ಕೂದಲು ಹೋಗುತ್ತೆ ಬರೋಲ್ಲ…
ನನ್ನ ಮದುವೆಯಾದ ಹೊಸತು.ಒಂದು ಚಿಕ್ಕ ಮನೆಯಲ್ಲಿ ನಮ್ಮಿಬ್ಬರ ಬಿಡಾರ.ಇನ್ನೂ ಏನೂ ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತೊಗೊಂಡಿರಲಿಲ್ಲ. ಇರೋ ಇಬ್ಬರಿಗೆ ಏನು ಮಹಾ ವ್ಯವಸ್ಥೆಗಳು ಬೇಕು.ಅಡಿಗೆಗೆ ಒಂದು ಮಿಕ್ಸಿ,ಒಂದು ಗ್ಯಾಸ್ ಸ್ಟೋವ್ ಮತ್ತು ಒಂದಷ್ಟು ಪಾತ್ರೆಗಳು.ಸ್ನಾನಕ್ಕೆ ನೀರು ಕಾಯಿಸುವುದು ಕೂಡ ಅಡುಗೆ ಮನೆ ಸ್ಟೌ ನಲ್ಲೇ. ಬಟ್ಟೆ ಇಡಲು ಒಂದು ಬೀರು, ಮಲಗಲು ಒಂದು ಮಂಚ,ಯಾರಾದರೂ ಬಂದರೆ ಕೂರಲು ನಾಲ್ಕು ಕುರ್ಚಿ ಇವಷ್ಟೇ ನಮಗಿದ್ದ ಆಸ್ತಿ. ಆದರೆ ಆಗ ಇದ್ದ ಸುಖ ಸಂತೋಷ ಮಾತ್ರ ಅಳತೆಗೆ ಸಿಗದಷ್ಟು.
ಆ ದಿನಗಳಲ್ಲಿ ಒಂದು ಭಾನುವಾರದ ದಿನ ಇವರು ಸ್ನಾನಕ್ಕೆ ನೀರು ಕಾಯಲು ಇಟ್ಟವರು,”ನೋಡೇ ಇಪ್ಪತ್ತು ನಿಮಿಷ ಬಿಟ್ಟು ಮರೆಯದೇ ಸ್ಟೋವ್ ಆರಿಸು.ನಾನು ಹೇರ್ ಕಟ್ ಗೆ ಹೋಗಿ ಬರುತ್ತೇನೆ.”ಎಂದರು.ನಾನು ಥಟ್ಟನೇ, “ಸಲೂನ್ ಇಲ್ಲೇ ಹತ್ತಿರ ಅಲ್ವಾ, ಅಲ್ದೇ ನಿಮಗೆ ಹೆಚ್ಚು ಹೊತ್ತು ಏನೂ ಬೇಡ, ಈ ಕಿವಿ ಮೇಲೆ ನಾಲ್ಕು, ಆ ಕಿವಿ ಮೇಲೆ ನಾಲ್ಕು ಕೂದಲು ಕತ್ತರಿಸಿದರೆ ಸಾಕಲ್ವಾ, ಎರಡು ನಿಮಿಷದ ಕೆಲಸ, ನೀವೇ ಬಂದು ಸ್ಟೋವ್ ಆರಿಸಬಹುದು”ಎಂದು ಬಿಟ್ಟೆ. ಅಂದು ನಾಲಿಗೆ ಕಚ್ಚಿಕೊಂಡಿದ್ದಾಯಿತು. ಆದರೇನು ಮಾಡುವುದು ಆಗೋ ಅನಾಹುತ ಆಗಿ ಹೋಗಿತ್ತು. ನನ್ನ ಒಂಚೂರು ಬಾಂಡ್ಲಿ ಗಂಡನ ಮುಖ ಧುಮು ಧುಮು ಉರಿಯತೊಡಗಿತು. “ಹೂಂ,ನನಗೆ ತಲೇಲಿ ಕೂದಲು ಕಮ್ಮಿ ಅಂತ ಅಣಕಿಸುತ್ತಿದ್ದೀಯ,ಇರ್ಲಿ ಬಿಡು ನಿಂಗೂ ಕೂದಲು ಉದುರುವುದಕ್ಕೆ ಶುರು ಆಗ್ಲೀ ಆಗ ನಿನಗೆ ನನ್ನ ಕಷ್ಟ ಏನೂ ಅಂತ ಗೊತ್ತಾಗುತ್ತೆ,” ಅಂತ ಹೇಳಿ ಮುನಿಸಿಕೊಂಡು ಒಂದು ವಾರದವರೆಗೂ ಮಾತನಾಡಿಸಿದರೂ ಮಾತನಾಡದೆ ಕಾಡಿಸಿದರು.
