ಮನಸ್ಥಿತಿ
ನಾವು ದೂರ ದೂರ ಹೋದಂತೆಲ್ಲ ದೂರದವರೂ ಹತ್ತಿರವಾಗುತ್ತಾರೆ, ನಮ್ಮವರಲ್ಲದಿದ್ದವರೂ ನಮ್ಮವರಾಗಿಬಿಡುತ್ತಾರೆ, ಇದೆಲ್ಲಾ ಆಯಾ ಸಮಯದಲ್ಲಿನ ನಮ್ಮ ಮನಸ್ಥಿತಿ.
80 ರ ದಶಕದ ಮಧ್ಯ ವರ್ಷಗಳ ಕಾಲ, ಸ್ನೇಹಿತರೊಡನೆ ಬಾಂಬೆ ನಗರ ನೋಡಲು ಹೋಗಿದ್ದೆ. ಹೀಗೆ ಬಾಂಬೆಯ ಟ್ರಾಂ ಸರ್ವೀಸ್ ನಲ್ಲಿ ಓಡಾಡುತ್ತಿರುವಾಗ ಮೈಸೂರಿನ ಹುಡುಗನೊಬ್ಬ ನಾವು ಕನ್ನಡ ಮಾತಾಡುವುದನ್ನ ಗಮನಿಸಿ ಹಲೋ ನೀವೆಲ್ಲಾ ಕರ್ನಾಟಕದವರಾ ? ಎಂದು ಕೇಳಿದ. ಬಾಂಬೆಯಲ್ಲಿ ಕನ್ನಡದ ಮಾತು ಕೇಳಿ ನಮಗೂ ಖುಷಿಯಾಗಿ , ಹೌದು ನಾವು ಮೈಸೂರಿನವರು ಎಂದೆವು. ಸಾರ್ ನೀವೆಲ್ಲಾ ಮೈಸೂರಿನವರಾ ಸಾರ್, ನಾನೂ ಮೈಸೂರಿನವನೇ, ಮೈಸೂರಿನಲ್ಲಿ ನಮ್ಮ ಮನೆ ಇದೆ ಸಾರ್, ವಿಳಾಸ ಕೊಡ್ತೀನಿ ಖಂಡಿತ ಹೋಗಿ ಎಂದು ಖುಷಿಯಿಂದ ವಿಳಾಸ ಬರೆದುಕೊಟ್ಟ, ಸಂತೋಷವಾಯಿತು ಸಾರ್ ಎಂದು ನಮಗೆಲ್ಲಾ ಆತ್ಮೀಯ ಅಪ್ಪುಗೆ ನೀಡಿ ಜನರಿಂದ ತುಂಬಿ ತುಳುಕುತ್ತಿದ್ದ ಟ್ರೈನ್ ನಲ್ಲಿ ನಮ್ಮ ಕಡೆ ಕೈ ಬೀಸುತ್ತಾ ಮಾಯವಾಗಿ ಹೋದ.
ಹಾಗೆಯೇ ಗೋರೇಗಾವ್ ಎಂಬ ನಾವಿದ್ದ ಸ್ಥಳದಲ್ಲಿ ಬೀಡ ಮಾರುವ ಮಧ್ಯವಯಸ್ಕನೊಬ್ಬ ನಮ್ಮನ್ನ ಆಲಂಗಿಸಿ ನಾನು ಹುಬ್ಬಳ್ಳಿ ಯವ ಸಾರ್ ಎಂದು ಸಂತೋಷಪಟ್ಟಿದ್ದ. ನಾವು ನಮ್ಮೂರಿನಿಂದ ಬಲು ದೂರವಿದ್ದ ಕಾರಣ ಮನಸ್ಸಿಗೆ ಆಹ್ಲಾದಕರ ಎನಿಸಿತ್ತು.
