ಮಕ್ಕಳಿಗೆ ಅರಿವಿರಲಿ ಕಷ್ಟ
ಎಲ್ಲಾ ತಂದೆ ತಾಯಿಗಳು ಆಡುವ ಸಾಮಾನ್ಯ ಮಾತು “ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ . ಅವರನ್ನು ಸುಖವಾಗಿ ಬೆಳೆಸಬೇಕು”. ನಿಜ ಅದು ಸಹಜವೂ ಹೌದು. ಆದರೆ ಪೂರ್ಣ ಸಮ್ಮತವಲ್ಲ. ಅವರು ನಾವು ಪಟ್ಟಂತಹ ಕಷ್ಟ ಪಡುವುದು ಬೇಡ ಆದರೆ ನಾವು ಎಷ್ಟು ಕಷ್ಟ ಕೋಟಲೆಗಳನ್ನು ಅನುಭವಿಸಿದ್ದೆವು ಎಂಬ ಅರಿವು ಅವರಲ್ಲಿ ಮೂಡಿಸಬೇಕು. ಅಷ್ಟೇ ಅಲ್ಲ ಅವರು ಈಗ ಅನುಭವಿಸುತ್ತಿರುವ ಸುಖ ಆರಾಮಗಳು ನಮ್ಮ ಕಷ್ಟದ ಪ್ರತಿಫಲವೆಂದು ತಿಳಿಸಿ ಹೇಳಬೇಕು . ಈ ಕಠೋರ ಪ್ರಪಂಚದಲ್ಲಿ ಬಾಳಲು ಬೇಕಾದ ಧೈರ್ಯ ತುಂಬಬೇಕಾದರೆ ಅಲ್ಲಿ ಅನುಭವಿಸಬೇಕಾದ ಸಮಸ್ಯೆಗಳ ಅರಿವು ಚಿಕ್ಕಂದಿನಿಂದಲೇ ಅವರ ಮನದಲ್ಲಿ ಚಿತ್ರಿತವಾಗಬೇಕು.
ಕಷ್ಟವೆಂದರೇನೆಂದೇ ಅರಿಯದಂತೆ ಶುದ್ಧೋದನ ಸಿದ್ಧಾರ್ಥನನ್ನು ಬೆಳೆಸಿದ. ಒಮ್ಮಿಂದೊಮ್ಮಿಗೆ ಧುತ್ತೆಂದು ಎದುರಾದಾಗ ಜೀವನದ ಕಟು ಸತ್ಯ ಅವನಲ್ಲಿ ವೈರಾಗ್ಯವನ್ನೇ ಮೂಡಿಸಿತು. ಅರಮನೆಯ ಸುಖ ಭೋಗದಲ್ಲಿ ಮುಳುಗಿದ ಮಹಾವೀರನಿಗೆ ಇದ್ದಕ್ಕಿದ್ದಂತೆ ವಿರಕ್ತಿ ಮೂಡಿದುದೂ ಹಾಗೆ . ಅದರ ಬದಲು ಚಿಕ್ಕಂದಿನಿಂದಲೇ ಜೀವನದ ಹಂತಹಂತಗಳಲ್ಲಿ ಎದುರಾದ/ ಎದುರಾಗುವ ಆರ್ಥಿಕ ಸಾಮಾಜಿಕ ಕೌಟುಂಬಿಕ ಸಮಸ್ಯೆಗಳನ್ನು ಮಕ್ಕಳಿಗೆ ಅರ್ಥ ಮಾಡಿಸಿ ಅವುಗಳ ಪರಿಹಾರದ ನಿಟ್ಟಿನಲ್ಲಿ ಅವರ ಸಲಹೆ ನೆರವನ್ನು ಪಡೆದುಕೊಂಡರೆ “ಕುಟುಂಬ” ವ್ಯವಸ್ಥೆಗೆ ಪೂರ್ಣ ನ್ಯಾಯ ಒದಗಿಸಿದಂತೆ. ಅಪ್ಪ ಅಮ್ಮ ಬೆವರು ಸುರಿಸಿ ಕಷ್ಟಪಟ್ಟು ಹಣ ಸಂಪಾದಿಸುವುದರ ಅರಿವು ಮಕ್ಕಳಿಗೆ ಇರದಿದ್ದಲ್ಲಿ ಅವರು ವಿದ್ಯೆಯ ಕಡೆಗೆ ಲಕ್ಷ್ಯ ಕೊಡದೆ ಜೀವನದಲ್ಲಿ ಏನನ್ನೂ ಸಾಧಿಸದ ಅಪ್ರಯೋಜಕರಾಗಬಹುದು. ತಂದೆ ತಾಯಿಯರ ಪರಿಶ್ರಮದ ಅರಿವಿರುವ ಮಕ್ಕಳು ತಾವು ದೊಡ್ಡವರಾದ ಮೇಲೆ ಹಣಕ್ಕೆ ಪರಿಶ್ರಮಕ್ಕೆ ಪ್ರಾಧಾನ್ಯತೆ ಕೊಡುತ್ತಾರೆ ಮತ್ತು ಹೆತ್ತವರನ್ನು ಗೌರವಿಸುತ್ತಾರೆ ಕೂಡ .