ಇವರು ನನ್ನ ನೋಡಲು ಬಂದಾಗಲೂ ನನ್ನ ಗಮನ ಇವರ ಕಡೆಗೆ ಹೋಗಿರಲಿಲ್ಲ.ಹೆಣ್ಣು ನೋಡಲು ಬಂದಾಗ ತನ್ನ ಮೂವರು ಸ್ನೇಹಿತರೊಂದಿಗೆ ಬಂದಿದ್ದ ಇವರು ನಮ್ಮ ಎದುರು ಮನೆಯಲ್ಲಿ ಕುಳಿತಿದ್ದರು. ನಮ್ಮ ಎದುರು ಮನೆ ಆಂಟಿ ಬಂದು ನನ್ನನ್ನು ಕರೆದು ಕೊಂಡು ಹೋದರು.ಮನೆ ಒಳ ಹೋಗುವಾಗ ಹಾಗೆ ಸುಮ್ಮನೆ ಕುಳಿತಿದ್ದವರ ಕಡೆ ಒಂದರೆ ಕ್ಷಣ ನೋಡಿ ಒಳ ಹೋದೆ.ತಲೆ ತುಂಬಾ ಅಲೆಗೂದಲಿದ್ದ ಇವರ ಸ್ನೇಹಿತನನ್ನ ಮದುವೆ ಗಂಡು ಅಂದುಕೊಂಡು ಒಳ ಹೋದ ಮೇಲೆ ಆಂಟಿಗೆ,”ಆಂಟೀ ಹುಡುಗ ತುಂಬಾ ಚೆನ್ನಾಗಿ ಇದ್ದಾನೆ,ನನ್ನ ಒಪ್ಪೋದು ಕಷ್ಟ ಬಿಡಿ.”ಎಂದೆ.ಆಂಟಿ ಆಶ್ಚರ್ಯದಿಂದ” ಯಾರನ್ನ ಹುಡುಗ ಅಂದುಕೊಂಡಿದ್ದೀಯ,?” ಎಂದಾಗ ,ಅಡುಗೆ ಮನೆಯಿಂದಲೇ ಕೈ ತೋರಿಸುತ್ತಾ, “ಅವರಲ್ಲವ”ಎಂದೆ.ಟಿ ನಕ್ಕು”ಅಯ್ಯೋ ಅವನಲ್ಲ ಕಣೆ, ಪಕ್ಕದಲ್ಲಿ ಸ್ವಲ್ಪ ಬಾಂಡ್ಲಿ ಕೂತಿದೆಯಲ್ಲ ಅವನು,” ಎಂದು ಸುಲಭವಾಗಿ ಗುರುತು ಹಿಡಿಯಲು ಸಹಾಯ ಮಾಡಿಬಿಟ್ಟರು.
ನಂತರ ಎಲ್ಲಾ ಕೂಡಿ ಬಂದು ಮದುವೆಯೂ ಆಯಿತು. ಮದುವೆಯ ವಿಡಿಯೋ ಬಂದ ಬಳಿಕ, ಇಬ್ಬರೂ ಕುಳಿತು ನೋಡುವಾಗ ನನ್ನ ಗಮನವೆಲ್ಲಾ ಮದುವೆಗೆ ಬಂದಿದ್ದವರು ಯಾರು ಯಾರು ಅನ್ನೋದರ ಕಡೆಗೆ ಇದ್ದರೆ,ಇವರು ಮಾತ್ರ,”ಛೆ, ನನ್ ಮಗಂದು ತಲೇಲಿ ಇನ್ನೊಂದ್ ಚೂರು ಕೂದಲಿದ್ದಿದ್ದರೇ ಆ ಕಳೆಯೇ ಬೇರೆ,” ಅಂತ ವಿಡಿಯೋ ಮುಗಿಯುವವರೆಗೂ ಹಂಬಲಿಸಿದರು. ಅವರು ಹೇಳುವುದು ನಿಜ.ಮನುಷ್ಯರಿಗೆ ಮುಖ ಲಕ್ಷಣ ಹೆಚ್ಚಿಸುವುದು ತಲೆಕೂದಲು ತಾನೇ. ನೋಡಲು ಎಷ್ಟೇ ಚೆನ್ನಾಗಿದ್ದರೂ ತಲೆಯಲ್ಲಿ ಕೂದಲು ಕಮ್ಮಿಯಿದ್ದರೆ ಸ್ವಲ್ಪ ಕಳೆ ಕಮ್ಮಿಯೇ. ಹೆಂಗಸರು ಮತ್ತು ಗಂಡಸರ ದೇಹದ ಹಾರ್ಮೋನ್ ಗಳು ಕೆಲವು ಬೇರೆ ಬೇರೆ.ಅದರಲ್ಲಿ ತಲೆಗೂದಲ ಬೆಳವಣಿಗೆಗೆ ಸಂಬಂಧಿಸಿದ ಹಾರ್ಮೋನ್ ಹೆಂಗಸರಿಗೆ ಕೂದಲು ಉದುರದಂತೆ ತಡೆಯುತ್ತದೆ. ಆದರೆ ಗಂಡಸರಿಗೆ ಈ ಭಾಗ್ಯವಿಲ್ಲ. ನಿಜಕ್ಕೂ ಪ್ರಕೃತಿ ಪುರುಷರಿಗೆ ಈ ವಿಷಯದಲ್ಲಿ ಘೋರ ಅನ್ಯಾಯವನ್ನೆ ಮಾಡಿಬಿಟ್ಟಿದೆ.
“ಮೊಟ್ಟೆ,ಬಾಂಡ್ಲಿ,ಗುಂಡು, ಬೋಳ, ಟಕ್ಲು,ಮತ್ತು ನಮ್ಮ ಕೊಡಗಿನಲ್ಲಿ ಹೇಳುವ ಹಾಗೆ ಚಾಣೆಮಂಡೆ ಇತ್ಯಾದಿ ಉಪ ನಾಮಧೇಯಗಳಿಂದ ಅಲಂಕೃತರಾಗುವ ಸೌಭಾಗ್ಯ ಯಾವ ಶತ್ರುವಿಗೂ ಬೇಡ. ಹೆಣ್ಣು ನೋಡಲು ಹೋದರೆ ಹುಡುಗಿಯರು ಅಷ್ಟು ಬಡಪಟ್ಟಿಗೆ ಒಪ್ಪುವುದಿಲ್ಲ ಅನ್ನುವ ಕಷ್ಟ ಬೇರೆ ಎದುರಿಸಬೇಕು.
ಹಾಗಾಗಿ ಸೌಂದರ್ಯ ವರ್ಧಕಗಳಲ್ಲಿ ತಲೆಗೂದಲ ಆರೈಕೆ ಮಾಡುವ ಪ್ರಸಾದನಗಳಿಗೇ ಹೆಚ್ಚು ಬೇಡಿಕೆ. ತಲೆಗೂದಲ ಸಮೃದ್ಧಿ ನಮ್ಮ ನಮ್ಮ ಅನುವಂಶೀಯತೆ, ಸೇವಿಸುವ ಆಹಾರ, ವಾಸಿಸುವ ಪರಿಸರದ ಮಾಲಿನ್ಯ,ಮನಸ್ಸಿನ ನೆಮ್ಮದಿ ಹೀಗೆ ಎಷ್ಟೊಂದು ಅಂಶಗಳ ಮೇಲೆ ಅವಲಂಬಿತವಾಗಿದೆ. ಆದರೂ ತಮ್ಮ
ಕೇಶರಾಶಿಯ ಸೌಂದರ್ಯ ವೃದ್ಧಿಸಲು,ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳ ಬಳಸಿ ತಮ್ಮ ತಲೆಗೂದಲ ಹೊರೆ ಹೆಚ್ಚಿಸಿಕೊಳ್ಳುವವರು ಕೆಲವರಾದರೆ,ಚರ್ಮ ವೈದ್ಯರ ಮೊರೆ ಹೋಗುವವರು ಹಲವರು.