ಸರಿ, ಬಾಂಬೆ ಪ್ರವಾಸ ಮುಗಿಸಿಬಂದ ಮೇಲೆ ವಾರದ ಸಮಯ ಅದೇ ಗುಂಗಿನಲ್ಲಿದ್ದ ನಾವು ಬಾಂಬೆಯಲ್ಲಿ ಪರಿಚಿತನಾದ ಹುಡುಗನ ಮನೆಗೆ ಹೋದೆವು, ಸಂಜೆ ಸಮಯ, ಬಾಗಿಲು ತೆರೆದೇ ಇತ್ತು, ಹಲೋ ಎಂದು ಒಳಗೆ ಹೋದೆವು. ಯಾರೂ !? ಎಂದು ಒಳಗಿಂದ ಗಂಡಸೊಬ್ಬರು ಬಂದರು, ಜೊತೆಗೆ ಅವರ ಮನೆಯ ಇತರ ಸದಸ್ಯರೂ ಬಂದರು, ಆಶ್ಚರ್ಯ ದಿಂದ ನಮ್ಮನ್ನು ನೋಡಿದರು, ನಾವು ಅವರ ಹುಡುಗನನ್ನ ಬಾಂಬೆಯಲ್ಲಿ ಭೇಟಿ ಮಾಡಿದ್ದ ವಿಷಯವನ್ನು ತಿಳಿಸಿ ನಿಮ್ಮ ಹುಡುಗ ಮನೆಗೆ ಹೋಗಲು ಹೇಳಿದರು ಅದಕ್ಕಾಗಿ…ಎಂದೆವು. ಹೌದಾ !? , ಸಂತೋಷ, ಓಕೆ ಸರಿ . ಇಷ್ಟೇ ಹೇಳಿದ್ದು ನಮ್ಮ ಪಾಡಿಗೆ ವಾಪಸ್ ಬಂದೆವು.
ಇದರರ್ಥ ಅವರು ಕೆಟ್ಟವರೆಂದಲ್ಲ, ಅದು ಅವರಿಗೆ ದೊಡ್ಡ ವಿಷಯವಾಗಿರಲಿಲ್ಲ, ಕಾರಣ ನಾವೂ ಎಲ್ಲಾ ಮೈಸೂರಿನವರೇ. ಮತ್ತು ಆ ಕ್ಷಣಕ್ಕೆ ಬಾಂಬೆಯಲ್ಲಿ ಸಿಕ್ಕಿದ್ದ ಅವರ ಮಗನ ಮತ್ತು ನಮ್ಮ ಮನಸ್ಥಿತಿ ಒಂದಾದರೆ, ಇಲ್ಲಿದ್ದ ಮನೆಯವರ ಮನಸ್ಥಿತಿ ಬೇರೆ.
ಇದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ, ಕೆಲವೊಮ್ಮೆ ಎಲ್ಲರಿಗೂ ನಮ್ಮ ಗಮನವನ್ನ ಸಮನಾಗಿ ನೀಡಲಾಗುವುದಿಲ್ಲ.ನಮ್ಮ ಮನೆಯ ಸದಸ್ಯರು ಯಾರಾದರೂ ಆಸ್ಪತ್ರೆಯಲ್ಲಿ ಇದ್ದಾಗ ನಮಗೆ ತಳಮಳ ಆತಂಕ ಹೆಚ್ಚಿರುತ್ತದೆ, ಅಂತೆಯೇ ಅಲ್ಲಿರುವ ನರ್ಸ್ ಗಳಾಗಲೀ, ಆಯಾಗಳಾಗಲೀ , ಡಾಕ್ಟರ್ ಗಳಾಗಲೀ ಇವರ ಕಡೆ ಸರಿಯಾಗಿ ಗಮನ ಹರಿಸುತ್ತಿಲ್ಲವೆಂಬಂತೆ ನಮಗೆ ಅನ್ನಿಸುತ್ತದೆ, ಆದರೆ ಅವರಿಗೆ ಆಸ್ಪತ್ರೆಯಲ್ಲಿ ಇರುವವರೆಲ್ಲಾ ಚಿಕಿತ್ಸೆಗಾಗಿ ಬಂದಿರುವ ರೋಗಿಗಳು, ಹಾಗಾಗಿ ಯಾವಾಗಲೂ ಅವರು ರೋಗಿಯ ಮುಂದೆ ಕೂತಿರಲು ಆಗುವುದಿಲ್ಲ, ಅದರ ಅವಶ್ಯಕತೆಯೂ ಇರುವುದಿಲ್ಲ. ಆದರೇ, ಯಾವಾಗಲೂ ಆಸ್ಪತ್ರೆಯಲ್ಲಿ ರೋಗಿಗಳೊಡನೆ ಇರುವ ಅವರ ಮನಸ್ಥಿತಿಯೇ ಬೇರೆ, ನಮಗೆ ತುಂಬಾ ಬೇಕಾದವರನ್ನು ಆಸ್ಪತ್ರೆಯಲ್ಲಿ ರೋಗಿಗಳಾಗಿ ನೋಡುತ್ತಿರುವ ನಮ್ಮ ಮನಸ್ಥಿತಿಯೇ ಬೇರೆ.
