ಯುಗಾದಿ ಬಂದಿದೆ
ಜಗಮಗಿಸುವ ಹೊಸತನ ಬಂದಿದೆ
ಸೊಗಸಲಿ ವಸಂತ ಕಾಲಿರಿಸಿದೆ
ಚಿಗುರೆಲೆಯಿಣುಕುತ ನಗು ಸೂಸಿದೆ
ಹಗುರಾಗಿಸಿ ಮನ ಮುದತಂದಿದೆ||೧||
ಉಕ್ಕಿದೆ ತೆರೆಗಳು ಜಲಧಿಯು ತುಂಬಿದೆ
ಲೆಕ್ಕವಿರಿಸದೆ ಸುಮಗಳು ಬಿರಿದಿದೆ
ಹೊಕ್ಕು ಮಧುವನು ದುಂಬಿ ಸೆಳೆದಿದೆ
ಹಕ್ಕಿ ಸಂಕುಲ ಪುಟಿದು ನೆಗೆದಿದೆ||೨||
ಪೂತ ಜಲದಲಿ ಹಂಸ ತೇಲಿದೆ
ವೀಥಿ ನೋಡು ಬೆಳ್ಳಕ್ಕಿ ನೆಗೆದಿದೆ
ಚೂತವನದಲಿ ಪಿಕವು ಪಾಡಿದೆ
ಮಾತು ಮೊಳಗಿಸಿ ಶುಕವು ಗೆದ್ದಿದೆ ||೩||
ಇತ್ತು ಬಣ್ಣವೀಪರಿಯ ಮಾಟವು
ಕೆತ್ತಿ ಕಡೆದಿಹ ದಿವ್ಯ ನೋಟವು
ಚಿತ್ತ ಸೆಳೆಯುವ ಸೊಬಗ ತೋಟವು
ಸುತ್ತ ಕಾಣುವ ಚೆಲುವಿನಾಟವು||೪||
ಬಂದಿದೆ ಯುಗಾದಿ ತಂದಿದೆ ಹರುಷವ
ಮುಂದಿನ ಜೀವನ ಪಯಣದಿ ವರುಷವ
ಬಂಧುರವಾಗಿಸಿ ಬಂಧಗಳೆಲ್ಲವ
ಪೊಂದುತ ಮೊಗದಲಿ ಸುಂದರ ಹಾಸವ||೫||
ಸವಿಯ ಮೆಲ್ಲುತ ಕಹಿಯು ಕರಗಲಿ
ಭುವಿಯ ಸಂತಸ ಕುಸುಮವರಳಲಿ
ರವಿಯ ಕಾಂತಿಯು ತಮವನಳಿಸಲಿ
ದಿವಿಜ ಪ್ರಭೆಯದು ನಿತ್ಯ ಹೊಮ್ಮಲಿ||೬||
–ಪದ್ಮಾ ಆಚಾರ್ಯ, ಪುತ್ತೂರು
ಹೊಸ ವರ್ಷದ ಆದಿಯ ಸಕಾರಾತ್ಮಕ ಚಿಂತನೆ ಯನ್ನೊಳಗಡ ಕವಿತೆ ಚೆನ್ನಾಗಿ ದೆ ಅಭಿನಂದನೆಗಳು ಮೇಡಂ
ಯುಗಾದಿ ಸಂಭ್ರಮವು ತುಂಬಿ ಹರಿಯುವ ಭಾವಪೂರ್ಣ ಪ್ರಾಸಬದ್ಧ ಕವನ.. ಧನ್ಯವಾದಗಳು ಪದ್ಮಾ ಮೇಡಂ.
ಸುಂದರ ಪದಪುಂಜಗಳನ್ನೊಳಗೊಂಡ ವಸಂತಾಗಮನದ ಕವಿತೆ ಹೊಸ ವರುಷವ ಸಂತಸದಿ ಬರಮಾಡಿಕೊಂಡಿದೆ.