ಎಂತೆಂಥ ಉಪಾಯ ಮಾಡಿದರೂ ಮೊಳೆಯದ ಬರಡು ತಲೆಯವರು ಕೃತಕ ವಿಗ್ ಗಳ ಮೊರೆ ಹೋಗುತ್ತಾರೆ. ನಿಜಕ್ಕೂ ಈ ವಿಗ್ ಗಳು ಆಪ್ತರಕ್ಷಕ ಕವಚಗಳೇ ಸರಿ. ಊಹಿಸಲೂ ಸಾಧ್ಯವಿಲ್ಲದಂತೆ ಮುಖ ಲಕ್ಷಣವನ್ನ ಬದಲಾಯಿಸಿ ಬಿಡುತ್ತವೆ.ಇದಕ್ಕೆ ನಾನು ಕಣ್ಣಾರೆ ಕಂಡಿರುವ ಒಂದು ನಿದರ್ಶನವೇ ಇದೆ.
ಹೀಗೆ ಒಂದು ತರಬೇತಿಯಲ್ಲಿ ಕುಳಿತಿರುವಾಗ,ಉದ್ಘಾಟನಾ ಸಮಾರಂಭದಲ್ಲಿ, ವೇದಿಕೆಯಲ್ಲಿ ಕುಳಿತಿದ್ದ ಓರ್ವ ಅಧಿಕಾರಿಯ ಮುಖ ಪರಿಚಿತವಾದದ್ದು ಅನಿಸಿದರೂ ,ಎಷ್ಟು ತಲೆ ಕೆರೆದುಕೊಂಡರೂ ಅವರ ಹೆಸರು ಹೊಳೆಯದೆ ಹೋಯಿತು.ಪಕ್ಕದಲ್ಲೇ ಕುಳಿತಿದ್ದ ನನ್ನ ಓರ್ವ ಸಹೋದ್ಯೋಗಿಯನ್ನು “ಮೇಡಂ,ಇವರ್ಯಾರು,ನಮ್ಮ ಜಿಲ್ಲೆಗೆ ಹೊಸದಾಗಿ ಬಂದಿದ್ದಾರೆಯೇ”ಎಂದಿದ್ದಕ್ಕೆ, ಆಕೆ ಪಿಸುಮಾತಿನಲ್ಲಿ,”ಅಯ್ಯೋ, ಹಳಬರೇ ಕಣ್ರೀ,ಹೊಸದಾಗಿ ವಿಗ್ ಬಳಸುತ್ತಿದ್ದಾರೆ, ಅಷ್ಟೂ ಗೊತ್ತಾಗಿಲ್ಲ ನಿಮಗೆ,”ಎಂದು ಅವರ ಹೆಸರು ಹೇಳಿದಾಗ,ನನಗೆ ಅಚ್ಚರಿಯೋ ಅಚ್ಚರಿ.
ಈ ವಿಗ್ ಧಾರಿಗಳಿಗಿಂತಲೂ ಧೈರ್ಯಶಾಲಿ ಗಳು ತಲೆಯನ್ನು ನುಣ್ಣಗೆ ಬೋಳಿಸಿ, ಮಿರ ಮಿರ ಮಿಂಚುವ ತಲೆಯೆತ್ತಿ ಆತ್ಮ ವಿಶ್ವಾಸದಿಂದ ಪ್ರಪಂಚ ಎದುರಿಸುತ್ತಾರೆ. ನಮ್ಮ ಅನುಪಮ್ ಖೇರ್,ಇಂದ್ರಜಿತ್ ಲಂಕೇಶ್ ತರಹ. ಸ್ವಲ್ಪ ದುಡ್ಡು ಹೆಚ್ಚಾಗಿರುವ ಜನ ಆಧುನಿಕ ವೈದ್ಯ ವಿಜ್ಞಾನದ ಮೊರೆ ಹೋಗುತ್ತಾರೆ. ಆಧುನಿಕ ವೈದ್ಯರು ಎಷ್ಟು ಮುಂದುವರೆದಿದ್ದಾರೆ ಎಂದರೇ ಬರಡು ತಲೆಯಲ್ಲೂ ಕೂದಲ ನಾಟಿ ಮಾಡಿ ಉತ್ತಮ ಬೆಳೆ ತೆಗೆಯುವ ಕೌಶಲ್ಯ ಸಿದ್ಧಿಸಿಕೊಂಡು ಬಿಟ್ಟಿದ್ದಾರೆ. ಆದರೆ ಕೂದಲ ಬೆಳೆ ತೆಗೆಯಲು ಹಣದ ಥೈಲಿ ಕೂಡ ದೊಡ್ಡದಿರ ಬೇಕು.ನಮ್ಮಂಥ ಮಧ್ಯಮ ವರ್ಗದವರ ಕೈಗೆ ಎಟಕುವ ಸೌಲಭ್ಯ ಖಂಡಿತ ಅಲ್ಲ.