ನನ್ನ ಪರಿಚಿತರ ಮನೆಯಲ್ಲಿ ಮನೆಯ ಆರ್ಥಿಕ ಸಮಸ್ಯೆ ಕಷ್ಟಗಳ ಪರಿವೇ ಇಲ್ಲದಂತೆ ಮಗ ಹಾಗೂ ಮಗಳನ್ನು ಮುದ್ದಾಗಿ ಬೆಳೆಸಿದರು. ಮುಂದೆ ವಿದೇಶಕ್ಕೆ ಹೆಚ್ಚಿನ ಓದಿಗೆ ಕಳಿಸಲಿಲ್ಲ ಇಲ್ಲೆ ಕೆಲಸಕ್ಕೆ ಸೇರಬೇಕಾಯಿತು ಎಂದು ಮಗ ಹೆತ್ತವರ ಮೇಲೆ ಹರಿಹಾಯುತ್ತಾನೆ . ತನ್ನ ಶ್ರೀಮಂತ ಗೆಳತಿಯರಂತೆ ಅದ್ಧೂರಿ ವಿವಾಹ ಮಾಡಲಿಲ್ಲವೆಂದು ಮಗಳಿಗೆ ಕೋಪ . ಮೊದಲಿನಿಂದ ತಮ್ಮ ಇತಿಮಿತಿಯ , ಕಷ್ಟಗಳ ಅರಿವು ಮಕ್ಕಳಲ್ಲಿ ಮೂಡಿಸಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಅಲ್ಲವೇ?
ಇನ್ನು ಅಮ್ಮಂದಿರು ಮನೆಯ ಕೆಲಸಗಳ, ಆಗುಹೋಗುಗಳಲ್ಲಿನ ಸಾಧಕ ಬಾಧಕಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಗೃಹಕೃತ್ಯಗಳಲ್ಲಿ ಮಕ್ಕಳ ಸಹಾಯವನ್ನು ತೆಗೆದುಕೊಳ್ಳಬೇಕು . ತಾನು ಸುಸ್ತಿನಿಂದ ದಣಿದಿದ್ದರೂ ಮಕ್ಕಳನ್ನು ಕಡ್ಡಿ ಆಚೆ ತೆಗೆದು ಇಡದಂತೆ, ತಿಂದ ತಟ್ಟೆಯಲ್ಲಿ ಕೈ ತೊಳೆಸುವ ಅಮ್ಮಂದಿರನ್ನು ಕಂಡಿದ್ದೇನೆ. ಇದು ಮಕ್ಕಳಿಗೆ ಪೂರಕವಾಗದ ಮಾರಕವೆನಿಸುವ ಮುದ್ದು ಅಷ್ಟೇ.
ನಮ್ಮ ತಂದೆ ತಾಯಿಗಳ ಆರ್ಥಿಕ ಪರಿಸ್ಥಿತಿಯ ಅರಿವಿದ್ದ ಕಾರಣ ನಾವು ಇದ್ದುದ್ದರಲ್ಲಿಯೇ ತೃಪ್ತರಾಗಿರುವ ಗುಣ ಬೆಳೆಸಿಕೊಂಡು ಓದಿ ಕೆಲಸಕ್ಕೆ ಸೇರುವ, ಮನೆಗೆ ನೆರವಾಗುವ ಗುರಿ ಹೊಂದಿದ್ದೆವು . ಅಮ್ಮನಿಗೆ ಮನೆಗೆಲಸದಲ್ಲಿ ಕೈಜೋಡಿಸುತ್ತಿದ್ದೆವು. ಆಡಂಬರಕ್ಕೆ ಮನಸೋಲದೆ ಸರಳತೆಯಲ್ಲಿ ಬೆಳೆದೆವು.
