇಡಂ. ಅವರುಗಳಿಗೆ…
ಧನ್ಯವಾದಗಳು ಪದ್ಮಿನಿ ಮೇಡಂ