ಗಂಡಸರಂತೆ ತಲೆಗೂದಲು ಪೂರ್ತಿ ಉದುರಿ ಹೋಗುವ ಸಮಸ್ಯೆ ಹೆಂಗಸರಲ್ಲಿ ಬಹಳ ಕಡಿಮೆ. ಎಲ್ಲೋ ಹತ್ತು ಲಕ್ಷದಲ್ಲಿ ಒಬ್ಬರಿಗೆ ಆ ರೀತಿ ಆಗಬಹುದೇನೋ. ಆದರೆ ಕೂದಲು ಉದುರುವ ಸಮಸ್ಯೆಯಂತೂ ಲಿಂಗಭೇದ ವಿಲ್ಲದೆ ಇಬ್ಬರನ್ನೂ ಕಾಡುತ್ತದೆ. ಹೆಣ್ಣು ಮಕ್ಕಳ ತಲೆಗೂದಲ ಆರೈಕೆ ಅಮ್ಮಂದಿರು ಚಿಕ್ಕಂದಿನಿಂದಲೇ ಶುರು ಮಾಡಿ ಬಿಡುತ್ತಾರೆ.ತಲೆಗೆ ಹಚ್ಚುವ ಎಣ್ಣೆಗಳೇನು,ಸೀಗೆ ಪುಡಿ ಚಿಜ್ಜಲು ಪುಡಿ ಹಾಕಿ ಉಜ್ಜಿ ತಲೆ ತೊಳೆದು ಕೊಡುವುದೇನು,ತಲೆಗೆ ಹಾಕುವ ಮೆಹಂದಿ ಪ್ಯಾಕ್ ಗಳೇನು,ಏನೇನು ಸಾಧ್ಯವೋ ಅದೆಲ್ಲವನ್ನೂ ಹೆಣ್ಣು ಮಕ್ಕಳ ತಲೆ ಮೇಲೆ ಪ್ರಯೋಗ ಮಾಡುವುದೇ ಸೈ.ಆದರೆ ಹುಡುಗಿಯರು ದೊಡ್ಡವರಾಗು ತ್ತಿದ್ದಂತೆ ಶಾಂಪೂಗೆ ನೆಗೆದು ಬಿಡುತ್ತಾರೆ.
ನಮ್ಮಮ್ಮ ಮತ್ತವರ ತಂಗಿಯರೆಲ್ಲ ಚಿಕ್ಕಂದಿನಲ್ಲಿ ಚೆನ್ನಾಗಿ ಕೇಶ ವರ್ಧಿನಿ ತೈಲ ಹಾಕಿ ಹಾಕಿ ಮಂಡಿಯುದ್ದ ಜಡೆ ಬೆಳೆಸಿಕೊಂಡವರು.ನನಗೂ ಚಿಕ್ಕಂದಿನಲ್ಲಿ ಅಮ್ಮ ಚೆನ್ನಾಗಿ ಕೇಶವರ್ಧಿನಿ ಪ್ರಯೋಗ ಮಾಡಿ ಪಿ ಯು ಸಿ ತಲುಪುವಷ್ಟರಲ್ಲಿ ತಲೆಕೂದಲು ಹೊರೆಯಾಗಿ ಬೆಳೆದು ಬಿದ್ದಿತ್ತು.ಆದರೆ ಕಾಲೇಜ್ ಸೇರಿದ ಮೇಲೆ ನನ್ನ ಗೆಳತಿಯರ ಹಾಗೆ ಚಿಕ್ಕದಾದ ಹೇರ್ ಸ್ಟೈಲ್ ಮಾಡಿಕೊಳ್ಳುವ ಆಸೆಯಾಗಿ ಕತ್ತರಿಸಿಕೊಂಡು ಬಿಟ್ಟೆ.ಈಗ ಎಷ್ಟು ವರ್ಷ ಬಿಟ್ಟರೂ ಬೆಳೆಯದ ನನ್ನ ಮೊಂಡು ಕೂದಲ ನೋಡಿ ,”ಛೆ,ಯಾಕಾದರೂ ಕತ್ತರಿಸಿ ಕೊಂಡೆನೋ,”ಎಂದು ಹಲುಬುವಂತಾಗುತ್ತದೆ.
ನನ್ನ ಸಹೋದ್ಯೋಗಿಯೊಬ್ಬರಿಗೆ ತಲೆಗೂದಲು ಸ್ವಲ್ಪ ತೆಳುವಾಗಿ ಇದ್ದದ್ದಕ್ಕೆ ಚಿಕ್ಕಂದಿನಲ್ಲಿ ಅವರಿಗೆ ಕೊರಗೂ ಅಂದ್ರೆ ಕೊರಗಂತೆ.ಆಗ ಅವರಜ್ಜಿ ಅವರನ್ನು ಸಮಾಧಾನ ಮಾಡಲು ಒಂದು ಕಥೆ ಹೇಳೋರಂತೆ. ಆ ಕಥೆ ಪ್ರಕಾರ ,”ಹೆಣ್ಣು ಮಕ್ಕಳು ಹುಟ್ಟುವ ಮುಂಚೆ ಬ್ರಹ್ಮ ತನ್ನ ಬಳಿ ಕರೆಸಿಕೊಂಡು,”ಮಗಳೇ,ನಿನಗೆ ಮಂಡೆ ಸುಖ ಬೇಕೋ,ಗಂಡನ ಸುಖ ಬೇಕೋ ಎಂದು ಕೇಳುತ್ತಾನಂತೆ. ಹಂಗಾಗಿ ಉದ್ದನೆಯ ಜಡೆಯ ಆರಿಸಿಕೊಂಡವರಿಗೆ ಬರೀ ಕಷ್ಟವೇ,ಒಳ್ಳೆ ಗಂಡ ಸಿಕ್ರೂ ಸುಖವೇನೂ ಇರಲ್ಲ,ಬೇಕಾದ್ರೆ ಸೀತೆ,ದ್ರೌಪದಿಯರ ನೋಡು,ಜೀವನ ಪೂರ್ತಿ ಕಷ್ಟವೇ,’ಅಂತ ಅಜ್ಜಿ ಕಥೆ ಹೇಳ್ತಿದ್ರು”.ಅಂತ ನನ್ನ ಗೆಳತಿ ನಕ್ಕರು.
