ಕರ್ಮ ಹಿಂದಿರುಗಿದಾಗ….!
ಮಗುವನ್ನು ತದೇಕಚಿತ್ತದಿಂದ ಹಾಗೇ ನೋಡುತ್ತ ಕೂತ ಸಹನಾಳಿಗೆ ಬಾಬುವಿನ ನೆನಪು ಕಾಡತೊಡಗಿತು. ‘ ವೈನಿ ಬಾ, ಕೂಡು ‘ ಎನ್ನುವ ಅವನ ದಿನನಿತ್ಯದ ಈ ಪದಗಳು ಕಿವಿಗಳಿಗೆ ಅಪ್ಪಳಿಸಿ ಹಿಂಸಿಸುತ್ತಿತ್ತು. ಸಹನಾಳ ಮೈದುನ ಬಾಬು. ಹುಟ್ಟಿನಿಂದ ಮಾನಸಿಕ ಅಸ್ವಸ್ಥ. ತಂದೆ ತಾಯಿಯ ನಿಧನದ ನಂತರ ಅಣ್ಣ ಉಮೇಶನ ಆರೈಕೆಯಲ್ಲೇ ಬಾಬು ಬೆಳೆದನು. ಉಮೇಶನ ಒಳ್ಳೆಯತನ, ಸಜ್ಜನಿಕೆ ಹಾಗು ಎಲ್ಲರ ಬಗೆಗಿನ ಕಾಳಜಿ ಸಹನಾಳ ಹೃದಯ ಗೆದ್ದಿತ್ತು. ಹಾಗಾಗಿ ಬಾಬುವಿನ ಬಗ್ಗೆ ತಿಳಿದಿದ್ದರೂ ಸಹ ಸಹನಾ ಉಮೇಶನನ್ನು ಮದುವೆಯಾಗಲು ಒಪ್ಪಿದ್ದಳು.
ಉಮೇಶನಿಗೆ ಸಹನಾಳ ಬಗ್ಗೆ ಹೆಮ್ಮೆಯಿತ್ತು. ಬಾಬುವಿನ ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಉಮೇಶನ ಎಷ್ಟೋ ಮದುವೆ ಮಾತುಕತೆಗಳು ಅರ್ಧಕ್ಕೆ ನಿಂತು ಹೋಗುತ್ತಿದ್ದವು. ಈ ಸಂದರ್ಭದಲ್ಲಿ ಸಹನಾ ಉಮೇಶನ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೇನೆಂದು ಮುಂದೆ ಬಂದಾಗ, ಅವಳ ಬಗ್ಗೆ ಹೆಮ್ಮೆ, ಗೌರವ ಮತ್ತು ಪ್ರೀತಿ ಚಿಗುರೊಡೆದಿತ್ತು.
ಮದುವೆಯ ಹೊಸದರಲ್ಲಿ ಎಲ್ಲವೂ ಚೆನ್ನಾಗಿತ್ತು. ಬಾಬುವಿನ ಬಗ್ಗೆ ತಿಳಿದಿದ್ದರೂ ಸಹ ಉಮೇಶನ ಬಾಳಿಗೆ ಬೆಳಕಾಗಿ ಬಂದ ತ್ಯಾಗಮಯಿ ಹೆಣ್ಣು ಎಂಬ ಪಟ್ಟವನ್ನು ಅಲಂಕರಿಸಿ ಸಂತೋಷಪಟ್ಟಿದ್ದು ಆಯಿತು. ಉಮೇಶ ಎಂದಿನಂತೆ ಕೆಲಸಕ್ಕೆ ಹೋಗತೊಡಗಿದ. ಮನೆಯ ಹಾಗು ಬಾಬುವಿನ ಸಂಪೂರ್ಣ ಜವಾಬ್ದಾರಿ ಸಹನಾಳ ಹೆಗಲಿಗೆ ಬಿತ್ತು.