ಹಾಗೆಯೇ ನಾವು ಇಷ್ಟಪಡುವ ಸಿನಿಮಾ ನಟ, ನಟಿಯರು, ಕ್ರಿಕೆಟಿಗರು, ಸೆಲೆಬ್ರಿಟಿಗಳು ನಮಗೆ ಬಹಳ ವಿಶೇಷವೆನಿಸುತ್ತಾರೆ, ಕಾರಣ ಅವರು ನಮಗೆ ನಿಜ ಜೀವನದಲ್ಲಿ ಕಾಣ ಸಿಗುವುದಿಲ್ಲ ಅದಕ್ಕೆ. ಒಂದೊಮ್ಮೆ ಅಪರೂಪಕ್ಕೆ ಸಿಕ್ಕರೂ ಅವರು ನಮ್ಮ ಕಡೆ ಗಮನ ಹರಿಸುವುದಿಲ್ಲ, ಅದು ಸಾಧ್ಯವೂ ಇಲ್ಲ, ಆಗ ನಮಗೆ ಭ್ರಮನಿರಸನವಾಗಬಹುದು. ಅವರೆಲ್ಲರೂ ನಮಗೆ ಸರ್ವಸ್ವ, ವಿಶೇಷವೇ , ಆದರೇ ಅವರಿಗೆ ನಮ್ಮಂತಹ ಕೋಟಿ ಕೋಟಿ ಜನ . ಹಾಗಾಗಿ ಅವರ ಮನಸ್ಥಿತಿಗಳೇ ಬೇರೆ, ನಮ್ಮ ಮನಸ್ಥಿತಿಯೇ ಬೇರೆ.
ಬೇರೇ ಏರಿಯಾದಲ್ಲಿ ನಮ್ಮ ಏರಿಯಾದವರು ಸಿಕ್ಕರೆ ನಮ್ಮ ಏರಿಯಾದವರಾಗುತ್ತಾರೆ, ಬೇರೇ ಊರಿನಲ್ಲಿ ಸಿಕ್ಕರೆ ನಮ್ಮೂರಿನವರಗುತ್ತಾರೆ, ಹೊರ ರಾಜ್ಯದಲ್ಲಿ ನಮ್ಮ ರಾಜ್ಯದವರಾಗುತ್ತಾರೆ ಹೊರದೇಶದಲ್ಲಿ ನಮ್ಮ ದೇಶದವರಾಗುತ್ತಾರೆ, ದೂರ ದೂರ ಆದಷ್ಟೂ ಎಲ್ಲರೂ ಹತ್ತಿರವಾಗುತ್ತಾ ಹೋಗುತ್ತಾರೆ, ಇದು ಅಲ್ಲಿನ ಆಗಿನ ನಮ್ಮ ಮನಸ್ಥಿತಿಯಷ್ಟೇ.
ಅಸಲಿಗೆ ಎಲ್ಲರೂ ನಮ್ಮವರೇ, ನಾವೆಲ್ಲರೂ ಒಂದೇ.
-ನಟೇಶ
ಚೆನ್ನಾಗಿದೆ
ಮನಸ್ಥಿತಿ ಯ ಬಗ್ಗೆ ಚಿಂತನಾಲೇಖನ ಚೆನ್ನಾಗಿದೆ ಸಾರ್
ಚಿಂತನೆಗೆ ಹಚ್ಚುವ ಚೆಂದದ ಬರಹ.
ಚಿಂತನಾ ಬರಹ, ಚೆನ್ನಾಗಿದೆ.
ಮೂಲಭೂತ ವಿಚಾರವಾದ “ಮಾನವರೆಲ್ಲಾ ಒಂದೇ” ಎಂಬ ಬಗೆಗೆ ಸುಂದರ ವಿಚಾರಾತ್ಮಕ ಲೇಖನ..ಧನ್ಯವಾದಗಳು ಸರ್.
ಎಲ್ಲರೂ ನಮ್ಮವರೇ ಎಂಬ ಉಕ್ತಿ ಮನಮುಟ್ಟುವಂತಿದೆ ಧನ್ಯವಾದಗಳು