ಮಕ್ಕಳಿಗೆ ಜೀವನದ ಕಷ್ಟ ನಷ್ಟದ ಬಗ್ಗೆ ತಿಳಿಸಿ ಹೇಳಿ ಬದುಕಿನ ಸಮರಕ್ಕೆ ಅಣಿಗೊಳಿಸುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಆಗುತ್ತದೆ . ಅವರ ರಕ್ಷಣೆ ನಮ್ಮ ಹೊಣೆ ನಿಜ ; ಆದರೆ ನಾಳೆ ನಾವಿರದಿದ್ದರೂ ತಮ್ಮನ್ನು ತಾವು ಪೊರೆದುಕೊಳ್ಳುವುದಕ್ಕೆ ಅವರನ್ನು ದೈಹಿಕ ಮಾನಸಿಕ ಹಾಗೂ ಆರ್ಥಿಕವಾಗಿ ಸದೃಢರಾಗಿಸಿ ಸನ್ನದ್ಧಗೊಳಿಸುವಲ್ಲಿ ಕಷ್ಟಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುವುದು ಮುಖ್ಯ ಅವಶ್ಯ ಮಾತ್ರವಲ್ಲ ಅನಿವಾರ್ಯವೂ ಹೌದು .
–ಸುಜಾತಾ ರವೀಶ್ ,ಮೈಸೂರು
True madam
ಧನ್ಯವಾದಗಳಿ
ಪ್ರಸ್ತುತ ಸಮಯದಲ್ಲಿ ಅವಶ್ಯವಾದ ಉತ್ತಮ ಲೇಖನ
ಹೌದು. ಪೋಷಕರ ಹೊಣೆಗಾರಿಕೆ ಬಗ್ಗೆ ಚೆನ್ನಾಗಿ ಹೇಳಿರುವಿರಿ. ಉತ್ತಮ ಬರಹ.
ಧನ್ಯವಾದಗಳು ನಿಮ್ಮ ಸವಿ ಸ್ಪಂದನೆಗಾಗಿ
ನಿಜವಾದ ವಿಷಯ , ಉತ್ತಮ ಲೇಖನ
ಧನ್ಯವಾದಗಳು
ಸುಜಾತಾ ರವೀಶ್
ಬಹಳ ಚೆನ್ನಾಗಿ ಹೇಳಿದ್ದೀರಿ ಮೇಡಂ, ನೀವು ಹೇಳಿರೋ ಅಷ್ಟೂ ವಿಚಾರ ಸಮ್ಮತ.
ಧನ್ಯವಾದಗಳು
ಸುಜಾತಾ ರವೀಶ್
ನಾವು ಕಷ್ಟಪಟ್ಟದ್ದು ಸಾಕು ನಮ್ಮ ಮಕ್ಕಳು ಕಷ್ಟಫಡುವುದು ಬೇಡ ಎನ್ನುವ ಮನೋಭಾವನೆ ಬೆಳೆಸಿಕೊಳ್ಳುವ ಪೋಷಕರು .. ಸ್ವಲ್ಪ ಯೋಚಿಸಿ ತಾವು ನಡೆದುಬಂದ ದಾರಿ ಮಕ್ಕಳಿಗೆ ತಿಳಿಸಿ ಮುನ್ನಡೆ ದೊರೆ ಅವರಿಗೂ ಒಳ್ಳೆಯ ದು ಮಕ್ಕಳಿಗೂ ಒಳ್ಳೆಯ ದು… ಉತ್ತಮ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.
ತಮ್ಮ ಸವಿ ಸ್ಪಂದನೆಯಾಗಿ ಅನಂತ ಧನ್ಯವಾದಗಳು ಮೇಡಂ
ಸುಜಾತಾ ರವೀಶ್
ಸರಿಯಾಗಿ ಹೇಳಿದಿರಿ.
ಇಂದಿನ ಯುವ ಪೀಳಿಗೆಯ ತಂದೆ-ತಾಯಿಗಳ ವೈಚಾರಿಕ
ಜವಾಬ್ದಾರಿಯ ಮಂಡನೆ ತುಂಬಾ ಅಪ್ಯಾಯಮಾನವಾಗಿ
ಮೂಡಿದೆ..
ಧನ್ಯವಾದಗಳು ವತ್ಸಲಾ
ಸುಜಾತಾ ರವೀಶ್
ಒಪ್ಪತಕ್ಕ ಮಾತು.ಆದರೆ ಈಗಿನ ಒಂದು, ಎರಡು ಮುದ್ದಿನಕೊಂಬುಗಳಿಗೆ ಹೆತ್ತವರು ಹೇಳಿ ಕೊಡಬೇಕಲ್ಲವೇ!.