ಒಂದು ಗಂಟೆಯೂ ಬಾಬು ಇವಳನ್ನು ಬಿಟ್ಟು ಇರುತ್ತಿರಲಿಲ್ಲ. ಇಪ್ಪತ್ತೆರಡರ ಪ್ರಾಯದ ಹುಡುಗನಾದರೂ, ಐದಾರು ವರ್ಷದ ಹುಡುಗನಂತೆ ಸಹನಾಳ ಸುತ್ತಮುತ್ತ ಗಿರಕಿ ಹೊಡೆಯುತ್ತಿದ್ದ, ‘ವೈನಿ ಕೂಡು ಬಾ’ ಎಂದು ತನ್ನ ತೊದಲು ಮಾತುಗಳಿಂದ ಕರೆದು ತನ್ನ ಜೊತೆ ಆಟ ಆಡಬೇಕೆಂದು ಚೆಂಡನ್ನು ಹಿಡಿದು ಹಠ ಹಿಡಿಯುತ್ತಿದ್ದ. ಸಹನಾ ಹಾಗು ಉಮೇಶ ಹೊರಗೆ ಎಲ್ಲಿ ಹೋದರೂ ಬಾಬುವನ್ನು ಕರೆದುಕೊಂಡು ಹೋಗಬೇಕಿತ್ತು. ಅಲ್ಲಿಯೂ ಸಹ ಅವನದೇ ಮಾತು. ಗಂಡ ಹೆಂಡತಿ ಕೂತು ಮಾತನಾಡುವುದು ವಿರಳವೇ ಆಗಿ ಹೋಯ್ತು. ಅತ್ತೆ-ಮಾವ, ಭಾವ, ನಾದಿನಿ ಇಲ್ಲದ ಮನೆಯಾದ್ದರಿಂದ ತನ್ನ ತವರಿಗೆ ಹೋಗಬೇಕಾದರೂ ಬಾಬುವನ್ನು ಕರೆದುಕೊಂಡು ಹೋಗಬೇಕಿತ್ತು. ಸಹನಾಳಿಗೆ ಎಲ್ಲಿಯೂ ನೆಮ್ಮದಿ, ಏಕಾಂತ ಸಿಗದ ಹಾಗೆ ಆಗಿಬಿಟ್ಟಿತ್ತು.
ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳುವ ಕೇಂದ್ರಗಳು ಬಹಳಷ್ಟಿದ್ದರೂ ಉಮೇಶನ ಎದುರು ಹೇಳುವ ಧೈರ್ಯವಿರಲಿಲ್ಲ. ಮದುವೆಯಾದ ಮೇಲೆ ಬಾಬು ತನ್ನ ಜವಾಬ್ದಾರಿ ಎಂದು ಹೇಳಿ ಉಮೇಶನಿಗೆ ಮಾತು ಕೊಟ್ಟಾಗಿತ್ತು. ಈಗ ಉಮೇಶ ತನ್ನ ಬಗ್ಗೆ ಏನೆಂದು ಕೊಂಡಾರು ಎಂಬ ಅಳುಕು. ತನ್ನನ್ನು ‘ಮಮತಾಮಯಿ’, ‘ಸಹನಾಮಾಯಿ’ ಎಂದು ಕರೆಯುವ ಬಂಧು ಬಾಂಧವರ ದೃಷ್ಟಿಯಲ್ಲಿ ಸಣ್ಣವಳಾಗಿ ಬಿಡುತ್ತೇನೇನೋ ಎಂಬ ಭಯ ಸಹನಾಳ ಮನಸ್ಸಿನಲ್ಲಿ ಮೂಡ ತೊಡಗಿತ್ತು. ಮದುವೆಯಾಗಿ ಒಂದು ವರ್ಷ ಕಳೆದರೂ ಗಂಡನ ಜೊತೆ ಎಲ್ಲಿಯೂ ಹೋಗಲು ಆಗುತ್ತಿಲ್ಲವಲ್ಲ ಎನ್ನುವ ನಿಸ್ಸಹಾಯಕ ಭಾವ ಬೇರೂರತೊಡಗಿತು.
ಹೇಗಾದರೂ ಮಾಡಿ ಬಾಬುವಿನ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕು. ಇಲ್ಲದಿದ್ದರೆ ತಾನು ಬದುಕಿರು ವವರೆಗೂ ಸುಖ, ಶಾಂತಿ, ನೆಮ್ಮದಿ ಮರೀಚಿಕೆಯೇ ಆದೀತು ಎಂದು ಯೋಚಿಸುತ್ತಾ ಅದೊಂದು ದಿನ ಆ ಕಠೋರ ನಿರ್ಧಾರಕ್ಕೆ ಬಂದೇ ಬಿಟ್ಟಳು ಸಹನ.
