ಪರ್ಯಾಯ
ಅಳಲೆ ಕಾಯಿ, ನಾಗದಾಳಿ ರಸವ
ಒಳಲೆಯಲಿ ಕುಡಿಸಿ
ಜ್ವರ ಬಿಡಿಸುತ್ತಿದ್ದಳು ಅಮ್ಮ
ವೀಳ್ಯದೆಲೆಯ ಹದವಾಗಿ
ಬಿಸಿ ಮಾಡಿ, ಬಾಲ್ಯದಲಿ
ಹೊಟ್ಟೆಯ ಮೇಲೆ ಅದುಮಿ
ನೋವು ಓಡಿಸುತ್ತಿದ್ದಳು ಅಮ್ಮ
ಎದೆ ಹಾಲ ಒಳಲೆಗೆ ಬಸಿದು
ಅದ ಕಣ್ಣೊಳಗೆ ಹರಿಬಿಟ್ಟು
ಕಣ್ಣಿನ ನೋವ ಉಪಶಮನ
ಮಾಡುತ್ತಿದ್ದಳು ಅಮ್ಮ
ಹರಳೆಣ್ಣೆ ಹದಕ್ಕೆ ಬಿಸಿ ಮಾಡಿ
ಪದವ ಹಾಡುತ ಹಿತವಾಗಿ ಕಿವಿಗಿಳಿಸಿ
ಕಿವಿ ನೋವನೋಡಿಸುತ್ತಿದ್ದಳು
ಅಮ್ಮ
ಕಿವಿಯ ಕೆಳಗೆ ಸವರಿ
ಚಿಮಣಿ ಎಣ್ಣೆಯ
ಚಳಿಗಾಲದ
ಗಂಟಲು ನೋವಿಗೆ
ಪರಿಹಾರ ಕೊಡುತ್ತಿದ್ದಳು ಅಮ್ಮ
ಇಂದೆಲ್ಲ ಡ್ರಾಪ್ಸ್ ಗಳು,
ಸಿರಪ್ ಗಳು
ಅದನುಣಿಸಲು
ಡ್ರಾಪರ್ ಗಳು
ಚಿನ್ನ, ಬೆಳ್ಳಿಯ ಒಳಲೆಗಳು
ಎಲ್ಲರ ಮನೆಗಳಲು
ಕೆಲಸಕ್ಕೆ ಬಾರದವುಗಳು
ಅದು ಸರಿ, ಇದು ತಪ್ಪು
ಒರೆ ಹಚ್ಚುತ್ತಿಲ್ಲ ನಾನು
ಏನೂ ದೊರಯದ ಆ
ದಿನದಲ್ಲಿ ಅಮ್ಮನ ಆತ್ಮಸ್ಥೈರ್ಯ
ನೆನೆದರೆ ಅಧ್ಬುತ ಆಶ್ಚರ್ಯ
ಎಲ್ಲದಕ್ಕೂ ಇತ್ತಲ್ಲ ಅವಳ
ಬಳಿ ಪರ್ಯಾಯ
-ನಟೇಶ
ಅಮ್ಮನಿಗೆ ಸರಿಸಾಟಿಯಿಲ್ಲ
ಅಮ್ಮನ ತಿಳಿವಳಿಕೆ ಯ ಸಂಪತ್ತಿನ ಅನಾವರಣ ದ ಕವಿತೆ ಓದಿದ ನನಗೆ ನಮ್ಮ ಅಮ್ಮ ಅಜ್ಜಿಯರು ಮಾಡುತ್ತಿದ್ದ ಮದ್ದಿನ ನೆನಪಾಯಿತು..ಧನ್ಯವಾದಗಳು ಸಾರ್
ಸುಂದರ ಕವನ, ಅಮ್ಮನಷ್ಟು ಬೇರಾರೂ ಜೋಪಾನ ಮಾಡಲಾರರು ಕಂದನ.
ಹಿಂದೆ, ಮಗುವಿನ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯ ಹಿರಿಯರು, ಅಮ್ಮನ ಬಳಿ ದಿಡೀರ್ ಔಷಧಿ ಲಭ್ಯ…ತೊಂದರೆಗಳೂ ಮಾರು ದೂರ! ಸೊಗಸಾದ ಕವನ.
ಈಗ ಮನೆಯ ಹಿರಿಯರು ಹೇಳಿದರೂ ಕೇಳದ, ನಂಬದ ಮನೋಭಾವ.
ಮನದಾಳದಿಂದ ಅಮ್ಮನ ಆಸ್ಥೆಯನ್ನು ನೆನಪಿಸಿದಂತಹ ಚಂದದ ಕವನ, ಅಭಿನಂದನೆಗಳು.
ಅಮರಾತ್ಮವು ಅಮ್ಮನ ಅಂತರಾತ್ಮವು/
ಕರುಣೆ ಕಾರುಣ್ಯದ ಕಡಲಿನಾಳದ ಕಂದರವು/
ಅಮರಾತ್ಮವು ಅಮ್ಮನ ಅಂತರಾತ್ಮವು/
ಮಮತೆಯ ಮಡಿಲಿನ ಮಂದಾರ ಮಂದಿರವು/
ತಾಯಿಯ ಪ್ರೀತಿಯು ಪರಾಮೃತವು/
ಭಗವಂತನ ನಲ್ವರಕೆಯ ಆಶೀರ್ವಾದವು/
ತಾಯಿಯ ಅಕ್ಕರೆಯು ಆನಂದಾಮೃತವು/
ಪರಮಾತ್ಮನ ಹಾರೈಕೆಯ ಅನುಗ್ರಹವು/
ಒಲವಿನ ಒಡಲು ತಾಯಿಯ ಮಡಿಲು/
ಸುರಕ್ಷತೆಯ ಸಾಗರವು ಸಂರಕ್ಷಿತ ಸಂಪರ್ಕವು/
ಒಲವಿನ ಓದಲು ತಾಯಿಯ ಮಡಿಲು/
ಕಾಪಿಟ್ಟ ತಾಣವು ಆತಂಕವಿಲ್ಲದ ಸುರಸ್ಥಾನವು