ಒಳ್ಳೆಯ ಬರಹ. ತಂಗಿ.
ತಮ್ಮ ಸಹೃದಯಿ ಓದು ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಧನ್ಯವಾದಗಳು
ಸುಜಾತಾ ರವೀಶ್
ಸ್ವತಃ ಕಷ್ಟಪಟ್ಟರೂ ಸಹಾ ತಮ್ಮ ಮಕ್ಕಳಿಗೆ ಆ ಬಗ್ಗೆ ತಿಳಿಸದೆ, ಅದೆಲ್ಲ ಆ ಕಾಲದಲ್ಲಿ ಆಯಿತು ಅನ್ನುತ್ತಾ ಮಕ್ಕಳು ಹೇಳಿದಂತೆ ಕುಣಿಯುವ ಹೆತ್ತವರನ್ನು ಕಂಡಿರುವೆ
ಹೌದು ಆ ರೀತಿಯ ಅತಿ ಓಲೈಸುವಿಕೆ ಬೇಡ ಎ ಅನ್ನೋದೆ ನನ್ನ ಬರಹದ ಉದ್ದೇಶ .ತಮ್ಮ ಪ್ರತಿಸ್ಪಂದನೆಗೆ ತುಂಬಾ ತುಂಬಾ ಧನ್ಯವಾದಗಳು .
ಸುಜಾತಾ ರವೀಶ್
ಜೀವನದ ಹೋರಾಟಕ್ಕೆ ಮಕ್ಕಳನ್ನು ಸಜ್ಜುಗೊಳಿಸುವ ಹೊಣೆಗಾರಿಕೆ ತಂದೆತಾಯಿಗಳು . ತಾವಿಲ್ಲದಿದ್ದರೂ ಬದುಕನ್ನು ನಿಭಾಯಿಸುವ ಶಕ್ತಿ ಮಕ್ಕಳಿಗಿದೆಯೆಂಬ ಭರವಸೆಯನ್ನು ಮಕ್ಕಳು ಕೊಡಬೇಕು
ಖಂಡಿತ ನಮ್ಮ ಅತಿ ಮುದ್ದು ಅವರ ಸ್ವಸಾಮರ್ಥ್ಯದ ಮೇಲೆ ಕಲ್ಲು ಹಾಕುವಂತಿರಬಾರದು ತಮ್ಮ ಅಭಿಪ್ರಾಯ ಹಾಗೂ ಸಹಮತಕ್ಕೆ ಧನ್ಯವಾದಗಳು
ಸುಜಾತಾ
“ಮಕ್ಕಳಿಗೆ ಜೀವನದ ಕಷ್ಟ ನಷ್ಟದ ಬಗ್ಗೆ ತಿಳಿಸಿ ಹೇಳಿ ಬದುಕಿನ ಸಮರಕ್ಕೆ ಅಣಿಗೊಳಿಸುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಆಗುತ್ತದೆ “. ಬಹಳ ಒಳ್ಳೆಯ ಮಾತುಗಳು.
ತಮ್ಮ ಸಹಮತ ಮೆಚ್ಚುಗೆಯ ಪ್ರತಿಕ್ರಿಯೆಗೆ ಅತ್ಯಂತ ಆಭಾರಿ.
ಸುಜಾತಾ
ಪಾಲಕರ ಹೊಣೆಗಾರಿಕೆಯನ್ನು ಚೆನ್ನಾಗಿ ಎಚ್ಚರಗೊಳಿಸಿದ್ದೀರಿ. ಅಭಿನಂದನೆಗಳು.
ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಚಿಕ್ಕ ಪುಟ್ಟ ಜವಾಬ್ದಾರಿಗಳನ್ನು ವಹಿಸಿದರೆ, ಅದರ ಅರಿವು ಮುಂದಕ್ಕೆ ಸಹಾಯವಾಗುವುದರಲ್ಲಿ ಸಂಶಯವಿಲ್ಲ. ಸೊಗಸಾದ ನಿರೂಪಣೆಯ ಸಕಾಲಿಕ ಬರಹ ಚೆನ್ನಾಗಿದೆ ಮೇಡಂ.
ತಮ್ಮ ಮೆಚ್ಚುಗೆಯ ಪ್ರತಿಸ್ಪಂದನಕ್ಕೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ
ಸುಜಾತಾ
ತಮ್ಮ ಸಹಮತಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಮೇಡಮ್
ಸುಜಾತಾ