ಸೋಲೇ ಭವಿಷ್ಯವಲ್ಲಾ…
ಬದುಕೊಂದು ಬೇವುಬೆಲ್ಲ ಬೆಸೆದುಕೊಂಡಿರುವ
ಸಿಹಿಕಹಿ ಯಾನ
ಸಾಗಿಸಲೇಬೇಕು ಇದರ ಜೊತೆಗೆ ನಮ್ಮ
ಅನುದಿನದ ಪ್ರಯಾಣ
ಹರಿಯುವ ನೀರಿನಂತೆ ಮನುಷ್ಯನ
ಅನುಕ್ಷಣದ ವರ್ತಮಾನ
ನಾವಿಡುವ ಪ್ರತಿಹೆಜ್ಜೆಯೂ ವಿಧಿಯ
ಪೂರ್ವನಿಶ್ಚಿತ ತೀರ್ಮಾನ
ಶ್ರಮಿಸಬೇಕು ನಾಳೆಗಾಗಿ ಇಂದಿನ ಈ ಅಮೂಲ್ಯ ಕ್ಷಣ
ಬರುವುದನ್ನು ಸ್ವೀಕರಿಸಲೇಬೇಕು, ಇದುವೇ ಮಾನವನಿಗಾಗಿ ಕಾಲ ಮೀಸಲಿಟ್ಟಿರುವ ಜೀವನ……
ಕಷ್ಟವೆಂಬುದು ಸುಲಭವಲ್ಲಾ
ಸುಲಭವಾಗಿ ನಿವಾರಣೆಯಾಗುವುದು ಕಷ್ಟವೇ ಅಲ್ಲಾ
ಏರಿಳಿತವಿಲ್ಲದ ಮಾರ್ಗ ಹುಡುಕಿದರು ಸಿಗುವುದಿಲ್ಲಾ
ಗೆಲುವು ಮಾತ್ರ ಕಂಡಿರುವ ಮನುಷ್ಯ ಪ್ರಪಂಚದಲ್ಲೇ ಇಲ್ಲ
ಸೋಲೆಂಬುದು ಮನುಷ್ಯನಿಗೆ ಅಂತ್ಯಕಾಲವಲ್ಲಾ
ಸೋಲೇ ಮನುಜನಿಗೆ ಪುಟಿದೇಳಿಸುವ ಆತ್ಮಛಲ……
ಅಂಜಬಾರದೆಂದೂ ಅವಮಾನದ ಬಿರುಗಾಳಿಯ ಸುಳಿಗೆ ಸಿಲುಕಿಕೊಂಡರು
ಕುಗ್ಗಬಾರದೆಂದೂ ಸೋಲುಗಳ ಸಮುದ್ರ ತೀರದಲ್ಲಿ ಮಿಂದೆದ್ದರು
ಕೂರಬಾರದೆಂದೂ ಅಸಮರ್ಥನೆಂದೊಪ್ಪಿಕೊಂಡು ಗೆಲುವಿನ ಎದುರು
ಹಿಂಜರಿಯಬಾರದೆಂದೂ ನೂರಾರು ಕಷ್ಟವೆಂಬಾ ಸವಾಲುಗಳೇ ಎದುರಾದರೂ
ಸೊರಗಬಾರದೆಂದೂ ಸಾಧಿಸಲಿಲ್ಲವೆಂಬಾ ನಿರಾಶಾಭಾವನೆಗೊಳಗಾದರು
ಹಿನ್ನಡೆಯಬಾರದೆಂದೂ ಕಷ್ಟಕ್ಕೆ ಬೆನ್ನೊಡ್ಡಿ, ಬದುಕಲ್ಲಿ ಸಾವೇ ಬಂದರು……
ತಾಳ್ಮೆಯೊಂದೇ ಲಸಿಕೆ, ಉದಯವಾಗಲು ಬದುಕಲ್ಲಿ ನವಜೀವನ
ಆವೇಶವೊಂದೆ ಪಾಶಾಣ, ಹುಸಿಯಾಗಲು ನಮ್ಮ ಸ್ವಪ್ನಬದುಕಿಗಾಗಿ ನಡೆಸುವ ಪಯಣ
ಹಗಲು ಇರುಳೇ, ಸೋಲು ಗೆಲುವಿನ ಪ್ರತಿಫಲನ
ಸಹನೆಯೊಂದಿದ್ದರೆ ಸಮಯ ಸರಿದಮೇಲೆ ಆಗಲೇಬೇಕು ಜಯವೆಂಬಾ ಬೆಳಕಿನ ಆಗಮನ…….