ಉಮೇಶ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ . ಊರಿನಲ್ಲಿ ಜಾತ್ರೆಯ ಸಮಯವಾಗಿದ್ದರಿಂದ ಎಲ್ಲೆಲ್ಲೂ ಜನವೋ ಜನ. ಅಕ್ಕಪಕ್ಕದ ಹಳ್ಳಿಗಳಿಂದ ಅಪರಿಚಿತರ ದಂಡೇ ಜಾತ್ರೆಗೆ ಬಂದಿತ್ತು. ಬಾಬುನನ್ನು ಕರೆದುಕೊಂಡು ಆ ರಾತ್ರಿ ಊರ ಹೊರಗಿನ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಹಳಿಯ ಮೇಲೆ ಬಾಬುನನ್ನು ಬಿಟ್ಟು ಬಂದಳು. ಬಾಬು ಸಹನಾಳ ಒಂದು ಮಾತನ್ನೂ ಮೀರುತ್ತಿರಲಿಲ್ಲ. ಅದನ್ನೇ ಉಪಯೋಗಿಸಿಕೊಂಡು, ತಾನು ಬಂದು ಕರೆಯುವವರೆಗೂ ರೈಲ್ವೇ ಹಳಿಯ ಮೇಲೆ ಕೂತಿರಬೇಕೆಂದು ಹೇಳಿ ಬಂದಳು. ರಾತ್ರಿ 11:30 ರ ರೈಲು ಹೋದ ನಂತರ, ಬಾಬುನನ್ನು ಹುಡುಕುವ ನಾಟಕವಾಡಲು ಶುರುವಿಟ್ಟುಕೊಂಡಳು. ಅಕ್ಕಪಕ್ಕದವರು ಎಷ್ಟು ಹುಡುಕಿದರೂ ಬಾಬು ಸಿಗಲೇ ಇಲ್ಲ.
ಬೆಳಿಗ್ಗೆ ಊರಿಗೆ ಬಂದ ತಕ್ಷಣ ಉಮೇಶನಿಗೆ ಬರಸಿಡಿಲು ಬಡಿದಂತಾಯಿತು. ಸಾಕಷ್ಟು ಸಮಯ ಹುಡುಕಿದ ನಂತರ ಪೊಲೀಸ್ ಠಾಣೆಗೆ ದೂರು ಕೊಟ್ಟು ಬಂದನು. ಸಹನಾಳ ಮೊಸಳೆ ಕಣ್ಣೀರು ಅವನನ್ನು ಕರಗಿಸಿಬಿಟ್ಟಿತು. ಅವಳ ಬಗ್ಗೆ ಅತ್ಯಂತ ಪ್ರೀತಿ, ನಂಬಿಕೆ ಹಾಗು ಹೆಮ್ಮೆ ಇದ್ದುದ್ದರಿಂದ ಅವಳ ಮೇಲೆ ಎಳ್ಳಷ್ಟೂ ಸಂಶಯ ಮೂಡಲೇ ಇಲ್ಲ!
ತನ್ನ ಮಗುವೆಂದೇ ಅಕ್ಕರೆಯಿಂದ ಸಾಕಿದ, ತನ್ನ ಅತ್ಯಂತ ಪ್ರೀತಿಯ ತಮ್ಮನ ನೆನೆದು ಅಳುತ್ತಿದ್ದ ಉಮೇಶನನ್ನು ನೋಡಿ ಕರುಳು ಹಿಂಡಿದಂತೆ ಆಗುತ್ತಿತ್ತು. ತನ್ನ ತಂದೆ ಸಾಯುವ ಮುನ್ನ ಬಾಬುನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭಾಷೆ ಕೊಟ್ಟದ್ದು ನೆನಪಾಗಿ ಹೃದಯಕ್ಕೆ ಚೂರಿ ಹಾಕಿದಂತೆ ಆಗುತ್ತಿತ್ತು. ‘ಅಪ್ಪಾ! ನಾ ನಿಂಗ ಮಾತ್ ಕೊಟ್ಟ ಹಾಂಗ ನಡೀಲಿಲ್ಲ. ನನ್ನ ಕ್ಷಮಿಸ್ ಬಿಡೋಪ್ಪ’ಎಂದು ಅಪ್ಪನ ಚಿತ್ರಪಟದ ಎದುರು ಕುಳಿತು ಗೋಳಾಡತೊಡಗಿದ.