ನನಗೂ ಇರಬಹುದೇನೋ ಅನ್ನಿಸಿತು.ಬೇಕಾದ್ರೆ ನೋಡಿ ನಮ್ಮ ಕಾಲೇಜ್ ದಿನಗಳಲ್ಲಿ ಸ್ಟೈಲ್ ಆಗಿ ಹೇರ್ ಕಟ್ ಮಾಡಿಕೊಂಡಿದ್ದ ಸುಂದರಿಯರಿಗೆ ಲೈನ್ ಹೊಡೆಯುವಷ್ಟು ಹುಡುಗರು ಉದ್ದ ಜಡೆ ಚೆಲುವೆಯರಿಗೆ ಹೊಡಿತಿರಲಿಲ್ಲ. ಈಗೀಗ ಉದ್ದ ಜಡೆಯವರು ಕಾಣ ಸಿಗೋದು ಅಪರೂಪದಲ್ಲಿ ಅಪರೂಪ. ಎಲ್ಲಾ ಕೆಲಸ ವೇಗದಲ್ಲಿ ಸಾಗಬೇಕಾದ ಈ ಕಾಲದಲ್ಲಿ ಉದ್ದ ಜಡೆ ಬೆಳೆಸಿಕೊಂಡು,ಅದಕ್ಕೆ ಎಣ್ಣೆ ಸೀಗೆ ಕಾಣಿಸಿಕೊಂಡು, ಸಿಕ್ಕಿಲ್ಲದೆ ಬಾಚಿಕೊಂಡು ಕಾಲ ಹರಣ ಮಾಡುವಷ್ಟು ಪುರುಸೊತ್ತು ಯಾರಿಗಿದೆ?ಎಲ್ಲರೂ ಚಿಕ್ಕದಾಗಿ ಕೂದಲು ಕತ್ತರಿಸಿಕೊಂಡು, ಶಾಂಪೂನಿಂದ ಸುಲಭವಾಗಿ ತೊಳೆದುಕೊಂಡು ಆರಾಮಾಗಿ ನಿಭಾಯಿಸುವವರೆ.
ನಾನೂ ಕೂಡ ಚಿಕ್ಕದಾಗಿ ಕೂದಲು ಕತ್ತರಿಸಿ ಕೊಂಡಿದ್ದರೂ ಸೀಗೆಪುಡಿ ಬಳಸುವುದು ಮಾತ್ರ ನಿಲ್ಲಿಸಿಲ್ಲ.ಚಿಕ್ಕಂದಿನಿಂದ ಬಳಸಿ ಬಳಸಿ ತಲೆ ಅದಕ್ಕೆ ಒಗ್ಗಿ ಹೋಗಿದೆ.ಏನಾದರೂ ಶಾಂಪೂ ಬಳಸಿದರೆ ಮುಗೀತು,ಬಾಚುವಾಗ ಬತ್ತಿ ಬತ್ತಿ ಕೂದಲು ಉದುರಿ ಹೋಗುತ್ತದೆ.ವಯಸ್ಸಾಗುತ್ತಾ ಹೋದಂತೆಲ್ಲ ಉದುರುವುದು ಇನ್ನೂ ಹೆಚ್ಚಾಗಿ ಅದನ್ನು ಕಡಿಮೆ ಮಾಡಲು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ಉದುರುವುದರ ಜೊತೆಗೆ ಕೂದಲು ಹಣ್ಣಾಗುವುದು ಕೂಡ ಶುರುವಾಗಿ ಬಿಟ್ಟರೆ ಅದು ಗಾಯದ ಮೇಲೆ ಬರೆ ಎಳೆದಂತೆಯೇ ಸರಿ.
ಒಂದು ನಾಲ್ಕೈದು ವರ್ಷಗಳ ಹಿಂದೆ ತಲೆಗೂದಲು ಹೇಗೆ ಉದುರಲು ಶುರುವಾಯಿತು ಅಂದ್ರೆ, ಎಷ್ಟೊಂದು ಬಾರಿ ತಲೆ ಬಾಚಿಯಾದ ನಂತರ ಬಾಚಣಿಗೆ ನೋಡಲು ಧೈರ್ಯವೇ ಸಾಲುತ್ತಿರಲಿಲ್ಲ. ಬಾಚುವಾಗ ಕಾಲ ಬಳಿ ಉದುರಿ ಬೀಳುತ್ತಿದ್ದ ಕೂದಲ ರಾಶಿ ಅಷ್ಟಿಷ್ಟಲ್ಲ.ಉದುರಿ ಉದುರಿ ತಲೆಬುರುಡೆ ಅಲ್ಲಲ್ಲಿ ಕಾಣಲಾರಂಭಿಸಿ ನನಗಂತೂ ಯೋಚಿಸಿ ಚಿಂತಿಸಿ ಸಾಕಾಗಿ ಹೋಯಿತು.
ಇನ್ನು ಕಷ್ಟಕಾಲದಲ್ಲಿ ಗೆಳತಿಯರಲ್ಲದೆ ಇನ್ಯಾರು ಕೈ ಹಿಡಿದಾರು?.ನಾನಂತೂ ಇರೋ ಬರೋ ಗೆಳತಿಯರನ್ನೆಲ್ಲಾ ಕೂದಲುದುರುವ ಸಮಸ್ಯೆಗೆ ಪರಿಹಾರ ಕೇಳಿ, ಕೇಳಿದವರೆಲ್ಲ ತಲೆಗೊಂದು ಐಡಿಯಾ ಕೊಟ್ಟರು.ಅವರಲ್ಲಿ ಹೆಚ್ಚಿನ ಶೇಕಡಾವಾರು ಜನ ಎಣ್ಣೆ ಮಸಾಜ್ ಸಲಹೆ ಕೊಟ್ಟು ಅದನ್ನೇ ಮೊದಲು ಪ್ರಯೋಗಿಸುವ ಎಂದುಕೊಂಡೆ.