ಎದುರಾಳಿ ಇಲ್ಲದ ಸ್ಪರ್ಧೆ ಉಪ್ಪಿಲ್ಲದ ಭೋಜನದಂತೆ
ನಾವಿಡುವ ಹೆಜ್ಜೆ ಕಂಡು ಎದುರಾಳಿ ಕಂಪಿಸಿದರೆ, ಅದುವೇ ನಮ್ಮ ಮೊದಲ ಗೆಲುಲಿನಂತೆ
ಪರಾಜಯ ಮಜಲರಿಯದ ವಿಜಯ, ಮಾಧುರ್ಯವಿರದ ಕಬ್ಬಿನಂತೆ
ಅಪಜಯದಿಂದಲೇ ಕಿಚ್ಚೆದ್ದು ಹೊರಾಡಿ ಗೆದ್ದರೆ,
ಅದು ಹೆಜ್ಜೇನ ಸವಿಗಿಂತ ಮಿಗಿಲಿದ್ದಂತೆ……
ಸೋಲೇ ಸಾವಲ್ಲಾ, ಸೋಲನ್ನ ಎದುರಿಸಿ ನಿಲ್ಲುವನೇ ಗೆಲುವಿನ ರಾಯಭಾರಿ
ಕಾಲವೇ ಬದಲಾಗುತ್ತಿರುವಾಗ, ಮರಳಿ ಬರುವುದಿಲ್ಲ ಸೋಲೊಂದೇ ಪ್ರತಿಬಾರಿ
ಮೌನಕ್ಕೆ ಜಾರಬೇಡ ಎಂದಿಗೂ ನೀ, ಜೀವನದಲ್ಲಿ ಸೋತೆನೆಂದು ಹೆದರಿ
ಖಿನ್ನತೆಗೊಳಗಾಗದೆ ಹುಡುಕಿ ನಡೆ, ಇರುವುದು ಗೆಲುವಿಗೆ ಸಹಸ್ರಾರು ದಾರಿ
ಮೂರ್ಖನಾಗಬೇಡ ಮನುಜನೇ, ಅಂದುಕೊಂಡು ನೀ ಮಾಡುತ್ತಿರುವುದೆಲ್ಲಾ ಸರಿ
ನಿನ್ನಲ್ಲೇ ಇರುವ ‘ಅಹಂ’ ಶತ್ರುವನ್ನ ಮೊದಲು ಮೆಟ್ಟಿ,
ನಂತರ ಮಾಡುನೀ ನಿನ್ನ ಗೆಲುವಿನ ಮೇಲೆ
ಅದ್ದೂರಿ ಸವಾರಿ…… ..
–ಆಸಿಫ್ ಹೆಚ್ ಎಮ್, ಬರಗೂರು
ಬದುಕಿನ ಹೊರಣವನ್ನು ಕವನದ ಮೂಲಕ ಅನಾವರಣ ಗೊಳಿಸಿ ಭರವಸೆಯ ಬೆಳಕನ್ನು ಹೊಂದಬೇಕೆಂಬ ಸಂದೇಶ ಹೊತ್ತ ಕವನ ಚೆನ್ನಾಗಿ ಮೂಡಿ ಬಂದಿದೆ.ಸಾರ್
ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಮೇಡಂ
ಬದುಕನ್ನು ಬದುಕಲು ಉತ್ಸಾಹ ತುಂಬುವ ಸಾಲುಗಳು
Thx
ಜೀವನದ ಏರಿಳಿತಗಳನ್ನು ಸರಿದೂಗಿಸಿಕೊಂಡು ಬಾಳ್ವೆ ಮಾಡುವ ಪರಿಯನ್ನು ಬಹಳ ಚೆನ್ನಾಗಿ ಮನದಟ್ಟು ಮಾಡಿಸಿದ ಸುಂದರ ಕವನ… ಧನ್ಯವಾದಗಳು.
Tq
ಗೆಲುವಿಗೆ ಸಹಸ್ರಾರು ದಾರಿ – ಸಂದೇಶ ಚೆನ್ನಾಗಿದೆ.
ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಮಾನಸಿಕ ಸಮತೋಲನ ಸಾಧಿಸಲು ಮನವನ್ನು ಅನುಗೊಳಿಸುವ ಚಂದದ ಕವನ.
Tqtq