ಸಹನಾಳಿಗೆ ಒಳಗೊಳಗೇ ಅದೇನೋ ವಿಕೃತ ಆನಂದ. ತಾನು ಇಂದಿನಿಂದ ಸ್ವತಂತ್ರಳು. ತನ್ನ ಗಂಡನ ಜೊತೆ ಎಲ್ಲಿಗಾದರೂ ಹೋಗಬಹುದು. ಸಂಜೆ ಸಮಯ, ತನ್ನ ಗಂಡ ಕೆಲಸದಿಂದ ಹಿಂದಿರುಗಿದಾಗ ಆರಾಮವಾಗಿ ಹರಟೆ ಹೊಡೆಯಬಹುದು ಎಂದೆಲ್ಲಾ ಯೋಚಿಸುತ್ತಾ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಳು. ಆದರೂ ಗಂಡನ ಮೇಲೆ ಅಪರಿಮಿತ ಪ್ರೇಮವನ್ನು ಹೊಂದಿದ್ದ ಅವಳಿಗೆ ಅವನ ನೋವು ಸಹಿಸಲಾಗುತ್ತಿರಲಿಲ್ಲ.
ಸರಿಯಾಗಿ ಬೆಳಿಗ್ಗೆ ಹತ್ತು ಗಂಟೆಗೆ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇದ್ದ ಪೊಲೀಸ್ ಠಾಣೆಯಿಂದ ತಕ್ಷಣ ಬಂದು ಕಾಣುವಂತೆ ಕರೆ ಬಂದಿತು. ಓಡೋಡಿ ಹೋದ ಉಮೇಶನಿಗೆ ಕೆಟ್ಟ ಸುದ್ದಿಯೊಂದು ಕಾದಿತ್ತು. ರೈಲ್ವೇ ಹಳಿಯ ಮೇಲೆ ನಜ್ಜು ಗುಜ್ಜಾಗಿ ಬಿದ್ದಿದ್ದ ಒಂದು ಹೆಣ!
22-23 ವರ್ಷದ ಯುವಕನ ದಪ್ಪಗಿನ ದೇಹ. ಕಪ್ಪು ಪ್ಯಾಂಟ್, ಹರಿದು ಚಿಂದಿಯಾಗಿದ್ದ ನೀಲಿ ಶರ್ಟ್ ನ ಮಧ್ಯೆ ಎದೆಯ ಎಡಭಾಗದ ಮೇಲೆ ‘ ವೈನಿ ಅವ್ವ’ ಎಂಬ ಹಚ್ಚೆ, ತಾನು ‘ಯಾರು’ ಎಂದು ಚೀರಿ ಹೇಳುತ್ತಿರುವಂತೆ ಭಾಸ ವಾಗುತ್ತಿತ್ತು.
‘ಇವ ನನ್ ತಮ್ಮನೇ ನೋಡ್ರಿ, ಹೋದ್ ವರ್ಷದ್ ಜಾತ್ರ್ಯಾಗ ಚಂಡಿ ಹಿಡಿದ್ ಎದಿ ಮ್ಯಾಲೆ ಈ ಹಚ್ಚಿ ಹಾಕ್ಸ್ಕೊಂಡ್ಯಾನ. ಅಯ್ಯೋ! ಬಾಬು, ಇದೇನ್ ಆತೋ ನಿಂಗ?’ ಎಂದು ಕರುಳು ಹೊರಗೆ ಬರುವ ಹಾಗೆ ಉಮೇಶ ರೋಧಿಸತೊಡಗಿದ.
ಹದಿನೈದು ದಿನಗಳ ಶ್ರಾದ್ಧ ಕಾರ್ಯಕ್ರಮಗಳೆಲ್ಲ ಮುಗಿದು ಹೋಯಿತು. ಕಾರ್ಯಕ್ರಮಕ್ಕೆ ಬಂದ ಬಂಧುಮಿತ್ರರೆಲ್ಲಾ ಉಮೇಶ ಹಾಗು ಸಹನಾಳಿಗೆ ಸಾಂತ್ವನ ಹೇಳಿ, ಸಹನಾಳ ತ್ಯಾಗವನ್ನು ಕೊಂಡಾಡಿ ಹೋದರು. ಮಾನಸಿಕ ಅಸ್ವಸ್ಥನಾಗಿದ್ದ ಬಾಬು ಜಾತ್ರೆಯ ಸಂದರ್ಭದಲ್ಲಿ ಮನೆಯ ದಾರಿ ತಪ್ಪಿ ರೈಲ್ವೆ ಹಳಿಗಳ ಕಡೆಗೆ ಹೋಗಿ ದುರಂತ ಅಂತ್ಯ ಕಂಡದ್ದು ಕ್ರಮೇಣ ಎಲ್ಲರ ಮನಸ್ಸಿನಿಂದ ಮಾಸಿಹೋಯಿತು.