ಬಿಸಿ ಎಣ್ಣೆ ಮಸಾಜ್ಗೆ ಎಂದು, ಕರಿಬೇವಿನ ಎಣ್ಣೆ,ನೆಲ್ಲಿಕಾಯಿ ಎಣ್ಣೆ,ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಅಂತೆಲ್ಲ ತಂದು,ಬೆಚ್ಚಗೆ ಮಾಡಿ ಹತ್ತಿಯುಂಡೆ ಅದ್ದಿ,ಕೂದಲ ಬುಡಕ್ಕೆ
ಇಳಿಯುವಂತೆ,ತಲೆಗೂದಲು ಬಗೆದು,ಬಗೆದು ತೈಲ ಉಜ್ಜಿ ನೋಡಿದೆ.ಮೊಟ್ಟೆಯ ಬಿಳಿ, ತೆಂಗಿನ ಹಸಿ ಹಾಲು, ಈರುಳ್ಳಿ ರಸ,ಮೊಸರು ಇತ್ಯಾದಿಗಳನ್ನೆಲ್ಲಾ ಲೇಪಿಸಿದೆ. ಇವೆಲ್ಲಾ ಸೇರಿ ಮಕ್ಕಳು ಹತ್ತಿರವೂ ಸುಳಿಯದಷ್ಟು ತಲೆ ಕುವಾಸನೆ ಬೀರಲು ಶುರುವಾಗಿದ್ದು ಬಿಟ್ಟರೆ ತಲೆಗೂದಲು ಉದುರುವುದು ಮಾತ್ರ ನಿಲ್ಲಲಿಲ್ಲ.
ಒಮ್ಮೆ ಹೀಗೆ ನೆರೆಮನೆಯೊಂದಕ್ಕೆ ಅರಿಶಿನ ಕುಂಕುಮ ಕ್ಕೆಂದು ಹೋಗಿದ್ದಾಗ ನಮ್ಮ ಪಕ್ಕದ ಮನೆಯಾಕೆ,”ಇದ್ಯಾಕ್ರಿ,ನಿಮ್ಮ ತಲೆಗೂದಲೆಲ್ಲ ಇಷ್ಟೊಂದು ಉದುರಿ ಬತ್ತಿಯಷ್ಟಾಗಿ ಬಿಟ್ಟಿದೆಯಲ್ಲ,”ಎಂದು ಕೇಳಿದಾಗ ನನ್ನ ಕಷ್ಟವನ್ನೆಲ್ಲ ಹೇಳಿಕೊಂಡೆ.
ಕೇಳಿಕೊಂಡ ನಮ್ಮ ಪಕ್ಕದ ಮನೆಯಾಕೆ,”ರೀ,ಸಿಂಚು ಪಾರ್ಲರ್ ಹತ್ರ ಇರೋ ಸ್ಕಿನ್ ಡಾಕ್ಟ್ರು ಬಹಳ ಚೆನ್ನಾಗಿ ನೋಡ್ತಾರಂತೆ.ನನ್ ತಂಗಿ ಮುಖದ ಸನ್ ಬರ್ನ್ ಎಲ್ಲಾ ಹೋಗೋ ಹಾಗೆ ಮಾಡಿದ್ದಾರೆ. ಒಂದ್ ಸಾರಿ ಹೋಗಿ ಬನ್ನಿ”ಅಂತ ಹೇಳಿದ್ರು.ಸರಿ ಅಪಾಯಿಂಟ್ಮೆಂಟ್ ತೊಗೊಂಡು ಕ್ಲಿನಿಕ್ ಗೆ ಹೋಗಿ ವೈದ್ಯರ ಕಾಯ್ದು ಕುಳಿತೆ.ಸ್ವಲ್ಪ ಹೊತ್ತಲ್ಲೇ ವೈದ್ಯರು ಬಂದಾಗ ನೋಡಿದರೆ,ಅವರ ತಲೆ ಮಿರ ಮಿರ ಮಿಂಚುತ್ತಿದೆ!”ಛೆ,ತನ್ನ ತಲೆಗೂದಲನ್ನು ಕಾಪಾಡಿಕೊಳ್ಳದ ವೈದ್ಯರು ನನಗೇನು ಚಿಕಿತ್ಸೆ ಕೊಟ್ಟಾರು” ಅನಿಸಿದರೂ,”ಪುರುಷ ಗೈನಕಾಲಜಿಸ್ಟ್ ಇರೋದಿಲ್ಲವೆ, ಹಾಗೆ ಚಾಣೆ ಮಂಡೆ ಚರ್ಮ ವೈದ್ಯರು ಇರಬಾರದೇ” ಅನ್ನೋ ಉದಾರ ಮನಸ್ಸಿನಿಂದ ಸಮಾಧಾನ ತಂದುಕೊಂಡೆ.
ಚರ್ಮವೈದ್ಯರ ಬಳಿ ನನ್ನ ಸಮಸ್ಯೆಯನ್ನೆಲ್ಲ ಹೇಳಿಕೊಂಡೆ. ಪುಣ್ಯಾತ್ಮನಿಗೆ ತನಗೇ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲದ ಬೇಸರವೋ ಏನೋ. ಉದಾಸೀನದಲ್ಲೇ ಏನೇನೋ ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ಕೊಟ್ಟು, ಹಚ್ಚಲು ಎಂತಹದೋ ಒಂದು ತೈಲ ಕೊಟ್ಟು ಕಳುಹಿಸಿದರು.
ಆ ತೈಲ,ಟ್ಯಾಬ್ಲೆಟ್ ಗಳೂ ಕೂಡ ತಮ್ಮ ಗುರಿ ಸಾಧನೆಯಲ್ಲಿ ವಿಫಲವಾದವು.ಅದನ್ನು ನಾನು ಮುಂಚೆಯೇ ಯೋಚಿಸಿದ್ದೆ ಬಿಡಿ. ಹೀಗೆ ಹಚ್ಚುವ ಲೇಪಿಸುವ ಉಪಾಯಗಳು ಕೈ ಕೊಟ್ಟಮೇಲೆ ಆಧುನಿಕ ಬೃಹಸ್ಪತಿ ಗೂಗಲನ ಮೊರೆ ಹೋದೆ.ಅಲ್ಲಿ ಯೂ ಟ್ಯೂಬ್ ನ ಒಂದು ವಿಡಿಯೋದಲ್ಲಿ ಓರ್ವ ಪೌಷ್ಟಿಕಾಂಶ ತಜ್ಞೆ,”ಆಹಾರ ಹೇಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ,ನಮ್ಮ ಚರ್ಮ,ಹಲ್ಲು ,ಕೂದಲು ಹೇಗೆ ಒಳ್ಳೆಯ ಆಹಾರದ ಮೇಲೆ ಅವಲಂಬಿತವಾಗಿರುತ್ತವೆ,ಉತ್ತಮ ಕೇಶ ಪೋಷಣೆಗೆ ಯಾವ ಯಾವ ಪ್ರೊಟೀನ್ ಯುಕ್ತ ಕಾಳುಗಳ ಸೇವಿಸಿಬೇಕು”ಇತ್ಯಾದಿ ಇತ್ಯಾದಿ ರಸವತ್ತಾಗಿ ಕೊರೆದಳು.
