ಬೆಳಕಿನ ಹಬ್ಬ
ಕುಳಿರ್ಗಾಳಿ ಕೈಗೂಡಿ
ಕಿರುವರ್ಷ ಜೊತೆಗೂಡಿ
ಮಿಂಚಿನಾರತಿ ಎತ್ತಿತಾ ಮೇಘಾವಳಿ
ಗಂಗೆಗಾರತಿ ಬೆಳಗಿ
ತೈಲಾಭ್ಯಂಜನದ ಜೊತೆಗೆ
ಸಿಹಿಭಕ್ಷವನು ತಿನುವ ದೀಪಾವಳಿ
ಹೊಸ ಬಟ್ಟೆಗಳ ತೊಟ್ಟು
ಹರುಷದಲಿ ಸಿಂಗರಿಸಿ
ಲಕ್ಷ್ಮಿಪೂಜೆಯ ಗೈವ ದೃಶ್ಯಾವಳಿ
ಬೆಳಗುತಿಹ ಪ್ರಣತಿಗಳ
ಹೊನ್ನ ಬೆಳಕಿನ ನಡುವೆ
ಹರುಷದಾ ಸಿರಿ ಸುರಿವ ರತ್ನಾವಳಿ
ಬಲಿಯೇಂದ್ರನೈತಂದು
ಪೂಜೆಗೊಳ್ಳುವ ಪರಿಯು
ಅತಿಚಂದದಾರತಿಯ ಪ್ರಭಾವಳಿ
ಗೋಮಾತೆ ತುಳಸಿಯರ
ಆರಾಧಿಸುವ ಭಕ್ತಿ
ನೀಡುತಲಿ ಜಗಬೆಳಗೊ ಚಂದ್ರಾವಳಿ
ಪ್ರೀತಿ ಸೌಹಾರ್ದಗಳ
ತೈಲವನು ತುಂಬಿಸುತ
ಮನಸು ಬೆಳಗಿಸೊ ಈ ಜ್ಯೋತ್ಸ್ನಾವಳಿ
ದ್ವೇಷ ಅಸೂಯೆ ತಮವ
ತೊಲಗಿಸಿ ಬೆಳಗಿಸುತ ಸುಖ
ಶಾಂತಿ ತುಂಬುವ ಬೆಳಕಿನ ದೀಪಾವಳಿ
–ಶಂಕರಿ ಶರ್ಮ, ಪುತ್ತೂರು
ಹಬ್ಬದಾಚರಣೆಯ ಪ್ರಾಮುಖ್ಯತೆಯನ್ನು ಸುಂದರ ಪದಪುಂಜಗಳಲ್ಲಿ ಹಿಡಿದಿಟ್ಟಿರುವ ಪರಿ ಸೊಗಸಾಗಿದೆ. ಅಭಿನಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ
ಚಂದದ ಕವನ
ಧನ್ಯವಾದಗಳು ಕೃಷ್ಣಪ್ರಭಾ ಮೇಡಂ
ಸೊಗಸಾದ…ಕವನ…ಅಭಿನಂದನೆಗಳು.. ಶಂಕರಿ… ಮೇಡಂ.
ಧನ್ಯವಾದಗಳು ನಾಗರತ್ನ ಮೇಡಂ
ಪ್ರಾಸಗಳೊಂದಿಗಿನ ಜ್ಯೋತ್ಸ್ನಾವಳಿ ಚೆನ್ನಾಗಿದೆ