ಕೆಲವೇ ತಿಂಗಳುಗಳಲ್ಲಿ ಸಹನಾ ತಾಯಿಯಾದಳು. ಹುಟ್ಟಿದಾಗ ಮಗು ಸಾಮಾನ್ಯ ತೂಕಕ್ಕಿಂತ ಕಡಿಮೆಯಿದ್ದ ಕಾರಣ ಸಹನಾ ಹಾಗು ಉಮೇಶನ ಚಿಂತೆಯ ಯಾತ್ರೆ ಶುರುವಿಟ್ಟುಕೊಂಡಿತು. ತಿಂಗಳುಗಳು ಕಳೆದಂತೆಲ್ಲ ತಮ್ಮ ಮಗು ಸಾಮಾನ್ಯ ಮಗುವಿನಂತಿಲ್ಲ ಎಂಬ ಸತ್ಯ ತಿಳಿಯತೊಡಗಿತು. ಪ್ರತಿಷಿತ ಖಾಸಗಿ ಆಸ್ಪತ್ರೆಯ ಪರಿಣತ ವೈದ್ಯರು, ‘ನಿಮ್ಮ ಮಗು ಎಲ್ಲರಂತಲ್ಲ. ಹಿ ಇಸ್ ಯೆ ಸ್ಪೆಷಲ್ ಚೈಲ್ಡ್ ‘ ಎಂದು ಹೇಳಿ ಅಂತಹ ಮಗುವಿನ ಆರೈಕೆ, ಮನೆಯವರ ನಡವಳಿಕೆ ಹೇಗಿರಬೇಕು ಹಾಗು ವಿಶೇಷ ತರಬೇತಿಗಳ ಬಗ್ಗೆ ಮಾಹಿತಿ ಕೊಟ್ಟು ಕಳಿಸಿಬಿಟ್ಟರು.
ಅಂದು ರಾತ್ರಿ ಉಮೇಶ ಮಲಗುವ ಮುನ್ನ, ‘ಸಹನಾ, ನಿನ್ ಪ್ರೀತಿ ಆರೈಕಿ ಇನ್ನು ಬೇಕು ಅಂತಾನ ಬಾಬು ನಿನ್ ಹೊಟ್ಟೀಲಿ ಹುಟ್ಯಾನ ಅಂತ ಅನ್ಸತ್ತದ’ಎಂದು ಹೇಳಿ ಮಲಗಿಬಿಟ್ಟ. ಪಕ್ಕದಲ್ಲಿ ಮಲಗಿದ್ದ ಮಗು ನಿದ್ರಿಸುತ್ತಲೇ ಆಗಾಗ್ಗೆ ಸಣ್ಣ ನಗೆ ಬೀರುತ್ತಿತ್ತು. ಆ ಒಂದೊಂದು ಕಿರುನಗೆ ಈಟಿಯಂತೆ ಸಹನಾಳನ್ನು ಚುಚ್ಚುತ್ತಲ್ಲಿತ್ತು. ‘ ವೈನಿ, ನಾ ಮತ್ ಬಂದೀನಿ. ಕೂಡು ಬಾ ಆಟ ಆಡೋಣ’ ಎಂದು ಕರೆದಾಂಗೆ ಆಗುತ್ತಿತ್ತು.
‘ಗಲ್ಲಿಗೆ ಹಾಕಿದ್ದರೂ ಚಿಂತೆ ಇರಲಿಲ್ಲ, ಈ ಪರಿಯ ಶಿಕ್ಷೆ ಶತ್ರುವಿಗೂ ಬೇಡ. ನಾ ಮಾಡಿದ ಕರ್ಮ ತಿರುಗಿ ಬಂದು ನನ್ನನ್ನೇ ಸುತ್ತಿತಲ್ಲ! ಮನಸ್ಸಿನಲ್ಲಿ ಆಗುತ್ತಿರುವ ತಳಮಳ, ದುಃಖ, ಸಂಕಟ, ವೇದನೆ ಯಾರಿಗೂ ಹೇಳುವಂತಿಲ್ಲ, ಅನುಭವಿಸದೆ ಬಿಡುವಂತಿಲ್ಲ. ಬಹುಶಃ ಜಗತ್ತಿನಲ್ಲಿ ಇದಕ್ಕಿಂತ ಘೋರವಾದ ಶಿಕ್ಷೆ ಮತ್ತೊಂದಿಲ್ಲವೇನೋ?!’ ಎಂದು ತನ್ನನ್ನು ತಾನು ಶಪಿಸಿಕೊಳ್ಳುತ್ತಾ ನಿದ್ರೆಗೆ ಜಾರಿದಳು ಸಹನ.