ಅವಳು ಹೇಳಿದ ಹಾಗೆ ಮಾರನೇ ದಿನದಿಂದಲೇ ನನ್ನ ಕಾರ್ಬೋಹೈಡ್ರೇಟ್ ಗಳ ಸೇವನೆ ಕಡಿತಗೊಳಿಸಿ,ಪ್ರೊಟೀನ್ ಒಳಸುರಿ ಹೆಚ್ಚು ಮಾಡುವ ಸಲುವಾಗಿ,ಎಲ್ಲಾ ವಿಧದ ಕಾಳುಗಳ,ಹಾಲಿನ,ಮೊಟ್ಟೆ ಮಾಂಸದ ಸೇವನೆ ಹೆಚ್ಚಾಯಿತು.ಆದರೆ ಇದರಿಂದ ವಾತ ಸಮಸ್ಯೆ ಶುರುವಾಗಿ ಕೈ ಕಾಲುಗಳೆಲ್ಲ ಹಿಡಿದುಕೊಳ್ಳಲು ಬೇರೆ ಶುರುವಾಯಿತು.ನಿಲ್ಲಲು ಕೂರಲು ಆಗದ ಈ ಹಿಂಸೆಯಲ್ಲಿ “ತಲೆಗೂದಲು ಹೆಚ್ಚು ಬೆಳೆದರೂ ನಿಲ್ಲಲು ಕೂರಲು ಆಗದಂತಹ ಪರಿಸ್ಥಿತಿ ತಂದು ಕೊಳ್ಳೋದು ಬೇಡ ದೇವಾ ” ಅನ್ನಿಸಿ, ನನ್ನ ಪ್ರೊಟೀನ್ ಡಯಟ್ ನಿಲ್ಲಿಸಿ ತೆಪ್ಪಗಾದೆ.
ನನ್ನ ಪರಿಪಾಟಲುಗಳ ಗಮನಿಸುತ್ತಿದ್ದ ನನ್ನ ಮಗಳು,”ಅಮ್ಮ ಮೊದಲು ಕೂದಲು ಉದುರುತ್ತೆ ಅನ್ನೋದರ ಬಗ್ಗೆ ಚಿಂತೆ ಮಾಡೋದು ನಿಲ್ಲಿಸು ಆಗ ತಾನೇ ತಾನಾಗಿ ಅರ್ಧ ಸಮಸ್ಯೆ ಕಡಿಮೆಯಾಗುತ್ತೆ.ವಯಸ್ಸಾದಂತೆ ಕೂದಲು ಕಡಿಮೆ ಯಾಗೋದು,ತಲೆ ಹಣ್ಣಾಗೋದು ಎಲ್ಲರಿಗೂ ಸಹಜ,ಆರಾಮಾಗಿ ಎಲ್ಲವೂ ಬಂದಂತೆ ಸ್ವೀಕರಿಸುವುದು ಬಿಟ್ಟು ಯೋಚನೆ ಮಾಡಿ ಕೊರಗಬೇಡ, ಕಣ್ಣು ತುಂಬಾ ನಿದ್ದೆ ಮಾಡು,ಎಲ್ಲಾ ಸರಿ ಹೋಗುತ್ತೆ,” ಎಂದಾಗ ಮಗಳು ಎಷ್ಟು ಬೇಗ ದೊಡ್ಡವಳಾಗಿ ಬಿಟ್ಟಳಲ್ಲ, ಎನಿಸಿ ಬಿಟ್ಟಿತು.
ಈಗ ನಾನು ತಲೆ ಬಾಚಿಯಾದ ಮೇಲೆ ಅಪ್ಪಿ ತಪ್ಪಿಯೂ ಬಾಚಣಿಗೆಯನ್ನಾಗಲಿ,ಕಾಲ ಬುಡವನ್ನಾಗಲಿ ನೋಡದೆ, ನೋಡಿದರೂ ,ಸುಮ್ಮನೆ ಉದುರಿರುವ ಕೂದಲನ್ನು ಉಂಡೆ ಕಟ್ಟಿ ಕಸದ ಬುಟ್ಟಿಗೆ ಎಸೆದು ತೆಪ್ಪಗಾಗುತ್ತೇನೆ.ಅದೇನೋ ಹೇಳ್ತಾರಲ್ಲ “ಹೊಟ್ಟೆ ಬರುತ್ತೇ ಹೋಗಲ್ಲ,ಕೂದಲು ಹೋಗುತ್ತೆ ಬರಲ್ಲ, “ ಆ ಸತ್ಯವನ್ನ ಮನಸಾರೆ ಒಪ್ಪಿಕೊಂಡು ಬಿಟ್ಟಿದ್ದೇನೆ.