–ಮಾಲಿನಿ ವಾದಿರಾಜ್
ಹೃದಯಸ್ಪರ್ಶಿ ಕಥೆ
ತಾನೊಂದು ಬಗೆದರೆ ದೈವವೊಂದು ಬಗಯಿತೆಂಬ …ಗಾದೆಯನ್ನು ನೆನಪಿಸುವುದರ ಜೊತೆಗೆ… ಆಲೋಚನೆಯು..ತನಗೇ ತಿರುಗು ತಾಣವಾಗಿದ್ದು… ಓದಿ ಮನಸ್ಸು ಆದ್ರವಾಯಿತು..ಚಿಕ್ಕದಾದ ರೂ ಚೊಕ್ಕ ನಿರೂಪಣೆ… ಗಮನಸೆಳೆಯಿತು..ಹಾಗೆ ಸಂದೇಶವನ್ನು ಸಾರಿದೆ..ಧನ್ಯವಾದಗಳು ಸೋದರಿ.
ಮಾಡಿದ್ದುಣ್ಣೋ ಮಹಾರಾಯ ಮನಮಿಡಿಯುವ ಕಥೆ ವಂದನೆಗಳು
ಮೌಲಿಕವಾದ ತಾತ್ಪರ್ಯವುಳ್ಳ ಸೊಗಸಾದ ಕಥೆ. ಚೆಂದದ ನಿರೂಪಣೆ.
ಕಥೆ ಮನ ಮಿಡಿಯಿತು. ಎಲ್ಲ ಪಾತ್ರಗಳಿಗಾಗಿ.
ಮನಮುಟ್ಟುವ ಕಥೆ…ಸೊಗಸಾದ ನಿರೂಪಣೆ.
ಅಂತರಂಗದ ಆತ್ಮಸಾಕ್ಷಿಯ ಯಥಾರ್ಥದಾವರಣದಲ್ಲಿ
ಅಂತರಂಗದ ಆತ್ಮಸಾಕ್ಷಿಯ ಯಥಾರ್ಥದಾವರಣದಲ್ಲಿ
ಧರ್ಮಗಳು ಜೀವಂತವಾಗಿರುವುದು ವಾಸ್ತವಿಕತೆಯಲ್ಲಿ
ಅಂತರಂಗದ ಆತ್ಮಸಾಕ್ಷಿಯ ಯಥಾರ್ಥದಾವರಣದಲ್ಲಿ
ಕರ್ಮಗಳು ಸಜೀವವಾಗಿರುವುದು ನಿತ್ಯ ನವೀನತೆಯಲ್ಲಿ
ನೆಡೆದಿರುವ ಧರ್ಮಕರ್ಮಗಳು ಬೆರೆಯುವುದು ತನುಮನದಲ್ಲಿ
ಬೇರ್ಪಡಿಸಲಾಗದ ಬಾಂದವ್ಯ ಮರೆಯಲಾಗದು ಜೀವನದಲ್ಲಿ
ವ್ಯಕ್ತಿಗತವಾಗುವುದು ಪ್ರತಿಕ್ಷಣವು ಮಿಶ್ರಣವಾಗಿ ಕಣಕಣದಲ್ಲಿ
ಕಡೆಗಣಿಸಲಾಗದು ಉಸಿರುವವರೆಗೂ ನೆನಪುಗಳ ನಾಲೆಯಲ್ಲಿ
ಮಾಡಿರುವ ಧರ್ಮಕರ್ಮಗಳು ಸಕಾಲದಲ್ಲಿ ಪ್ರತಿಫಲಿಸುವುದು
ಸೂರ್ಯ ಚಂದ್ರರಿಗೆ ಕಾಣದಿದ್ದರೂ ಮನದಲ್ಲಿ ಚಿತ್ರಿಸಿರುವುದು
ಅಳಿಸಲಾಗದ ರಂಗುರಂಗುಗಳಲ್ಲಿ ಬಿಂಬಿಸಿ ಪ್ರತಿಬಿಂಬಿಸುವುದು
ಬಾಳ ಪ್ರಯಾಣದಲ್ಲಿ ಅಗಣಿತ ರೂಪಗಳಲ್ಲಿ ಸ್ವರೂಪಿಸುವುದು
ಅಂತರಂಗದ ಸಾಕ್ಷಿಯೆದುರು ಎಂದೂ ನಡೆಯಲಾಗದು.