ಕೂದಲು ಉದುರುವುದು, ಹಣ್ಣಾಗುವುದು ಜಾರಿ ಹೋಗುತ್ತಿರುವ ತಾರುಣ್ಯ, ತೆವಳುತ್ತಾ, ತೆವಳುತ್ತಾ ನಾವು ವೃದ್ಧಾವಸ್ಥೆಗೆ ಸಮೀಪಿಸುತ್ತಿರುವುದರ ಸಂಕೇತ.ಮುಪ್ಪು ಮತ್ತು ಸಾವಿಗೆ ಮನುಷ್ಯರು ಹೆದರುವಷ್ಟು ಬಹುಶಃ ಇನ್ಯಾವುದಕ್ಕೂ ಹೆದರುವುದಿಲ್ಲವೇನೋ. ಹಾಗಾಗಿಯೇ ಅವುಗಳ ತಡೆಯಲು ಏನೆಲ್ಲಾ ಕಸರತ್ತು ಮಾಡುತ್ತಾರೆಂದು ಆನಿಸುತ್ತದೆ. ಮಾನವ ಏನೇ ಪ್ರಯತ್ನ ಪಟ್ಟರೂ ಈ ವೃದ್ದಾಪ್ಯ,ಸಾವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೂ ಅವುಗಳ ಗೆಲ್ಲಲು ಮನುಷ್ಯ ತನ್ನ ಪ್ರಯತ್ನವನ್ನೇನೂ ನಿಲ್ಲಿಸಿಲ್ಲ, ಆದರೆ ಯಶಸ್ಸು ಸಿಗುವುದನ್ನು ಮಾತ್ರ ನಿರೀಕ್ಷಿಸಲಾಗದು.
–ಸಮತಾ.ಆರ್
Superb
ವಾವ್ ತಮ್ಮ ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸಿರುವ ಲೇಖನ ತಿಳಿಹಾಸ್ಯದ ಲೆಪನದೊಂದಿಗೆ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಮೇಡಂ.
,
ತುಂಬಾ ಚೆನ್ನಾಗಿ ಮೂಡಿಬಂದಿದೆ
Superrrr
ತುಂಬಾ ಚೆನ್ನಾಗಿದೆ ಮತ್ತು ಸಾಪೇಕ್ಷವಾಗಿ ಮುಂದುವರಿಸಿ ನಾನು ಈ ರೀತಿ ಹೆಚ್ಚು ಓದಲು ಬಯಸುತ್ತೇನೆ
Super
ತಿಳಿ ಹಾಸ್ಯದಿಂದ ಕೂಡಿದ ಸಾಕಷ್ಟು ವಿಚಾರಗಳನ್ನು ಒಳಗೊಂಡ ವಿಸ್ತೃತ ಬರಹ.
Tumba chennagide
ಲೇಖನಕ್ಕೆ ಹಾಸ್ಯ ಲೇಪನ..ಮುದವಾಯಿತು ಮನ
Very nice
ಎಲ್ಲರ ಅನುಭವ ಅವಸ್ಥೆ ಯನ್ನು ನವಿರಾದ ಹಾಸ್ಯ ದೊಂದಿಗೆ ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಾ ಮೇಡಂ
very nice article madam. common matter expressed with creative writing.
ಗಂಭೀರ ಸಮಸ್ಯೆಗೆ ತಿಳಿಹಾಸ್ಯದ ಲೇಪನ ತುಟಿಯಂಚಿನಲ್ಲಿ ಕಿರುನಗೆಯನ್ನು ಉಳಿಸಿತು.
ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಸಿಕ್ಕು ಸಿಕ್ಕಾದ ಕೂದಲಿನ ಸಮಸ್ಯೆಯನ್ನು ಪೆನ್ನಿನಿಂದ ಬಿಡಿಸಿದವರಲ್ಲಿ ನೀವೇ ಮೊದಲಿಗರು….
ಜಳಕ ಮಾಡಿ ಒರೆಸಿ ನವಿರಾದ ಸಿಗೇಕಾಯಿ ಘಮಲಿನಂತೆ ನಿಮ್ಮ ಲೇಖನದಲ್ಲಿ ಅನುಭವದ ವಾಸನೆ ಗಾಢವಾಗಿದೆ….
ತಿಳಿಹಾಸ್ಯ ಭರಿತ ನಿರೂಪಣೆಯಿಂದ ಕೂದಲಿನ ಸಮಸ್ಯೆಯಂತೂ ಪರಿಹಾರವಿಲ್ಲದೆ ನಿಂತಿತು! ಲೇಖನ ಸೂಪರ್.. ಸಮತಾ ಮೇಡಂ!
Thank you madam
ಸಮತಾ ತುಂಬಾ ಸೊಗಸಾದ ಬರಹವಿದು. ನಿಮ್ಮ ಲಲಿತ ಪ್ರಬಂಧಗಳು ಓದಲು ಖುಷಿಯಾಗುತ್ತದೆ ನನಗೆ
ಖುಷಿ ಉಂಟುಮಾಡುವ ಲೇಖನ.
ನಿಮ್ಮ ಬರೆಹದ ವಸ್ತುವೇ ಚೆಂದ ಸಮತಾ..
ತಿಳಿಹಾಸ್ಯ ಲೇಪನದ ಸುಲಲಿತವಾದ ಬರಹ..ಸೊಗಸಾಗಿದೆ.
ಓದಿ ಮೆಚ್ಚಿಕೊಂಡ ಎಲ್ಲರಿಗೂ ನನ್ನ ಧನ್ಯವಾದಗಳು
ಬೊಕ್ಕೂ ತಲೆ ಸಮಸ್ಯೆ ಯಾವ ಸೆಲೆಬ್ರಿಟಿಯನ್ನೂ
ಕಾಡದೆ ಬಿಟ್ಟಿಲ್ಲ. ಅದರಲ್ಲೂ ಮದುವೆಯಾಗದ ಯುವಕರ
ಗೋಳೂ ಹೇಳತೀರದು. ಆದರೆ ಇತ್ತೀಚೆಗೆ ಇದೆ ಫ್ಯಾಷನ್
ಜಗತ್ತಿನ ಆಕರ್ಷಣೆಯಾಗಿದೆ. ಅತ್ತೆಗೊಂದು ಕಾಲ,
ಸೊಸೆಗೊಂದು ಕಾಲ. ತನ್ನನ್ನೇ ಹಾಸ್ಯಕ್ಕೆ ಕಥಾವಸ್ತು ಮಾಡಿ
ಕೊಂಡು ಮೂಡಿದ ಬರಹ ಅಮೋಘವಾಗಿದೆ.